B Sriramulu: ಸಾರಿಗೆ ನಿಗಮಗಳ ನೌಕರರ ಜೊತೆ ಸಚಿವ ಶ್ರೀರಾಮುಲು ಸಭೆ ವಿಫಲ
ವೇತನ ಹೆಚ್ಚಳ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಮುಂದಿಟ್ಟಿರುವ ವಿವಿಧ ಬೇಡಿಕೆಗಳ ಬಗ್ಗೆ ಸಾರಿಗೆ ಸಚಿವ ಬಿ ಶ್ರೀರಾಮುಲು ಬುಧವಾರ ಸಂಜೆ ಸಭೆ ನಡೆಸಿದರು. ಆದರೆ ಒಮ್ಮತಕ್ಕೆ ಬರುವಲ್ಲಿ ಸಭೆ ವಿಫಲವಾಗಿದೆ.
ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು (KSRTC Employees) ಮುಂದಿಟ್ಟಿರುವ ವಿವಿಧ ಬೇಡಿಕೆಗಳ ಬಗ್ಗೆ ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಬುಧವಾರ ಸಂಜೆ ಸಭೆ ನಡೆಸಿದರು. ಆದರೆ ಒಮ್ಮತಕ್ಕೆ ಬರುವಲ್ಲಿ ಸಭೆ ವಿಫಲವಾಗಿದೆ. ವಿಧಾನಸೌಧ 3ನೇ ಮಹಡಿಯ ಕೊಠಡಿ ಸಂಖ್ಯೆ 313ರಲ್ಲಿ ಸುಮಾರು ಎರಡೂವರೆ ಗಂಟೆ ಸಭೆ ನಡೆಸಿದ ಸಚಿವರು ಶೇ 25ರಷ್ಟು ವೇತನ ಹೆಚ್ಚಳ ಬೇಡಿಕೆಗೆ ಸಮ್ಮತಿಸಲಿಲ್ಲ. ಶೇ 10ರಷ್ಟು ವೇತನ ಹೆಚ್ಚಳ ಮಾಡುವ ಭರವಸೆ ನೀಡಿದರು. ಆದರೆ, ಇದಕ್ಕೆ ಸಾರಿಗೆ ನಿಗಮಗಳ ನೌಕರರು ಸಮ್ಮತಿಸಿಲ್ಲ. ಹೀಗಾಗಿ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ಸಚಿವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮಾತನಾಡಿ ಮತ್ತೆ ಸಭೆ ಕರೆಯುತ್ತೇನೆ ಎಂದು ಸಚಿವರು ತಿಳಿಸಿರವುದಾಗಿ ಮಾತುಕತೆಯ ಬಳಿಕ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್ ಮಾಹಿತಿ ನೀಡಿದ್ದಾರೆ.
ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರ ಮಹಾಮಂಡಳಿ, ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜ್ದೂರ್ ಸಂಘ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಮಾರ್ಚ್ 24ರಿಂದ ಮುಷ್ಕರಕ್ಕೆ ಮುಂದಾಗಿರುವ ನೌಕರರು
ಸಾರಿಗೆಯ 4 ನಿಗಮಗಳ ನೌಕರರ ಬೇಡಿಕೆ ಈಡೇರಿಕೆಗಾಗಿ ಮತ್ತು ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಾರಿಗೆ ನೌಕರರು ಸತತ 3 ವರ್ಷಗಳಿಂದ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಈ ವಿಚಾರವಾಗಿ ಲಿಖಿತ ರೂಪದಲ್ಲಿ ನೀಡಿದ ಭರವಸೆಗಳನ್ನೂ ಸರ್ಕಾರ ಈಡೇರಿಸಲ್ಲ. ಹೀಗಾಗಿ ಮಾರ್ಚ್ 24ರಿಂದ ಬಸ್ ಸೇವೆ ಸ್ಥಗಿತಗೊಳಿಸುವ ಮೂಲಕ ಅನಿರ್ಧಾಷ್ಟಾವದಿ ಮುಷ್ಕರ ನಡೆಸಲು ನೌಕರರು ಮುಂದಾಗಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ ಘೋಷಣೆ ಬೆನ್ನಲ್ಲೇ ಎಚ್ಚೆತ್ತ ಸಚಿವ ಶ್ರೀರಾಮುಲು, ಇಂದು ಮಹತ್ವದ ಸಭೆ
ಆರನೇ ವೇತನ ಆಯೋಗದ ಶಿಫಾರಸಿನ ಅನ್ವಯ ಸಾರಿಗೆ ನೌಕರರಿಗೆ ವೇತನ ನೀಡುವುದಾಗಿ 2021ರ ಏಪ್ರಿಲ್ನಲ್ಲಿ ಸರ್ಕಾರ ಲಿಖಿತ ಭರವಸೆ ನೀಡಿತ್ತು. ಆದರೆ 2 ವರ್ಷ ಕಳೆದರೂ ಬೇಡಿಕೆ ಈಡೇರಿಯಾಗಿಲ್ಲ. ಬಜೆಟ್ನಲ್ಲಿಯೂ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಏನೂ ಪ್ರಸ್ತಾಪಿಸಿಲ್ಲ ಎಂದು ಸಾರಿಗೆ ಒಕ್ಕೂಟದ ಅಧ್ಯಕ್ಷ ಆರ್ ಚಂದ್ರಶೇಖರ್ ಹೇಳಿದ್ದರು.
ಈ ಮಧ್ಯೆ, ಮುಂದಿನ 6 ತಿಂಗಳ ಕಾಲ ಮುಷ್ಕರ ನಡೆಸದಂತೆ 2022ರ ಡಿಸೆಂಬರ್ 29 ರಂದು ಸರ್ಕಾರ ಹೊರಡಿಸಿದ್ದ ಆದೇಶವೂ ಸಾರಿಗೆ ನೌಕರರಿಗೆ ಸಂಕಷ್ಟ ತಂದಿಡ್ಡಿದೆ. ‘ಕರ್ನಾಟಕ ಆಗತ್ಯ ಸೇವಾ ನಿರ್ವಾಹಣೆ ಕಾಯ್ದೆ 2013’ ರ ಅಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿತ್ತು. ಆದರೆ ಈ ಆದೇಶದ ಹೊರತಾಗಿಯೂ ಮಾರ್ಚ್ 24ರಿಂದ ಮುಷ್ಕರಕ್ಕೆ ಸಾರಿಗೆ ನೌಕರರು ಕರೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಾರಿಗೆ ಸಚಿವರ ಜತೆಗಿನ ಮತ್ತೊಂದು ಸುತ್ತಿನ ಸಭೆಯಲ್ಲಿ ಸಮಸ್ಯೆ ಬಗೆಹರಿಯಬಹುದೆಂಬ ನಿರೀಕ್ಷೆಯಲ್ಲಿ ಸಾರಿಗೆ ನೌಕರರು ಇದ್ದಾರೆ ಎಂದು ಮೂಲಗಳು ಹೇಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ