ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಜೈಸ್ವಾಲ್ 205 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು.
ಇದು ಯಶಸ್ವಿ ಜೈಸ್ವಾಲ್ ಅವರ 4ನೇ ಶತಕ ಎಂಬುದು ವಿಶೇಷ. ಹಾಗೆಯೇ ವಿದೇಶಿ ಪಿಚ್ನಲ್ಲಿ ಜೈಸ್ವಾಲ್ ಬ್ಯಾಟ್ನಿಂದ ಮೂಡಿಬಂದಿರುವ ದ್ವಿತೀಯ ಶತಕವಾಗಿದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಇದೇ ಮೊದಲ ಬಾರಿಗೆ ಮೂರಂಕಿ ಮೊತ್ತಗಳಿಸಿ ಯುವ ದಾಂಡಿಗ ಅಬ್ಬರಿಸಿದ್ದಾರೆ.
ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ನಲ್ಲಿ 171 ರನ್ ಬಾರಿಸಿ ಮಿಂಚಿದ್ದರು. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ 209 ಹಾಗೂ 214 ರನ್ಗಳ ಎರಡು ದ್ವಿಶತಕ ಸಿಡಿಸಿದ್ದರು.
ಇದೀಗ ಆಸ್ಟ್ರೇಲಿಯಾದಲ್ಲೂ ಆಕರ್ಷಕ ಶತಕ ಬಾರಿಸಿದ್ದಾರೆ. ಈ ಮೂಲಕ ಆಸೀಸ್ ಪಿಚ್ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದಾರೆ.
ಇನ್ನು ಯಶಸ್ವಿ ಜೈಸ್ವಾಲ್ ಅವರ ಶತಕ ಹಾಗೂ ಕೆಎಲ್ ರಾಹುಲ್ (77) ಅವರ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 64 ಓವರ್ಗಳ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಯಶಸ್ವಿ ಜೈಸ್ವಾಲ್ (102) ಹಾಗೂ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.
Published On - 8:15 am, Sun, 24 November 24