ಒಂದೊಂದು ವಿಷಯಕ್ಕೂ ಪ್ರತ್ಯೇಕ ಬಣ್ಣದ OMR ಹಾಳೆ; ಎಸ್​ಎಸ್​ಎಲ್​ಸಿ ಪರೀಕ್ಷೆ 2021ಕ್ಕೆ ಕ್ಷಣಗಣನೆ

SSLC Exam 2021: ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮೂರು ವಿಷಯಗಳಿಗೆ ಮೂರು ಪ್ರತ್ಯೇಕ ಬಣ್ಣಗಳ ಓಎಮ್​ಆರ್​ ಹಾಳೆ ಇರಲಿದ್ದು, ಗಣಿತಕ್ಕೆ ಗುಲಾಬಿ ಬಣ್ಣ, ವಿಜ್ಞಾನಕ್ಕೆ ಕೇಸರಿ ಬಣ್ಣ ಹಾಗೂ ಸಮಾಜ ವಿಜ್ಞಾನಕ್ಕೆ ಹಸಿರು ಬಣ್ಣದ ಹಾಳೆಗಳು ಇರಲಿವೆ.

ಒಂದೊಂದು ವಿಷಯಕ್ಕೂ ಪ್ರತ್ಯೇಕ ಬಣ್ಣದ OMR ಹಾಳೆ; ಎಸ್​ಎಸ್​ಎಲ್​ಸಿ ಪರೀಕ್ಷೆ 2021ಕ್ಕೆ ಕ್ಷಣಗಣನೆ
ಸಾಂದರ್ಭಿಕ ಚಿತ್ರ
TV9kannada Web Team

| Edited By: Skanda

Jul 19, 2021 | 7:40 AM

ಬೆಂಗಳೂರು: ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು (SSLC Exam) ಇಂದು (ಜುಲೈ 19) ಹಾಗೂ ಜುಲೈ 22ರಂದು ಕರ್ನಾಟಕದಲ್ಲಿ ಏರ್ಪಡಿಸಲಾಗಿದೆ. ಇಂದು ಬೆಳಗ್ಗೆ 10.30ರಿಂದ ಪರೀಕ್ಷೆ ಆರಂಭವಾಗಲಿದ್ದು ಮಧ್ಯಾಹ್ನ 1.30ರ ತನಕ ನಡೆಯಲಿದೆ. ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಇಂದು ಪರೀಕ್ಷೆ ಆಯೋಜಿಸಲಾಗಿದೆ. ಮೂರು ವಿಷಯಗಳಿಂದ ಒಟ್ಟು 120 ಅಂಕಗಳಿಗೆ ಪರೀಕ್ಷೆ ಇರಲಿದ್ದು, ಆಬ್ಜೆಕ್ಟಿವ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ಈ ಪ್ರಶ್ನೆಗಳಿಗೆ ಓಎಮ್​ಆರ್​ ಹಾಳೆಯಲ್ಲಿ ವಿದ್ಯಾರ್ಥಿಗಳು ಉತ್ತರ (Answer) ಬರೆಯಬೇಕಿದ್ದು, ಒಂದೊಂದು ವಿಷಯಕ್ಕೂ ಒಂದೊಂದು ಬಣ್ಣದ OMR ಶೀಟ್ ಇರಲಿದೆ ಎಂದು ಶಿಕ್ಷಣ ಇಲಾಖೆ (Karnataka Education Department) ತಿಳಿಸಿದೆ.

ಯಾವ ವಿಷಯಕ್ಕೆ ಯಾವ ಬಣ್ಣದ ಓಎಮ್​ಆರ್​ ಹಾಳೆ? ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮೂರು ವಿಷಯಗಳಿಗೆ ಮೂರು ಪ್ರತ್ಯೇಕ ಬಣ್ಣಗಳ ಓಎಮ್​ಆರ್​ ಹಾಳೆ ಇರಲಿದ್ದು, ಗಣಿತಕ್ಕೆ ಗುಲಾಬಿ ಬಣ್ಣ, ವಿಜ್ಞಾನಕ್ಕೆ ಕೇಸರಿ ಬಣ್ಣ ಹಾಗೂ ಸಮಾಜ ವಿಜ್ಞಾನಕ್ಕೆ ಹಸಿರು ಬಣ್ಣದ ಹಾಳೆಗಳು ಇರಲಿವೆ. ವಿದ್ಯಾರ್ಥಿಗಳು ಯಾವುದೇ ಗೊಂದಲ ಮಾಡಿಕೊಳ್ಳದೇ ಆಯಾ ವಿಷಯಕ್ಕೆ ಸಂಬಂಧಿಸಿದ ಓಎಮ್​ಆರ್​ ಶೀಟ್​ನಲ್ಲಿ ಸರಿಯಾದ ಉತ್ತರಕ್ಕೆ ಗುರುತು ಹಾಕಬೇಕೆಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಇಂದು ಹಾಗೂ ಜುಲೈ 22ರಂದು ನಡೆಯಲಿರುವ SSLC ಪರೀಕ್ಷೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದ್ದು, ಒಂದು ಪರೀಕ್ಷಾ ಕೊಠಡಿಯಲ್ಲಿ 10 ರಿಂದ 12 ಮಕ್ಕಳಿಗೆ ಅವಕಾಶ ನೀಡಲಾಗುವುದು. ಕೆಮ್ಮು, ನೆಗಡಿ, ಜ್ವರ ಇರುವವರಿಗೆ ವಿಶೇಷ ಕೊಠಡಿ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸೇಷನ್ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಥರ್ಮಲ್ ಸ್ಕ್ರೀನಿಂಗ್ ಕೂಡಾ ಇರಲಿದೆ. ಯಾವುದೇ ಆತಂಕವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಮೆಡಿಕಲ್ ಕೌಂಟರ್, ಮೊಬೈಲ್ ಕೌಂಟರ್ ಸ್ಥಾಪಿಸಲಾಗಿದ್ದು, ಕೊವಿಡ್ ನಿಯಗಳನ್ನು ಸೂಚಿಸುವ ಭಿತ್ತಿಪತ್ರ ಅಳವಡಿಕೆ ಮಾಡಲಾಗಿದೆ. ಕೊಠಡಿಗಳ ನಂಬರ್ ತಿಳಿಸಲು ನೋಟಿಸ್ ಬೋರ್ಡ್​ಗಳನ್ನು ಹಾಕಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಪುಟ್ ಮಾರ್ಕ್ ಹಾಕಲಾಗಿದ್ದು, ಪರೀಕ್ಷಾ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಮೂಲಕ ವಿದ್ಯಾರ್ಥಿಗಳ ತಾಪಮಾನ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊವಿಡ್ ಲಕ್ಷಣ ಇರುವ ಮಕ್ಕಳಿಗೆ ಪ್ರತ್ಯೇಕ ಕೊಠಡಿ ಮೂಲಕ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲೆಂದೇ ಕನಿಷ್ಠ 2 ಕೊಠಡಿಗಳನ್ನು ವಿಶೇಷ ಕೊಠಡಿಗಳನ್ನಾಗಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ ತಾಲ್ಲೂಕಿಗೊಂದು ತುರ್ತು ಚಿಕಿತ್ಸಾ ವಾಹನ ಮೀಸಲು ಸಿಬ್ಬಂದಿ ಮತ್ತು ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದ ಪ್ರವೇಶವಾದೊಡನೆ ನೇರವಾಗಿ ಆರೋಗ್ಯ ತಪಾಸಣಾ ಕೌಂಟರ್‌ ಪ್ರವೇಶ ಮಾಡಬೇಕು. ಆರೋಗ್ಯ ಕೌಂಟರ್​ಗಳು ಬೆಳಗ್ಗೆ 8.30ಕ್ಕೆ ಅರಂಭವಾಗಿ ಪರೀಕ್ಷಾ ಪ್ರಕ್ರಿಯೆ ಮುಗಿಯುವ ತನಕ ತೆರೆದಿರಲಿವೆ. ಥರ್ಮಲ್ ಸ್ಯಾನರ್, ಪಲ್ಸ್‌ ಆಕ್ಸಿಮೀಟರ್‌, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರಲಿವೆ. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಆರೋಗ್ಯ ಕೌಂಟರ್​ಗಳಲ್ಲೇ ಮಾಸ್ಕ್‌ ನೀಡಲಾಗುತ್ತದೆ. ತುರ್ತು ಚಿಕಿತ್ಸಾ ವಾಹನ ವ್ಯವಸ್ಥೆ ಇರಲಿದೆ. ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ , ಪ್ರತಿ ತಾಲ್ಲೂಕಿಗೊಂದು ತುರ್ತು ಚಿಕಿತ್ಸಾ ವಾಹನವನ್ನು ಮೀಸಲಿಡಲಾಗಿದೆ. ಪರೀಕ್ಷಾ ಸಿಬ್ಬಂದಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಅಗತ್ಯ ಬಿದ್ದರೆ ಸಿಬ್ಬಂದಿ ಫೇಸ್‌ ಶೀಲ್ಡ್‌ ಬಳಸಬಹುದು ಎಂದು ಸೂಚಿಸಲಾಗಿದೆ. ಕೊವಿಡ್‌ ಕೇರ್‌ ಕೇಂದ್ರದಲ್ಲಿ ಒಂದು ಅಂಬುಲೆನ್ಸ್‌ ವಾಹನ ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪರೀಕ್ಷಾ ಕೇಂದ್ರದ ಸುತ್ತಮುತ್ತ ಸೆಕ್ಷನ್-144 ಜಾರಿಯಾಗಿದ್ದು, ಯಾವುದೇ ಪ್ರಕರಣಗಳಿಗೆ ಅವಕಾಶವಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಸೆಂಟರ್​ಗಳನ್ನು ಮುಚ್ಚಲು ತಿಳಿಸಲಾಗಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ರವಾನೆ ಸಮಯದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.

ಒಟ್ಟು 8,76,581 ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದು, 4,72,643 ಬಾಲಕರು, 4,03,938 ಬಾಲಕಿಯರು ಇದರಲಿದ್ದಾರೆ. ಹೊಸ ವಿದ್ಯಾರ್ಥಿಗಳ ಸಂಖ್ಯೆ 7,83,955, ಪುನರಾವರ್ತಿತ ವಿದ್ಯಾರ್ಥಿಗಳು 977, ಖಾಸಗಿ ವಿದ್ಯಾರ್ಥಿಗಳು 21,817, ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು 9,419, ಹೊಸ ಸ್ಕೀಂ ವಿದ್ಯಾರ್ಥಿಗಳು 392, ಹೊಸ ಸ್ಕೀಂ ಪುನರಾವರ್ತಿತ ವಿದ್ಯಾರ್ಥಿಗಳು 21 ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಪರೀಕ್ಷೆಗೆ ನೋಂದಾಯಿಸಿರುವ ಶಾಲೆಗಳ ಸಂಖ್ಯೆ 14,927 ಆಗಿದ್ದು, ಒಟ್ಟು 4,884 ಪರೀಕ್ಷಾ ಕೇಂದ್ರಗಳಲ್ಲಿ 73,066 ಕೊಠಡಿಗಳ ವ್ಯವಸ್ಥೆ ಮೂಲಕ ಪರೀಕ್ಷೆ ಆಯೋಜಿಸಲಾಗುತ್ತಿದೆ. ಎಲ್ಲಾ ಜಿಲ್ಲೆಗೆ ಒಂದೊಂದು ನೋಡಲ್ ಅಧಿಕಾರಿ ನೇಮಕ ಮಾಡಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಸುತ್ತಳತೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎನ್ನುವುದನ್ನೂ ತಿಳಿಸಿದ್ದಾರೆ.

ಇದನ್ನೂ ಓದಿ: SSLC exam 2021: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕಡ್ಡಾಯ – ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟನೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada