Karnataka Weather Today: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ; ಬೆಂಗಳೂರು ಸೇರಿ ಕರ್ನಾಟಕದಲ್ಲಿ ಇಂದು ಮತ್ತೆ ಮಳೆ

Weather Forecast: ಕರ್ನಾಟಕದಲ್ಲಿ ಇಂದಿನಿಂದ ಚಳಿ ಕೊಂಚ ಕಡಿಮೆಯಾಗಲಿದ್ದು, ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಮಳೆ ಶುರುವಾಗಿದೆ. ಇಂದು ಕೂಡ ಬೆಂಗಳೂರಿನಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದೆ.

Karnataka Weather Today: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ; ಬೆಂಗಳೂರು ಸೇರಿ ಕರ್ನಾಟಕದಲ್ಲಿ ಇಂದು ಮತ್ತೆ ಮಳೆ
ಚೆನ್ನೈ ಮಳೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 01, 2022 | 6:05 AM

ಬೆಂಗಳೂರು: ಕಳೆದ 10 ದಿನಗಳಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಚಳಿ ಹೆಚ್ಚಾಗಿತ್ತು. ಕೆಲವು ದಿನಗಳಿಂದ ಬೆಂಗಳೂರು, ಕರಾವಳಿ ಸೇರಿದಂತೆ ಕೆಲವೆಡೆ ಚಳಿಯ ತೀವ್ರತೆ ಕೊಂಚ ಕಡಿಮೆಯಾಗಿದ್ದರೂ ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ಚಳಿ ಇನ್ನೂ ಹೆಚ್ಚೇ ಆಗುತ್ತಿದೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಹಗುರ ಮಳೆಯಾಗಿದ್ದು, ಬಸವನಗುಡಿ, ಜಯನಗರ, ಬನಶಂಕರಿ, ರಾಜಾಜಿನಗರ, ಆರ್​ಆರ್​ ನಗರ, ವೈಟ್​ಫೀಲ್ಡ್​, ಕೋರಮಂಗಲದ ಸುತ್ತಮುತ್ತ ಸುರಿದ ಮಳೆಯಿಂದ ಹೊಸ ವರ್ಷದ ಪಾರ್ಟಿ ಮಾಡುವ ಸಂಭ್ರಮದಲ್ಲಿದ್ದವರಿಗೆ ಸಂಚಾರಕ್ಕೆ ತೊಂದರೆಯಾಯಿತು. ಇಂದು ಕೂಡ ಬೆಂಗಳೂರಿನಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದೆ. 

ಶ್ರೀಲಂಕಾದ ಕರಾವಳಿ, ನೈಋತ್ಯದ ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ ಉಂಟಾಗಿರುವುದರಿಂದ ಕರ್ನಾಟಕದ ಪೂರ್ವ ಭಾಗದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇಂದು ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಒಳನಾಡು, ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಯಲ್ಲಿಯೂ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಕೂಡ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಟಿವಿ9ಗೆ ಹವಾಮಾನ ಇಲಾಖೆ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.

ನೆರೆಯ ರಾಜ್ಯವಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಅಸ್ಸಾಂ, ಮೇಘಾಲಯದಲ್ಲಿ ಮಳೆ ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಸುರಿದ ಮಳೆಗೆ (Tamil Nadu Rain) ಈಗಾಗಲೇ ನಾಲ್ವರು ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್​ಪೇಟೆಯಲ್ಲಿ ಇಂದು ಆರೆಂಜ್ ಅಲರ್ಟ್​ (Orange Alert) ಘೋಷಿಸಲಾಗಿದೆ. ಇಂದು ತಮಿಳುನಾಡಿನಲ್ಲಿ ಮಳೆ ಹೆಚ್ಚಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಇಂದು ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಆಂಧ್ರಪ್ರದೇಶದ ದಕ್ಷಿಣ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಇಂದು (ಶನಿವಾರ) ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಮಳೆಯಿಂದ ಹಳದಿ ಅಲರ್ಟ್​ ಘೋಷಿಸಲಾಗಿದೆ. ಇಂದು ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ಕಾರೈಕಾಲ್ ಮತ್ತು ಪುದುಚೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆಯಿದೆ.

ಚೆನ್ನೈನಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಶೀತಗಾಳಿಯ ಜೊತೆಗೆ ಹಗುರ ಮಳೆಯೂ ಸುರಿಯುವ ಸಾಧ್ಯತೆಯಿದೆ. ಪಂಜಾಬ್, ಹರಿಯಾಣ ಮತ್ತು ಚಂಡೀಗಢದ ಕೆಲವು ಭಾಗಗಳಲ್ಲಿ ಇಂದು ಮತ್ತು ನಾಳೆ (ಜನವರಿ 2) ಹಗುರ ಮಳೆಯಾಗುವ ನಿರೀಕ್ಷೆಯಿದೆ. ಜನವರಿ 2ರವರೆಗೆ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ.

ಡಿಸೆಂಬರ್‌ನಲ್ಲಿ ಉತ್ತರ ಮತ್ತು ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಚಳಿಗಾಲ ಇರಲಿದೆ. ರಾಜಸ್ಥಾನದ ಕೆಲವು ಸ್ಥಳಗಳಲ್ಲಿ ಮತ್ತು ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಚಳಿ ಹೆಚ್ಚಾಗಲಿದೆ. ಮಹಾರಾಷ್ಟ್ರದ ಜಿಲ್ಲೆಗಳಾದ್ಯಂತ ಆಲಿಕಲ್ಲು ಮಳೆ, ಗುಡುಗು ಸಹಿತ ಮಿಂಚಿನ ಮಳೆಯಾಗಿದೆ. ಇನ್ನೆರಡು ದಿನ ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಶೀತ ಗಾಳಿ ಉಂಟಾಗಲಿದೆ.

ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಇಂದು ಮಳೆ ಮತ್ತು ಹಿಮಪಾತವಾಗಲಿದೆ. ಇಂದು ಪಶ್ಚಿಮ ಬಂಗಾಳದ ಡಾರ್ಜಲಿಂಗ್, ಕಾಲಿಂಪಾಂಗ್, ಪುರುಲಿಯಾ, ಬಂಕುರಾ, ಪಶ್ಚಿಮ-ಮಿಡ್ನಾಪುರ ಮತ್ತು ಜಾರ್‌ಗ್ರಾಮ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ದೆಹಲಿ, ಪಂಜಾಬ್, ರಾಜಸ್ಥಾನ, ಚಂಡೀಗಢ, ಹರಿಯಾಣ, ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದಲ್ಲಿ ಇಂದಿನಿಂದ ಜನವರಿ 2ರವರೆಗೆ ಶೀತ ಗಾಳಿಯ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಆದರೆ, ರಾಜಸ್ಥಾನದಲ್ಲಿ ಇನ್ನೆರಡು ದಿನ ತೀವ್ರ ಚಳಿ ಉಂಟಾಗಲಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ IMD ಆರೆಂಜ್ ಅಲರ್ಟ್ ಘೋಷಿಸಿದೆ.

ಇದನ್ನೂ ಓದಿ: Karnataka Weather Today: ಇನ್ನೊಂದು ವಾರ ಕರ್ನಾಟಕದಲ್ಲಿ ವಿಪರೀತ ಚಳಿ; ಅಕಾಲಿಕ ಮಳೆಗೆ ತಮಿಳುನಾಡು ತತ್ತರ

Karnataka Weather Today: ಹೊಸ ವರ್ಷದವರೆಗೂ ರಾಜ್ಯಾದ್ಯಂತ ಚಳಿ; ಉತ್ತರ ಭಾರತದಲ್ಲಿ ಮಳೆಯ ಅಬ್ಬರ