Bengaluru Rain: ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬೆಂಗಳೂರು, ಚಾಮರಾಜನಗರ, ರಾಮನಗರ, ಕೋಲಾರ, ಹಾಸನ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ. ಹಾಗೇ, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಬೀದರ್, ಕಲಬುರ್ಗಿ, ರಾಯಚೂರು, ಹಾವೇರಿ, ಬೆಳಗಾವಿ, ಯಾದಗಿರಿ, ವಿಜಯಪುರ, ಧಾರವಾಡದಲ್ಲಿ ಇಂದು ಮಳೆ ಕಡಿಮೆಯಾಗಲಿದೆ.
ಕಳೆದ ಕೆಲವು ದಿನಗಳಿಂದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುತ್ತಿರುವ ಕಾರಣ ತಾಪಮಾನವೂ ಕುಸಿದಿದೆ. ಮಳೆಯಿಂದಾಗಿ ಬೆಂಗಳೂರಿನಲ್ಲಿ ಚಳಿಯ ವಾತಾವರಣವಿದ್ದು, ಮುಂದಿನ ಕೆಲವು ದಿನಗಳಲ್ಲಿ ಮಳೆ ಮತ್ತು ಶೀತ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಟಣೆಯ ಪ್ರಕಾರ, ಬೆಂಗಳೂರಿನಲ್ಲಿ ನಿನ್ನೆಯಿಂದ ಮಳೆ ಮತ್ತು ಮೋಡ ಕವಿದ ವಾತಾವರಣವಿದ್ದು, ಇಂದು ಮಳೆಯಾಗಲಿದೆ. ಬೆಂಗಳೂರು ಮುಂದಿನ 48 ಗಂಟೆಗಳ ಕಾಲ ಕೆಲವು ಪ್ರದೇಶಗಳಲ್ಲಿ ಮೋಡ ಕವಿದ ಆಕಾಶ, ಲಘು ಮಳೆ ಮತ್ತು ಮಂಜಿನ ಅನುಭವವನ್ನು ನಿರೀಕ್ಷಿಸಲಾಗಿದೆ ಎಂದು IMD ಪ್ರಕಟಣೆ ತಿಳಿಸಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಮತ್ತು 18 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ ಎಂದು IMD ತಿಳಿಸಿದೆ.
ಪೂರ್ವ ಮಾರುತಗಳು ಮತ್ತು ಈಶಾನ್ಯ ಮಾರುತಗಳ ಪ್ರಭಾವದಿಂದಾಗಿ ಕರ್ನಾಟಕದ ಉತ್ತರ ಒಳಭಾಗ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಡಿಸೆಂಬರ್ 18ರವರೆಗೆ ಶುಷ್ಕ ವಾತಾವರಣವಿರಲಿದೆ. ಆದರೂ ಕರ್ನಾಟಕದ ಹಲವಾರು ದಕ್ಷಿಣ ಒಳನಾಡಿನ ಜಿಲ್ಲೆಗಳು ಸೇರಿದಂತೆ ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರಿನಲ್ಲಿ ಇಂದಿನಿಂದ ಡಿಸೆಂಬರ್ 18ರವರೆಗೆ ಒಣ ಹವೆ ಮುಂದುವರೆಯಲಿದೆ. ಕೋಲಾರದ ರಾಯಲ್ಪಾಡು ನಿಲ್ದಾಣದಲ್ಲಿ ಮಂಗಳವಾರ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ. ಬೀದರ್ ಮತ್ತು ದಾವಣಗೆರೆಯಲ್ಲಿ 15 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ರಾಜ್ಯದಲ್ಲಿಯೇ ಅತಿ ಕಡಿಮೆ ತಾಪಮಾನ ದಾಖಲಾಗಿದೆ.
ಡಿಸೆಂಬರ್ 16ರಿಂದ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 17ರ ಮಧ್ಯಾಹ್ನದಿಂದ ಡಿಸೆಂಬರ್ 20ರವರೆಗೆ ವಾಯುವ್ಯ ಭಾರತದ ಬಯಲು ಪ್ರದೇಶದಲ್ಲಿ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ. ಇಂದಿನಿಂದ 4 ದಿನಗಳವರೆಗೆ ಕಾಶ್ಮೀರ ಮತ್ತು ಲಡಾಖ್‌ನ ಪ್ರತ್ಯೇಕ ಭಾಗಗಳಲ್ಲಿ ಮತ್ತು ಹಿಮಾಚಲ ಪ್ರದೇಶದ ಮೇಲೆ ಮಳೆಯಾಗುವ ಸಾಧ್ಯತೆಯಿದೆ. ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರ ಮಧ್ಯಪ್ರದೇಶದ ಬಹುತೇಕ ಭಾಗಗಳಲ್ಲಿ ಹಗುರ ಮಳೆಯಾಗಲಿದೆ.
ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಕರ್ನಾಟಕ, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಡಿ. 17ರವರೆಗೆ ದಕ್ಷಿಣ ಭಾರತ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮಿಂಚಿನೊಂದಿಗೆ ಸೇರಿದ ಮಳೆಯಾಗಲಿದೆ. ಈ ಅವಧಿಯಲ್ಲಿ ಉತ್ತರ ಭಾರತದ ಬಯಲು ಪ್ರದೇಶಗಳು ಮತ್ತು ಪಕ್ಕದ ಪ್ರದೇಶಗಳಲ್ಲಿ ಮತ್ತು ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಸೋಮವಾರದಿಂದ ಗರಿಷ್ಠ ತಾಪಮಾನವು ಸರಾಸರಿಗಿಂತ ಕಡಿಮೆ ಇರುತ್ತದೆ.
ಡಿ. 17ರವರೆಗೆ ರಾಜಸ್ಥಾನ, ಗುಜರಾತ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸರಾಸರಿಗಿಂತ ಕಡಿಮೆಯಿರುತ್ತದೆ. ಮುಂದಿನ 3 ದಿನಗಳವರೆಗೆ ಒಡಿಶಾ, ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಬೆಳಗಿನ ಸಮಯದಲ್ಲಿ ಮಂಜು ಇರಲಿದೆ. ಮುಂದಿನ 3 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 3 ದಿನ ತಮಿಳುನಾಡು-ಪುದುಚೇರಿ, ಕಾರೈಕಲ್, ಕೇರಳ- ಮಾಹೆ, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ 3 ದಿನ ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್ನಲ್ಲಿ ಮಳೆಯಾಗಲಿದೆ. ಡಿಸೆಂಬರ್ 16 ಮತ್ತು 17ರಂದು ಹಿಮಾಚಲ ಪ್ರದೇಶದ ಮೇಲೆ ಮಳೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: Karnataka Rain: ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 4 ದಿನ ಮಳೆ; ನೆರೆಯ ರಾಜ್ಯಗಳಲ್ಲೂ ವರುಣನ ಆರ್ಭಟ
Karnataka Dams Water Level: ರಾಜ್ಯಾದ್ಯಂತ ಮುಂದುವರೆದ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ