ಕೈಗೆ ಬಂದ ತುತ್ತು ಬಾಯಿಗಿಲ್ಲ? ಜಿಎಸ್​ಟಿ ದರ ಇಳಿಕೆ ಬೆನ್ನಲ್ಲೇ ವಾಣಿಜ್ಯ ಬಳಕೆ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾದ ಕರ್ನಾಟಕ

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯೆ ವಿದ್ಯುತ್ ದರವನ್ನು ಹೆಚ್ಚಿಸಲು ಮುಂದಾಗಿದೆ. ಹೀಗಾಗಿ ಒಂದು ತಿಂಗಳಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸುವಂತೆ ಕೋರಲಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚಿನ ದರ ವಿಧಿಸುವಂತೆ ಕೋರಿರುವುದಕ್ಕೆ ಉದ್ಯಮಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕೈಗೆ ಬಂದ ತುತ್ತು ಬಾಯಿಗಿಲ್ಲ? ಜಿಎಸ್​ಟಿ ದರ ಇಳಿಕೆ ಬೆನ್ನಲ್ಲೇ ವಾಣಿಜ್ಯ ಬಳಕೆ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾದ ಕರ್ನಾಟಕ
ಪ್ರಾತಿನಿಧಿಕ ಚಿತ್ರ
Edited By:

Updated on: Sep 10, 2025 | 2:05 PM

ಬೆಂಗಳೂರು, ಸೆಪ್ಟೆಂಬರ್​ 10: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ವಿದ್ಯುತ್ ದರವನ್ನು (Electricity rate hike) ಹೆಚ್ಚಿಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಲಾಗಿದ್ದು, ಒಂದು ತಿಂಗಳಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸುವಂತೆ ಕೋರಲಾಗಿದೆ. ಆ ಮೂಲಕ ಕೈಗೆ ಬಂದಿದ್ದ ಜಿಎಸ್​ಟಿ ದರ ಇಳಿಕೆ ತುತ್ತು ಬಾಯಿಗೆ ಬಾರದಂತಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ಜಿಎಸ್‌ಟಿ ದರವನ್ನು ಶೇ. 5 ಮತ್ತು 18ಕ್ಕೆ ಇಳಿಸಿ ಎಲ್ಲರಿಗೂ ಕಡಿಮೆ ದರದಲ್ಲಿ ವಸ್ತುಗಳು ದೊರೆಯುವಂತೆ ಮಾಡಿದೆ. ಆದರೆ ರಾಜ್ಯ ಸರ್ಕಾರದ ಒಡೆತನದಲ್ಲಿರುವ ವಿದ್ಯುತ್ ವಿತರಣಾ ಕಂಪನಿಗಳು ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ದರ ಕಡಿಮೆ ಮಾಡಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಗೆದಾರರಿಗೆ ಪ್ರತಿ ಯೂನಿಟ್‌ಗೆ 10 ಪೈಸೆಯಿಂದ 1 ರೂ. ಹೆಚ್ಚಿಸಿಕೊಡುವಂತೆ ಆಯೋಗಕ್ಕೆ ಸಲ್ಲಿಸುವ ಮೇಲ್ಮನವಿಗೆ ಈಗಾಗಲೇ ಎಫ್‌ಕೆಸಿಸಿಐ ಮತ್ತು ಕಾಸಿಯಾ ಸೇರಿದಂತೆ ಹಲವು ವಾಣಿಜ್ಯ ಸಂಸ್ಥೆಗಳಿಂದ ತಕರಾರು ಅರ್ಜಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಒಸಿ, ಸಿಸಿ ಇಲ್ಲದೇ ಬೆಸ್ಕಾಂನಿಂದ ವಿದ್ಯುತ್​​ ಹೊಸ ಸಂಪರ್ಕ; ಆನ್ ಲೈನ್​​ ನಲ್ಲಿಯೇ ಅಪ್ಲೈ ಮಾಡಿ

ಎರಡು ವರ್ಷಗಳ ಹಿಂದೆ ಕೆಇಆರ್‌ಸಿ ವಿದ್ಯುತ್ ದರ ಪರಿಷ್ಕರಣೆಗೆ ಮುನ್ನ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲಿರುವ ಕ್ರಾಸ್ ಸಬ್ಸಿಡಿ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿತ್ತು. ಆದರೆ ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿರಲಿಲ್ಲ.

ಕಳೆದ ಮಾರ್ಚ್ ತಿಂಗಳಲ್ಲಿ ಕೆಇಆರ್‌ಸಿ ಹೊಸ ನಿಗದಿಪಡಿಸಿ 10 ಅಶ್ವಶಕ್ತಿಯ ಪಂಪ್‌ಸೆಟ್‌ಗಳಿಗೆ ನೀಡುವ ವಿದ್ಯುತ್‌ದರವನ್ನು ಪ್ರತಿ ಯೂನಿಟ್‌ಗೆ 1.50 ರೂ. ಗೆ ಹೆಚ್ಚಿಸಲಾಗಿತ್ತು. ಇದೇ ಸಮಯದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ 30 ಪೈಸೆಯಿಂದ 3 ರೂ. ವರೆಗೆ ಕಡಿಮೆ ಮಾಡಲಾಗಿತ್ತು. ಆ ಮೂಲಕ ರಾಜ್ಯ ಸರ್ಕಾರಕ್ಕೆ ಇದರಿಂದ ಹೆಚ್ಚುವರಿ ಹೊರೆ ಆಗಲಿದೆ.

ಬಜೆಟ್‌ನಲ್ಲಿ ಸರ್ಕಾರ ನೀಡಿರುವುದು 16021 ಕೋಟಿ ರೂ. ಮಾತ್ರ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 2,36,247
ಕೋಟಿ ರೂ. ನೀಡಿದರೂ ಇನ್ನು 1214.12 ಕೋಟಿ ರೂ. ಕೊರತೆ ಉಂಟಾಗಲಿದೆ. ಇದನ್ನು ಸರಿತೂಗಿಸಲು ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಪ್ರತಿ ಯೂನಿಟ್‌ಗೆ 10 ಪೈಸೆಯಿಂದ 1 ರೂ. ವರೆಗೆ ಹೆಚ್ಚಿಸಲು ಇದೀಗ ಕೋರಲಾಗಿದೆ.

ಬೇರೆ ಮೂಲದ ವರಮಾನ ಸೇರಿದಂತೆ ಒಟ್ಟು 1148.35 ಕೋಟಿ ರೂ. ಕೊರತೆ ಇದೆ. ಈಗ ರಾಜ್ಯದಲ್ಲಿ ಶೇ.17.56
ರಷ್ಟು ವಿದ್ಯುತ್ ಕೈಗಾರಿಕೆಗಳಿಗೆ ನೀಡಲಾಗುತ್ತಿದೆ. ಕೆಇಆರ್‌ಸಿ ಈಗ ನಿಗದಿಪಡಿಸಿರುವ ದರ ಕೃಷಿ ಪಂಪ್‌ಸೆಟ್‌ಗೆ ಪ್ರತಿ ಯೂನಿಟ್‌ಗೆ 7.35 ರೂ. ಎಲ್‌ಟಿ, ವಾಣಿಜ್ಯ 7.10 ರೂ. ಎಲ್‌ಟಿ ಕೈಗಾರಿಕೆಗೆ 5.20 ರೂ, ಎಚ್‌ಟಿ2ಎಗೆ 6.70ರೂ. ಎಚ್‌ಟಿ 2ಬಿಗೆ 6.90 ರೂ. ಇದರಿಂದ ರಾಜ್ಯದಲ್ಲಿ ಕೈಗಾರಿಕೆಗಳು ಬೆಳೆಯಲು ಅನುಕೂಲವಾಗಿದೆ.

ಕರ್ನಾಟಕ ಮೊದಲ ಸ್ಥಾನ

ಇನ್ನು ವಿದೇಶಿ ಬಂಡವಾಳ ಕೂಡ ಹರಿದು ಬರುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನ ಗಳಿಸಿದೆ. ಒಂದು ವೇಳೆ ಕೆಇಆರ್‌ಸಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ವಿದ್ಯುತ್ ದರ ಹೆಚ್ಚಿಸಿದರೇ ಹೊರ ರಾಜ್ಯಗಳಿಂದ ಕೈಗಾರಿಕೆ ಬರುವುದು ನಿಲ್ಲುವುದಲ್ಲದೆ, ಸ್ಥಳೀಯ ಕೈಗಾರಿಕೆಗಳು ಉತ್ಪಾದನೆ ಕಡಿಮೆ ಮಾಡಲಿವೆ.

ಇದನ್ನೂ ಓದಿ: ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ ಬೆಸ್ಕಾಂ: ವಿದ್ಯುತ್ ಬಿಲ್ ನೋಡಿ ಜನ ಬೇಸ್ತು

ಸದ್ಯ ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈಗ ರಾಜ್ಯದಲ್ಲಿ ಪ್ರತಿದಿನ 56 ದಶಲಕ್ಷ ಯೂನಿಟ್ ಜಲ ವಿದ್ಯುತ್‌ ಮತ್ತು 72 ದಶಲಕ್ಷ ಯೂನಿಟ್ ಸೌರ ಮತ್ತು ಪವನ ವಿದ್ಯುತ್​ನಿಂದ ಉತ್ಪಾದನೆ ಮಾಡಲಾಗುತ್ತಿದೆ. ಇದೆರಡು ಅತಿ ಕಡಿಮೆ ವಿದ್ಯುತ್ ಉತ್ಪಾದನೆ ಹೊಂದಿದೆ. ಹೀಗಿದ್ದರೂ ಎಸ್ಕಾಂಗಳು ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚಿನ ದರ ವಿಧಿಸುವಂತೆ ಕೋರಿರುವುದಕ್ಕೆ ಉದ್ಯಮಿಗಳು ತೀವ್ರ ವಿರೋಧಿಸಿದ್ದಾರೆ. ಸರ್ಕಾರ ಕೈಗಾರಿಕಾ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ವಿದ್ಯುತ್ ದರ ಏರಿಕೆಗೂ ಜಿಎಸ್​ಟಿ ಲಾಭ ವರ್ಗಾಯಿಸದೇ ಇರುವುದಕ್ಕೂ ಏನು ಲಿಂಕ್?

ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ಮಾಡಿರುವುದರಿಂದ ಅದರ ಲಾಭವನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿದರೆ ಸಹಜವಾಗಿಯೇ ಕೆಲವು ವಸ್ತುಗಳ ದರ ಕಡಿಮೆಯಾಗುತ್ತದೆ. ಆದರೆ, ಕೈಗಾರಿಕೆಗಳು ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರ ಹೆಚ್ಚಳ ಮಾಡಿದಾಗ ಸಹಜವಾಗಿ ಅವುಗಳ ಉತ್ಪಾದನಾ ವೆಚ್ಚ ಹೆಚ್ಚಾಗುತ್ತವೆ. ಇದರಿಂದಾಗಿ  ಕಂಪನಿಗಳು ಜಿಎಸ್​ಟಿ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವ ಸಾಧ್ಯತೆ ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:05 pm, Wed, 10 September 25