Apply Now: ಇಂದಿನಿಂದ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ; ಪೂರ್ಣ ವಿವರ, ಅಧಿಕೃತ ಲಿಂಕ್ ಮತ್ತು ಹೆಲ್ಪ್‌ಲೈನ್ ಸಂಖ್ಯೆ ಇಲ್ಲಿದೆ

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಬೃಹತ್ 15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಪ್ರಾಥಮಿಕ, ಪ್ರೌಢ ಮತ್ತು ಕಂಪ್ಯೂಟರ್ ಶಿಕ್ಷಕರು ಸೇರಿದಂತೆ ವಿವಿಧ ವೃಂದದ ಹುದ್ದೆಗಳಿಗೆ ಆಸಕ್ತರು ಸೆಪ್ಟೆಂಬರ್ 7ರವರೆಗೆ ಅರ್ಜಿ ಸಲ್ಲಿಸಬಹುದು. ಆದಾಯ ಪ್ರಮಾಣಪತ್ರದ ಗೊಂದಲಗಳ ಕುರಿತು ಇಲಾಖೆ ಸ್ಪಷ್ಟನೆ ನೀಡಬೇಕಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮುನ್ನ ಎಲ್ಲ ನಿಯಮಗಳನ್ನು ಗಮನವಿಟ್ಟು ಓದಿ.

Apply Now: ಇಂದಿನಿಂದ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ; ಪೂರ್ಣ ವಿವರ, ಅಧಿಕೃತ ಲಿಂಕ್ ಮತ್ತು ಹೆಲ್ಪ್‌ಲೈನ್ ಸಂಖ್ಯೆ ಇಲ್ಲಿದೆ
15,000 ಶಿಕ್ಷಕರ ಹುದ್ದೆಗಳ ನೇಮಕಾತಿ

Updated on: Aug 18, 2026 | 4:18 PM

ಬೆಂಗಳೂರು: ಕರ್ನಾಟಕದ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೃಹತ್ 15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ (ಆ.18) ಆರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 7ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸೆಪ್ಟೆಂಬರ್ 10ರವರೆಗೆ ಶುಲ್ಕ ಪಾವತಿಸಬಹುದಾಗಿದೆ. ಈ ಬೃಹತ್ ನೇಮಕಾತಿ ಅಭಿಯಾನದ ಮೂಲಕ ಶಿಕ್ಷಣ ಇಲಾಖೆಯು ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇದರಲ್ಲಿ ಕಂಪ್ಯೂಟರ್ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಪ್ರಾಥಮಿಕ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರು (ಅಸಿಸ್ಟೆಂಟ್ ಮಾಸ್ಟರ್ಸ್) ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಸೇರಿವೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ಮುಖ್ಯ ನಿಯಮಗಳು:

ಅಭ್ಯರ್ಥಿಗಳು ಒಂದೇ ಅರ್ಜಿಯ ಮೂಲಕ ಎಲ್ಲಾ ವೃಂದದ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ತಾವು ಯಾವ ಹುದ್ದೆಗೆ ಮೊದಲ ಆದ್ಯತೆ ನೀಡ ಬಯಸುತ್ತಾರೋ ಆ ‘ತಾತ್ಕಾಲಿಕ ಆದ್ಯತೆ’ ಮತ್ತು ಪರೀಕ್ಷೆ ಬರೆಯುವ ‘ಜಿಲ್ಲೆಯ ಆದ್ಯತೆ’ಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಆನ್‌ಲೈನ್ ಅರ್ಜಿಯಲ್ಲಿ ತಪ್ಪು ಅಥವಾ ದೋಷಪೂರಿತ ಮಾಹಿತಿ ನೀಡಿದ್ದಲ್ಲಿ ಅರ್ಜಿ ತಿರಸ್ಕರಿಸಲ್ಪಡಲಿದ್ದು, ಅದಕ್ಕೆ ಅಭ್ಯರ್ಥಿಗಳೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ.

ತಿದ್ದುಪಡಿ ಮತ್ತು ಪ್ರಿಂಟ್‌ಔಟ್ ಪ್ರಾಮುಖ್ಯತೆ:

ಆನ್‌ಲೈನ್‌ನಲ್ಲಿ ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿ ಬಯಸಿದರೆ, ಹಳೆಯ ಅರ್ಜಿಯನ್ನು ತಿದ್ದುಪಡಿ ಮಾಡಲು ಬರುವುದಿಲ್ಲ. ಬದಲಾಗಿ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಿ ಮತ್ತೊಮ್ಮೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ, ಆನ್‌ಲೈನ್ ಅರ್ಜಿ ಸಲ್ಲಿಸುವ ಅಂತಿಮ ಹಂತದಲ್ಲಿ ಮಾಹಿತಿಯನ್ನು ಪ್ರಿಂಟ್ ತೆಗೆದುಕೊಂಡು, ಸರಿಯಾಗಿದೆಯೇ ಎಂದು ಖಾತ್ರಿಪಡಿಸಿಕೊಂಡು ಸಬ್ಮಿಟ್ ಮಾಡಲು ಸೂಚಿಸಲಾಗಿದೆ. ಜೊತೆಗೆ ಸ್ವಂತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ನೀಡುವುದು ಕಡ್ಡಾಯವಾಗಿದೆ.

ಆದಾಯ ಪ್ರಮಾಣಪತ್ರದ ಕುರಿತು ಗೊಂದಲ ಮತ್ತು ಆಕ್ಷೇಪ:

ಶಾಲೆ ಶಿಕ್ಷಣ ಇಲಾಖೆಯು ವಿವಾಹಿತ ಮಹಿಳಾ ಅಭ್ಯರ್ಥಿಗಳ ಆದಾಯ ಪ್ರಮಾಣಪತ್ರದ ವಿಷಯದಲ್ಲಿ ಇಬ್ಬಂದಿ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅರ್ಜಿಯಲ್ಲಿ ತಂದೆ ಅಥವಾ ಪತಿಯ ಆದಾಯ ಪ್ರಮಾಣಪತ್ರ ಸ್ವೀಕರಿಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ KEA ಸೇರಿದಂತೆ ಇತರ ಪರೀಕ್ಷಾ ಪ್ರಾಧಿಕಾರಗಳು ಕಡ್ಡಾಯವಾಗಿ ‘ಪತಿಯ ಆದಾಯ ಪ್ರಮಾಣಪತ್ರ’ವನ್ನೇ ಸಲ್ಲಿಸಬೇಕೆಂದು ಸೂಚಿಸುವುದರಿಂದ, ಶಿಕ್ಷಣ ಇಲಾಖೆಯ ಈ ದ್ವಂದ್ವ ನೀತಿಯು ಅಭ್ಯರ್ಥಿಗಳಲ್ಲಿ ಗೊಂದಲ ಮತ್ತು ಅನುಮಾನವನ್ನು ಮೂಡಿಸಿದೆ.

ಇದನ್ನೂ ಓದಿ: 15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ; ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ

ಸಹಾಯವಾಣಿ ಮತ್ತು ಅಧಿಕೃತ ವೆಬ್‌ಸೈಟ್ ವಿವರ:

ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲಗಳು ಅಥವಾ ಅನುಮಾನಗಳಿದ್ದಲ್ಲಿ ಅಭ್ಯರ್ಥಿಗಳು ಕೇಂದ್ರೀಕೃತ ದಾಖಲಾತಿ ಘಟಕದ ಸಹಾಯವಾಣಿ ಸಂಖ್ಯೆಗಳಾದ 080-22483145, 22483140 ಅಥವಾ 9483024723 ಅನ್ನು ಸಂಪರ್ಕಿಸಬಹುದು. ನೇರ ಅರ್ಜಿ ಸಲ್ಲಿಕೆಗಾಗಿ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ schooleducation.karnataka.gov.in/cacell/kn ಗೆ ಭೇಟಿ ನೀಡಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:17 pm, Tue, 18 August 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us