Karnataka Summer Trip: ಭಸ್ಮಾಸುರ ಸುಟ್ಟು ಬೂದಿಯಾದ ಸ್ಥಳವೆಂದು ಪ್ರತೀತಿ ಇರುವ ಯಾಣಕ್ಕೆ ಪ್ರಯಾಣ ಹೇಗೆ? ಹತ್ತಿರದ ಆಕರ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ

ಎಂಥಾ ಕಡು ಬೇಸಿಗೆಯಲ್ಲೂ ತಂಪಾಗಿರುಸುವ ಯಾಣಕ್ಕೆ ನೀವು ಭೇಟಿ ನೀಡಲೇಬೇಕು. ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದೆ ಈ ಬಿಸಿಲಿನಲ್ಲಿ ಎಲ್ಲಿಗೆ ಕರೆದುಕೊಂಡು ಹೋಗಬೇಕು ಎನ್ನುವ ತಲೆಬಿಸಿ ಇದ್ದರೆ ಯಾಣ ಉತ್ತಮ ಜಾಗ. ಕಾಡಿನ ಮಧ್ಯತೆ ಇರುವ ಕಾರಣ ಅಷ್ಟಾಗಿ ಬಿಸಿಲು ಬಾರದು.

Karnataka Summer Trip: ಭಸ್ಮಾಸುರ ಸುಟ್ಟು ಬೂದಿಯಾದ ಸ್ಥಳವೆಂದು ಪ್ರತೀತಿ ಇರುವ ಯಾಣಕ್ಕೆ ಪ್ರಯಾಣ ಹೇಗೆ? ಹತ್ತಿರದ ಆಕರ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ
ಯಾಣImage Credit source: Housing
Follow us
ನಯನಾ ರಾಜೀವ್
|

Updated on:Apr 12, 2024 | 8:00 AM

ಭಸ್ಮಾಸುರ ಸುಟ್ಟು ಬೂದಿಯಾದ ಸ್ಥಳ ಎಂದೇ ಕರೆಸಿಕೊಳ್ಳುವ ಯಾಣವು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿದೆ. ಇದು ಸಹ್ಯಾದ್ರಿ ಬೆಟ್ಟಗಳ ಸಾಲಿನ ಪಶ್ಚಿಮ ಘಟ್ಟದಲ್ಲಿದೆ.ಈ ಶಿಲಾ ಪ್ರರ್ವತವನ್ನು ವೀಕ್ಷಿಸಲು ಸಮೀಪದ ರಸ್ತೆಯಿಂದ 0.5 ಕಿ.ಮೀ. ದೂರ ಕಾಡಿನಲ್ಲಿ ಕ್ರಮಿಸಬೇಕು. ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ ಎಂಬ ಬಹೃತ್ ಪರ್ವತ ಶೃಂಗಗಳಿಂದ ಯಾಣವು ಪ್ರಸಿದ್ಧಿಯನ್ನು ಪಡೆದಿದೆ. ಸೊಕ್ಕಿದ್ರೆ ಯಾಣ, ರೊಕ್ಕ ಇದ್ರೆ ಗೋಕರ್ಣ ಎಂಬ ಮಾತಿದೆ. ಯಾಣ ಬಂಡೆಗಳು ಸಾಹಸ ಪ್ರಿಯರನ್ನಯ ಕೈಬೀಸಿ ಕರೆಯುತ್ತದೆ.

ಯಾಣದಲ್ಲಿ ಏನಿದೆ? ಬಂಡೆ ಹತ್ತುವ ಸಾಹಸ: ಭೈರವೇಶ್ವರ ಬೆಟ್ಟ ಮತ್ತು ಮೋಹಿನಿ ಬೆಟ್ಟ (90 ಮೀಟರ್) ಎರಡು ಬೃಹತ್ ಶಿಲಾ ರಚನೆಗಳಿಂದಾಗಿ ಯಾಣ ದೂರದೂರದಿಂದ ಸಾಹಸಾಸಕ್ತರನ್ನು ಆಕರ್ಷಿಸುತ್ತದೆ. ಬಂಡೆಯ ತುದಿಯ ತನಕ ಹತ್ತಿಳಿಯಲು ಸಣ್ಣ ದಾರಿ, ಕಡಿದಾದ ಮೆಟ್ಟಿಲುಗಳಿದ್ದು ಸಾಕಷ್ಟು ದೈಹಿಕ ಶ್ರಮ ತುಸು ಹೆಚ್ಚೇ ಬೇಕಾಗುತ್ತದೆ.

ರೈಲಿನ ಮೂಲಕ ತಲುಪುವುದಾದರೆ ಹತ್ತಿರದ ನಿಲ್ದಾಣ ಕುಮಟಾ ಅಲ್ಲಿಂದ 30 ಕಿ.ಮೀ ದೂರದಲ್ಲಿದೆ ಈ ಯಾಣ. ಇನ್ನು ವಿಮಾನದ ಮೂಲಕ ಸಂಚರಿಸುವುದಾದರೆ ಹುಬ್ಬಳ್ಳಿಗೆ ಬರಬೇಕು. ರಸ್ತೆಯ ಮೂಲಕವಾದರೆ ಕಾರವಾರದಿಂದ 60 ಕಿ.ಮೀ, ಶಿರಸಿಯಿಂದ 40 ಕಿ.ಮೀ ಹಾಗೂ ಕುಮಟಾದಿಂದ 30 ಕಿ.ಮೀ ಆಗುತ್ತದೆ.

ಮತ್ತಷ್ಟು ಓದಿ: Karnataka Summer Travel: ಪಶ್ಚಿಮ ಘಟ್ಟದ ಚಾರಣ ಸ್ನೇಹಿ ಬೆಟ್ಟ ಈ ಕೊಡಚಾದ್ರಿ, ಹೋಗುವ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ

ಪ್ರತೀತಿ ಏನು? ಈ ಸ್ಥಳವು ರಾಕ್ಷಸ ಭಸ್ಮಾಸುರನ ಅಸ್ತಿತ್ವವನ್ನು ಕೊನೆಗಾಣಿಸಿದ ಸ್ಥಳ. ಭಸ್ಮಾಸುರನು ಶಿವನಿಂದ(ಈಶ್ವರ) ಒಂದು ಅಪರೂಪವಾದ ವರವನ್ನು ಪಡೆಯುತ್ತಾನೆ. ಆ ವರವೇನೆಂದರೆ ತಾನು(ಭಸ್ಮಾಸುರ) ಯಾರ ತಲೆಯ ಮೇಲೆ ಕೈ ಇಡುವೆನೋ ಅವರು ಸುಟ್ಟು ಭಸ್ಮವಾಗಬೇಕು. ಭಸ್ಮಾಸುರನು ತನಗೆ ದೂರೆತ ಈ ವರದ ಪರೀಕ್ಷೆ ನಡೆಸಲು ಸ್ವತಹ ಶಿವನ ತಲೆಯ ಮೇಲೆಯೆ ಕೈ ಇಡಲು ಮುಂದಾಗುತ್ತಾನೆ, ಇದನ್ನರಿತ ಪರಶಿವ ಭಸ್ಮಾಸುರನಿಂದ ತಪ್ಪಿಸಿಕೊಂಡು ಓಡಿಹೋಗುತ್ತಾನೆ.

ಇದರೊಂದಿಗೆ ಭಸ್ಮಾಸುರನು ಶಿವನನ್ನು ಬಿಡದೆ ಹಿಂಬಾಲಿಸುತ್ತಾನೆ. ಭಸ್ಮಾಸುರನಿಂದ ತಪ್ಪಿಸಿಕೊಂಡ ಶಿವ ನೇರವಾಗಿ ವಿಷ್ಣುವನ್ನು ಭೇಟಿಯಾಗುತ್ತಾನೆ. ಭೇಟಿಯಾಗಿ ನಡೆದ ವಿಷಯ ತಿಳಿಸಿ ವಿಷ್ಣುವಿನ ಸಹಾಯ ಬೇಡುತ್ತಾನೆ. ವಿಷ್ಣುವು ಸಹಾಯ ಮಾಡಲು ಒಪ್ಪಿ ಸುಂದರ ಕನ್ಯೆಯ ರೂಪತಾಳುತ್ತಾನೆ. ಆ ಸುಂದರ ಕನ್ಯೆಯ ಹೆಸರೇ ಮೋಹಿನಿ, ಮೋಹಿನಿ ರೂಪತಾಳಿದ ವಿಷ್ಣುವು ಭಸ್ಮಾಸುರನನ್ನು ತನ್ನ ಸ್ಪುರದ್ರುಪ ಸೌಂದರ್ಯದಿಂದ ಮೋಹಿತಗೂಳಿಸುತ್ತಾನೆ. ಮೋಹಿನಿಯ ಸೌಂದರ್ಯಕ್ಕೆ ಮೋಹಗೊಂಡ ಭಸ್ಮಾಸುರ ಮೋಹಿನಿಗೆ ತಾನು ನಿನ್ನನ್ನು ವರಿಸುದಾಗಿ ಹೇಳುತ್ತಾನೆ ಆಗ ಮೋಹಿನಿಯು ನಾನು ನನ್ನನ್ನು ವರಿಸಬೇಕಾದರೆ ಕೆಲವು ಷರತ್ತುಗಳು ಇವೆ ಎಂದು ಹೇಳುತ್ತಾಳೆ. ಆಗ ಭಸ್ಮಾಸುರ ನಿನ್ನ ಷರತ್ತುಗಳು ಏನೇ ಇದ್ದರೂ ನನ್ನ ಒಪ್ಪಿಗೆ ಇದೆ ಎಂದು ಹೇಳುತ್ತಾನೆ.

ಆಗ ಮೋಹಿನಿ ಭಸ್ಮಾಸುರನಿಗೆ “ನಾನು ನರ್ತಿಸಿದ ಹಾಗೆಯೆ ನರ್ತಿಸಬೇಕು” ಎಂದು ಹೇಳುತ್ತಾಳೆ. ಅದಕ್ಕೆ ಭಸ್ಮಾಸುರ ಒಪ್ಪಿಗೆ ಸೂಚಿಸುತ್ತಾನೆ. ಮೋಹಿನಿ ನರ್ತಿಸುತ್ತಾ ನರ್ತಿಸುತ್ತಾ ಒಂದು ಸಾರಿ ತಲೆಯ ಮೇಲೆ ಕೈ ಇಡುತ್ತಾಳೆ. ಆಗ ಮೋಹಿನಿಯ ಮೋಹದ ಬಲೆಯಲ್ಲಿ ಹಾಗೂ ನೃತ್ಯದ ಗುಂಗಿನಲ್ಲಿ ಭಸ್ಮಾಸುರ ತನಗರಿವಿಲ್ಲದೆ ತನ್ನ ಕೈಯನ್ನು ತನ್ನ ತಲೆಯ ಮೇಲೆ ಕೈ ಇಟ್ಟು ಬಿಡುತ್ತಾನೆ ಆತ ಭಸ್ಮನಾಗುತ್ತಾನೆ.

ಏನೇನು ನೋಡಬಹುದು? ದೇವಾಲಯಗಳು: ಭೈರೇಶ್ವರ ಬೆಟ್ಟದ ಕೆಳಭಾಗದಲ್ಲಿ, ಸ್ವಯಂಭು ಎಂಬ ಶಿವ ದೇವಾಲಯವಿದೆ. ಶಿವಲಿಂಗದ ಮೇಲೆ ಬಂಡೆಗಳ ಮೇಲ್ಭಾಗದಿಂದ ನೀರು ತೊಟ್ಟಿಕ್ಕುತ್ತದೆ. ಪಕ್ಷಿ ವೀಕ್ಷಣೆ: ಯಾಣ ಬಂಡೆಗಳು ಮತ್ತು ಹತ್ತಿರದ ಪ್ರದೇಶಗಳಲ್ಲಿ ಹಲವು ಪ್ರಬೇಧದ ಪಕ್ಷಿಗಳಿದ್ದು ಪಕ್ಷಿ ವೀಕ್ಷಣೆ ಮಾಡಬಯಸುವವರಿಗೆ ಉತ್ತಮ ತಾಣವಾಗಿದೆ. ಗಿಳಿಗಳು, ಬಾವಲಿಗಳು, ಕೀಟ ಭಕ್ಷಕ ಬೀ ಈಟರ್) ಅತಿ ಹೆಚ್ಚಾಗಿ ಕಾಣಿಸುವ ಕೆಲವು ಪಕ್ಷಿಗಳು.

ಜಲಪಾತಗಳು: ವಿಭೂತಿ ಜಲಪಾತಕ್ಕೆ ಚಾರಣ ಮೂಲಕ ತಲುಪಬಹುದಾಗಿದೆ. (ಯಾಣದಿಂದ ಚಾರಣ ಮಾರ್ಗ 9.7 ಕಿ.ಮೀ., ಆದರೆ ರಸ್ತೆಯ ಮೂಲಕ 70 ಕಿ.ಮೀ.)

ಸೊಕ್ಕಿದ್ರೆ ಯಾಣ, ರೊಕ್ಕ ಇದ್ರೆ ಗೋಕರ್ಣ ಎಂಬ ನಾಣ್ಣುಡಿ ಇದೆ ಅಂದರೆ  ನಿಮಗೆ ಖರ್ಚು ಮಾಡಲು ಸಾಕಷ್ಟು ಹಣವಿದ್ದರೆ, ರೋಣಕ್ಕೆ ಹೋಗಿ, ನೀವು ಉತ್ಸಾಹದಿಂದ ಪುಟಿದೇಳುತ್ತಿದ್ದರೆ ಯಾಣ ಬೆಟ್ಟ ಹತ್ತಿ ಎಂದರ್ಥ. ಯಾಣವನ್ನು ತಲುಪಲು ಹಿಂದೆ ಸಾಕಷ್ಟು ಶ್ರಮ ಬೇಕಿತ್ತು. ಈಗ ಸುಸಜ್ಜಿತ ರಸ್ತೆಗಳು ಬಂಡೆಗಳ ತಳಭಾಗದವರೆಗೆ ಪ್ರವಾಸಿಗರನ್ನು ಕರೆದೊಯ್ಯುತ್ತವೆ.

ಯಾಣಕ್ಕೆ ಭೇಟಿಕೊಡಲು ಕನಿಷ್ಠ ಅರ್ಧ ದಿನ ಮೀಸಲಿಡುವುದು ಉತ್ತಮವಾಗಿದೆ. ಕರಾವಳಿಯ ಮುರುಡೇಶ್ವರ (76 ಕಿ.ಮೀ), ಗೋಕರ್ಣ (48 ಕಿ.ಮೀ) ಮತ್ತು ಕಾರವಾರ (90 ಕಿ.ಮೀ) ಹತ್ತಿರದ ಇತರ ಆಕರ್ಷಣೆಗಳು.

ವಸತಿ: ಕುಮಟಾದಲ್ಲಿ ಬಹುಸಂಖ್ಯೆಯ ಹೋಟೆಲ್ ಆಯ್ಕೆಗಳು ಲಭ್ಯವಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:57 am, Fri, 12 April 24