ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯುತ್ತೆ. ನಮ್ಮ ಹೋರಾಟ ಶಾಂತಿಯುತವಾಗಿ ಮುಂದುವರಿಯುತ್ತೆ. ಮುಷ್ಕರದ ವೇಳೆ ಕೊರೊನಾ ನಿಯಮ ಸಹ ಉಲ್ಲಂಘಿಸಿಲ್ಲ. ಇದೇ ರೀತಿ, ನಾಳೆಯೂ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ನಡೆಸಲಾಗುತ್ತೆ ಎಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಕೊರೊನಾ ಆರ್ಥಿಕ ಸಂಕಷ್ಟ ಎಂದು ರಾಜ್ಯ ಸರ್ಕಾರ ಹೇಳುತ್ತೆ. ಕೊರೊನಾ ನಡುವೆಯೂ ಮಠ, ಮಂದಿರಕ್ಕೆ ಹಣ ನೀಡಿಲ್ಲವೇ? ಅರ್ಧ ಸಂಬಳ ನೀಡಿ ಕೆಲಸ ಮಾಡಿಸಿಕೊಳ್ಳುವುದು ಸರಿಯೇ? ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದು ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಾಲ್ಕು ನಿಗಮದ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಈಗಾಗಲೇ ಹೇಳಿದ್ದಾರೆ. ಏತನ್ಮಧ್ಯೆ ಮುಷ್ಕರಕ್ಕಿಳಿದಿರುವ ನೌಕರರಿಗೆ ಮಾರ್ಚ್ ತಿಂಗಳದ ವೇತನ ಇನ್ನೂ ಸಿಕ್ಕಿಲ್ಲವಾದ್ದರಿಂದ ಸರ್ಕಾರ ಆಟ ಆಡಿಸಬಹುದು ಎಂಬ ಭಯವೂ ಇದೆ. ಮುಷ್ಕರ ಹತ್ತಿಕ್ಕಲು ಸರ್ಕಾರ ಸಂಬಳವನ್ನೇ ಅಸ್ತ್ರವನ್ನಾಗಿಸಿಕೊಳ್ಳಬಹುದೆಂದು ಸ್ವತಃ ಸಾರಿಗೆ ಸಿಬ್ಬಂದಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದಕ್ಕೆಲ್ಲಾ ತೆರೆ ಎಳೆದಿರುವ ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ, ವೇತನ ತಡೆ ವಿಚಾರ ನಮ್ಮ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ದಿನ ಏನೇನಾಯ್ತು? ಬೆಳಗ್ಗಿನಿಂದ ಇಲ್ಲಿಯವರೆಗಿನ ಘಟನಾವಳಿಗಳ ವಿವರಗಳು ಇಲ್ಲಿದೆ.
ಮಂಡ್ಯ ಮದ್ದೂರಿನಲ್ಲಿ ಕರ್ತವ್ಯಕ್ಕೆ ಹಾಜರಾದ ಕೆಎಸ್‌ಆರ್‌ಟಿಸಿ ನೌಕರನಿಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ. ಜಯರಾಮು ಕರ್ತವ್ಯಕ್ಕೆ ಹಾಜರಾದ ಬಸ್ ಚಾಲಕ ಆಗಿದ್ದಾರೆ. ಮದ್ದೂರು-ಕೊಪ್ಪ ಮಾರ್ಗವಾಗಿ ಸಾರಿಗೆ ಬಸ್ ಸಂಚಾರ ನಡೆಸಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಚಾಲಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪೋಲಿಸ್ ಭದ್ರತೆಯೊಂದಿಗೆ ಬಸ್ ಚಾಲನೆ ಮಾಡಲಾಗಿದೆ.
ಕೊವಿಡ್ ಸಂಕಷ್ಟದಲ್ಲಿ ಮುಷ್ಕರ ಮಾಡಬಾರದು. ನಾವು ಈ ಸಂದರ್ಭದಲ್ಲಿ ಮುಷ್ಕರ ಮಾಡಬಾರದು. ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಬಾರದು. ಮುಂದಿನ ದಿನಗಳಲ್ಲಿ ಸರ್ಕಾರವೇ ನಮ್ಮ ಸಂಬಳವನ್ನು ಏರಿಕೆ ಮಾಡುತ್ತದೆ ಎಂದು ಅವರು ನಂಬಿಕೆ ವ್ಯಕ್ತಪಡಿಸಿದ್ದಾರೆ. ಸಾರಿಗೆ ಬಸ್ ಇಲ್ಲದೆ ಪರದಾಡುತ್ತಿದ್ದ ಪ್ರಯಾಣಿಕರು ಚಾಲಕ ಕರ್ತವ್ಯಕ್ಕೆ ಹಾಜರಾದದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಷ್ಕರದಲ್ಲಿ ಭಾಗಿಯಾಗದೇ ಕೆಲಸಕ್ಕೆ ಹಾಜರಾದವರಿಗೆ ಸನ್ಮಾನ ಮಾಡಿದ ಘಟನೆ ವಿಜಯಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಕರ್ತವ್ಯಕ್ಕೆ ಹಾಜರಾದ ಸಾರಿಗೆ ಸಿಬ್ಬಂದಿಗೆ ಅಧಿಕಾರಿಗಳಿಂದ ಸನ್ಮಾನ ಮಾಡಲಾಗಿದೆ. ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪರಿಂದ 10ಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಗಿದೆ.
ಸಾರಿಗೆ ಸಿಬ್ಬಂದಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ, ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ಮನೆಗೆ ತಿಳಿವಳಿಕೆ ಪತ್ರ ನೀಡಿರುವ ಘಟನೆ ನಡೆದಿದೆ. ಈಶಾನ್ಯ ಕರ್ನಾಟಕ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ತಿಳಿವಳಿಕೆ ಪತ್ರ ಜಾರಿ ಮಾಡಿದ್ದಾರೆ. ತುರ್ತು ಸೇವೆಗೆ ಲಭ್ಯರಾಗಬೇಕೆಂಬ ಕಾರಣದಿಂದ ನಿಮಗೆ ವಸತಿ ಗೃಹ ಹಂಚಿಕೆ ಮಾಡಲಾಗಿದೆ. ಆದರೆ, ಈ ದಿನ ನೀವು ಕರ್ತವ್ಯಕ್ಕೆ ಗೈರಾಗಿದ್ದೀರಿ. ದೂರವಾಣಿ ಕರೆ ಮಾಡಿ ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡಿಕೊಂಡಿದ್ದರೂ ಗೈರಾಗಿದ್ದೀರಿ. ಈ ಮೂಲಕ ಗೃಹ ಹಂಚಿಕೆ ಷರತ್ತನ್ನು ಉಲ್ಲಂಘಿಸಿದ್ದೀರಿ. ಹಾಗಾಗಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ವಸತಿ ಗೃಹ ಹಂಚಿಕೆಯ ಷರತ್ತು ಹಾಗೂ ನಿಬಂಧನೆಗಳ ಅನ್ವಯ ವಸತಿ ಗೃಹದ ಹಂಚಿಕೆ ರದ್ದು ಮಾಡುತ್ತೇವೆ. ಜೊತೆಗೆ, ಕರ್ತವ್ಯ ನಿರಾಕರಿಸುವ ಸಂಬಂಧ ಶಿಸ್ತು ಕ್ರಮಕೈಗೊಳ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬಸ್ ಪ್ರಯಾಣಿಕರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಸ್ವಂತಿಕೆಗೋಸ್ಕರ ಸಾರಿಗೆ ನೌಕರರ ಜೊತೆ ಸೇರಿದ್ದಾರೆ. ರೈತ ಮುಖಂಡ ಕೋಡಿಹಳ್ಳಿಗೂ, ಸಾರಿಗೆ ನೌಕರರಿಗೂ ಎಲ್ಲಿದೆಲ್ಲಿಗೆ ಸಂಬಂಧ..? ಮುಷ್ಕರದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತೆ. ಖಾಸಗಿ ಬಸ್ ಗಳಲ್ಲಿ ವಯಸ್ಸಾದವರಿಗೆ ರಿಯಾಯಿತಿ ಸಿಗ್ತಿಲ್ಲ. ಎಲ್ಲರಂತೆ ನಾವೂ ಪೂರ್ತಿ ಹಣ ಕೊಟ್ಟು ಹೋಗ್ಬೇಕು. ಖಾಸಗಿ ಬಸ್ ಗಳು ಪ್ರಯಾಣಿಕನ್ನ ಸುಲಿಗೆ ಮಾಡ್ತಿವೆ ಎಂದು ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಸಾರಿಗೆ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ, ಮಂಗಳೂರು ವಿವಿಯ ಎಲ್ಲಾ ಪದವಿ ಪರೀಕ್ಷೆ ಮುಂದೂಡಲಾಗಿದೆ. ಏಪ್ರಿಲ್ 8ರಿಂದ 10ರವರೆಗೆ ನಿಗದಿಯಾಗಿದ್ದ ಪರೀಕ್ಷೆ ಮುಂದೂಡಿ ಆದೇಶ ಹೊರಡಿಸಲಾಗಿದೆ. ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ ದಿನಾಂಕ ಶೀಘ್ರವೇ ಪ್ರಕಟ ಆಗಲಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಿಂದ ಮಾಹಿತಿ ಲಭ್ಯವಾಗಿದೆ.
ಸಾರಿಗೆ ಸಿಬ್ಬಂದಿ ಮುಷ್ಕರದ ನಡುವೆಯೂ ಬೆಂಗಳೂರು ನಗರದಲ್ಲಿ ಕೆಲ ಬಸ್‌ಗಳು ಸಂಚಾರ ನಡೆಸಿವೆ. ಬೆಂಗಳೂರಿನಲ್ಲಿ ಇಂದು 145 ಬಿಎಂಟಿಸಿ ಬಸ್‌ಗಳು ಸಂಚಾರ ಮಾಡಿವೆ. ಅಲ್ಲದೆ, ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ 1124 ಖಾಸಗಿ ಬಸ್‌ಗಳು, 2 ಸಾವಿರ ಮ್ಯಾಕ್ಸಿ ಕ್ಯಾಬ್ ಬಳಕೆ ಮಾಡಲಾಗಿದೆ. ಈ ಬಗ್ಗೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಮಾಹಿತಿ ನೀಡಿದೆ.
ಸಾರಿಗೆ ಸಿಬ್ಬಂದಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ, ಬೆಂಗಳೂರು ಕೇಂದ್ರ ವಿವಿಯ ಪರೀಕ್ಷೆಗಳು ಮುಂದೂಡಲಾಗಿದೆ. ಏಪ್ರಿಲ್ 8, 9ರಂದು ನಿಗದಿಯಾಗಿದ್ದ ಪರೀಕ್ಷೆ ಮುಂದೂಡಿಕೆ ಮಾಡಿ ಬೆಂಗಳೂರು ಕೇಂದ್ರ ವಿವಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಪರೀಕ್ಷೆ ಮುಂದೂಡಲಾಗಿದ್ದು, ಶೀಘ್ರದಲ್ಲೇ ಪರೀಕ್ಷೆಗೆ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಕೆಲಸಕ್ಕೆ ಹಾಜರಾಗುವಂತೆ ತರಬೇತಿ ನೌಕರರಿಗೆ ನೋಟಿಸ್ ನೀಡಲಾಗಿದೆ. ಕೋಲಾರ ಜಿಲ್ಲೆಯಲ್ಲಿ 41 ತರಬೇತಿ ನೌಕರರಿಗೆ ನೋಟಿಸ್ ಜಾರಿಮಾಡಲಾಗಿದೆ. ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗದ ಹಿನ್ನೆಲೆ ನೋಟಿಸ್ ನೀಡಲಾಗಿದ್ದು, ಸಿಬ್ಬಂದಿ ಕೆಲಸಕ್ಕೆ ಹಾಜರಾಗದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ ಕೊಡಲಾಗಿದೆ. ಈ ಬಗ್ಗೆ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರಿದ ಹಿನ್ನೆಲೆ, ಮಹಾರಾಣಿ ಕ್ಲಸ್ಟರ್ ವಿವಿ ಪರೀಕ್ಷೆಗಳು ಮುಂದೂಡಿಕೆಯಾಗಿದೆ. ನಾಳೆ ನಡೆಯಬೇಕಿದ್ದ ಪದವಿ ಪರೀಕ್ಷೆಯನ್ನು ವಿಶ್ವವಿದ್ಯಾಲಯ ಮುಂದೂಡಿದೆ. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಪರೀಕ್ಷೆ ಮುಂದೂಡಿಕೆಯಾಗಿದ್ದು, ಮುಂದೂಡಿದ ಪರೀಕ್ಷೆಗಳ ದಿನಾಂಕ ಶೀಘ್ರವೇ ಪ್ರಕಟ ಎಂದು ತಿಳಿಸಲಾಗಿದೆ.
ಸರ್ಕಾರಿ ಬಸ್ ನೌಕರರ ಮುಷ್ಕರದ ನಡುವೆ ಕೆಎಸ್‌ಆರ್‌ಟಿಸಿ ಬಸ್ ಮೈಸೂರಿನಿಂದ ಮಂಡ್ಯದತ್ತ ತೆರಳಿದೆ. ಬನ್ನಿಮಂಟಪ ಡಿಪೋದಿಂದ ಹೊರಬಂದ ಮೊದಲ ಬಸ್ ಸಂಚಾರ ನಡೆಸಿದೆ. ಚಾಲಕ, ನಿರ್ವಾಹಕನನ್ನ ಕರೆಸಿಕೊಂಡ ಸಾರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿ ಕರ್ತವ್ಯಕ್ಕೆ ಕರೆಸಿಕೊಂಡಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಸರ್ಕಾರಿ ಬಸ್ ಮಂಡ್ಯದತ್ತ ತೆರಳಿದೆ.
ನಾಳೆಯೂ ಸಾರಿಗೆ ಸಿಬ್ಬಂದಿ ಮುಷ್ಕರ ಮುಂದುವರಿಕೆ ಹಿನ್ನೆಲೆ, ಬೆಂಗಳೂರು ವಿಶ್ವ ವಿದ್ಯಾಲಯ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ಬೆಂಗಳೂರು ವಿವಿ ಮೌಲ್ಯಮಾಪನ ಕುಲಸಚಿವರು ಮಾಹಿತಿ ನೀಡಿದ್ದಾರೆ. ನಿಗದಿಯಂತೆ ನಾಳೆ ಮೊದಲ, 3ನೇ ವರ್ಷದ ಪದವಿ ಪರೀಕ್ಷೆ ನಡೆಯಲಿದೆ.
ಅರ್ಧ ಸಂಬಳ ನೀಡಿ ಕೆಲಸ ಮಾಡಿಸಿಕೊಳ್ಳುವುದು ಸರಿಯೇ? ರಾಜ್ಯ ಸರ್ಕಾರ ಕೂಡಲೇ ಈ ತಾರತಮ್ಯವನ್ನು ಸರಿಪಡಿಸಲಿ. ನಮ್ಮ ಬೇಡಿಕೆ ಈಡೇರಿಸಿದ್ರೆ ಸಿಎಂ ಜೊತೆ ಮಾತುಕತೆಗೆ ಸಿದ್ಧ. ಇಲ್ಲದಿದ್ರೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯುತ್ತೆ. 6ನೇ ವೇತನ ಆಯೋಗದ ವರದಿಯಂತೆ ವೇತನ ನೀಡಲಿ. ಇದು ನಮ್ಮ ಅತಿ ಮುಖ್ಯ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರುವವರೆಗೂ ಮುಷ್ಕರ ಹಿಂಪಡೆಯಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಸಾರಿಗೆ ನೌಕರರ ವೇತನ ತಡೆ ಹಿಡಿದಿದೆ. ರಾಜ್ಯ ಸರ್ಕಾರದ ಕ್ರಮ ಮನುಷ್ಯತ್ವವಿಲ್ಲದ ಸರ್ವಾಧಿಕಾರಿ ನಡೆ. ಸಿಎಂ ಯಡಿಯೂರಪ್ಪನವರೇ ಅವರ ಮೇಲೆ ಏಕೆ ದ್ವೇಷ? ಸಾರಿಗೆ ನೌಕರರು ಪಾಕಿಸ್ತಾನದವರೇ ಎಂದು ರಾಜ್ಯ ಕಾಂಗ್ರೆಸ್ ಘಟಕ ಟ್ವಿಟರ್ನಲ್ಲಿ ಪ್ರಶ್ನೆ ಮಾಡಿದೆ. ರಾಜ್ಯ ಸರ್ಕಾರ ಮೊಂಡುತನ ಬಿಟ್ಟು ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು. ಪ್ರಯಾಣಿಕರ, ನೌಕರರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದೆ.
ಸಾರಿಗೆ ನೌಕರರ ವೇತನ ತಡೆ ಹಿಡಿದ @BJP4Karnataka ಸರ್ಕಾರದ ಕ್ರಮ ಮನುಷ್ಯತ್ವವಿಲ್ಲದ ಸರ್ವಾಧಿಕಾರಿ ನಡೆ.@BSYBJP ಅವರೇ, ಇಷ್ಟೊಂದು ದ್ವೇಷ ಮಾಡಲು ಸಾರಿಗೆ ನೌಕರರೇನು ಪಾಕಿಸ್ತಾನದವರೇ?
ಸರ್ಕಾರ ಮೊಂಡುತನ ಬಿಟ್ಟು ನೌಕರರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು.
ಪ್ರಯಾಣಿಕರ, ನೌಕರರ ಹಿತ ಕಾಯುವ ಕೆಲಸ ಮಾಡಬೇಕು.— Karnataka Congress (@INCKarnataka) April 7, 2021
ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯುತ್ತೆ. ನಮ್ಮ ಹೋರಾಟ ಶಾಂತಿಯುತವಾಗಿ ಮುಂದುವರಿಯುತ್ತೆ. ಮುಷ್ಕರದ ವೇಳೆ ಕೊರೊನಾ ನಿಯಮ ಸಹ ಉಲ್ಲಂಘಿಸಿಲ್ಲ. ಇದೇ ರೀತಿ, ನಾಳೆಯೂ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ನಡೆಸಲಾಗುತ್ತೆ ಎಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಕೊರೊನಾ ಆರ್ಥಿಕ ಸಂಕಷ್ಟ ಎಂದು ರಾಜ್ಯ ಸರ್ಕಾರ ಹೇಳುತ್ತೆ. ಕೊರೊನಾ ನಡುವೆಯೂ ಮಠ, ಮಂದಿರಕ್ಕೆ ಹಣ ನೀಡಿಲ್ಲವೇ? ಅರ್ಧ ಸಂಬಳ ನೀಡಿ ಕೆಲಸ ಮಾಡಿಸಿಕೊಳ್ಳುವುದು ಸರಿಯೇ? ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವವರೇ ಇಲ್ಲದೆ ಇರುವ ಸ್ಥಿತಿ ಕಂಡುಬಂದಿದೆ. ಬೆಳಗ್ಗೆಯಿಂದ ಕೇವಲ 50 ಖಾಸಗಿ ಬಸ್ ಮಾತ್ರ ಸಂಚಾರ ಮಾಡಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಖಾಸಗಿ ಬಸ್‌ಗಳಿಂದ ದುಬಾರಿ ಹಣ ವಸೂಲಿ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳನ್ನು ಹತ್ತಲು ಪ್ರಯಾಣಿಕರಿಂದ ಹಿಂದೇಟು ಹಾಕಿದ್ದಾರೆ. ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ನಿಂತಿರುವ ಬಸ್‌ಗಳು, ಪ್ರಯಾಣಿಕರಿಗಾಗಿ ಕಾಯುತ್ತಿವೆ. ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದ ನಿತ್ಯ 800 ಬಸ್ ಓಡಾಟ ನಡೆಯುತ್ತಿತ್ತು. ಆದ್ರೆ ಬೆಳಗ್ಗೆಯಿಂದ ಕೇವಲ 50 ಖಾಸಗಿ ಬಸ್‌ಗಳು ಸಂಚಾರ ಮಾಡಿವೆ.
ರಾಜ್ಯದಲ್ಲಿ ಇಂದಿನಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಕೂಟದಿಂದ ಸುದ್ದಿಗೋಷ್ಠಿ ಆರಂಭವಾಗಿದೆ. ರೈತ ಸಂಘ ಹಸಿರು ಸೇನೆ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದೆ. ಅನಿರ್ದಿಷ್ಟಾವಧಿ ಮುಷ್ಕರ, ಮುಷ್ಕರದ ಇಂದಿನ ಬೆಳವಣಿಗೆ ಬಗ್ಗೆ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ ಕುತೂಹಲ ಕೆರಳಿಸಿದೆ.
ಬಸ್ಗಾಗಿ ಎರಡೂವರೆ ಗಂಟೆಯಿಂದ ಕಾಯುತ್ತಿದ್ದ ಬಾಣಂತಿ ಹಾಗೂ ಮಗುವಿಗೆ ಟಿವಿ9 ತಂಡ ನೆರವು ನೀಡಿದೆ. ಒಂದೂವರೆ ತಿಂಗಳ ಹಸು ಗೂಸಿನೊಂದಿಗೆ ಬಾಣಂತಿ, ಬಸ್ಗಾಗಿ ಪರದಾಡುತ್ತಿದ್ದರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮಕ್ಕೆ ತೆರಳಲು ಬಾಣಂತಿ ಪರದಾಟ ನಡೆಸುತ್ತಿದ್ದರು. ವಿಜಯಪುರ ನಿಲ್ದಾಣದಲ್ಲಿ ಬಸ್ಗೆ ಎಂದು ಸಾವಿತ್ರಿ ಬಡಿಗೇರ್ ಎಂಬವರು ಸುಮಾರು ಹೊತ್ತಿನಿಂದ ಕಾಯುತ್ತಿದ್ದರು.
ಮಗುವಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಬಂದಿದ್ದ ಅವರು, ಚಿಕಿತ್ಸೆ ಬಳಿಕ ಊರಿಗೆ ತೆರಳಲು ಬಸ್ ಇಲ್ಲದೇ ಕಷ್ಟ ಅನುಭವಿಸುತ್ತಿದ್ದರು. ಬಾಣಂತಿ ಪರದಾಟ ನೋಡಲಾಗದೇ ಟಿವಿ9 ತಂಡ ವಅರಿಗೆ ನೆರವು ನೀಡಿದೆ. ಬಾಣಂತಿ ಹಾಗೂ ಮಗುವನ್ನು ಅವರ ಗ್ರಾಮಕ್ಕೆ ಕಳುಹಿಸಲು ಟಿವಿ9 ತಂಡ ವ್ಯವಸ್ಥೆ ಮಾಡಿಕೊಟ್ಟಿದೆ.
ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಕಷ್ಟವಾಗ್ತಿದೆ. ಕೂಡಲೇ ಸರ್ಕಾರ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಬೇಕು. ಖಾಸಗಿ ಬಸ್ ಓಡಿಸುತ್ತೇವೆ, ಎಸ್ಮಾ ಜಾರಿ ಮಾಡ್ತೇವೆಂದು ಸರ್ಕಾರ ಬೆದರಿಕೆಯ ತಂತ್ರ ತೋರಬಾರದು. ಸಾರಿಗೆ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಈ ಮುಷ್ಕರದಿಂದ ಹೊರ ರಾಜ್ಯದ ಬಸ್ಗಳಿಗೆ ಭಾರಿ ಹೊಡೆತ ಉಂಟಾಗಿದೆ. ಬೆಳಗ್ಗೆಯಿಂದ ಪ್ರಯಾಣಿಕರಿಲ್ಲದೇ ಖಾಲಿ ಬಸ್ಗಳ ಓಡಾಟವಾಗುತ್ತಿದೆ. ಒಂದು ಬಸ್‌ನಲ್ಲಿ ಕೇವಲ ಬೆರಳೆಣಿಕೆಯಷ್ಟು ಪ್ರಯಾಣಿಕರು ಕಂಡುಬಂದಿದ್ದಾರೆ. ಕೇರಳ, ತಮಿಳುನಾಡು ಭಾಗಗಳಿಗೆ ತೆರಳುವ ಬಸ್‌ಗಳು ಖಾಲಿಯಾಗಿವೆ.
ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ, ಅನ್ಯಾಯ ಪ್ರಶ್ನಿಸಿದ್ದಕ್ಕೆ ಎಸ್ಮಾ ಜಾರಿ ಮಾಡುವುದು ಸರಿಯೇ? ಎಂದು ತುಮಕೂರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಾರೆ. ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಎಸ್ಮಾ ಜಾರಿ ಮಾಡಲು ನೌಕರರು ಯಾವ ನಿಯಮ ಉಲ್ಲಂಘಿಸಿದ್ದಾರೆ? ಹೋರಾಟ ಹತ್ತಿಕ್ಕಲು ಸರ್ಕಾರದಿಂದ ಶಕ್ತಿ ಮೀರಿ ಪ್ರಯತ್ನ ನಡೆಯುತ್ತಿದೆ. ಮೊದಲು 6ನೇ ವೇತನ ಆಯೋಗ ಜಾರಿ ಮಾಡೋದಾಗಿ ಹೇಳಿದ್ದರು. ಆದರೆ ರಾಜ್ಯ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಜಾತಿ, ಮಠಗಳಿಗೆ ಅನುದಾನ ಕೊಡಲು ನಿಮ್ಮಲ್ಲಿ ದುಡ್ಡಿದೆ. ಬಡ ಕಾರ್ಮಿಕರಿಗೆ, ನೌಕರರಿಗೆ ಕೊಡಲು ದುಡ್ಡಿಲ್ಲವೇ? ಎಂದು ತುಮಕೂರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸಾರಿಗೆ ನೌಕರರು ಮುಷ್ಕರ ಮಾಡುತ್ತಿರುವುದು ಸರಿಯಲ್ಲ. ಅವರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲಿ. ಅದು ಸರಿಯೇ. ಆದರೆ, ಬಂದ್ ಸರಿಯಲ್ಲ. ಇಲಾಖೆ ವಿರುದ್ಧ ಸೆಡ್ಡು ಹೊಡೆಯುವುದು ಒಳ್ಳೆಯದಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸಾರಿಗೆ ನೌಕರರ 9 ಬೇಡಿಕೆ ಪೈಕಿ 8 ಬೇಡಿಕೆ ಈಡೇರಿಸಿದ್ದೇವೆ. ಮುಷ್ಕರ ಕೈ ಬಿಟ್ಟು ಮಾತುಕತೆಗೆ ಬನ್ನಿ, ಮಾತುಕತೆಗೆ ಸಿದ್ಧ ಎಂದು ಯರಗಟ್ಟಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಸಾರಿಗೆ ನೌಕರರಿಗೆ ಮುಷ್ಕರ ಕೈಬಿಡುವಂತೆ ಹೇಳಿದ್ದಾರೆ. ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವ ಆಶಯವನ್ನು ಯಡಿಯೂರಪ್ಪ ತೋರಿದ್ದಾರೆ.
ಕೊಪ್ಪಳದಲ್ಲಿ ಸಾರಿಗೆ ಸಿಬ್ಬಂದಿ ಮೇಲೆ ವಿಭಾಗೀಯ ನಿಯಂತ್ರಣ ಅಧಿಕಾರಿ ಮುಲ್ಲಾ, ಒತ್ತಡ ಹೇರಿ ಬಸ್ ಓಡಿಸುವಂತೆ ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಕಾರ್ಮಿಕ ಮಖಂಡರನ್ನೇ ಒತ್ತಾಯ ಮಾಡಿ ಕಳುಹಿಸಿದ ಮುಲ್ಲಾ, ಕೊಪ್ಪಳದಿಂದ ಹುಬ್ಬಳ್ಳಿಗೆ ಬಸ್ ಆರಂಭಿಸಿದ್ದಾರೆ. ಬಸ್ಗೆ ಏನಾದ್ರೂ ಆದ್ರೆ ನಾವೇ ಜವಾಬ್ದಾರರು ಎಂದು ಹೇಳಿ ಬಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಸಿಬ್ಬಂದಿಗೆ ಅರೆಸ್ಟ್ ಮಾಡಿಸ್ತೀವಿ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಮುಷ್ಕರದ ನಡುವೆಯೇ ಬೆಂಗಳೂರು ಹೊರವಲಯದ ಆನೇಕಲ್ ಡಿಪೋದಿಂದ ತಮಿಳುನಾಡಿನ ಹೊಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಗೆ ಕಲ್ಲು ತೂರಾಟ ನಡೆಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರಿಂದ ಬಸ್ಸಿಗೆ ಕಲ್ಲು ತೂರಾಟ ನಡೆದಿದೆ. ಚಾಲಕನ ಗುರಿಯಾಗಿಸಿ ಕಲ್ಲೆಸೆತ ನಡೆದಿದ್ದು, ಅದೃಷ್ಟವಶಾತ್ ಬಸ್ಸಿನ ಕನ್ನಡಿಗೆ ಕಲ್ಲು ಬಿದ್ದಿದ್ದರಿಂದ ಚಾಲಕ ಬಚಾವ್ ಆಗಿದ್ದಾರೆ. ಪೊಲೀಸ್ ಭದ್ರತೆ ಇದ್ದರೂ ಪುಂಡರು ಬಸ್ಸಿಗೆ ಕಲ್ಲು ಹೊಡೆದಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿರುವ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್, ಸರ್ಕಾರ ಈ ಕೂಡಲೇ ಮಾತುಕತೆಗೆ ಮುಂದಾಗಬೇಕು ಎಂದು ಹೇಳಿದ್ದಾರೆ. ಸರ್ಕಾರ ಸಾರಿಗೆ ಮುಖಂಡರನ್ನ ಮಾತುಕತೆಗೆ ಕರೀಬೇಕು. ಆ ಮೂಲಕ ಸಮಸ್ಯೆ ಬಗೆಹರಿಯಲು ಸಾಧ್ಯ. ಈಗಾಗಲೇ ಸರ್ಕಾರ ಮೂರು ತಿಂಗಳ ಕಾಲ ಕಾಲಹರಣ ಮಾಡಿದೆ. ಸರ್ಕಾರದ ಮೇಲೆ ನಂಬಿಕೆ ಹೊರಟು ಹೋಗಿದೆ. ಖಾಸಗಿ ಬಸ್ ಓಡಿಸೋದು ಪರ್ಯಾಯ ಅಲ್ಲ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ 6ನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವಿಲ್ಲ ಎನ್ನುವುದನ್ನೂ ಅವರು ತಿಳಿಸಿದ್ದು, 6ನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವಿಲ್ಲವೆಂದು ಸರ್ಕಾರ ಈ ಮೊದಲೇ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರವೇ ಸ್ಪಷ್ಟನೆ ನೀಡಿರುವುದರಿಂದ ಅದರ ಬಗ್ಗೆ ಬೇರೆ ಮಾತಿಲ್ಲ. ಮುಷ್ಕರ ನಿರತರಿಗೆ ಆರ್ಥಿಕ ಪರಿಸ್ಥಿತಿ ಮನವರಿಕೆ ಮಾಡಿದ್ದೇವೆ. ಸದ್ಯಕ್ಕೆ ಸರ್ಕಾರದ ನಿರ್ದೇಶನದಂತೆ ಖಾಸಗಿ ಬಸ್ ಓಡಿಸಲಾಗುತ್ತಿದೆ ಎಂದು ಶಿವಯೋಗಿ ಕಳಸದ ವಿವರಿಸಿದ್ದಾರೆ.
ವೇತನ ತಡೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್, ಮಾರ್ಚ್ ತಿಂಗಳು ಹಣಕಾಸು ವರ್ಷ ಅಂತ್ಯವಾಗುವ ಮಾಸ. ಹೀಗಾಗಿ ಈ ತಿಂಗಳ ವೇತನ ವಿಳಂಬವಾಗುವ ಸಾಧ್ಯತೆ ಇದೆ. ಇದರ ಹೊರತಾಗಿ ಮುಷ್ಕರ ನಿರತರ ಮಾರ್ಚ್ ತಿಂಗಳ ವೇತನಕ್ಕೆ ತಡೆ ನೀಡುವ ಯಾವುದೇ ವಿಚಾರ ನಮ್ಮ ಮುಂದೆ ಇಲ್ಲ. ಸದ್ಯಕ್ಕೆ ಇಂತಹ ನಿರ್ಧಾರಗಳ ಬಗ್ಗೆ ಪ್ರಸ್ತಾಪ ಇಲ್ಲ ಎನ್ನುವ ಮೂಲಕ ಸಂಬಳಕ್ಕೆ ಕತ್ತರಿ ಹಾಕುವ ಬಗ್ಗೆ ಶಿವಯೋಗಿ ಕಳಸದ ನಿರಾಕರಿಸಿದ್ದಾರೆ.
ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದು ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಾಲ್ಕು ನಿಗಮದ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಈಗಾಗಲೇ ಹೇಳಿದ್ದಾರೆ. ಏತನ್ಮಧ್ಯೆ ಮುಷ್ಕರಕ್ಕಿಳಿದಿರುವ ನೌಕರರಿಗೆ ಮಾರ್ಚ್ ತಿಂಗಳದ ವೇತನ ಇನ್ನೂ ಸಿಕ್ಕಿಲ್ಲವಾದ್ದರಿಂದ ಸರ್ಕಾರ ಆಟ ಆಡಿಸಬಹುದು ಎಂಬ ಭಯವೂ ಇದೆ. ಮುಷ್ಕರ ಹತ್ತಿಕ್ಕಲು ಸರ್ಕಾರ ಸಂಬಳವನ್ನೇ ಅಸ್ತ್ರವನ್ನಾಗಿಸಿಕೊಳ್ಳಬಹುದೆಂದು ಸ್ವತಃ ಸಾರಿಗೆ ಸಿಬ್ಬಂದಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದಕ್ಕೆಲ್ಲಾ ತೆರೆ ಎಳೆದಿರುವ ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್, ವೇತನ ತಡೆ ವಿಚಾರ ನಮ್ಮ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಷ್ಕರ ಹಿನ್ನೆಲೆ ಮಂಗಳೂರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಮಂಗಳೂರಿನಲ್ಲಿ ಈವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಮಿಷನರೇಟ್ ವ್ಯಾಪ್ತಿಗೆ ಆಗಮಿಸೋ ಬಸ್ಗಳಿಗೆ ಪ್ಯಾಟ್ರೋಲಿಂಗ್ ಮಾಡಲಾಗುತ್ತಿದೆ. ಬಸ್ ಆಪರೇಷನ್ಗೆ ಯಾವ ಕ್ಷಣದಲ್ಲೂ ಭದ್ರತೆ ನೀಡಲು ಪೊಲೀಸ್ ಇಲಾಖೆ ಸಿದ್ದವಿದೆ ಎಂದು ತಿಳಿಸಿದ್ದಾರೆ.
ಸಾರಿಗೆ ಸಿಬ್ಬಂದಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ಚಿತ್ರದುರ್ಗ ನಗರದ ಸಾರಿಗೆ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದ್ದು, ಬಸ್ ನಿಲ್ದಾಣದಲ್ಲಿ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ.
ಮುಷ್ಕರದ ವೇಳೆ ಬಸ್ ಓಡಿಸಿದ ಚಾಲಕ ತ್ಯಾಗರಾಜ್ ಎನ್ನುವವರಿಗೆ ಕೆಲ ಸಂಘಟನೆಗಳು ಸನ್ಮಾನ ಮಾಡಿದ ಬೆನ್ನಲ್ಲೇ ಸಾರಿಗೆ ನೌಕರರು ಶ್ರದ್ಧಾಂಜಲಿ ಅರ್ಪಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಾಲಕ ತ್ಯಾಗರಾಜ್ಗೆ ಶ್ರದ್ಧಾಂಜಲಿ ಸಲ್ಲಿಸಿ ಆಕ್ರೋಶ ಹೊರಹಾಕಲಾಗಿದೆ. ಮುಷ್ಕರದ ನಡುವೆಯೂ ಬೆಳಿಗ್ಗೆ ಬಿಎಂಟಿಸಿ ಬಸ್ ಓಡಿಸಿದ್ದಕ್ಕಾಗಿ ಸಾರಿಗೆ ಸಿಬ್ಬಂದಿ ಆಕ್ರೋಶಿತರಾಗಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಬಗ್ಗೆ ಉಪಚುನಾವಣೆ ಉಸ್ತುವಾರಿ ವಹಿಸಿರುವ ಬಿ.ವೈ.ವಿಜಯೇಂದ್ರ ಮಾತನಾಡಿ, ಇದು ಉಪಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್‌ನವರು ಇದನ್ನೇ ಮುಂದಿಟ್ಟು ಟೀಕೆ ಮಾಡ್ತಿದ್ದಾರೆ. ಆದರೆ, ಇದರಿಂದ ಬಿಜೆಪಿಗೆ ಏನೂ ಆಗುವುದಿಲ್ಲ. ಬಸ್ ಸಂಚಾರ ಸ್ಥಗಿತದಿಂದ ಪ್ರಯಾಣಿಕರಿಗೆ ಕಷ್ಟವಾಗುತ್ತದೆ. ಆದ್ದರಿಂದ ಸಾರಿಗೆ ನೌಕರರು ಪರಿಸ್ಥಿತಿ ಅರ್ಥ ಮಾಡಿಕೊಂಡು ಮುಷ್ಕರ ಹಿಂಪಡೆಯಬೇಕು ಎಂದು ರಾಯಚೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ಬಸ್‌ಗೆ ಅವಕಾಶ ಮಾಡಿಕೊಡಲಾಗಿದೆ. ನಮ್ಮ ಬಸ್ ನಿಲ್ದಾಣದಲ್ಲಿ ನಿಲ್ಲಲು ಅವಕಾಶ ಕಲ್ಪಿಸಲಾಗಿದೆ. ಪರಿಸ್ಥಿತಿ ಬದಲಾಗದೇ ಇದ್ದರೆ ಇನ್ನೆರಡು ದಿನದಲ್ಲಿ ಖಾಸಗಿ ಬಸ್ ಸಂಚಾರ ಹೆಚ್ಚಿಸುತ್ತೇವೆ. ಕೆಲವು ಖಾಸಗಿ ಬಸ್ಗಳಿಗೆ ಪರ್ಮಿಟ್ ಇಲ್ಲದಿದ್ದರೂ, ಇನ್ಸೂರೆನ್ಸ್ ಇರುವುದರಿಂದ ಪ್ರಯಾಣಿಕರ ಹಿತದೃಷ್ಟಿಯಿಂದ ಓಡಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಕೆಲವರು ಮುಷ್ಕರ ಮಾಡಿಸಲೇಬೇಕೆಂದು ಮಾಡಿಸುತ್ತಿದ್ದಾರೆ. ಅವರು ಯಾರು ಎಂಬುದು ನಿಮಗೂ ಗೊತ್ತಾಗಲಿದೆ. ಆದರೆ, ಯಾರದೋ ಮಾತು ಕೇಳಿ ಮುಷ್ಕರ ಮಾಡಿದ್ರೆ ಕಷ್ಟವಾಗುತ್ತೆ. ಇದರಿಂದ ಸಾರಿಗೆ ನೌಕರರೇ ಕಷ್ಟ ಅನುಭವಸುವಂತಾಗುತ್ತದೆ. ಮುಷ್ಕರ ಮುಂದುವರಿಸಿದರೆ ಇಲಾಖೆಗೆ ಆದಾಯ ಬರಲ್ಲ. ಇದರಿಂದ ಸಾರಿಗೆ ಸಿಬ್ಬಂದಿಗೆ ವೇತನ ನೀಡುವುದು ಕಷ್ಟವಾಗುತ್ತದೆ. ವೇತನ ಹೆಚ್ಚಿಸಲು ನಾವು ಸಿದ್ಧ, ಅವರು ಕೆಲಸಕ್ಕೆ ಹಾಜರಾಗಲಿ. ಇಂದೇ ಮುಷ್ಕರ ಮುಗಿಸಿ ನಾಳೆಯಿಂದ ಕೆಲಸಕ್ಕೆ ಹಾಜರಾಗಬೇಕು. ಇಲ್ಲದೇ ಹೋದರೆ ಕೆಲಸಕ್ಕೆ ಗೈರಾದವರಿಗೆ ವೇತನ ನೀಡಲು ಸಾಧ್ಯವಿಲ್ಲ ಎಂದು ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರ ಮುಷ್ಕರ ರಾಜ್ಯಾದ್ಯಂತ ನಡೆಯುತ್ತಿದ್ದು ಸರ್ಕಾರಿ ಬಸ್ ಸೇವೆಯಲ್ಲಿ ಸಂಪೂರ್ಣ ವ್ಯತ್ಯಯ ಉಂಟಾಗಿದೆ. ಮುಷ್ಕರ ಗಂಭೀರವಾಗುತ್ತಿರುವ ಹೊತ್ತಿನಲ್ಲೇ ಈ ಬಗ್ಗೆ ಬೀದರ್ ಜಿಲ್ಲೆಯ ಹುಮ್ನಾಬಾದ್ನಲ್ಲಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನಮಗೆ ಸಾರಿಗೆ ಸಿಬ್ಬಂದಿ ಮುಷ್ಕರ ಮಾಡುವುದಿಲ್ಲ ಎಂಬ ಆಶಾಭಾವನೆಯಿತ್ತು. ಸಾರಿಗೆ ನೌಕರರ ವೇತನ ಹೆಚ್ಚಿಸಲು ನಾವು ಈಗಾಗಲೇ ನಿರ್ಧರಿಸಿದ್ದೇವೆ. ಇದಕ್ಕೆ ಕೇಂದ್ರ ಚುನಾವಣಾ ಆಯೋಗಕ್ಕೂ ಒಪ್ಪಿಗೆ ಕೇಳಿದ್ದೇವೆ. ಆದೇಶ ಬಂದ ತಕ್ಷಣ ವೇತನ ಹೆಚ್ಚಿಸುವುದಾಗಿ ಹೇಳಿದ್ದೇವೆ. ಆದರೂ ಸಾರಿಗೆ ನೌಕರರು ಮುಷ್ಕರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಾರಿಗೆ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಿರುವುದರಿಂದ ಪರ್ಯಾಯ ವ್ಯವಸ್ಥೆ ಮಾಡಿರುವ ರಾಜ್ಯ ಸರ್ಕಾರ ಖಾಸಗಿ ಬಸ್‌ಗಳನ್ನು ರಸ್ತೆಗೆ ಇಳಿಸಿದೆ. ಆದರೆ, ಈ ವ್ಯವಸ್ಥೆ ರಾಜ್ಯ ಸರ್ಕಾರದಿಂದಲೇ ಆಗಿದ್ದರೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಪಾಸ್ ಇದ್ದರೆ ಪ್ರಯೋಜನವಿಲ್ಲ. ದುಡ್ಡು ಕೊಟ್ಟೇ ಪ್ರಯಾಣಿಸಬೇಕೆಂದು ಖಾಸಗಿ ಬಸ್ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಸಿದ್ದಾರೆ. ಹೀಗಾಗಿ ಖಾಸಗಿ ಬಸ್ ಮೂಲಕ, ಸರ್ಕಾರಿ ಸೇವೆ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರದ ಮಾತು ನಂಬಿ ಬಸ್ ಹತ್ತಿದ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಮೊದಲೇ ನಷ್ಟದಲ್ಲಿದ್ದ ಸಾರಿಗೆ ಇಲಾಖೆಗೆ ನೌಕರರ ಮುಷ್ಕರ ಮತ್ತಷ್ಟು ಹೊಡೆತ ನೀಡಿದೆ. ಹಾಸನದ ಸಾರಿಗೆ ಇಲಾಖೆ ಒಂದರಿಂದಲೇ ನಿತ್ಯ 2 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿತ್ತು. ಅಂದರೆ ಒಂದು ದಿನ ಬಸ್ ಓಡದಿದ್ದರೆ ಸುಮಾರು ₹50 ಲಕ್ಷ ನಷ್ಟವಾಗಲಿದೆ. ಜಿಲ್ಲೆಯ 510 ಬಸ್‌ಗಳು ಸುಮಾರು 2 ಸಾವಿರ ಟ್ರಿಪ್ ಮಾಡುತ್ತಿದ್ದವು. ಇಂದಿನ ಮುಷ್ಕರದಿಂದ 1528 ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇದು ಇಲಾಖೆಗೆ ಭಾರೀ ನಷ್ಟ ತರಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್ ಪ್ರಯಾಣಿಕರು ಮೆಟ್ರೋದತ್ತ ಮುಖ ಮಾಡಿದ್ದಾರೆ. ಹೀಗಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಆದರೆ, ಬಹುತೇಕರು ಮೆಟ್ರೋ ಟೋಕನ್ ಇಲ್ಲದೇ ಪರದಾಡುತ್ತಿದ್ದು, ಟೋಕನ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ. ಬಡಜನರಿಗೆ, ಮಧ್ಯ ವರ್ಗದವರಿಗೆ ₹150-₹200 ಕೊಟ್ಟು ಕಾರ್ಡ್ ಖರೀದಿಸಲು ಆಗಲ್ಲ. ಹೀಗಾಗಿ ಟೋಕನ್ ವ್ಯವಸ್ಥೆ ಮಾಡಿ ಎಂದು ಅಧಿಕಾರಗಳಿಗೆ ಒತ್ತಾಯಿಸಿದ್ದಾರೆ. ಬೇರೆ ಕಡೆ ಪ್ರಯಾಣ ಮಾಡಲು ಕಷ್ಟವಾಗ್ತಿದೆ. ಆಟೋ, ಕ್ಯಾಬ್ಗಳಲ್ಲಿ ಹಣ ಜಾಸ್ತಿ ಕೇಳ್ತಿದ್ದಾರೆ. ಸರ್ಕಾರ ಬಡ ಜನರಿಗೆ ಅನುಕೂಲ ಮಾಡಿಕೊಡಬೇಕು ಒಂದು ಆಗ್ರಹಿಸಿದ್ದಾರೆ.
ಮುಷ್ಕರಕ್ಕೆ ಮುಂದಾದ ನೌಕರರಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಮಾರ್ಚ್ ತಿಂಗಳ ವೇತನ ತಡೆಯಲು ನಿರ್ಧರಿಸಿದೆ. ಸಾರಿಗೆ ನಿಗಮಗಳಿಗೆ ಸರ್ಕಾರ ಮನವಿ ಮಾಡಿದರೂ ನೌಕರರು ಮುಷ್ಕರದಲ್ಲಿ ಭಾಗಿಯಾದ ಹಿನ್ನಲೆಯಲ್ಲಿ ಮಾರ್ಚ್ ತಿಂಗಳ ಸಂಬಳ ತಡೆಹಿಡಿಯಲು ಸಾರಿಗೆ ನಿಗಮಗಳು ಮುಂದಾಗಿದೆ. ಯಾವಾಗಲೂ 10ನೇ ತಾರೀಖಿನ ಒಳಗೆ ವೇತನ ನೀಡುತ್ತಿದ್ದ ನಿಗಮಗಳು ಈ ಬಾರಿ ಮುಷ್ಕರ ಕೈ ಬಿಡುವವರೆಗೆ ಸಂಬಳ ಇಲ್ಲ ಎಂದು ನಿರ್ಧರಿಸಿವೆ.
ನಿತ್ಯ 2 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದ ಹಾಸನದ ಸಾರಿಗೆ ಇಲಾಖೆ ಇಂದಿನ ಮುಷ್ಕರದಿಂದ ಕರ್ತವ್ಯಕ್ಕೆ ಗೈರಾಗಿದೆ. ಜಿಲ್ಲೆಯ 510 ಬಸ್‌ಗಳು ಸುಮಾರು 2000 ಟ್ರಿಪ್ ಸಂಚಾರ ಮಾಡುತ್ತಿದ್ದವು. ಇಂದಿನ ಮುಷ್ಕರದಿಂದ ಯಾವುದೇ ಬಸ್ ಸಂಚಾರ ಇಲ್ಲ. ಜಿಲ್ಲೆಯ 1528 ಸಾರಿಗೆ ನೌಕರರು ಈ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಇನ್ನು ಸಾರಿಗೆ ಬಸ್ಗಳ ಮಾರ್ಗ, ಸಮಯ, ಸಂಚಾರದ ಬಗ್ಗೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಟಿವಿ9 ಡಿಜಿಟಲ್ಗೆ ಮಾಹಿತಿ ನೀಡಿದ್ದಾರೆ.
ಬಿಎಂಟಿಸಿ ನಿಲ್ದಾಣದ ಒಳಗೆ ಬರುವ ಖಾಸಗಿ ವಾಹನಗಳಿಗೆ ದರ ಪಟ್ಟಿ ನೀಡಿರುವ ಬಿಎಂಟಿಸಿ. ಮನಸ್ಸಿಗೆ ಬಂದಂತೆ ಹಣ ವಸೂಲಿ ಮಾಡುವಂತಿಲ್ಲ. ಬಿಎಂಟಿಸಿ ನಿಗದಿ ಮಾಡಿದ ದರವನ್ನೇ ಖಾಸಗಿ ವಾಹನ ಚಾಲಕರು ತೆಗೆದುಕೊಳ್ಳಬೇಕು. ಅದನ್ನು ಮೀರಿ ಹಣ ಪಡೆದರೆ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ದರ ಪಟ್ಟಿ ನೀಡಿರುವ ಬಿಎಂಟಿಸಿ ಮತ್ತು ಬಸ್ ರೂಟ್ ಬೋರ್ಡ್ ತಿಳಿಸಿದೆ.
ಸಾರಿಗೆ ನೌಕರರ ನೋವು ಹಲವು ದಿನಗಳಿಂದ ಇದೆ. ಬಂದ್ ಯಶಸ್ವಿಗೆ ಸಾರಿಗೆ ನೌಕರರ ನೋವುಗಳೇ ಕಾರಣ. ವ್ಯಕ್ತಿಯ ಪ್ರತಿಷ್ಟೆಗಿಂತ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸುವುದು ಮುಖ್ಯ. ಸಂಕಷ್ಟ ಇರುವುದು ದುಡಿಯುವ ಜನಕ್ಕೆ. 6 ನೇ ವೇತನ ಆಯೋಗದ ಪ್ರಕಾರ ಸಂಬಳ ಹೆಚ್ಚಾಗಬೇಕು ಆದರೆ ಸರ್ಕಾರ ಶೇಕಡಾ 8 ಹೆಚ್ಚಿಗೆ ಮಾಡುವಂತೆ ಹೇಳುತ್ತಿದೆ. ಸರ್ಕಾರ ಅವೈಜ್ಞಾನಿಕ ಪ್ರಯತ್ನ ಮಾಡುತ್ತಿದೆ. ಖಾಸಗಿ ಬಸ್‌ಗಳಿಂದ ಸರ್ಕಾರಕ್ಕೆ ನಷ್ಟವೇ ಹೊರತು ಲಾಭವಿಲ್ಲ. 6 ನೇ ವೇತನ ಜಾರಿಯಾಗುವವರೆಗೂ ಸಾರಿಗೆ ನೌಕರರ ಮುಷ್ಕರ ಮುಂದುವರೆಯಲಿದೆ ಎಂದು ಬೆಂಗಳೂರಿನಲ್ಲಿ ಟಿವಿ9 ಡಿಜಿಟಲ್ಗೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.
ಕೊರೊನಾ ಹಿನ್ನೆಲೆ ಎಲ್ಲರೂ ನಿಯಮ ಪಾಲಿಸಬೇಕು ಮತ್ತು ಹೆಚ್ಚುವರಿ ಹಣವನ್ನು ಗ್ರಾಹಕರಿಂದ ಪಡೆಯದಂತೆ ಬೆಂಗಳೂರಿನ ಸಿಲ್ಕ್‌ಬೋರ್ಡ್‌ನಲ್ಲಿ ಖಾಸಗಿ ವಾಹನಗಳ ಸಿಬ್ಬಂದಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿನ ಜನರನ್ನು ವಾಹನದಲ್ಲಿ ತುಂಬಿಕೊಳ್ಳಬೇಡಿ ಕೊರೊನಾ ಇರುವುದರಿಂದ ನಿಯಮಿತ ಜನರನ್ನು ತೆಗೆದುಕೊಳ್ಳಿ ಎಂದು ಎಚ್ಚರಿಸಿದ್ದಾರೆ. ಇನ್ನು ಈ ಬಗ್ಗೆ ಪ್ರಯಾಣಿಕರನ್ನು ಪೊಲೀಸರು ವಿಚಾರಿಸಿದ್ದು, ಹೆಚ್ಚಿನ ಹಣ ಪಡೆಯುತ್ತಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮುಷ್ಕರದ ನಡುವೆಯೂ ಕೆಲಸಕ್ಕೆ ಹಾಜರಾದ ಬಿಎಂಟಿಸಿ ಸಿಬ್ಬಂದಿಗೆ ಸನ್ಮಾನ ಮಾಡಲಾಗಿದೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿಂದ ಚಾಲಕ ತ್ಯಾಗರಾಜ್ ಎನ್ನುವವರಿಗೆ ಸನ್ಮಾನ ಮಾಡಲಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್‌ನ BMTC ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ವೃದ್ಧ ಚನ್ನಪ್ಪ (77) ಎನ್ನುವವರು ಸಾವಿಗೀಡಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನ ಚಿಕ್ಕನಹಳ್ಳಿ ಮೂಲದವರಾದ ಚನ್ನಪ್ಪ ಅಂಗವೈಕಲ್ಯತೆ ಸಮಸ್ಯೆ ಹೊಂದಿದ್ದು ಜಿಗಣಿಯಿಂದ ಬೆಂಗಳೂರಿಗೆ ಬಂದಿದ್ದರು. ಬಿಎಂಟಿಸಿ ಸಿಬ್ಬಂದಿ ಬಳಿ ಅವರು ಸುಸ್ತು ಎಂದು ಹೇಳಿಕೊಂಡಿದ್ದ ಕಾರಣ ಅವರು ಟೀ ಕೊಡಿಸಿದ್ದರು. ಆದರೆ, ಟೀ ಕುಡಿದು ಕುಳಿತ ಕೆಲವೇ ಕ್ಷಣಗಳಲ್ಲಿ ಚನ್ನಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸದರಿ ವಿಷಯವನ್ನು ಪೊಲೀಸರು ಚನ್ನಪ್ಪ ಅವರ ಅಳಿಯನಿಗೆ ತಿಳಿಸಿದ್ದು, ಮೃತ ವ್ಯಕ್ತಿಯ ದೇಹವನ್ನ ಆಬ್ಯುಲೆನ್ಸ್ ಮೂಲಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದರು. ಕೊವಿಡ್ ಟೆಸ್ಟ್ ಬಳಿಕ ಸಂಬಂಧಿಕರಿಗೆ ಮೃತ ದೇಹ ಹಸ್ತಾಂತರ ಮಾಡಲಾಗಿದೆ.
ಸಾರ್ವಜನಿಕರ ಸೇವೆ ಮಾಡದೆ ಮುಷ್ಕರಕ್ಕಿಳಿದರೆ ಏನು ಪ್ರಯೋಜನ ಆಗೊಲ್ಲ. ಪ್ರತಿಭಟನೆ, ಮುಷ್ಕರದಿಂದ ಅನ್ಯ ರಾಜ್ಯಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತೆ. ಪ್ರತಿಭಟನೆ, ಮುಷ್ಕರದಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಸಾರಿಗೆ ಸಚಿವರು, ಮಾನ್ಯ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸುವ ಭರವಸೆ ಇದೆ. 6ನೇ ವೇತನ ಆಯೋಗ ಜಾರಿ ಆಗಲೇಬೇಕು ಎಂದು ನಾವೂ ಆಗ್ರಹಿಸುತ್ತೇವೆ. ಬರೋ ಸಂಬಳ ಯಾವುದಕ್ಕೂ ಸಾಲುವುದಿಲ್ಲ. ಪೊಲೀಸ್ ಭದ್ರತೆಯೊಂದಿಗೆ ಬಸ್ ಓಡಿಸ್ತಿದ್ದೇವೆ. ಬಸ್ಗೆ ಹಾನಿ ಮಾಡಿದ್ರೆ ಸೈಡಿಗೆ ಹಾಕಿ ಅಲ್ಲೇ ನಿಲ್ಲಿಸ್ತೇವೆ. ಸಾರಿಗೆ ಇಲಾಖೆ ನಮ್ಮ ಜೊತೆಗಿದೆ. ಮಾನ್ಯ ಮುಖ್ಯಮಂತ್ರಿಗಳು 6ನೇ ವೇತನ ಆಯೋಗ ಜಾರಿಗೊಳಿಸಬೇಕೆಂದು ಕರ್ತವ್ಯಕ್ಕೆ ಹಾಜರಾದ ಮಹಿಳಾ ಕಂಡಕ್ಟರ್ ಕೈ ಮುಗಿದು ಕೇಳಿಕೊಂಡಿದ್ದಾರೆ.
ಸಾರಿಗೆ ನೌಕರರ ಮುಷ್ಕರದಿಂದ ಜನರಿಗೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸಾರಿಗೆ ಇಲಾಖೆ ವತಿಯಿಂದ ಖಾಸಗಿ ಬಸ್ಸುಗಳ ವ್ಯವಸ್ಥೆ ಮಾಡಿದ್ದೇವೆ. ರಾಜ್ಯದ ಎಲ್ಲಾ ಕಡೆ ಬಸ್ಸುಗಳು ಕಾರ್ಯ ನಿರ್ವಹಿಸುತ್ತಿವೆ. ದರದಲ್ಲೂ ಸಮಸ್ಯೆಯಾಗಂತೆ ಖಾಸಗಿ ಬಸ್ಸುಗಳ ಸಿಬ್ಬಂದಿ ಜತೆ ಮಾತಾಡಿದ್ದೇವೆ. ಖಾಸಗಿ ವಾಹನ ಅಸೋಸಿಯೇಷನ್ ಸಹಕರಿಸುತ್ತಿದೆ. ಹೆಚ್ಚಿನ ದರ ಪಡೆಯಲಾಗ್ತಿದೆ ಎಂಬ ದೂರುಗಳು ಬಂದಿಲ್ಲ. ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸಾರಿಗೆ ಇಲಾಖೆ ಅಪರ ಆಯುಕ್ತ ನರೇಂದ್ರ ಹೊಳ್ಕರ್ ಹೇಳಿಕೆ ನೀಡಿದ್ದಾರೆ.
ಸರ್ಕಾರಿ ಬಸ್ಗಳ ಸಂಚಾರದಲ್ಲಿ ವ್ಯತ್ಯಯವಾಗಿರುವುದರಿಂದ ಅದರ ಲಾಭ ಪಡೆದುಕೊಳ್ಳುತ್ತಿರುವ ಖಾಸಗಿ ಬಸ್ ಸಿಬ್ಬಂದಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ. ಇದನ್ನು ಗಮನಿಸಿದ ಮಂಡ್ಯದ ಪಶ್ಚಿಮ ಠಾಣೆ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಖಾಸಗಿ ಬಸ್ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದು,ಜಾಸ್ತಿ ಹಣ ಪಡೆದರೆ ಬಸ್ ಸೀಜ್ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ, ಬೆಂಗಳೂರಿಗೆ ಮಾತ್ರ ಜನರನ್ನ ಹತ್ತಿಸಿಕೊಳ್ಳುವಂತಿಲ್ಲ, ಹೋಗುವುದಿದ್ದರೆ ಸರ್ಕಾರಿ ಬಸ್ಸುಗಳಂತೆ ಮದ್ದೂರು, ಚೆನ್ನಪಟ್ಟಣ ರಾಮನಗರ, ಬೆಂಗಳೂರಿಗೆ ಜನರನ್ನ ಕರೆದೊಯ್ಯಬೇಕು. ಕೇವಲ ಬೆಂಗಳೂರಿಗೆ ಮಾತ್ರ ಎಂದಾದ್ರೆ ನಿಮ್ ಮನೆ ಹತ್ರ ತೆಗೆದುಕೊಂಡು ಹೋಗಿ ನಿಲ್ಲಿಸಿಕೊಳ್ಳಿ ಎಂದು ಮಂಡ್ಯದ ಸರ್ಕಾರಿ ಬಸ್ ನಿಲ್ದಾಣದ ಬಳಿ ನಿಂತಿರೊ ಖಾಸಗಿ ವಾಹನಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ಹೂಡಿರುವ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಚಾರದಲ್ಲಿ ವ್ಯತ್ಯಯ ಆಗಿದೆ. ಇನ್ನೊಂದೆಡೆ ಕಲಬುರಗಿ ಕೇಂದ್ರ ನಿಲ್ದಾಣದ ಅಧಿಕಾರಿಗಳು ಸಿಬ್ಬಂದಿ ಮೇಲೆ ಒತ್ತಡ ಹೇರಿ ಬಸ್ ಓಡಿಸುತ್ತಿದ್ದಾರೆ. ಬೇರೆ ಕಡೆಯಿಂದ ಡಿಪೋಗೆ ಬಂದ ಬಸ್ಗಳಿಗೆ ನಿಮ್ಮ ಬಸ್ ಕಿಲೋಮೀಟರ್ ಆಗಿಲ್ಲ. ನಿಗದಿತ ರೂಟ್ಗೆ ಹೋಗಿ ಬನ್ನಿ ಎಂದು ಹೇಳುತ್ತಿದ್ದು, ಡಿಪೋ ಒಳಗೆ ಬಸ್ ಬಿಡುತ್ತಿಲ್ಲ ಎಂದು ಸಿಬ್ಬಂದಿ ವರ್ಗದವರು ಅಳಲು ತೋಡಿಕೊಂಡಿದ್ದಾರೆ.
KSRTC, BMTC ಸಾರಿಗೆ ನೌಕರರ ಮುಷ್ಕರದ ಲಾಭ ಪಡೆಯಲು ಮುಂದಾದ ಆಟೋ ಚಾಲಕರು ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಬಸ್ ಇದ್ದಿದ್ದರೆ ₹20 ಕೊಟ್ಟು ಮನೆಗೆ ಹೋಗ್ತಿದ್ದೆ. ಆದರೆ, ಈಗ ಆಟೋದವರು ₹250 ಕೇಳ್ತಿದ್ದಾರೆ. ಆಟೋದಲ್ಲಿ ₹100 ಚಾರ್ಚ್ ಆಗೋ ಕಡೆಗೆ ₹250 ಕೇಳಿದ್ರೆ ಏನ್ ಮಾಡೋದು? ಸರ್ಕಾರಕ್ಕೆ ಇದೆಲ್ಲ ಅರ್ಥ ಆಗಲ್ಲ, ಏನ್ ಹೇಳೋದು ಸರ್ಕಾರಕ್ಕೆ? ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬಸ್ ಮುಷ್ಕರದ ಪರಿಣಾಮ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಗೋವಾದಿಂದ ಬಾಗಲಕೋಟೆಗೆ ಬಂದಿದ್ದ ಕಾರ್ಮಿಕ ಕುಂಟುಂಬವೊಂದು ಆಟೋದವರ ದರ ಕೇಳಿ ಕಂಗಾಲಾಗಿದೆ. ಬಸ್‌ನಲ್ಲಿ ₹25 ನೀಡಿ ನಮ್ಮ ಊರಿಗೆ ಹೋಗ್ತಿದ್ದೆವು. ಆದರೆ ಈಗ ಆಟೋದವರು ₹1,000 ಕೇಳ್ತಿದ್ದಾರೆ. ₹1 ಸಾವಿರ ಕೊಟ್ಟು ಹೇಗೆ ಪ್ರಯಾಣಿಸುವುದು? ನಾವೇನು ಮಾಡಬೇಕೆಂದು ಕಾರ್ಮಿಕ ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ.
ಬಸ್ ಮುಷ್ಕರ ಹಿನ್ನೆಲೆ ಅಹಿತಕರ ಘಟನೆಗಳು ನಡೆಯದಂತೆ ಬಸ್ ನಿಲ್ದಾಣಗಳಲ್ಲಿ ಪೋಲಿಸರ ನಿಯೋಜನೆ ಮಾಡಲಾಗಿದೆ. ಜಾಲಹಳ್ಳಿ ಕ್ರಾಸ್, 8ನೇ ಮೈಲಿ, ಹೆಸರಘಟ್ಟ ರಸ್ತೆಯಲ್ಲಿ ಪೋಲಿಸರು ನಿಗಾ ವಹಿಸಿದ್ದಾರೆ.
ಹಾಸನ: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿರುವುದರಿಂದ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಂದಾದ ಖಾಸಗಿ ಬಸ್ ಸಿಬ್ಬಂದಿ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದು ಕಂಡುಬಂದಿದೆ. ಹಾಸನದಿಂದ ಬೆಂಗಳೂರಿಗೆ ₹500,ಚನ್ನರಾಯಪಟ್ಟಣಕ್ಕೆ ₹50 ಪಡೆಯುತ್ತಿದ್ದಾರೆ ಎನ್ನಲಾಗುತ್ತಿದ್ದು, ಬೇರೆ ಮಾರ್ಗವಿಲ್ಲದ ಕಾರಣ ಜನರು ಹೆಚ್ಚಿನ ಹಣ ನೀಡಿ ಪ್ರಯಾಣ ಆರಂಭಿಸುತ್ತಿದ್ದಾರೆ.
ಬಸ್ ಬಾರದ ಕಾರಣ ಜನರು ಮೆಟ್ರೋ ಮೊರೆ ಹೋಗಿದ್ದಾರೆ. ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ನಿಲ್ದಾಣದ ಬಳಿ ಜನ ಕಿಕ್ಕಿರಿದು ಸೇರಿದ್ದು, ಬೆಳಗ್ಗೆ 4-5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಬಸ್ ಇದ್ದಿದ್ದರೆ ಇಷ್ಟು ಹೊತ್ತಿಗೆ ಆರಾಮಾಗಿ ಮನೆಯಲ್ಲೇ ಇರ್ತಾ ಇದ್ವಿ. ಬಸ್ ಇಲ್ಲ, 8 ಗಂಟೆಗೆ ಕೆಲಸಕ್ಕೆ ಹೋಗಬೇಕು. ಹೀಗಾಗಿ ಮೆಟ್ರೋಗಾಗಿ ಕಾಯುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬಸ್ ಇಲ್ಲದ ಕಾರಣ ಪುಟ್ಟ ಕಂದಮ್ಮನ ಜೊತೆಗೆ ಕಾಲ್ನಡಿಗೆಯಲ್ಲೇ ತೆರಳಿದ ತಾಯಿ. ಮೆಜೆಸ್ಟಿಕ್ನಿಂದ ಬನಶಂಕರಿ ಕಡೆ ಹೋಗಬೇಕಿದ್ದ ತಾಯಿಯೊಬ್ಬರು ಬಸ್ ಇಲ್ಲದ ಕಾರಣ ಮೆಜೆಸ್ಟಿಕ್ ಬಸ್ಸ್ಟ್ಯಾಂಡ್ನಿಂದ ಬನಶಂಕರಿ ಕಡೆಗೆ ಎಳೆ ಕಂದಮ್ಮನನ್ನು ಎತ್ತಿಕೊಂಡು ನಡೆದೇ ಹೊರಟ ದೃಶ್ಯ ಕಂಡುಬಂತು.
ಆರಂಭದಲ್ಲಿ ಒಂದೆರೆಡು ಬಿಎಂಟಿಸಿ ಬಸ್ ಕಣ್ಣಿಗೆ ಬಿದ್ದವಾದರೂ ಅದರಲ್ಲಿದ್ದ ಚಾಲಕರು ಹಾಗೂ ನಿರ್ವಾಹಕರು ನಮ್ಮ ಪಾಳಿ ಮುಗಿದಿದೆ. ಬಸ್ ಅನ್ನು ಡಿಪೋಕ್ಕೆ ಬಿಟ್ಟು ಮನೆಗೆ ತೆರಳಲು ಬಂದಿದ್ದೇವೆ ಎಂದು ಹೇಳುವ ಮೂಲಕ ಇಂದು ಯಾರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂಬುದನ್ನು ಹೇಳಿದರು.
ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎನ್ನುವುದು ನಿಶ್ಚಿತವಾಗುತ್ತಿದ್ದಂತೆಯೇ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‌ಗಳು ಲಗ್ಗೆ ಇಟ್ಟಿವೆ.
ಕೊಪ್ಪಳ, ತುಮಕೂರು, ಹಾವೇರಿ, ಮಂಡ್ಯ, ಬಾಗಲಕೋಟೆ, ಚಿತ್ರದುರ್ಗ, ರಾಮನಗರ, ನೆಲಮಂಗಲ, ಯಾದಗಿರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಆಗಿದೆ. ಬೀದರ್ನಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶೇ.40ರಷ್ಟು ಬಸ್ ಸಂಚಾರ ಆರಂಭಿಸಿವೆ.
ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದು, ಕೇವಲ ಬೆರಳಿಕೆಯಷ್ಟು ಅಂತರರಾಜ್ಯ ಬಸ್‌ಗಳು ಮಾತ್ರ ಓಡಾಟ ಆರಂಭಿಸಿವೆ. ಮೆಜೆಸ್ಟಿಕ್ ಬಸ್ ನಿಲ್ದಾಣವೂ ಖಾಲಿ ಖಾಲಿಯಾಗಿದ್ದು ಬೆಳಗ್ಗೆ ಬೇಗ ಬಂದರೆ ಬಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಆಗಮಿಸಿದ್ದ ಜನ ನಿರಾಶರಾಗಿದ್ದಾರೆ. ಪ್ರತಿನಿತ್ಯಕ್ಕೆ ಹೋಲಿಸಿದರೆ ಇಂದು ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿದೆ. ಅಂತೆಯೇ, ನಗರ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಘಗಿತಗೊಂಡಿರುವ ಹಿನ್ನೆಲೆಯಲ್ಲಿ ಯಶವಂತಪುರ, ಗೊರಗುಂಟೆ ಪಾಳ್ಯ, ಪೀಣ್ಯ ಸೇರಿದಂತೆ ಬಹುತೇಕ ಎಲ್ಲಾ ಭಾಗಗಳಲ್ಲೂ ಪ್ರಯಾಣಿಕರಿಗೆ ತೊಂದರೆಯಾಗಿದೆ.
Published On - 10:50 pm, Wed, 7 April 21