ಚನ್ನಪಟ್ಟಣ ಫಲಿತಾಂಶ: ನಿಖಿಲ್ ಸೋತಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ
ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುವ ಮೂಲಕ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲು ದಾಖಲಿಸಿದ್ದಾರೆ. ಇದು ಅವರ ಕುಟುಂಬದವರಿಗೆ, ಪಕ್ಷದವರಿಗೆ ಮಾತ್ರವಲ್ಲದೆ ಅವರ ಅಭಿಮಾನಿಗಳಿಗೂ ಆಘಾತ ತಂದಿದೆ. ಪರಿಣಾಮವಾಗಿ ನಿಖಿಲ್ ಅಭಿಮಾನಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರಾಮನಗರ, ನವೆಂಬರ್ 24: ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದಕ್ಕೆ ಅವರ ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ವ್ಯಕ್ತಿಗೆ ಮಂಡ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನಪಟ್ಟಣದ ಕೂಡ್ಲೂರು ಬಳಿಯ ಶ್ರೀರಾಂಪುರ ಗ್ರಾಮದ ಮಂಜುನಾಥ್ ಎಂಬ ವ್ಯಕ್ತಿಯೇ ಆತ್ಮಹತ್ಯೆಗೆ ಯತ್ನಿಸಿದವರು.
‘ನಾನು ನಿಖಿಲ್ ಅಭಿಮಾನಿ, ನನ್ನ ಸಾವಿಗೆ ನಾನೇ ಕಾರಣ, ಜೈ ಜೆಡಿಎಸ್’ ಎಂದು ಪತ್ರ ಬರೆದಿಟ್ಟು ಅವರು ವಿಷ ಸೇವನೆ ಮಾಡಿಕೊಂಡಿದ್ದಾರೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮಂಜುನಾಥ್ ಅವರನ್ನು ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಚನ್ನಪಟ್ಟಣದಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ಮೈತ್ರಿ ನಾಯಕರು ಭಾವಿಸಿದ್ದರೂ ನಿಖಿಲ್ ಸೋಲನುಭವಿಸಿದ್ದಾರೆ. ಇದರೊಂದಿಗೆ, ನಿಖಿಲ್ ಸತತ ಮೂರು ಚುನಾವಣೆಗಳಲ್ಲಿ ಸೋಲನುಭವಿಸಿದ್ದಾರೆ. ಇದರಿಂದ ಅವರ ಅಭಿಮಾನಿ ಮನನೊಂದಿದ್ದರು.
ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ
ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ ಅಂಕಿಅಂಶಗಳನ್ನು ನೋಡುವುದಾದರೆ, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ 25,515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಯೋಗೇಶ್ವರ್ಗೆ 1,12,642 ಮತ ದೊರೆತರೆ, ಎನ್ಡಿಎ ಅಭ್ಯರ್ಥಿ ನಿಖಿಲ್‌ಗೆ 87,229 ಮತಗಳು ದೊರೆತಿವೆ. ಪಕ್ಷೇತರ ಅಭ್ಯರ್ಥಿಗಳಾದ ನಿಂಗರಾಜುಗೆ 2352, ಜೆ.ಟಿ.ಪ್ರಕಾಶ್‌ಗೆ 1649 ಮತಗಳು ದೊರೆತಿವೆ.
ಇದನ್ನೂ ಓದಿ: ಚನ್ನಪಟ್ಟಣ ಫಲಿತಾಂಶ; ಸಿಪಿ ಯೋಗೇಶ್ವರ್ ಗೆಲುವು, ಮೂರನೇ ಯತ್ನದಲ್ಲೂ ನಿಖಿಲ್‌ಗೆ ಸೋಲು
ಕೊನೇ ಕ್ಷಣದಲ್ಲಿ ಸ್ಪರ್ಧೆ ಮಾಡಿದ್ದು, ಮತ್ತು ಕುಟುಂಬ ರಾಜಕಾರಣ ಆರೋಪಗಳು ನಿಖಿಲ್‌ಗೆ ಹಿನ್ನಡೆಯಾಗಲು ಪ್ರಮುಖ ಕಾರಣಗಳು ಎಂದು ವಿಶ್ಲೇಷಿಸಲಾಗುತ್ತಿದೆ.
ಚುನಾವಣೆ ಫಲಿತಾಂಶ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ