ಕರ್ನಾಟಕ ಅನ್ ಲಾಕ್; ರಾಜ್ಯದಲ್ಲಿ ಇಂದಿನಿಂದ ನಾಲ್ಕನೇ ಹಂತದ ಅನ್ಲಾಕ್, ಏನಿರುತ್ತೆ? ಏನಿರಲ್ಲ?
Karnataka Unlock: ಮೂರು ತಿಂಗಳಿಂದ ಬಾಗಿಲು ಮುಚ್ಚಿದ್ದ ಸಿನಿಮಾ ಥಿಯೇಟರ್ಗಳನ್ನು ತೆರೆಯಲು ಷರತ್ತುವಿಧಿಸಿ ಸರ್ಕಾರ ಪರ್ಮಿಷನ್ ಕೊಟ್ಟಿದೆ.
ಬೆಂಗಳೂರು: ರಾಜ್ಯದಲ್ಲಿ ಕೊವಿಡ್ ಸೋಂಕಿನ ಪ್ರಮಾಣ ಹಾಗೂ ಕೊವಿಡ್ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಮೂರನೇ ಅಲೆಯ ಭೀತಿ ಇದ್ದರೂ ಕೂಡ ಮತ್ತಷ್ಟು ಚಟುವಟಿಕೆಗಳಿಗೆ ರಿಲ್ಯಾಕ್ಸೆಷನ್ ಕೊಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಿನ್ನೆ ಕಾವೇರಿ ನಿವಾಸದಲ್ಲಿ ಅಧಿಕಾರಿಗಳ ಹಾಗೂ ಕೋವಿಡ್ ಉಸ್ತುವಾರಿ ಸಚಿವರ ಸಭೆ ಆಯೋಜನೆ ಮಾಡಲಾಗಿತ್ತು. ಡಿಸಿಎಂ ಡಾ.ಅಶ್ವತ್ಥ ನಾರಾಯಣ, ಸಚಿವ ಅರವಿಂದ ಲಿಂಬಾವಳಿ ಹಾಗೂ ಸಚಿವ ಆರ್ ಅಶೋಕ್ ಮತ್ತು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು. ಅನ್ ಲಾಕ್ ಪ್ರಕ್ರಿಯೆ ಮುಂದುವರಿಸುವ ಬಗ್ಗೆ ಸಿಎಂ ಬಿಎಸ್ವೈ ಮೂರು ಮಹತ್ವದ ನಿರ್ಧಾರ ಗಳನ್ನು ಕೈಗೊಂಡಿದ್ದಾರೆ.
ಇಂದಿನಿಂದ ಯಾವುದಕ್ಕೆ ಅವಕಾಶ? ಮೂರು ತಿಂಗಳಿಂದ ಬಾಗಿಲು ಮುಚ್ಚಿದ್ದ ಸಿನಿಮಾ ಥಿಯೇಟರ್ಗಳನ್ನು ತೆರೆಯಲು ಷರತ್ತುವಿಧಿಸಿ ಸರ್ಕಾರ ಪರ್ಮಿಷನ್ ಕೊಟ್ಟಿದೆ. ಶೇ.50 ರಷ್ಟು ಆಸನಗಳ ಭರ್ತಿ ಮಾಡಲು ಸಿನಿಮಾ ಮಂದಿರಗಳು, ಮಲ್ಟಿಪ್ಲೆಕ್ಸ್, ರಂಗಮಂದಿರಗಳಿಗೂ ಅವಕಾಶ ನೀಡಲಾಗಿದೆ.
ನೈಟ್ ಕರ್ಪ್ಯೂ ಸಮಯದಲ್ಲಿ ಮತ್ತಷ್ಟು ಕಡಿತ ರಾತ್ರಿ 9 ಗಂಟೆ ಬದಲು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ನೈಟ್ ಕರ್ಪ್ಯೂ ಕಡಿತ ಮಾಡಿ ಜಾರಿ ಮಾಡಲಾಗಿದೆ. ರಾತ್ರಿ ಸಮಯದ ವಾಣಿಜ್ಯ ಚಟುವಟಿಕೆ ನಡೆಸಲು ಒಂದು ತಾಸು ಹೆಚ್ಚು ಕಾಲಾವಕಾಶ ಸಿಕ್ಕಿದೆ. ಉನ್ನತ ಶಿಕ್ಷಣ ವ್ಯವಸ್ಥೆಗೆ ಪ್ರೋತ್ಸಾಹ ನೀಡಲು ಜುಲೈ 26 ರಿಂದ ಕಾಲೇಜುಗಳ ಆರಂಭಕ್ಕೆ ಅವಕಾಶ ನೀಡಲಾಗಿದೆ. ಪದವಿ ಕಾಲೇಜುಗಳ ಆಫ್ ಲೈನ್ ತರಗತಿ ಪ್ರಾರಂಭಕ್ಕೆ ಸರ್ಕಾರದ ಅನುಮತಿ ನೀಡಿದೆ. ಕಡ್ಡಾಯವಾಗಿ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ಮೊದಲ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿರಬೇಕು. ಕೌಶಲ್ಯಾಭಿವೃದ್ದಿ ತರಬೇತಿಗಳಿಗೂ ಷರತ್ತು ಬದ್ದ ಅನುಮತಿ ನೀಡಲಾಗಿದೆ.
ಯಾವುದಕ್ಕೆಲ್ಲ ಸಿಕ್ಕಿಲ್ಲ ಅನ್ಲಾಕ್ ಭಾಗ್ಯ ಇನ್ನುಳಿದಂತೆ ಮದುವೆ ಸಮಾರಂಭ, ದೇವಸ್ಥಾನಗಳಲ್ಲಿ ದರ್ಶನ ವ್ಯವಸ್ಥೆ ಎಲ್ಲವೂ ಜುಲೈ 3 ರ ಮಾರ್ಗಸೂಚಿ ಪ್ರಕಾರವೇ ನಡೆಯಲಿದೆ. ಪಬ್ಗಳಿಗೆ ಸರ್ಕಾರ ಅನುಮತಿ ನೀಡುವ ನಿರೀಕ್ಷೆ ಕೂಡ ಹುಸಿಯಾಗಿದ್ದು ಪಬ್ಗಳ ಬಾಗಿಲೂ ಕೂಡ ಮುಚ್ಚಿಯೇ ಇರಲಿದೆ. ಹೊರಾಂಗಣ ಚಿತ್ರೀಕರಣ ಮಾತ್ರ ಮುಂದುವರಿಯಲಿದ್ದು ಜುಲೈ 3 ರ ಆದೇಶ ಯಥಾವತ್ ಪಾಲನೆಯಾಗಲಿದೆ.
ಮೂರನೇ ಅಲೆಯ ಭೀತಿಯ ನಡೆವೆಯೂ ಮತ್ತಷ್ಡು ರಿಲ್ಯಾಕ್ಸೆಷನ್ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಮೂರನೆ ಅಲೆಯನ್ನು ತಡೆಗಟ್ಟಲು ಸರ್ಕಾರದ ಸಿದ್ದತೆಯೂ ಮುಂದುವರಿದಿದೆ. ಆದರೆ ಕೊವಿಡ್ ನಿಯಮಗಳನ್ನು ಜನರು ಪಾಲಿಸದೇ ಹೋದರೆ ಮೂರನೆ ಅಲೆಯ ಅಬ್ಬರಕ್ಕೆ ಇದೇ ನಾಂದಿಯಾಗುವ ಆತಂಕವನ್ನ ಯಾರೂ ಮರೆಯಬಾರದು.
ಇದನ್ನೂ ಓದಿ: ರಾಜ್ಯಾದ್ಯಂತ ನಾಳೆಯಿಂದಲೇ ಚಿತ್ರಮಂದಿರಗಳು ಓಪನ್, ಜುಲೈ 26ರಿಂದ ಪದವಿ ಕಾಲೇಜು ತೆರೆಯಲು ಅವಕಾಶ