ಬೆಂಗಳೂರು, (ಮೇ 19): ರಾಜ್ಯದ(Karnataka) ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ (Rain). ಅದರಲ್ಲೂ ಬೆಂಗಳೂರು(Bengaluru) ನಗರದಲ್ಲಿ ಸಹ ಕಳೆದ ಕೆಲದಿನಗಳಿಂದ ಮಳೆಯಾಗುತ್ತಿದೆ. ಇಂದು(ಮೇ 19) ಬೆಳಗ್ಗೆ ಹಾಗೂ ಮಧ್ಯಾಹ್ನ ಸಹ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಿದೆ. ಇವತ್ತು ವೀಕೆಂಡ್ ಎಂದು ಸುತ್ತಾಡುತ್ತಿದ್ದವರಿಗೆ ಬೆಳಗ್ಗೆಯಿಂದಲೇ ವರ್ಷಧಾರೆಯ ಸಿಂಚನವಾಗಿದೆ. ನಗರದಲ್ಲಿ ತುಂತೂರು ಮಳೆ ಬುರುವುದು ನಿಲ್ಲುವುದು ಮಾಡುತ್ತಿದೆ. ಹೀಗಾಗಿ ಸದ್ಯ ಸಿಲಿಕಾನ್ ಸಿಟಿಯಲ್ಲಿ ಮೋಡಕವಿದ ವಾತಾವರಣ ಇದ್ದು, ಫುಲ್ ಕೂಲ್ ಕೂಲ್ ಆಗಿದೆ. ಇನ್ನು ಮುಂದಿನ 4 ದಿನಗಳ ಕಾಲ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಬೆಂಗಳೂರು ನಗರದ ಶಾಂತಿನಗರ, ಜಯನಗರ, ವಿಜಯನಗರ,ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಬನಶಂಕರಿ,ಕೆಂಗೇರಿ, ಆರ್.ಆರ್.ನಗರ ಸದಾಶಿವನಗರ, ರಾಜಾಜಿನಗರ , ಮೈಸೂರು ಬ್ಯಾಂಕ್ ಸರ್ಕಲ್, ಜೆ.ಪಿ ನಗರ, ಹೊರಮಾವು, ಮಲ್ಲೇಶ್ವರಂ, ಯಶವಂತಪುರ ಸೇರಿ ಹಲವೆಡೆ ಬೆಳಗ್ಗೆಯೇ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನವೂ ಸಹ ಕೊಂಚ ಮಳೆಯಾಗಿದೆ. ಅಲ್ಲದೇ ಸಂಜೆಯೂ ಸಹ ಧಾರಾಕಾರ ಮಳೆಯಾಗುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮುನ್ನ ಮಳೆ ಚುರುಕುಗೊಂಡಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಇಂದಿನಿಂದ(ಮೇ 19 ರಿಂದ ಮೇ 22) ದಕ್ಷಿಣ ಒಳನಾಡಲ್ಲಿ 5 ದಿನ 17 ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೇಲ್ಮೈ ಸುಳಿಗಾಳಿ, ಟ್ರಫ್ ಹಾಗೂ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ಐದು ದಿನ ರಾಜ್ಯದ 17 ಜಿಲ್ಲೆಗಳಿಗೆ ಅಲರ್ಟ್ ಘೋಷಣೆ ಮಾಡಲಾಗಿದೆ. ಇದೊಂದಿಗೆ ಮುಂಗಾರುಕ್ಕೂ ಮುನ್ನವೇ ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಹಾಸನ, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ. ಇನ್ನು ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ರಾಜ್ಯ ರಾಜಾಧಾನಿಯಲ್ಲಿ ಬೆಂಗಳೂರಿನಲ್ಲಿ 48 ಗಂಟೆ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಇದೆ ಎನ್ನಲಾಗಿದೆ. ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ 29 ಡಿಗ್ರಿ ಯಿಂದ 22 ಡಿಗ್ರಿ ಇರುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ