Karnataka Weather: ಕರ್ನಾಟಕದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆ; ಹಲವೆಡೆ ರೆಡ್​, ಆರೆಂಜ್ ಅಲರ್ಟ್​

Karnataka Weather Today: ಬೆಂಗಳೂರಿನಲ್ಲೂ ಮಳೆಯಾಗಲಿದ್ದು, ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ, ತಂಪಾದ ವಾತಾವರಣ ಇರಲಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ. ಹಲವೆಡೆ ಪರಿಸ್ಥಿತಿಗೆ ಅನುಗುಣವಾಗಿ ರೆಡ್, ಆರೆಂಜ್​ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

Karnataka Weather: ಕರ್ನಾಟಕದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆ; ಹಲವೆಡೆ ರೆಡ್​, ಆರೆಂಜ್ ಅಲರ್ಟ್​
ರಾಜ್ಯದಲ್ಲಿ ಮುಂದುವರಿಯಲಿದೆ ಮಳೆ
TV9kannada Web Team

| Edited By: Skanda

Jul 17, 2021 | 9:46 AM

ಬೆಂಗಳೂರು: ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ವ್ಯಾಪಕ ಮಳೆಯಾಗುತ್ತಿದೆ. ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಇಂದು (ಜುಲೈ 17) ಮತ್ತು ನಾಳೆ (ಜುಲೈ 18) ಸಹ ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ (Heavy Rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ (Weather Forecast) ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ (Coastal Region) ವ್ಯಾಪಕವಾಗಿ ಸಾಧಾರಣದಿಂದ ಉತ್ತಮ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗಲಿದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದ ಮಳೆಯಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದ ಮಳೆಯಿಂದ ಅಲ್ಲಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈಗಾಗಲೇ ಕೆಲ ದಿನಗಳಿಂದ ಮಲೆನಾಡು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಆಯಾ ಪ್ರದೇಶಗಳಿಗೆ ಅನುಗುಣವಾಗಿ ಸೂಕ್ತ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ. ಸದ್ಯದ ಮಾಹಿತಿ ಪ್ರಕಾರ ಇಂದು ಮತ್ತು ನಾಳೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ಭಾರೀ ಮಳೆಯ ನಿರೀಕ್ಷೆಯಿದೆ.

ಬೆಂಗಳೂರಿನಲ್ಲೂ ಮಳೆಯಾಗಲಿದ್ದು, ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ, ತಂಪಾದ ವಾತಾವರಣ ಇರಲಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಭಾಗಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಹಲವೆಡೆ ಪರಿಸ್ಥಿತಿಗೆ ಅನುಗುಣವಾಗಿ ರೆಡ್, ಆರೆಂಜ್​ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದು (ಜು.17) ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದ್ದು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ಕರಾವಳಿ ಪ್ರದೇಶದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ.

ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಜಾರಿಯಲ್ಲಿದ್ದು, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಬೀದರ್, ಬಾಗಲಕೋಟೆ ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಕೊಡಗು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿಟ್ಟೂಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ರಸ್ತೆಗಳ ಮೇಲೆ ಮರ ಉರುಳಿ ಸಂಚಾರಕ್ಕೆ ಅಡಚಣೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕಾವೇರಿ ನದಿಯ ಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ನದಿ ತೀರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಭಾರೀ ಮಳೆಯ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳಹರಿವು ಕೂಡಾ ಹೆಚ್ಚಾಗಿರುವುದರಿಂದ ಜಲಾಶಯ ಭರ್ತಿಯಾಗಲು ಇನ್ನು ಕೇವಲ ಎರಡೇ ಅಡಿ ಬಾಕಿ ಇದೆ ಎಂದು ನಿನ್ನೆ ವರದಿಯಾಗಿತ್ತು.

ಅತ್ತ ನೆರೆಯ ಮಹಾರಾಷ್ಟ್ರದಲ್ಲೂ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಗ್ಗು ಪ್ರದೇಶಗಳಲ್ಲಿನ ಮನೆಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಒಟ್ಟಾರೆಯಾಗಿ ಜೂನ್​ ತಿಂಗಳ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಸುರಿದಿದ್ದ ಮುಂಗಾರು ನಂತರ ಕೆಲ ದಿನಗಳ ಕಾಲ ಬಿಡುವು ನೀಡಿ ಇದೀಗ ಮತ್ತೆ ತನ್ನ ಅಬ್ಬರವನ್ನು ತೋರಿಸುತ್ತಿದೆ.

ಇದನ್ನೂ ಓದಿ: Mumbai Rains: ಮುಂಬೈನಲ್ಲಿ ಭಾರೀ ಮಳೆಯಿಂದ ಕೆರೆಯಾದ ರಸ್ತೆಗಳು; ಬಸ್, ರೈಲು ಸಂಚಾರ ಅಸ್ಯವ್ಯಸ್ತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada