Karnataka Weather Forecast: ಕರ್ನಾಟಕ ಹವಾಮಾನ; ಆಗಸ್ಟ್ 20ರ ವರೆಗೂ ಭಾರಿ ಮಳೆ ಮುನ್ಸೂಚನೆ ನೀಡಿದ ಐಎಂಡಿ
ಕರ್ನಾಟಕ ಹವಾಮಾನ, ಮಳೆ ಮುನ್ಸೂಚನೆ; ಭಾರತೀಯ ಹವಾಮಾನ ಇಲಾಖೆ ಕರ್ನಾಟಕದಲ್ಲಿ ಆಗಸ್ಟ್ 20 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯರಲ್ಲೋ ಅಲರ್ಟ್, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ನೀಡಲಾಗಿದೆ. ಹವಾಮಾನ ಮುನ್ಸೂಚನೆಯ ವಿವರ ಇಲ್ಲಿದೆ.

ಬೆಂಗಳೂರು, ಆಗಸ್ಟ್ 16: ಆಗಸ್ಟ್ 20 ರ ವರೆಗೂ ಕರ್ನಾಟಕದ ಹಲವೆಡೆ ಭಾರಿ ಮಳೆಯಾಗಲಿದೆ (Karnataka Rains) ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ. ಮುಂದಿನ ನಾಲ್ಕು ದಿನಗಳ ಕರ್ನಾಟಕ ಹವಾಮಾನ (Karnataka Weather) ಮುನ್ಸೂಚನೆ ಲಭ್ಯವಾಗಿದ್ದು, ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಆಗಸ್ಟ್ 17 ರಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ
ಆಗಸ್ಟ್ 17 ರಂದು ಭಾನುವಾರ ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಗಸ್ಟ್ 18ರಂದು ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ, ಹಾಸನ, ಮೈಸೂರು, ಕೊಡಗು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿಗೆ ಯೆಲ್ಲೋ ಅಲರ್ಟ್
ರಾಜಧಾನಿ ಬೆಂಗಳೂರಿಗೆ ಆಗಸ್ಟ್ 19 ರ ವರೆಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಗರದಲ್ಲಿ ಬಲವಾದ ಗಾಳಿ ಬೀಸುವಿಕೆ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯೆತೆಯೂ ಇದೆ.
ಮುಂದಿನ 7 ದಿನಗಳ ಕಾಲ ರಾಜ್ಯದಾದ್ಯಂತ ಜೋರಾದ ಗಾಳಿಯೊಂದಿಗೆ ಕೆಲವೆಡೆ ವ್ಯಾಪಕವಾಗಿ ಮತ್ತು ಇನ್ನು ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಆಗಸ್ಟ್ 18 ಮತ್ತು 19 ರಂದು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.
ಕೆಎಸ್ಎನ್ಡಿಎಂಸಿ ಎಕ್ಸ್ ಸಂದೇಶ
ಮುಂದಿನ 7 ದಿನಗಳ #ಮಳೆ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) ರಾಜ್ಯದಾದ್ಯಂತ ಜೋರಾದ ಗಾಳಿಯೊಂದಿಗೆ ಚದುರದಿಂದ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ. ಆಗಸ್ಟ್ 18 ಮತ್ತು 19 ರಂದು ಕರಾವಳಿ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. pic.twitter.com/lRWvYMG1lz
— Karnataka State Natural Disaster Monitoring Centre (@KarnatakaSNDMC) August 15, 2025
ಏತನ್ಮಧ್ಯೆ, ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ವಿವಿಧೆಡೆ ಶನಿವಾರ ಮಳೆಯ ಅಬ್ಬರ ಮುಂದುವರಿದಿದೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಚಿಕ್ಕಬಳ್ಳಾಪುರದಲ್ಲಿಯೂ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಟೊಮೆಟೋ ಬೆಳೆಗೆ ಹಾನಿಯಾಗಿದೆ.
ಇದನ್ನೂ ಓದಿ: ಕರ್ನಾಟಕದಾದ್ಯಂತ ಇಂದಿನಿಂದ ಮಳೆ ಜೋರು, ಯಾವ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬಾಗಲಕೋಟೆ ಹಾಗೂ ಗದಗ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಾಳದಲ್ಲಿ ಮಲಪ್ರಭಾ ನದಿ ನೀರಿನ ರಭಸಕ್ಕೆ ಸೇತುವೆ ಪಕ್ಕದ ತಡೆಗೋಡೆ ಒಡೆದುಹೋಗಿ ಹೊಲ, ಗದ್ದೆಗಳಿಗೆ ನದಿ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
