ಬೆಂಗಳೂರು: ಕರ್ನಾಟಕದಲ್ಲಿ ಎರಡೇ ಎರಡು ತಿಂಗಳ ಹಿಂದೆ ಒಂದು ದಿನಕ್ಕೆ 50 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು (Covid-19 Cases) ದಾಖಲಾಗುತ್ತಿದ್ದವು. ಇದರಿಂದ ಕಂಗಾಲಾದ ರಾಜ್ಯ ಸರ್ಕಾರ 1 ತಿಂಗಳ ಕಾಲ ಕಟ್ಟುನಿಟ್ಟಿನ ಲಾಕ್ಡೌನ್ (Lockdown) ಘೋಷಿಸಿತ್ತು. ರಾಜ್ಯಾದ್ಯಂತ ಕೊರೋನಾ ಕೇಸುಗಳು ಕಡಿಮೆಯಾಗುತ್ತಿದ್ದಂತೆ ಹಂತಹಂತವಾಗಿ ಅನ್ಲಾಕ್ ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಅಂಗಡಿ, ಮಾಲ್, ದೇವಸ್ಥಾನ, ರೆಸ್ಟೋರೆಂಟ್, ಕಂಪನಿ, ಹೋಟೆಲ್ಗಳೆಲ್ಲವೂ ಓಪನ್ ಆಗಿದ್ದು, ವೀಕೆಂಡ್ ಕರ್ಫ್ಯೂ (Weekend Curfew) ಕೂಡ ತೆರವಾಗಿದೆ. ಸದ್ಯಕ್ಕೆ ಜಾರಿಯಲ್ಲಿರುವ ನೈಟ್ ಕರ್ಫ್ಯೂ (Night Curfew) ಕೂಡ ಮುಂದಿನ ವಾರದಿಂದ ತೆರವಾಗುವ ಸಾಧ್ಯತೆಯಿದೆ. ಈ ಮೂಲಕ ಕರ್ನಾಟಕದಲ್ಲಿ ಸಂಪೂರ್ಣವಾಗಿ ಅನ್ಲಾಕ್ (Karnataka Unlock) ಜಾರಿಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಕರ್ನಾಟಕದಲ್ಲಿ ಕೋವಿಡ್ ಕೇಸುಗಳ ಸಂಖ್ಯೆ ಭಾರೀ ಇಳಿಮುಖವಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ ದಿನವೊಂದಕ್ಕೆ 1,500ಕ್ಕಿಂತ ಕಡಿಮೆ ಕೊರೋನಾ ಕೇಸುಗಳು ಪತ್ತೆಯಾಗುತ್ತಿವೆ. ಕರ್ನಾಟಕದಲ್ಲಿ ಇಂದು 1,386 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 3,204 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆಯೂ 61ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಪೂರ್ಣವಾಗಿ ಅನ್ಲಾಕ್ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಜುಲೈ 19ರಿಂದ ಅಂದರೆ ಮುಂದಿನ ವಾರದಿಂದ ನೈಟ್ ಕರ್ಫ್ಯೂ ತೆರವುಗೊಳಿಸಿ, ಪಬ್ಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ಕರ್ನಾಟಕದಲ್ಲಿ 4ನೇ ಹಂತದ ಅನ್ಲಾಕ್ ಜಾರಿಯಾಗಲಿದೆ ಎನ್ನಲಾಗುತ್ತಿದೆ. 3ನೇ ಹಂತದ ಅನ್ಲಾಕ್ನಲ್ಲಿ ದೇವಸ್ಥಾನ, ಬಾರ್, ಮಾಲ್ಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಈಜುಕೊಳ, ಕ್ರೀಡಾ ಸಂಕೀರ್ಣಗಳನ್ನು ಕ್ರೀಡಾಪಟುಗಳ ತರಬೇತಿಗಾಗಿ ಮಾತ್ರ ಬಳಸಿಕೊಳ್ಳಬಹುದು. ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಟನೆಗಳಿಗೆ ಅವಕಾಶವಿರುವುದಿಲ್ಲ. ಅಂತ್ಯ ಸಂಸ್ಕಾರಕ್ಕೆ 20 ಮಂದಿಗೆ ಅವಕಾಶ, ಮದುವೆಗಳಲ್ಲಿ 100 ಜನ ಭಾಗವಹಿಸಬಹುದು. ಶಾಲೆ ತೆರೆಯುವ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ತೀರ್ಮಾನ, ಆನ್ ಲೈನ್ ತರಗತಿಗಳಿಗೆ ಅವಕಾಶ. ಮಾಲ್ ತೆರೆಯಲು ಅವಕಾಶವಿದ್ದರೂ ಚಿತ್ರಮಂದಿರಗಳು ತೆರೆಯಲು ಅವಕಾಶವಿಲ್ಲ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದರು. ಮುಂದಿನ ವಾರದಿಂದ ಮತ್ತೊಂದು ಹಂತದ ಅನ್ಲಾಕ್ ಜಾರಿಯಾಗುವ ಬಗ್ಗೆ ಸಚಿವರು ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರಿಗೆ ಸಮೀಪದಲ್ಲಿರುವ ಪ್ರಮುಖ ಪ್ರವಾಸಿ ತಾಣವಾದ ನಂದಿ ಬೆಟ್ಟದಲ್ಲಿ ವೀಕೆಂಡ್ನಲ್ಲಿ ಭಾರೀ ಜನದಟ್ಟಣೆ ಉಂಟಾಗುತ್ತಿರುವುದರಿಂದ ವಾರಾಂತ್ಯದಲ್ಲಿ ನಂದಿ ಬೆಟ್ಟಕ್ಕೆ ಪ್ರವಾಸಿಗರಿಗೆ ಅವಕಾಶ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅಧಿಕೃತ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: Bengaluru News: ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಜುಲೈ 17ರವರೆಗೆ ಕರೆಂಟ್ ಇರೋದಿಲ್ಲ
(Karnataka Government Likely to Ease Night Curfew, Reopen Pubs From July 19 as Covid-19 Cases Decline)