ಸಾಂದರ್ಭಿಕ ಚಿತ್ರ
Image Credit source: AI Image
ಬೆಂಗಳೂರು, ಮೇ 14: ಚುನಾವಣಾ ಆಯೋಗವು ದೇಶದಲ್ಲಿ 3ನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ (SIR) ಘೋಷಿಸಿದ್ದು, ಕರ್ನಾಟಕಕ್ಕೂ ಇದು ಅನ್ವಯವಾಗಲಿದೆ. ಈ ಸಂಬಂಧ ಜೂ.20ರಿಂದ 29ರವರೆಗೆ ಅಧಿಕಾರಿಗಳಿಗೆ ತರಬೇತಿ ಮತ್ತು ಪೂರ್ವ ಸಿದ್ಧತೆ ನಡೆಯಲಿದ್ದು, ಜೂನ್ 30ರಿಂದ ಜುಲೈ 29ರವರೆಗೆ ಮನೆ ಮನೆ ಭೇಟಿ ಮತ್ತು ಸಮೀಕ್ಷೆ ನಡೆಯಲಿದೆ. ಆ ಬಳಿಕ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ ಆಗಲಿದ್ದು, ಆ.5ರಿಂದ ಸೆ.4ರವರೆಗೆ ಆಕ್ಷೇಪಣೆ, ಹೊಸ ಸೇರ್ಪಡೆ, ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 7ರಂದು ಪ್ರಕಟವಾಗಲಿದೆ.
ಯಾಕಾಗಿ ಮತದಾರರ ಪಟ್ಟಿ ಪರಿಷ್ಕರಣೆ?
- ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು.
- ಮತದಾರರ ಪಟ್ಟಿಯಲ್ಲಿನ ಹೆಸರು, ವಯಸ್ಸು, ವಿಳಾಸ ಮುಂತಾದ ತಪ್ಪುಗಳನ್ನು ಸರಿಪಡಿಸುವುದು.
- ಮೃತಪಟ್ಟವರು, ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡವರು ಅಥವಾ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು.
- ಮುಂಬರುವ ಚುನಾವಣೆಗಳಿಗಾಗಿ ಅತ್ಯಂತ ನಿಖರವಾದ ಮತ್ತು ನವೀಕೃತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು.
- ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಲು ಮತ್ತು ಅಗತ್ಯವಿದ್ದರೆ ಬದಲಾವಣೆ ಮಾಡಲು ಅವಕಾಶ ನೀಡುವುದು
ಇದನ್ನೂ ಓದಿ: ಮೇ 30ರಿಂದ 3ನೇ ಹಂತದ SIR; ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ
2025ರ ಅಪಡೇಟ್ ಪ್ರಕಾರ ರಾಜ್ಯದಲ್ಲಿ ಒಟ್ಟು 5 ಕೋಟಿ 57ಲಕ್ಷದ 36 ಸಾವಿರದ 561 ಮತದಾರರಿದ್ದಾರೆ ಎನ್ನಲಾಗಿದೆ. ಈ ಪೈಕಿ ಮೃತರು, ನಕಲಿ ಮತದಾರರು ಸೇರಿದಂತೆ ಸ್ಥಳಾಂತರಗೊಂಡಿರುವವ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಮತ್ತು ಪಟ್ಟಿಯಲ್ಲಿ ಸೇರ್ಪಡೆ ಆಗದವರ ಹೆಸರನ್ನು ಸೇರಿಸುವ ಕಾರ್ಯ ಮತದಾರರ ಪಟ್ಟಿ ಪರಿಷ್ಕರಣೆ (SIR) ವೇಳೆ ನಡೆಯಲಿದೆ,
ಪರಿಷ್ಕರಣೆ ಪ್ರಕ್ರಿಯೆ ಹೇಗೆ?
- 2025ರ ಮತದಾರರ ಪಟ್ಟಿಯಲ್ಲಿರುವಂತೆ ಮತದಾರರ ವಿವರ, ಗಣತಿ ನಮೂನೆಗಳನ್ನು ದ್ವಿಪ್ರತಿಯಲ್ಲಿ ಮುದ್ರಿಸಿ BLOಗಳಿಗೆ ಹಂಚಿಕೆ
- BLOಗಳ ಮೂಲಕ ಪ್ರತಿಯೊಂದು ಮತದಾರರ ಮನೆಗೆ ಭೇಟಿ ನೀಡಿ ಮತದಾರರಿಗೆ ವಿತರಿಸಿ ಸ್ವೀಕೃತಿ ಪಡೆಯುವುದು
- ಮತದಾರರು ತಾವು ಸ್ವೀಕರಿಸಿದ ಗಣತಿ ನಮೂನೆಯಲ್ಲಿನ ತಮ್ಮ ವಿವರಗಳನ್ನು ಪರಿಶೀಲಿಸಿ ಸರಿಯೆಂದು ದೃಢಪಡಿಸಬೇಕು
- ನಂತರ ಸಹಿ ಮಾಡಿ ಗಣತಿ ನಮೂನೆಗಳನ್ನು BLOರವರಿಗೆ ಮರಳಿಸಬೇಕು, ಈ ಹಂತದಲ್ಲಿ ಮತದಾರರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸಲಾಗುವುದಿಲ್ಲ.
- ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಹಿ ಮಾಡಿ BLOರವರಿಗೆ ಹಿಂತಿರುಗಿಸಿದ ಎಲ್ಲಾ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಾರೆ.
- ಗಣತಿ ನಮೂನೆ ಹಿಂದಿರುಗಿಸದೇ ಇರುವ ಮತದಾರರ ಕುರಿತು ಆಯೋಗ ಮುಂದಿನ ಕ್ರಮ ಜರುಗಿಸುತ್ತದೆ
- 2025ರ ಮತದಾರರ ಪಟ್ಟಿಯಲ್ಲಿರುವ ಮತದಾರರು ಗಣತಿ ನಮೂನೆಗಳನ್ನು ಹಿಂದಿರುಗಿಸದೇ ಇರುವವರನ್ನು ಪ್ರತ್ಯೇಕವಾಗಿ ಸಂಭವನೀಯ ಗೈರುಹಾಜರಿದಾರರು , ಸಂಭವನೀಯ ಮೃತರು , ಸಂಭವನೀಯ ನಕಲಿ, ಸಂಭವನೀಯ ಸ್ಥಳಾಂತರಗೊಂಡವರು ಎಂದು ವಿಂಗಡಿಸಲಾಗುತ್ತದೆ.
ಅಂತಹವರ ಪಟ್ಟಿಯನ್ನು BLOರವರು ತಯಾರಿಸಿ EROರ ವರಿಗೆ ಮುಂದಿನ ಕ್ರಮಕ್ಕೆ ಸಲ್ಲಿಸುತ್ತಾರೆ
- ಸಂಭವನೀಯ ಗೈರುಹಾಜರಿದಾರರು / ಸಂಭವನೀಯ ಮೃತರು / ಸಂಭವನೀಯ ನಕಲಿ / ಸಂಭವನೀಯ ಸ್ಥಳಾಂತರಗೊಂಡ ಮತದಾರರ ಮತಗಟ್ಟೆವಾರು ಪಟ್ಟಿಗಳನ್ನು, ಸಂಬಂಧಿತ ಮತಗಟ್ಟೆ/ ಗ್ರಾಮ ಪಂಚಾಯತ್ /ನಗರ ಸ್ಥಳೀಯ ಸಂಸ್ಥೆ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಾಗುತ್ತದೆ
- ಇದರಿಂದ ಸಾರ್ವಜನಿಕರಿಗೆ ಹೆಸರು ಸೇರಿಸದಿರುವ ಕಾರಣಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ
- ಈ ಪಟ್ಟಿಗಳನ್ನು ಕ್ರೋಢೀಕರಿಸಿ ಮುಖ್ಯ ಚುನಾವಣಾಧಿಕಾರಿಗಳ (CEO) ವೆಬ್‌ಸೈಟ್‌ನಲ್ಲಿ ಸಹ ಪ್ರಕಟಿಸಲಾಗುತ್ತದೆ
- ಸದರಿ ಪಟ್ಟಿಗಳನ್ನು ಮಾನ್ಯತೆ ಪಡೆದ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳಿಗೆ ಒದಗಿಸಲಾಗುತ್ತದೆ.
- ನಂತರ EROರವರು ಅಂತಹ ಮತದಾರರಿಗೆ ನಿಯಮಾನುಸಾರ ನೋಟೀಸ್ ನೀಡಿ ಭಾರತ ಚುನಾವಣಾ ಆಯೋಗವು ನಿರ್ಧಿಷ್ಟ ಪಡಿಸಿರುವ 12 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಸಲ್ಲಿಸಲು ಸೂಚಿಸುತ್ತಾರೆ.
- ERO ವಿಚಾರಣೆ ನಡೆಸಿ ಅರ್ಹರಿದ್ದಲ್ಲಿ ಅಂತಹ ಮತದಾರರನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಕುರಿತು ನಿರ್ಧರಿಸಿ, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
- ನೋಂದಣಾಧಿಕಾರಿಗಳ ಆದೇಶದಿಂದ ಬಾಧಿತರಾದವರು ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳಿಗೆ 15 ದಿನಗಳ ಒಳಗಾಗಿ ಪ್ರಥಮ ಮೇಲ್ಮನವಿಯನ್ನು ಸಲ್ಲಿಸಬಹುದು.
- ಪ್ರಥಮ ಮೇಲ್ಮನವಿಯ ಆದೇಶದಿಂದ ಬಾಧಿತರಾದವರು ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರಿಗೆ ದ್ವಿತೀಯ ಮೇಲ್ಮನವಿಯನ್ನು 30 ದಿನಗಳೊಳಗಾಗಿ ಸಲ್ಲಿಸಬಹುದು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.