ಕರ್ನಾಟಕದ ಬೀಚ್​ಗಳಲ್ಲಿಯೂ ಗೋವಾ ರೀತಿ ಮದ್ಯಪಾನ, ಮಾರಾಟಕ್ಕೆ ಅವಕಾಶ: ಪ್ರವಾಸೋದ್ಯಮ ಇಲಾಖೆ ಚಿಂತನೆ

|

Updated on: Oct 24, 2024 | 7:32 AM

ರಾಜ್ಯದ ಬೀಚ್​ಗಳಿಗೆ ಪ್ರವಾಸಿಗರನ್ನು ಸೆಳೆಯುವ ಮತ್ತು ಪ್ರವಾಸೋದ್ಯಮವನ್ನು ಇನ್ನಷ್ಟು ಲಾಭದಾಯಕವನ್ನಾಗಿಸುವ ಉದ್ದೇಶದೊಂದಿಗೆ ಮಹತ್ವದ ಕ್ರಮಕ್ಕೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ರಾಜ್ಯದ ಕರಾವಳಿಯ ಬೀಚ್​ಗಳಲ್ಲಿ ಕೂಡ ಗೋವಾದ ಮಾದರಿಯಲ್ಲಿ ಮದ್ಯ ಮಾರಾಟ, ಮದ್ಯಪಾನಕ್ಕೆ ಅನುಮತಿ ನೀಡುವ​​ ಬಗ್ಗೆ ಚಿಂತನೆ ನಡೆಸುತ್ತಿದೆ.

ಕರ್ನಾಟಕದ ಬೀಚ್​ಗಳಲ್ಲಿಯೂ ಗೋವಾ ರೀತಿ ಮದ್ಯಪಾನ, ಮಾರಾಟಕ್ಕೆ ಅವಕಾಶ: ಪ್ರವಾಸೋದ್ಯಮ ಇಲಾಖೆ ಚಿಂತನೆ
ಸಾಂದರ್ಭಿಕ ಚಿತ್ರ
Follow us on

ಮಂಗಳೂರು, ಅಕ್ಟೋಬರ್ 24: ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಗೋವಾದ ಮಾದರಿಯಲ್ಲಿ ರಾಜ್ಯದ ಬೀಚ್‌ಗಳಲ್ಲಿ ಟೆಂಟ್​​ಗಳನ್ನು ಹಾಕುವುದು ಮತ್ತು ಮದ್ಯ ಮಾರಾಟ, ಮದ್ಯಪಾನಕ್ಕೆ ಅನುಮತಿ ನೀಡುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಮಂಗಳೂರಿನಲ್ಲಿ ನಡೆದ ‘ಕನೆಕ್ಟ್ 2024’ನಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜೇಂದ್ರ ಕೆವಿ, ಬೀಚ್​ಗಳಲ್ಲಿ ಮದ್ಯ ಬಳಕೆಯ ಮೇಲೆ ಇರುವ ನಿರ್ಬಂಧಗಳನ್ನು ಸಡಿಲಿಸುವ ಅಗತ್ಯವಿದೆ ಎಂದರು.

ಗೋವಾ ಮಾದರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನಾವು ಬೀಚ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಬೀಚ್​ಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು, ಜನರು ರಾತ್ರಿಯಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡಲು ಕಡಲತೀರಗಳಲ್ಲಿ ಹೆಚ್ಚಿನ ಲೈಟ್​ಗಳನ್ನು ಅಳವಡಿಸಲು ಇಲಾಖೆ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಟೆಂಟ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಡಲತೀರಗಳ ಬಳಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳನ್ನು ಹುಡುಕುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಯೋಜನೆಗಳಿಗೆ ತ್ವರಿತ ಅನುಮತಿಗಾಗಿ ಸೌಲಭ್ಯ ಕೇಂದ್ರ

ಪ್ರವಾಸೋದ್ಯಮ ಯೋಜನೆಗಳಿಗೆ ಸಿಆರ್‌ಝಡ್ ಮತ್ತು ಇತರ ಅನುಮತಿಗಳನ್ನು ತ್ವರಿತಗೊಳಿಸಲು ಪ್ರವಾಸೋದ್ಯಮ ಇಲಾಖೆ ಶೀಘ್ರದಲ್ಲೇ ಸೌಲಭ್ಯ ಕೇಂದ್ರವನ್ನು ತೆರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹೊಸ ಪ್ರವಾಸೋದ್ಯಮ ನೀತಿಯು ಕರಾವಳಿ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ಹೊಂದಿರಲಿದೆ ಎಂದು ಅವರು ತಿಳಿಸಿದ್ದಾರೆ.

ತಡರಾತ್ರಿ ವರೆಗೂ ಬೀಚ್ ಪ್ರವೇಶಕ್ಕೆ ಅನುಮತಿ?

ತಡರಾತ್ರಿಯವರೆಗೂ ಬೀಚ್‌ಗಳಿಗೆ ಭೇಟಿ ನೀಡಲು ಪ್ರವಾಸಿಗರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ನಗರದಲ್ಲಿರುವ ರೆಸ್ಟೋರೆಂಟ್‌ಗಳು ಮತ್ತು ಇತರ ಪರವಾನಗಿ ಪಡೆದ ವ್ಯಾಪಾರ ಸಂಸ್ಥೆಗಳ ವ್ಯವಹಾರದ ಸಮಯವನ್ನು ರಾತ್ರಿ 1 ಗಂಟೆಯ ವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ನಗರ ವ್ಯಾಪ್ತಿಯ ಬೀಚ್‌ಗಳಲ್ಲಿ ತಡರಾತ್ರಿ ವರೆಗೆ ಇರಲು ಅವಕಾಶ ಒದಗಿಸಬೇಕಾಗಿದೆ ಎಂದರು.

ಇದನ್ನೂ ಓದಿ: ಅ.24 ರಂದು ಹಾಸನಾಂಬ ದೇಗುಲ ಬಾಗಿಲು ಓಪನ್​: 9 ದಿನ ದರ್ಶನಕ್ಕೆ ಅವಕಾಶ, ಆನ್​​ಲೈನ್​ ಬುಕ್ಕಿಂಗ್​ ಲಭ್ಯ

ರಾತ್ರಿ 9ರ ನಂತರ ಬೀಚ್‌ಗಳಿಗೆ ತೆರಳಲು ಯಾಕೆ ಅವಕಾಶ ನೀಡಲಾಗುತ್ತಿಲ್ಲ ಎಂಬುದನ್ನು ಪೊಲೀಸ್ ಇಲಾಖೆ ಜತೆ ಸಮಾಲೋಚಿಸಿ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:28 am, Thu, 24 October 24