Karnataka Rain: ಕರ್ನಾಟಕದಲ್ಲಿ ಇನ್ನೂ 3 ದಿನ ಮಳೆ; ವರುಣಾರ್ಭಟಕ್ಕೆ ಹೈರಾಣಾದ ರಾಜ್ಯದ ಜನರು
Karnataka Weather Today: ಪೂರ್ವ-ಮಧ್ಯ ಅರೇಬಿಯನ್ ಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ, ದಕ್ಷಿಣ ಒಳನಾಡು ಕರ್ನಾಟಕ ಮತ್ತು ಅದರ ನೆರೆಹೊರೆಯ ಪ್ರದೇಶಗಳ ಮೇಲೆ ಗಾಳಿಯ ಪರಿಚಲನೆ ಆಗಲಿದೆ. ಈ ಕಾರಣದಿಂದ ವ್ಯಾಪಕ ಮಳೆಯಾಗಲಿದೆ ಎಂದು ಹೇಳಲಾಗಿದೆ.
Bengaluru Rain: ಬೆಂಗಳೂರಿನಲ್ಲಿ ನವೆಂಬರ್ 23 (ಮಂಗಳವಾರ)ರ ಬೆಳಗ್ಗೆಯವರೆಗೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹಾಗೇ, ಇದರ ಹೊರತಾಗಿ ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳು, ಉತ್ತರ ಒಳನಾಡು ಪ್ರದೇಶಗಳು, ಮಲೆನಾಡು, ಕರಾವಳಿ ತೀರಗಳಲ್ಲಿ ನವೆಂಬರ್ 21 (ಇಂದು)ರವರೆಗೂ ಮಳೆ ಮುಂದುವರಿಯಲಿದೆ. ನಿನ್ನೆ ಶನಿವಾರ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಮತ್ತು ರಾಮನಗರಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿತ್ತು. ಅದರಲ್ಲಿ ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯವರೆಗೂ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ.
ಹಾಗೇ, ಇಂದು ಮಧ್ಯಾಹ್ನದವರೆಗೂ ದಕ್ಷಿಣ ಒಳನಾಡು ಪ್ರದೇಶಗಳಾದ ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ದಾವಣಗೆರೆ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದ್ದು, ಕೆಲವೆಡೆ ಭಾರಿ ಮಳೆ ಸುರಿಯಲಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಸಣ್ಣಪ್ರಮಾಣದಲ್ಲಿ ಮಳೆ ಮುಂದುವರಿಯಲಿದೆ. ಹಾಸನ, ಕೊಡಗು, ಉತ್ತರ ಕನ್ನಡ, ಕರಾವಳಿ ಜಿಲ್ಲೆಗಳಲ್ಲೂ ಅಲ್ಲಲ್ಲಿ ಸಣ್ಣ, ಮಧ್ಯಮ ಪ್ರಮಾಣದಲ್ಲಿ ಮಳೆ ಮುಂದುವರಿಯಲಿದೆ. ದಕ್ಷಿಣ ಕರಾವಳಿ ಪ್ರದೇಶಗಳಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿಮೀ ಇರಲಿದ್ದು, ಅದು 60ಕಿಮೀ ವರೆಗೂ ತಲುಪುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಲಾಗಿದೆ.
ಬೆಂಗಳೂರು ಸೇರಿ, ರಾಜ್ಯದ ಬಹುತೇಕ ಕಡೆಗಳಲ್ಲಿ ಒಂದೇ ಸಮನೆ ಮಳೆ ಮುಂದುವರಿಯುತ್ತಿದ್ದು, ಬೆಂಗಳೂರು ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ನವೆಂಬರ್ 23ರವರೆಗೂ ಮಳೆಯಿಂದ ಮುಕ್ತಿಯಿಲ್ಲ. ಇನ್ನು ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ರೀತಿಯ ಹಾನಿಯುಂಟಾಗಿದೆ. ತುಮಕೂರಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಅಪಾರ ಹಾನಿಯುಂಟಾಗಿದೆ. ಕೃಷಿ ಭೂಮಿ ತೊಯ್ದು ತೊಪ್ಪೆಯಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಹಾಗೇ, ನಿನ್ನೆ ಶಿರಾ ಬಳಿಕ ಸರ್ಕಾರಿ ಬಸ್ವೊಂದು ಸಿಕ್ಕಿಬಿದ್ದಿತ್ತು. ರಾಜ್ಯಾದ್ಯಂತ ಜಲಾಶಯಗಳೂ ತುಂಬುತ್ತಿರುವ ಕಾರಣ, ಅಣೆಕಟ್ಟುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಒಂದೇ ಸಮನೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕರ್ನಾಟಕದ ಹಲವು ಜಿಲ್ಲೆಗಳ ನಗರಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಪೂರ್ವ-ಮಧ್ಯ ಅರೇಬಿಯನ್ ಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ, ದಕ್ಷಿಣ ಒಳನಾಡು ಕರ್ನಾಟಕ ಮತ್ತು ಅದರ ನೆರೆಹೊರೆಯ ಪ್ರದೇಶಗಳ ಮೇಲೆ ಗಾಳಿಯ ಪರಿಚಲನೆ ಆಗಲಿದೆ. ಈ ಕಾರಣದಿಂದ ವ್ಯಾಪಕ ಮಳೆಯಾಗಲಿದೆ ಎಂದು ಹೇಳಲಾಗಿದೆ. ಕೇವಲ ಕರ್ನಾಟಕವಷ್ಟೇ ಅಲ್ಲದೆ, ತಮಿಳುನಾಡು, ಆಂಧ್ರಪ್ರದೇಶ, ಕೇರಳಗಳಲ್ಲೂ ಕೂಡ ಸಿಕ್ಕಾಪಟೆ ಮಳೆಯಾಗುತ್ತಿದ್ದು, ಪರಿಸ್ಥಿತಿ ಮುಂದುವರಿಯಲಿದೆ. ಇದರೊಂದಿಗೆ ಗೋವಾ, ಮಹಾರಾಷ್ಟ್ರಗಳಲ್ಲೂ ಭಾರಿ ಮಳೆಯಾಗಬಹುದು ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ: ಮಳೆ ಸೃಷ್ಟಿಸುತ್ತಿರುವ ಅವಾಂತರಗಳು; ಶಿರಾ ಸಮೀಪ ರಸ್ತೆ ಮೇಲೆ ಹರಿಯುತ್ತಿದ್ದ ನೀರಲ್ಲಿ ಸಿಕ್ಕಿ ಹಾಕಿಕೊಂಡಿತು ಸರ್ಕಾರೀ ಬಸ್