Karnataka Weather: ಜೂನ್​ 1ರಿಂದ ಇಲ್ಲಿಯ ತನಕ ದೇಶದಲ್ಲಿ ವಾಡಿಕೆಗಿಂತ ಶೇ.25ರಷ್ಟು ಅಧಿಕ ಮಳೆ; ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ

| Updated By: Skanda

Updated on: Jun 14, 2021 | 11:04 AM

Monsoon 2021: ಜೂನ್​ 1ರಿಂದ ಇಲ್ಲಿಯ ತನಕ ದೇಶದಲ್ಲಿ ಶೇ.25ರಷ್ಟು ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ. 36 ಉಪವಿಭಾಗಗಳ ಪೈಕಿ 12ರಲ್ಲಿ ಅತಿಹೆಚ್ಚು ಮಳೆ (ಶೇ.60ಕ್ಕಿಂತ ಅಧಿಕ), 10 ರಲ್ಲಿ ಹೆಚ್ಚು ಮಳೆ (ಶೇ.20ರಿಂದ ಶೇ.59) ಮತ್ತು 9 ಕಡೆ ಸಾಧಾರಣ ಮಳೆ (ಶೇ.-19ರಿಂದ ಶೇ.19) ವರದಿಯಾಗಿದೆ.

Karnataka Weather: ಜೂನ್​ 1ರಿಂದ ಇಲ್ಲಿಯ ತನಕ ದೇಶದಲ್ಲಿ ವಾಡಿಕೆಗಿಂತ ಶೇ.25ರಷ್ಟು ಅಧಿಕ ಮಳೆ; ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ
ಬೆಂಗಳೂರು ಮಳೆ (ಸಂಗ್ರಹ ಚಿತ್ರ)
Follow us on

ಭಾರತದಲ್ಲಿ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಳೆ ಜೋರಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಗೋವಾ ಹಾಗೂ ಕೊಂಕಣ ಪ್ರಾಂತ್ಯದಲ್ಲಿ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದ್ದು ಭಾರೀ ಮಳೆ ಸುರಿಯುವ ನಿರೀಕ್ಷೆ ಮಾಡಲಾಗಿದೆ. ಇತ್ತ ಕರ್ನಾಟಕದ ದಕ್ಷಿಣ ಒಳನಾಡು, ಮಹಾರಾಷ್ಟ್ರ, ಒಡಿಶಾ, ಚತ್ತೀಸ್​ಗಡ, ಜಾರ್ಖಂಡ್ ಭಾಗಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಜೂನ್​ 17ರ ತನಕ ಆರೆಂಜ್ ಅಲರ್ಟ್​ ನೀಡಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಜೂನ್ 17ರ ತನಕ ರಾಜ್ಯಾದ್ಯಂತ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಆರೆಂಜ್ ಅಲರ್ಟ್​ ಜಾರಿಯಲ್ಲಿದೆ. ಜತೆಗೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣದಿಂದ ಉತ್ತಮ ಮಳೆಯಾಗುವ ಸಂಭವವಿದೆ.

ಹವಾಮಾನ ಇಲಾಖೆ ವರದಿ ತಿಳಿಸಿರುವಂತೆ ಈಗಾಗಲೇ ದೇಶದ ಬಹುತೇಕ ಭಾಗಗಳಿಗೆ ಮುಂಗಾರು ಪ್ರವೇಶಿಸಿದೆ. ಉತ್ತರ ಪ್ರದೇಶ, ಪಂಜಾಬ್ ರಾಜ್ಯದ ಕೆಲ ಭಾಗಗಳು, ರಾಜಸ್ಥಾನ ಮತ್ತು ಗುಜರಾತ್​ಗೆ ಮುಂಗಾರು ಕಾಲಿಡುವುದಷ್ಟೇ ಬಾಕಿಯಿದ್ದು ಮುಂದಿನ 15 ದಿನಗಳೊಳಗೆ ಅಲ್ಲಿಯೂ ಮಳೆಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನಿನ್ನೆ (ಜೂನ್ 13) ಮಧ್ಯಪ್ರದೇಶ, ಚತ್ತೀಸ್​ಗಡ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶದ ಒಂದಷ್ಟು ಭಾಗ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹರ್ಯಾಣದ ಉತ್ತರ ಭಾಗ, ಪಂಜಾಬ್​ನ ಉತ್ತರ ಭಾಗ ಸೇರಿದಂತೆ ಹಲವೆಡೆ ಮುಂಗಾರು ಬಲಗೊಂಡಿದ್ದು ಮಳೆ ಹೆಚ್ಚಾಗಲಿದೆ.

ಜೂನ್​ 1ರಿಂದ ಇಲ್ಲಿಯ ತನಕ ದೇಶದಲ್ಲಿ ಶೇ.25ರಷ್ಟು ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ. 36 ಉಪವಿಭಾಗಗಳ ಪೈಕಿ 12ರಲ್ಲಿ ಅತಿಹೆಚ್ಚು ಮಳೆ (ಶೇ.60ಕ್ಕಿಂತ ಅಧಿಕ), 10 ರಲ್ಲಿ ಹೆಚ್ಚು ಮಳೆ (ಶೇ.20ರಿಂದ ಶೇ.59) ಮತ್ತು 9 ಕಡೆ ಸಾಧಾರಣ ಮಳೆ (ಶೇ.-19ರಿಂದ ಶೇ.19) ವರದಿಯಾಗಿದೆ. ಜುಲೈ 5ರ ಒಳಗೆ ರಾಜಸ್ಥಾನದ ಕೆಲ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಎಲ್ಲೆಡೆ ಮುಂಗಾರು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಇದನ್ನೂ ಓದಿ:
Karnataka Weather: ಜೂನ್ 12ರಿಂದ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ನಿರ್ದೇಶಕ ಮಾಹಿತಿ

Karnataka Weather: ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆ; ಜೂನ್ 17ರವರೆಗೆ ಹೆಚ್ಚಿನ ಮಳೆಯಾಗುವ ನಿರೀಕ್ಷೆ