ಒಸಿ, ಸಿಸಿ ಇಲ್ಲದೇ ಬೆಸ್ಕಾಂನಿಂದ ವಿದ್ಯುತ್ ಹೊಸ ಸಂಪರ್ಕ; ಆನ್ ಲೈನ್ ನಲ್ಲಿಯೇ ಅಪ್ಲೈ ಮಾಡಿ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಪೂರೈಸುತ್ತದೆ. ಆದರೆ ಸಿಸಿ ಹಾಗೂ ಒಸಿ ಪ್ರಮಾಣ ಪತ್ರ ಇಲ್ಲದಿದ್ದರೆ ನೀರು, ವಿದ್ಯುತ್, ಒಳಚರಂಡಿ ಸಂಪರ್ಕ ಸೇರಿದಂತೆ ಅಗತ್ಯ ಮೂಲಸೌಕರ್ಯ ಸಿಗುತ್ತಿರಲಿಲ್ಲ. ಇದರಿಂದ ಸಾರ್ವಜನಿಕರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದೀಗ ಸಿಹಿ ಸುದ್ದಿ ಏನಪ್ಪ ಅಂದ್ರೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಬೆಸ್ಕಾಂ ಆನ್‌ಲೈನ್ ನಲ್ಲಿಯೇ ಅರ್ಜಿ ಸಲ್ಲಿಕೆ ಅವಕಾಶ ಮಾಡಿಕೊಟ್ಟಿದೆ. ಬೆಸ್ಕಾಂ ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆ ಬೇಕು? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, (ಆಗಸ್ಟ್ 17):ಕಳೆದ ನಾಲ್ಕೂ ಚಿಲ್ಲರೆ ತಿಂಗಳಿಂದ ಬೆಸ್ಕಾಂ(Bescom) ನಿಂದ ಹೊಸ ವಿದ್ಯುತ್ ಸಂಪರ್ಕ ( new electricity connection) ಪಡೆಯುವುದಕ್ಕೆ ಇದ್ದ ಒದ್ದಾಟ ಮುಗಿದಿದೆ. ವಿದ್ಯುತ್ ಹೊಸ ಸಂಪರ್ಕಕ್ಕೆ ಆನ್ಲೈನ್ಲೇ ಅರ್ಜಿ ಸಲ್ಲಿಸಿ ಕಲೆಕ್ಷನ್ ಪಡೆದುಕೊಳ್ಳಬಹುದಾಗಿದೆ. ಆದರೆ ಈ ಬಗ್ಗೆ ಸರ್ಕಾರದಿಂದಾಗಲೀ ಬೆಸ್ಕಾಂನಿಂದಾಗಲೀ ಅಧಿಕೃತವಾದ ಹೇಳಿಕೆ ಬಂದಿಲ್ಲ ಅಥವಾ ತಿಳಿದುಬಂದಿಲ್ಲ. ಗ್ರಾಹಕರೊಬ್ಬರು ಈ ಬಗ್ಗೆ ಟಿವಿ9 ಕನ್ನಡ ವೆಬ್ ಸೈಟ್ ಗೆ ಮಾಹಿತಿ ಹಂಚಿಕೊಂಡಿದ್ದು, ತಾವು ಈಗಾಗಲೇ ಪಡೆದಂಥ ತಾತ್ಕಾಲಿಕ ಸಂಪರ್ಕಕ್ಕೆ ಶಾಶ್ವತವಾಗಿ ಸೇವೆಗಾಗಿ ಅಪ್ಲೈ ಮಾಡಿದಂಥ ದಾಖಲೆಯನ್ನು ಸಹ ಕೊಟ್ಟಿದ್ದಾರೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಸ್ವತಃ ಅವರಿಗೇ ಕೆಲವು ಪ್ರಶ್ನೆಗಳು ಇವೆ. ಮೊದಲನೆಯದಾಗಿ ಬೆಸ್ಕಾಂ ಸೇವೆಗಳನ್ನು ಈ ಹಿಂದೆ ಗುತ್ತಿಗೆದಾರರ ಮೂಲಕವೇ ಅಪ್ಲೈ ಮಾಡಬೇಕಿತ್ತು. ಇನ್ನು ಎರಡನೆಯದು ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ), ಕಂಪ್ಲೀಷನ್ ಸರ್ಟಿಫಿಕೇಟ್ (ಸಿಸಿ) ಇಲ್ಲದೆ ಬೆಸ್ಕಾಂ ಸಂಪರ್ಕವನ್ನು ನೀಡುವುದನ್ನೇ ನಿಲ್ಲಿಸಿಬಿಟ್ಟಿತ್ತು. ಹೀಗೆ ಏಕಾಏಕಿ ತಮ್ಮ ಗಮನಕ್ಕೆ ಬಂದ ಸಂಗತಿಯನ್ನು ಮಾಧ್ಯಮದ ಗಮನಕ್ಕೂ ತಂದು, ಇತರರಿಗೆ ಸಹಾಯ ಆಗಲಿ ಮತ್ತು ತಮಗಿರುವ ಸಂದೇಹ ನಿವಾರಣೆ ಆಗಲಿ ಎಂಬುದು ಅವರ ಇರಾದೆಯಾಗಿತ್ತು.
ಇದನ್ನೂ ಓದಿ: ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಆನ್‌ಲೈನ್ ವ್ಯವಸ್ಥೆ ಆರಂಭಿಸಲಿದೆ ಬಿಬಿಎಂಪಿ
ವೆಬ್ ಸೈಟ್ ವಿಳಾಸ: https://www.bescom.co.in/bescom/main/new-connection-forms
ಈ ಮೇಲ್ಕಂಡ ವೆಬ್ ಅಡ್ರೆಸ್ ಕ್ಲಿಕ್ ಮಾಡಿದಲ್ಲಿ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ಎರಡು ಆಯ್ಕೆಗಳು ಇವೆ. ಸಿಂಗಲ್ (ಏಕ), ಮಲ್ಟಿಪಲ್ (ಬಹು) ಎಂದಿದೆ.
- ಒಂದು ವೇಳೆ ಈಗಾಗಲೇ ತಾತ್ಕಾಲಿಕ ಸಂಪರ್ಕ ತೆಗೆದುಕೊಂಡಿದ್ದಲ್ಲಿ ಅದರ ಖಾತೆ ಮಾಹಿತಿಯನ್ನು, ಖಾತೆ ಸಂಖ್ಯೆಯನ್ನು ನಮೂದಿಸಬೇಕು.
- ಆ ನಂತರ ಅರ್ಜಿದಾರರ ಹೆಸರು, ಇಮೇಲ್ ಐಡಿ, ಫೋನ್ ನಂಬರ್, ಪಾನ್- ಡ್ರೈವಿಂಗ್ ಲೈಸೆನ್ಸ್- ಪಾಸ್ ಪೋರ್ಟ್- ಟ್ಯಾನ್- ಆಧಾರ್ ಇವುಗಳ ಪೈಕಿ ಒಂದರ ಸಂಖ್ಯೆಯನ್ನು ನಮೂದಿಸಬೇಕು.
- ಮನೆಯ ವಿಳಾಸದ ವಿವರಗಳು ಹಾಕಬೇಕು.
- ಗ್ರಾಹಕರನ್ನು ಸಂಪರ್ಕಿಸುವ ಸಲುವಾಗಿ ವಿಳಾಸದ ಮಾಹಿತಿ ಒದಗಿಸಬೇಕು.
- ಸಂಪರ್ಕ ಪಡೆಯಲು ಇಚ್ಛಿಸುವ ಸ್ಥಳದ ಅಕ್ಷಾಂಶ, ರೇಖಾಂಶದ ಮಾಹಿತಿ ಹಾಗೂ ಮನೆಯನ್ನು ಕಟ್ಟಿರುವುದು ಎಷ್ಟು ಚದರಡಿ ಎಂಬುದನ್ನು ಚದರ ಮೀಟರ್ ಲೆಕ್ಕದಲ್ಲಿ ನಮೂದಿಸಬೇಕು.
- ಆನಂತರ ಇತರೆ ಮಾಹಿತಿಗಳು ಎಂಬ ಪೇಜ್ ನಲ್ಲಿ ಯಾವುದಕ್ಕೆ ವಿದ್ಯುತ್ ಸಂಪರ್ಕ ಬೇಕಾಗಿದೆ (ಉದಾ: ಮನೆ, ವಾಣಿಜ್ಯ ಉದ್ದೇಶವೋ, ಇವಿಸಿ ಸ್ಟೇಷನ್ ಹೀಗೆ ಮೂರು ಆಯ್ಕೆಗಳಿವೆ), ಸ್ಥಳ ಎಲ್ಲಿದೆ, ಉಪವಿಭಾಗ ಕಚೇರಿ ಯಾವುದು, ಸೆಕ್ಷನ್ ಆಫೀಸ್ ಯಾವುದು, ಎಷ್ಟು ಲೋಡ್, ಯಾವ ಫೇಸ್, ಎಇಎಚ್ ಅಥವಾ ಎಇಎಚ್ ಅಲ್ಲದ್ದ, ಎಷ್ಟು ವೊಲ್ಟೇಜ್ ಮತ್ತು ಯಾವ ರೀತಿಯ ಪವರ್ ಎಂಬ ವಿವರಗಳನ್ನು ಭರ್ತಿ ಮಾಡಬೇಕು.
- ಕೊನೆಯದಾಗಿ ಐಡೆಂಟಿಟಿ ಪ್ರೂಫ್ ಆಗಿ ಪಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಪಾಸ್ ಪೋರ್ಟ್ ಅಥವಾ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಇವುಗಳ ಪೈಕಿ ಒಂದನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕು. ಪ್ರೂಫ್ ಆಫ್ ಆಕ್ಯುಪೆನ್ಸಿ ಅಂತ ಸೇಲ್ ಡೀಡ್ ಅಥವಾ ಖಾತಾ ಪ್ರಮಾಣ ಪತ್ರ ಅಥವಾ ತೆರಿಗೆ ಪಾವತಿಸಿದ ಪ್ರಮಾಣಪತ್ರವನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕು.
- ಇನ್ನು ಕಂಪ್ಲಿಷನ್ ಸರ್ಟಿಫಿಕೇಟ್ ಅಂತ ಇದೇ ಪುಟದಲ್ಲಿದೆ. ಆದರೆ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತುಂಬುವುದು ಕಡ್ಡಾಯ ಅಲ್ಲ.
ಇಲ್ಲಿ ನೆನಪಿರಬೇಕಾದ ಮುಖ್ಯ ಸಂಗತಿ ಏನೆಂದರೆ, ಇಲ್ಲಿರುವ ಎಲ್ಲ ಮಾಹಿತಿಗಳನ್ನು ಕಡ್ಡಾಯವಾಗಿ ಭರ್ತಿ ಮಾಡಲೇಬೇಕು ಎಂದಿಲ್ಲ. ಕೆಲವು ಆಪ್ಷನಲ್ ಆಗಿದೆ. ಇನ್ನು ಕೆಲವು ಕಡ್ಡಾಯವಾಗಿದೆ. ಈ ಎಲ್ಲ ಮಾಹಿತಿ ಭರ್ತಿ ಮಾಡಿದ ಮೇಲೆ ಆನ್ ಲೈನ್ ನಲ್ಲಿಯೇ ಶುಲ್ಕ ಪಾವತಿಸಬೇಕು.
ಈ ಹಿಂದೆ ಬೆಸ್ಕಾಂ ಗುತ್ತಿಗೆದಾರರ ಮೂಲಕವೇ ಹೊಸದಾಗಿ ಸಂಪರ್ಕಕ್ಕಾಗಿ ಅಪ್ಲೈ ಮಾಡಬೇಕಿತ್ತು. ಆದರೆ ಈಗ ಇಲ್ಲಿನ ಮಾಹಿತಿಗಳನ್ನು ಮನೆಯ ಮಾಲೀಕರೇ ಭರ್ತಿ ಮಾಡಬಹುದು ಹಾಗೂ ಅಪ್ಲೈ ಮಾಡಬಹುದು.
ಹೀಗೊಂದು ಸುದ್ದಿ ಆಗಿದೆ. ಇಲ್ಲಿ ಕೊಟ್ಟಿರುವ ಲಿಂಕ್ ನಲ್ಲಿ ಅಪ್ಲೈ ಸಹ ಮಾಡಬಹುದು. ಆದರೆ ಸರ್ಕಾರದಿಂದಲೋ ಬೆಸ್ಕಾಂನಿಂದಲೋ ಅಥವಾ ಯಾವುದೇ ಹೇಳಿಕೆ ಇಲ್ಲ, ಈ ಬಗ್ಗೆ ಮಾಹಿತಿ ಇಲ್ಲ. ಏನು ಮಾಡಬೇಕು ಈಗ. https://t.co/9MeCbBIiPP. @NammaBESCOM @thekjgeorge @DKShivakumar @tv9kannada
— Srinivasa (@sreekabeer) August 17, 2025
ಇನ್ನು ಈ ಸಂಬಂಧ ಸರ್ಕಾರ ಅಥವಾ ಬೆಸ್ಕಾಂ ಅಧಿಕೃತವಾಗಿ ಯಾವುದೇ ಸುತ್ತೋಲೆ ಹೊರಡಿಸದಿರುವ ಕಾರಣದಿಂದಾಗಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದು, ಬಗ್ಗೆ ನೆಟ್ಟಿಗ ಶ್ರೀನಿವಾಸ್ ಎನ್ನುವರು ಟ್ವಿಟ್ಟರ್ ಎಕ್ಸ್ನಲ್ಲಿ ಪ್ರಶ್ನಿಸಿದ್ದಾರೆ. ಇದರಿಂದ ಸರ್ಕಾರ, ಬೆಸ್ಕಾಂ, ಬಿಬಿಎಂಪಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಈ ಸ್ಪಷ್ಟನೆ ನೀಡುವ ಮೂಲಕ ಜನರಲ್ಲಿ ಉದ್ಭವಿಸಿರುವ ಗೊಂದಲಕ್ಕೆ ತೆರ ಎಳೆಯಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Sun, 17 August 25




