Cyclone Shaheen: ಗುಲಾಬ್ ಚಂಡಮಾರುತದ ಬೆನ್ನಲ್ಲೇ ಶಾಹೀನ್ ಸೈಕ್ಲೋನ್ ಭೀತಿ; ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ

Cyclone Gulab | ಇನ್ನು ಎರಡು ದಿನಗಳಲ್ಲಿ ಗುಲಾಬ್ ಚಂಡಮಾರುತ ಶಾಹೀನ್ ಚಂಡಮಾರುತವಾಗಿ ಮರುರೂಪ ಪಡೆಯುವ ಸಾಧ್ಯತೆಯಿದೆ. ಶಾಹೀನ್ ಚಂಡಮಾರುತದ ಪರಿಣಾಮದಿಂದ ಕರ್ನಾಟಕದ ಕರಾವಳಿ, ಉತ್ತರ ಒಳನಾಡಿನಲ್ಲೂ ಭಾರೀ ಮಳೆಯಾಗಲಿದೆ.

Cyclone Shaheen: ಗುಲಾಬ್ ಚಂಡಮಾರುತದ ಬೆನ್ನಲ್ಲೇ ಶಾಹೀನ್ ಸೈಕ್ಲೋನ್ ಭೀತಿ; ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ
ಚಂಡಮಾರುತ
Follow us
| Updated By: ಸುಷ್ಮಾ ಚಕ್ರೆ

Updated on:Sep 28, 2021 | 2:11 PM

ನವದೆಹಲಿ: ಭಾರತಕ್ಕೆ ಅಪ್ಪಳಿಸಿರುವ ಗುಲಾಬ್ ಚಂಡಮಾರುತದ (Cyclone Gulab) ಅಟ್ಟಹಾಸ ಕೊಂಚ ಕಡಿಮೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ಗುಲಾಬ್ ಚಂಡಮಾರುತ ಆಂಧ್ರಪ್ರದೇಶ, ಗುಜರಾತ್, ಒರಿಸ್ಸಾದಲ್ಲಿ ಭಾರೀ ಹಾನಿ ಮಾಡಿತ್ತು. ಈ ಚಂಡಮಾರುತದ ಪರಿಣಾಮದಿಂದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗಿತ್ತು. ಇದೀಗ ಈ ಗುಲಾಬ್ ಚಂಡಮಾರುತ ದುರ್ಬಲವಾಗಿದ್ದು, ಮಳೆಯೂ ಕಡಿಮೆಯಾಗುತ್ತಿದೆ. ಆದರೆ, ಇದರ ಬೆನ್ನಲ್ಲೇ ಶಾಹೀನ್ ಚಂಡಮಾರುತ (Cyclone Shaheen) ಅಪ್ಪಳಿಸಲು ಸಿದ್ಧವಾಗಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಗುಲಾಬ್ ಚಂಡಮಾರುತದ ಅಬ್ಬರ ಆಂಧ್ರಪ್ರದೇಶ, ಒರಿಸ್ಸಾ, ತೆಲಂಗಾಣ, ಗುಜರಾತ್​ನಲ್ಲಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಕರ್ನಾಟಕ ಸೇರಿ ದೇಶಾದ್ಯಂತ ಮಳೆ ಕಡಿಮೆಯಾಗಲಿದೆ ಎನ್ನಲಾಗಿತ್ತು. ಆದರೆ, ಈ ಚಂಡಮಾರುತ ಅರಬ್ಬಿ ಸಮುದ್ರದತ್ತ ತೆರಳಿದ್ದು, ಅಲ್ಲಿ ಶಾಹೀನ್ ಚಂಡಮಾರುತದ ರೂಪ ತಳೆದು ಮತ್ತೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ, ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಹಾಗೂ ಗುಜರಾತ್ ಕರಾವಳಿ ಪ್ರದೇಶದ ಸುತ್ತಮುತ್ತಲಿನ ಭಾಗಗಳಲ್ಲಿ ಸೆ. 30ರ ವೇಳೆಗೆ ಶಾಹೀನ್ ಚಂಡಮಾರುತ ಅಬ್ಬರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದಿದೆ.

ಇನ್ನು ಎರಡು ದಿನಗಳಲ್ಲಿ ಗುಲಾಬ್ ಚಂಡಮಾರುತ ಶಾಹೀನ್ ಚಂಡಮಾರುತವಾಗಿ ಮರುರೂಪ ಪಡೆಯುವ ಸಾಧ್ಯತೆಯಿದೆ. ಈ ಶಾಹೀನ್ ಚಂಡಮಾರುತದ ಹೆಸರನ್ನು ಕತಾರ್ ನೀಡಿದೆ. ಗುಲಾಬ್ ಚಂಡಮಾರುತದ ಅಬ್ಬರ ತೆಲಂಗಾಣ, ಮರಾಠವಾಡ, ವಿದರ್ಭದಲ್ಲಿ ಕಡಿಮೆಯಾಗುತ್ತಿದೆ. ನಾಳೆಯಿಂದ ಈ ಸೈಕ್ಲೋನ್ ಅಬ್ಬರ ಸಂಪೂರ್ಣ ಕಡಿಮೆಯಾಗಲಿದ್ದು, ಸೆ. 30ರ ವೇಳೆಗೆ ಇದೇ ಚಂಡಮಾರುತ ಅರಬ್ಬಿಸ ಸಮುದ್ರದಲ್ಲಿ ಶಾಹೀನ್ ಚಂಡಮಾರುತವಾಗಿ ರೂಪ ತಳೆಯಲಿದೆ.

ಶಾಹೀನ್ ಚಂಡಮಾರುತದ ಪರಿಣಾಮದಿಂದ ಗುಜರಾತ್, ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾ ಭಾಗದಲ್ಲಿ ವಿಪರೀತ ಮಳೆಯಾಗಲಿದೆ. ಹಾಗೇ, ಪಶ್ಚಿಮ ಬಂಗಾಳ. ಮರಾಠವಾಡ, ಸೌರಾಷ್ಟ್ರ, ಕಚ್, ಮಧ್ಯಪ್ರದೇಶ, ವಿದರ್ಭ, ಛತ್ತೀಸ್​ಗಢ, ಜಾರ್ಖಂಡ್, ಆಂಧ್ರಪ್ರದೇಶ, ಕರ್ನಾಟಕದ ಕರಾವಳಿ ಪ್ರದೇಶ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ. ಜೊತೆಗೆ ತೆಲಂಗಾಣ, ತಮಿಳುನಾಡು, ಕೇರಳ, ಪುದುಚೆರಿ, ಮಾಹೆಯಲ್ಲಿ ಕೂಡ ಶಾಹೀನ್ ಚಂಡಮಾರುತದ ಪರಿಣಾಮದಿಂದ ಅಲ್ಲಲ್ಲಿ ಮಳೆಯಾಗಲಿದೆ.

ಗುಲಾಬ್ ಚಂಡಮಾರುತದ ಪರಿಣಾಮದಿಂದ ಕಳೆದ ಎರಡು ದಿನಗಳಲ್ಲಿ ಒರಿಸ್ಸಾ,  ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಢ, ಗುಜರಾತ್​ನಲ್ಲಿ ಭಾರೀ ಮಳೆಯಾಗಿದೆ. ಇಂದು ಕೂಡ ಹಲವು ರಾಜ್ಯಗಳಲ್ಲಿ ಮಳೆ ಮುಂದುವರೆಯಲಿದೆ. ಗುಲಾಬ್ ಚಂಡಮಾರುತದ ಭೀತಿಯಿಂದ ಸಮುದ್ರಕ್ಕೆ ಇಳಿಯದಂತೆ ಆಂಧ್ರಪ್ರದೇಶ ಮತ್ತು ಒರಿಸ್ಸಾದ ಮೀನುಗಾರರಿಗೆ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಈಗಾಗಲೇ ಗುಲಾಬ್ ಚಂಡಮಾರುತದಿಂದ ಮೂವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Karnataka Weather Today: ಗುಲಾಬ್ ಚಂಡಮಾರುತದ ಪರಿಣಾಮ; ಕರಾವಳಿಯಲ್ಲಿ ಇಂದು ವಿಪರೀತ ಮಳೆ ಸಾಧ್ಯತೆ

Cyclone Gulab ಅಬ್ಬರಿಸಿದ ಗುಲಾಬ್ ಚಂಡಮಾರುತ: ಆಂಧ್ರ ಪ್ರದೇಶದ ಇಬ್ಬರು ಮೀನುಗಾರರು ಸಾವು, ಒಬ್ಬ ನಾಪತ್ತೆ

(After Gulab Cyclone another cyclone Shaheen may form over Arabian sea IMD Karnataka Rain)

Published On - 2:06 pm, Tue, 28 September 21