Karnataka Weather Today: ರಾಜ್ಯದಲ್ಲಿ ನಾಳೆಯಿಂದ ಮಳೆ ಹೆಚ್ಚಳ; ಉತ್ತರ ಕರ್ನಾಟಕದಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ

| Updated By: ಆಯೇಷಾ ಬಾನು

Updated on: Sep 29, 2021 | 6:24 AM

Karnataka Rain | ಶಾಹೀನ್ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Weather Today: ರಾಜ್ಯದಲ್ಲಿ ನಾಳೆಯಿಂದ ಮಳೆ ಹೆಚ್ಚಳ; ಉತ್ತರ ಕರ್ನಾಟಕದಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ
ಮಳೆ ಸಾಂದರ್ಭಿಕ ಚಿತ್ರ
Follow us on

Karnataka Rain: ಭಾರತದಲ್ಲಿ ಗುಲಾಬ್ ಚಂಡಮಾರುತದ (Cyclone Gulab) ಅಬ್ಬರ ಕೊಂಚ ಕಡಿಮೆಯಾಗುತ್ತಿದ್ದು, ಅದರ ಪರಿಣಾಮ ಮಾತ್ರ ಇನ್ನೂ ಒಂದೆರಡು ದಿನ ಇರಲಿದೆ. ಇದರ ಬೆನ್ನಲ್ಲೇ ಸೆ. 30ರಿಂದ ಶಾಹೀನ್ ಚಂಡಮಾರುತವೂ ಅಪ್ಪಳಿಸುವ ನಿರೀಕ್ಷೆಯಿದೆ. ಈ ಶಾಹೀನ್ ಚಂಡಮಾರುತದ (Shaheen Cyclone)  ಪರಿಣಾಮವಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮಳೆಯ ಹಿನ್ನೆಲೆ ಉತ್ತರ ಕರ್ನಾಟಕದಲ್ಲಿ ಇಂದು ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ. ಕರಾವಳಿ, ಮಲೆನಾಡಿನಲ್ಲಿ ಇಂದಿನಿಂದ ಮಳೆ ಕೊಂಚ ಕಡಿಮೆಯಾಗಲಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿ ಇಂದು ಹಳದಿ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದಲ್ಲಿ ನಾಳೆಯಿಂದ ಮತ್ತೆ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರಿನಲ್ಲಿ ಇಂದು ಒಣ ಹಲವೆ ಇರಲಿದೆ.
ಭಾನುವಾರ ರಾತ್ರಿ ಒರಿಸ್ಸಾ- ಆಂಧ್ರಪ್ರದೇಶದ ಗಡಿಭಾಗದಲ್ಲಿ ಗುಲಾಬ್ ಚಂಡಮಾರುತ ಅಪ್ಪಳಿಸಿತ್ತು. ಒಡಿಶಾದ ಗೋಪಾಲಪುರಂ ಮತ್ತು ಆಂಧ್ರಪ್ರದೇಶದ ಕಾಳಿಂಗಪಟ್ಟಣಂನಲ್ಲಿ ಚಂಡಮಾರುತವು ಭೂ ಪ್ರವೇಶ ಮಾಡಿತ್ತು. ಮಧ್ಯಪ್ರದೇಶ, ಬಿಹಾರ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ಮಳೆಯಿಂದ ಹಳದಿ ಅಲರ್ಟ್ ಘೋಷಿಸಲಾಗಿದೆ.

ಇಂದು ಗೋವಾ, ಗುಜರಾತ್, ಮಧ್ಯ ಮಹಾರಾಷ್ಟ್ರ, ಕೊಂಕಣ, ಪಶ್ಚಿಮ ಬಂಗಾಳ, ಒರಿಸ್ಸಾ, ಮರಾಠವಾಡ, ಸೌರಾಷ್ಟ್ರ, ಕಚ್, ಮಧ್ಯಪ್ರದೇಶ, ವಿದರ್ಭ, ಛತ್ತೀಸ್​ಗಢ, ಜಾರ್ಖಂಡ್, ಆಂಧ್ರಪ್ರದೇಶದ ಕರಾವಳಿ ತೀರ, ತೆಲಂಗಾಣ, ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡು, ಅಸ್ಸಾಂ, ಮೇಘಾಲಯ, ಸಿಕ್ಕಿಂ, ಅಂಡಮಾನ್ ನಿಕೋಬಾರ್, ತ್ರಿಪುರ, ಮಿಜೋರಾಂ, ಅರುಣಾಚಲ ಪ್ರದೇಶ, ಬಿಹಾರ, ಉತ್ತರಾಖಂಡ, ರಾಜಸ್ಥಾನ, ಹರಿಯಾಣ, ತಮಿಳುನಾಡು, ಪುದುಚೆರಿ, ಕೇರಳ, ಮಾಹೆಯಲ್ಲಿ ಇಂದು ಅತ್ಯಂತ ಹೆಚ್ಚು ಮಳೆಯಾಗಲಿದೆ.

ಗುಲಾಬ್ ಚಂಡಮಾರುತದ ಅಬ್ಬರ ಆಂಧ್ರಪ್ರದೇಶ, ಒರಿಸ್ಸಾ, ತೆಲಂಗಾಣ, ಗುಜರಾತ್​ನಲ್ಲಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಕರ್ನಾಟಕ ಸೇರಿ ದೇಶಾದ್ಯಂತ ಮಳೆ ಕಡಿಮೆಯಾಗಲಿದೆ ಎನ್ನಲಾಗಿತ್ತು. ಆದರೆ, ಈ ಚಂಡಮಾರುತ ಅರಬ್ಬಿ ಸಮುದ್ರದತ್ತ ತೆರಳಿದ್ದು, ಅಲ್ಲಿ ಶಾಹೀನ್ ಚಂಡಮಾರುತದ ರೂಪ ತಳೆದು ಮತ್ತೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ, ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಹಾಗೂ ಗುಜರಾತ್ ಕರಾವಳಿ ಪ್ರದೇಶದ ಸುತ್ತಮುತ್ತಲಿನ ಭಾಗಗಳಲ್ಲಿ ಸೆ. 30ರ ವೇಳೆಗೆ ಶಾಹೀನ್ ಚಂಡಮಾರುತ ಅಬ್ಬರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದಿದೆ.

ಎರಡು ದಿನಗಳಲ್ಲಿ ಗುಲಾಬ್ ಚಂಡಮಾರುತ ಶಾಹೀನ್ ಚಂಡಮಾರುತವಾಗಿ ಮರುರೂಪ ಪಡೆಯುವ ಸಾಧ್ಯತೆಯಿದೆ. ಈ ಶಾಹೀನ್ ಚಂಡಮಾರುತದ ಹೆಸರನ್ನು ಕತಾರ್ ನೀಡಿದೆ. ಗುಲಾಬ್ ಚಂಡಮಾರುತದ ಅಬ್ಬರ ತೆಲಂಗಾಣ, ಮರಾಠವಾಡ, ವಿದರ್ಭದಲ್ಲಿ ಕಡಿಮೆಯಾಗುತ್ತಿದೆ. ನಾಳೆಯಿಂದ ಈ ಸೈಕ್ಲೋನ್ ಅಬ್ಬರ ಸಂಪೂರ್ಣ ಕಡಿಮೆಯಾಗಲಿದ್ದು, ಸೆ. 30ರ ವೇಳೆಗೆ ಇದೇ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಶಾಹೀನ್ ಚಂಡಮಾರುತವಾಗಿ ರೂಪ ತಳೆಯಲಿದೆ.

ಇದನ್ನೂ ಓದಿ: Karnataka Weather Today: ಗುಲಾಬ್ ಚಂಡಮಾರುತದ ಪರಿಣಾಮ; ಕರಾವಳಿಯಲ್ಲಿ ಇಂದು ವಿಪರೀತ ಮಳೆ ಸಾಧ್ಯತೆ

Cyclone Shaheen: ಗುಲಾಬ್ ಚಂಡಮಾರುತದ ಬೆನ್ನಲ್ಲೇ ಶಾಹೀನ್ ಸೈಕ್ಲೋನ್ ಭೀತಿ; ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ

(Karnataka weather Today Karnataka Rain Orange Alert issued by IMD Cyclone Shaheen Weather Forecast)