ಸಂಚಾರಿ ಪೊಲೀಸ್ ಇಲಾಖೆಯಿಂದ ರಾಜ್ಯಾದ್ಯಂತ ಇ-ಚಲನ್ ದಂಡ ವ್ಯವಸ್ಥೆ ಜಾರಿ, ಸಬೂಬು ಹೇಳಿ ತಪ್ಪಿಸಿಕೊಳ್ಳಲು ಅವಕಾಶವಿಲ್ಲ
ಕರ್ನಾಟಕ ಸಂಚಾರ ಪೊಲೀಸ್ ಇಲಾಖೆಯು ಮ್ಯಾನ್ಯುಯುಲ್ ಮೂಲಕ ದಂಡ ಬರೆದುಕೊಡುವ ರಸೀದಿ ವ್ಯವಸ್ಥೆಗೆ ಇತಿಶ್ರೀ ಹಾಡಿ ಇ-ಚಲನ್ ವ್ಯವಸ್ಥೆ ಜಾರಿಗೊಳಿಸಿದೆ. ಬುಧವಾರ (ಫೆಬ್ರವರಿ 7) ರಂದು ಇ-ಚಲನ್ ದಂಡ ವ್ಯವಸ್ಥೆಗೆ ಇಲಾಖೆ ಚಾಲನೆ ನೀಡಿದೆ. ಈ ಮೂಲಕ ಕರ್ನಾಟಕ ಶೇ 100 ರಷ್ಟು ಮ್ಯಾನ್ಯುಯಲ್ ರಸೀದಿ ರಹಿತ ವ್ಯವಸ್ಥೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿದೆ.
ಬೆಂಗಳೂರು, ಫೆಬ್ರವರಿ 09: ಸಂಚಾರಿ ನಿಯಮ (Traffic Rules) ಉಲ್ಲಂಘನೆ ಪ್ರಕರಣಗಳಲ್ಲಿ ಹಳೆ ಪದ್ಧತಿಯಲ್ಲೇ ದಂಡ ವಿಧಿಸುತ್ತಿರುವ ರಾಜ್ಯ ಸಂಚಾರ ಪೊಲೀಸ್ ಇಲಾಖೆ (Karnataka Traffic Police Department) ಇದೀಗ ಹೈಟೆಕ್ ತಂತ್ರಜ್ಞಾನವನ್ನು ಜಾರಿಗೆ ತಂದಿದೆ. ಇಲಾಖೆಯು ಮ್ಯಾನ್ಯುಯುಲ್ ಮೂಲಕ ದಂಡ ಬರೆದುಕೊಡುವ ರಸೀದಿ ವ್ಯವಸ್ಥೆಗೆ ಇತಿಶ್ರೀ ಹಾಡಿ ಇ-ಚಲನ್ (E-challan) ವ್ಯವಸ್ಥೆ ಜಾರಿಗೊಳಿಸಿದೆ. ಬುಧವಾರ (ಫೆಬ್ರವರಿ 7) ರಂದು ಇ-ಚಲನ್ ದಂಡ ವ್ಯವಸ್ಥೆಗೆ ಇಲಾಖೆ ಚಾಲನೆ ನೀಡಿದೆ. ಈ ಮೂಲಕ ಕರ್ನಾಟಕ ಶೇ 100 ರಷ್ಟು ಪೇಪರ್ಲೆಸ್ ವ್ಯವಸ್ಥೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿದೆ. ಇ-ಚಲನ್ ವ್ಯವಸ್ಥೆಯನ್ನು ಜಾರಿಗೆ ತರುವುದರಿಂದ ಸಂಚಾರ ನಿರ್ವಹಣೆಯನ್ನು ಡಿಜಿಟಲೀಕರಣಗೊಳಿಸುವ, ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಮತ್ತು ಕಾಗದ ರಹಿತ ಕೆಲಸವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ರಾಜ್ಯ ಪೊಲೀಸ್ ಇಲಾಖೆಯು ಎಸ್‌ಬಿಐ ಬ್ಯಾಂಕ್ನ ಜೊತೆ ಸಹಯೋಗ ಮಾಡಿಕೊಂಡಿದ್ದು, ಸಾರ್ವಜನಿಕರು ಕಟ್ಟುವ ದಂಡ ನೇರವಾಗಿ ಇಲಾಖೆಯ ಅಕೌಂಟ್ಗೆ ಹೋಗುತ್ತದೆ. ಮತ್ತು ರಾಜ್ಯದಾದ್ಯಂತ 722 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು ಮತ್ತು 64 ಸಂಚಾರ ಠಾಣೆಗಳ ಪೊಲೀಸ್ ಸಿಬ್ಬಂದಿಗೆ 1,766 ಇ-ಚಲನ್ ಯಂತ್ರಗಳನ್ನು ನೀಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವವರು ಯುಪಿಐ, ಡೆಬಿಟ್ ಕಾರ್ಡ್ ಮತ್ತು ನಗದು ಪಾವತಿ ಸೇರಿದಂತೆ ವಿವಿಧ ವಿಧಾನಗಳ ಮೂಲಕ ದಂಡವನ್ನು ಕಟ್ಟಬಹುದು.
ಇದನ್ನೂ ಓದಿ: ದಾವಣಗೆರೆ: ಸಂಚಾರಿ ನಿಯಮ ಉಲ್ಲಂಘನೆ ಶುಲ್ಕ ಪಾವತಿ ಸೌಲಭ್ಯ; ಇನ್ಮುಂದೆ ಅಂಚೆ ಕಚೇರಿಗಳಲ್ಲಿ ಲಭ್ಯ
ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪ್ರಾರಂಭವಾದ ಈ ವ್ಯವಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಕುಡಿದು ವಾಹನ ಚಲಾಯಿಸುವ ಅಥವಾ ವಿಶೇಷ ಡ್ರೈವ್‌ಗಳ ಅಡಿಯಲ್ಲಿ ನಿಯಮ ಉಲ್ಲಂಘಿಸುವವರು ಲಿಂಕ್ ಮೂಲಕ ಏಳು ದಿನಗಳಲ್ಲಿ ವರ್ಚುವಲ್ ಆಗಿ ದಂಡವನ್ನು ಪಾವತಿಸಬಹುದು. ಈ ಹಣ ಇಲಾಖೆಯ ಬ್ಯಾಂಕ್ ಅಕೌಂಟ್ಗೆ ಹೋಗುತ್ತದೆ. ಈ ಮೂಲಕ ಎಲ್ಲ ಸಂಚಾರ ಪೊಲೀಸ್ ಠಾಣೆಗಳು ಪೇಪರ್ಲೆಸ್ ಆಗುತ್ತವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಅಲೋಕ್ ಕುಮಾರ್ ಹೇಳಿದರು.
ಇದನ್ನೂ ಓದಿ: ಬರೋಬ್ಬರಿ ನೂರು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಈ ಮಹಾಶಯ ತೆತ್ತ ದಂಡವೆಷ್ಟು ನೋಡಿ..
ಜೊತೆಗೆ ಮುಂದಿನ ದಿನಗಳಲ್ಲಿ ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ಸುಧಾರಿತ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಇ-ಚಲನ್ ಸಾಧನಗಳನ್ನು ಸಂಯೋಜಿಸುವ ಯೋಜನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 am, Fri, 9 February 24