ಬೆಂಗಳೂರು: ಕರ್ನಾಟಕದ ಕೊವಿಡ್ ಪರಿಸ್ಥಿತಿ ಆಧರಿಸಿ ಅನ್ಲಾಕ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಆನ್ಲಾಕ್ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ನಿರ್ಧರಿಸಲಿದ್ದಾರೆ. ನಮಗೆ ಜನರ ಜೀವ, ಜೀವನ ಎರಡೂ ಮುಖ್ಯವಾಗಿದೆ. ಹಾಗೆಯೇ ಆರ್ಥಿಕತೆ ಕಡೆಗೂ ಗಮನ ಕೊಡಬೇಕಿದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಲಸಿಕೆಗಾಗಿ ಸರ್ಕಾರಕ್ಕೆ ₹ 100 ಕೋಟಿ ಬಗ್ಗೆ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ನವರು ಯಾವುದೇ ಹಣವನ್ನು ಕೊಟ್ಟಿಲ್ಲ. ಸರ್ಕಾರದ ಹಣ ಹೇಗೆ ಖರ್ಚು ಮಾಡಬೇಕೆಂದು ನಮಗೆ ಗೊತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ, ಹಣಕಾಸು ಇಲಾಖೆ ಮತ್ತು ಮುಖ್ಯ ಕಾರ್ಯದರ್ಶಿ ನಿರ್ಧಾರ ಮಾಡುತ್ತಾರೆ.
ಈ ಬಗ್ಗೆ ಕಾಂಗ್ರೆಸ್‌ನವರು ನಿರ್ಧಾರ ಮಾಡಲು ಬರುವುದಿಲ್ಲ. ಕಾಂಗ್ರೆಸ್‌ನವರು ಹಣ ಕೊಟ್ಟ ನಂತರ ಬೇಕಿದ್ದರೆ ಮಾತನಾಡಲಿ. ಅವರು ಹಣ ಕೊಟ್ಟು ಲಸಿಕೆ ಕೇಳಿದರೆ, ಎಷ್ಟು ಲಸಿಕೆ ಕೇಳಿದರೆ ಅಷ್ಟನ್ನೂ ಕೊಡುತ್ತೇವೆ. ಉಚಿತವಾಗಿ ಲಸಿಕೆ ಕೊಡುತ್ತಿರುವುದು ಕೇಂದ್ರ ಸರ್ಕಾರ. ಉಚಿತ ಲಸಿಕೆಯ ಕ್ರೆಡಿಟ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಲಾಕ್ಡೌನ್ ಸಡಿಲಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ. ಎಷ್ಟು ಹಂತಗಳಲ್ಲಿ ಅನ್ಲಾಕ್ ಮಾಡಬೇಕೆಂದು ಚರ್ಚಿಸಿದ್ದೇವೆ. ಇದೇ ವಿಷಯವಾಗಿ ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆಗೂ ನಾನು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಸುಧಾಕರ್ ಸುದೀರ್ಘವಾಗಿ ಚರ್ಚಿಸಿದ್ದೆವು ಎಂದು ಹೇಳಿದರು.
ಪಾರ್ಕ್ಗಳನ್ನು ಬೆಳಿಗ್ಗೆ 5ರಿಂದ 8ರವರೆಗೆ ತೆರೆಯಲು, ಬಾರ್ಗಳ ಸಮಯ ವಿಸ್ತರಿಸುವ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಅನ್ಲಾಕ್ ಬಗ್ಗೆ ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ. ಅನ್ಲಾಕ್ ಹೇಗೆ ಮಾಡಬೇಕು? ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು? ಎಷ್ಟು ಹಂತಗಳಲ್ಲಿ ಅನ್ಲಾಕ್ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ಹಲವು ಜಿಲ್ಲೆಗಳಲ್ಲಿ ಕೊವಿಡ್ ಸೋಂಕಿತರಿಗಾಗಿ ಮೀಸಲಿಟ್ಟಿದ್ದ ಬೆಡ್ಗಳು ಖಾಲಿ ಉಳಿದಿವೆ. ಇವುಗಳ ಬಗ್ಗೆ ಸೂಕ್ತ ತೀರ್ಮಾಣ ತೆಗೆದುಕೊಳ್ಳುವ ನಿರ್ಧಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಬೆಂಗಳೂರಿನಲ್ಲಿ ಈಗ 6,064 ಬೆಡ್ ಖಾಲಿಯಿವೆ. ಈ ಬೆಡ್‌ಗಳನ್ನು ಇತರೆ ಕಾಯಿಲೆಗಳ ರೋಗಿಗಳಿಗೆ ಬಳಕೆ ಮಾಡಲು ನಿರ್ಧರಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿರುವ ಬೆಡ್ಗಳು ಮತ್ತು ಖಾಸಗಿ ಆಸ್ಪತ್ರೆಗಳ ಶೇ 20ರಷ್ಟು ಬೆಡ್‌ಗಳನ್ನು ಕೊವಿಡ್ ಸೋಂಕಿತರ ಚಿಕಿತ್ಸೆಗೆ ಉಳಿಸಿಕೊಳ್ಳುತ್ತೇವೆ. ಐಸಿಯು ಹೊರತುಪಡಿಸಿ ಉಳಿದ ಬೆಡ್‌ಗಳನ್ನು ಖಾಸಗಿಯವರಿಗೆ ಬಿಟ್ಟುಕೊಡುತ್ತೇವೆ ಎಂದರು.
(Karnataka Unlock Discussion Revenue Minister R Ashok Informs about the Unlock Plan of State Govt)
ಇದನ್ನೂ ಓದಿ: CM on Lockdown Relaxation : ಶೇ.5ಕ್ಕಿಂತ ಪಾಸಿಟಿವಿಟಿ ರೇಟ್ ಬರೋ ಜಿಲ್ಲೆಗಳಲ್ಲಿ ಅನ್ಲಾಕ್..?
ಇದನ್ನೂ ಓದಿ: Karnataka Unlock: ಜೂನ್ 14ರ ನಂತರ ಅನ್ಲಾಕ್ಗೆ ಇವತ್ತೇ ಮುಹೂರ್ತ ಫಿಕ್ಸ್? ತಜ್ಞರ ಜೊತೆ ಮಹತ್ವದ ಮೀಟಿಂಗ್