ಬರೋಬ್ಬರಿ ನೂರು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಈ ಮಹಾಶಯ ತೆತ್ತ ದಂಡವೆಷ್ಟು ನೋಡಿ..
ಕಠಿಣ ಕಾನೂನು ಕ್ರಮಗಳ ಹೊರತಾಗಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ದ್ವಿಚಕ್ರ ವಾಹನ ಮಾಲೀಕನೊಬ್ಬ ಬರೋಬ್ಬರಿ ನೂರು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಸಂಚಾರ ನಿಯಮ(Traffic Rules) ಉಲ್ಲಂಘನೆ ಪ್ರಕರಣಗಳನ್ನು ತಗ್ಗಿಸಲು ನಮ್ಮ ಬೆಂಗಳೂರು ಟ್ರಾಫಿಕ್ ಪೊಲೀಸರು(Bengaluru Traffic Police) ಹಲವಾರು ಹೊಸ ಉಪಕ್ರಮಗಳನ್ನು ಅಳವಡಿಸಿಕೊಂಡಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ದ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ನೀಡುವ ಮಾಹಿತಿ ಆಧರಿಸಿ ಕೂಡಾ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಬರೋಬ್ಬರಿ ನೂರು ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿ ರಾಜಾ ರೋಷವಾಗಿ ಓಡಾಡಿಕೊಂಡಿದ್ದ ಅಸಾಮಿಗೆ ಖೆಡ್ಡಾ ತೋಡಿದ್ದಾರೆ.
ಹೌದು, ಬೆಂಗಳೂರು ನಗರ ವಿವಿಧಡೆ ಬರೋಬ್ಬರಿ 99 ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ 100ನೇ ಸಂಚಾರಿ ನಿಯಮ ಉಲ್ಲಂಘನೆಯ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದು, ಇದಕ್ಕಾಗಿ ಬರೋಬ್ಬರಿ ರೂ. 56 ಸಾವಿರ ದಂಡ ವಿಧಿಸಲಾಗಿದೆ. ಜೊತೆಗೆ ಅಪಾಯಕಾರಿಯಾದ ವಾಹನ ಚಾಲನೆಗಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡಾ ದಾಖಲಿಸಲಾಗಿದ್ದು, ಚಾಲನಾ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ.
ಇನ್ನಷ್ಟು ಓದಿ: ಸ್ಪೋರ್ಟಿ ಫೀಚರ್ಸ್ ಹೊಂದಿರುವ ಬಜಾಜ್ ಪಲ್ಸರ್ ಎನ್150 ಬೈಕ್ ಬಿಡುಗಡೆ
ಅಸಾಮಿ ಸಿಕ್ಕಿಬಿದ್ದಿದ್ದೆ ರೋಚಕ! ಟ್ರಾಫಿಕ್ ಪೊಲೀಸರಿಂದ ಸದಾ ತಪ್ಪಿಸಿಕೊಳ್ಳುತ್ತಿದ್ದ KA 05 EM 1946 ನೋಂದಣಿ ಸಂಖ್ಯೆಯ ಸ್ಕೂಟರ್ ಮಾಲೀಕ ಕಳೆದ 2019ರಿಂದ ಇದುವರೆಗೆ ಸುಮಾರು 99 ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆದರೆ ಇಷ್ಟೆಲ್ಲಾ ನಿಯಮ ಉಲ್ಲಂಘಿಸಿದ್ದರೂ ಕೂಡಾ ಯಾವುದೇ ಭಯವಿಲ್ಲದೆ ಓಡಾಡಿಕೊಂಡಿದ್ದ ಸ್ಕೂಟರ್ ಮಾಲೀಕನಿಗೆ ಮೊನ್ನೆಯ ಘಟನೆ ಶಾಕ್ ಕೊಟ್ಟಿದೆ. ಬಿಟಿಎಂ ಲೇಔಟ್ ನಲ್ಲಿರುವ ವೆಗಾ ಸಿಟಿ ಜಂಕ್ಷನ್ ಬಳಿ ಅಪಾಯಕಾರಿಯಾಗಿ ಸ್ಕೂಟರ್ ಚಾಲನೆ ಮಾಡುವ ಮೂಲಕ ಒನ್ ವೇ ಯಲ್ಲಿ ನುಗ್ಗಿದ್ದಾನೆ. ಈ ದೃಶ್ಯವನ್ನು ಕಾರ್ ಡ್ಯಾಶ್ ಬೋರ್ಡ್ ಕ್ಯಾಮೆರಾ ಮೂಲಕ ಸೆರೆಹಿಡಿದ ಟ್ವಿಟರ್ ಬಳಕೆದಾರರೊಬ್ಬರು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು.
Good job @DCPTrSouth & team
-Vehicle detained – DL being suspended – FIR registered
“ No one is beyond the reach of the law, it’s only matter of time” https://t.co/O6FwwFYnKD
— alok kumar (@alokkumar6994) September 27, 2023
ಇನ್ನಷ್ಟು ಓದಿ: ಪ್ರಧಾನಿ ನರೇಂದ್ರ ಮೋದಿಯವರ ಸೂಪರ್ ಸೇಫ್ ಗಾರ್ಡ್ ಐಷಾರಾಮಿ ಕಾರಿನ ವಿಶೇಷತೆಗಳೇನು ಗೊತ್ತಾ?
ಟ್ವಿಟರ್ ಬಳಕೆದಾರರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಟ್ರಾಫಿಕ್ ಪೊಲೀಸರು ಕೇವಲ 2 ದಿನಗಳಲ್ಲಿ ಸ್ಕೂಟರ್ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಕಾರ್ಯಾಚರಣೆ ಕುರಿತು ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಕ್ಷಿಣ ವಿಭಾಗದ ಟ್ರಾಫಿಕ್ ಡಿಸಿಪಿ ಮತ್ತು ತಂಡವನ್ನು ಪ್ರಶಂಸಿದ್ದಾರೆ. ಜೊತೆಗೆ ಸಂಚಾರಿ ನಿಯಮ ಉಲ್ಲಂಘಿಸಿದರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದು, ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಮನವಿ ಮಾಡಿದ್ದಾರೆ.
Published On - 3:29 pm, Fri, 29 September 23