ಕೆಐಎಡಿಬಿ ಭೂ ಹಗರಣ: ಮಲ್ಲಿಕಾರ್ಜುನ ಖರ್ಗೆ ಮತ್ತು ಅಳಿಯನ ವಿರುದ್ಧ ಖಾಸಗಿ ದೂರು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿಯಿಂದ ನಿವೇಶನವನ್ನು ಅಕ್ರವಾಗಿ ಮಂಜೂರು ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ಭೂಮಿ ಮತ್ತು ಬಿಡಿಎ ನಿವೇಶನ ಅಕ್ರಮವಾಗಿ ಪಡೆದ ಆರೋಪ ಕೇಳಿಬಂದಿದೆ.

ಕೆಐಎಡಿಬಿ ಭೂ ಹಗರಣ: ಮಲ್ಲಿಕಾರ್ಜುನ ಖರ್ಗೆ ಮತ್ತು ಅಳಿಯನ ವಿರುದ್ಧ ಖಾಸಗಿ ದೂರು
ಮಲ್ಲಿಕಾರ್ಜುನ ಖರ್ಗೆ
Updated By: ವಿವೇಕ ಬಿರಾದಾರ

Updated on: Aug 01, 2025 | 3:22 PM

ಬೆಂಗಳೂರು, ಆಗಸ್ಟ್​ 01: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಭೂ ಹಗರಣಕ್ಕೆ  ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharage) ಇವರ ಅಳಿಯನ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಕೆಯಾಗಿದೆ. ದೇವನಹಳ್ಳಿಯಲ್ಲಿರುವ ” ಏರೋಸ್ಪೇಸ್ ಪಾರ್ಕ್‌ನಲ್ಲಿನ ಐದು ಎಕರೆ ಭೂಮಿಯನ್ನು ಕೆಐಎಡಿಬಿಯಿಂದ ಸಿಎ ಸೈಟ್​ ಹೆಸರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಇವರ ಅಳಿಯ ಸಿದ್ದಾರ್ಥ ವಿಹಾರ ಟ್ರಸ್ಟ್​ಗೆ ಮಂಜೂರು ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಏರೋಸ್ಪೇಸ್, ರಿಸರ್ಚ್ ಇತ್ಯಾದಿಗಳಲ್ಲಿ ಅನುಭವವಿಲ್ಲದಿದ್ದರೂ ಭರ್ತಿ ಮಾಡದ ಅರ್ಜಿ ಸಲ್ಲಿಸಿ ಭೂಮಿ‌‌ ಮಂಜೂರು ಪಡೆದಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ಇವರ ಅಳಿಯನ ವಿರುದ್ಧ ವಿಜಯ ರಾಘವನ್ ಎಂಬುವರು ಖಾಸಗಿ ದೂರು ನೀಡಿದ್ದಾರೆ.

ಅಲ್ಲದೆ, 2014ರಲ್ಲಿ ಬಿಟಿಎಂ 4ನೇ ಸ್ಟೇಜ್​ನ ಎರಡನೇ ಬ್ಲಾಕ್​ನಲ್ಲಿ 2 ಎಕರೆ ಬಿಡಿಎ ವ್ಯಾಪ್ತಿಯ ಸಿಎ ನಿವೇಶನವನ್ನು ಪರಭಾರೆ ಮಾಡಿಕೊಳ್ಳಲಾಗಿದೆ. ಜೊತೆಗೆ ದಲಿತರೆಂದು ಶೇಕಡಾ 50ರಷ್ಟು ಸಬ್ಸಿಡಿ ಪಡೆದಿದ್ದಾರೆ ಎಂದು ಮತ್ತೊಂದು ದೂರು ದಾಖಲಿಸಿದ್ದಾರೆ.

ರಾಜ್ಯಪಾಲರ ಅಂಗಳ ತಲುಪಿದ್ದ ಪ್ರಕರಣ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂಮಿ ಹಂಚಿಕೆ ಪ್ರಕರಣ ರಾಜ್ಯಪಾಲರ ಅಂಗಳ ತಲುಪಿತ್ತು. ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್​ ಅವರು ಕಾನೂನು ತಜ್ಞರಿಂದ ಮಾಹಿತಿ ಪಡೆದಿದ್ದರು.

ತಜ್ಞರ ಅಭಿಪ್ರಾಯವೇನು?

ರಾಜ್ಯಪಾಲರಿಗೆ ಸಲ್ಲಿಕೆ ಮಾಡಿರುವ ಅಭಿಪ್ರಾಯದಲ್ಲಿ ತಜ್ಞರು, ತರಾತುರಿಯಲ್ಲಿ ಭೂಮಿ ಹಂಚಿಕೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅರ್ಜಿ ಸಲ್ಲಿಕೆಯಾದ ಎರಡೇ ದಿನಗಳಲ್ಲಿ ಭೂ ಹಂಚಿಕೆ ಪ್ರಕ್ರಿಯೆ ಮಾಡಿರುವುದರಿಂದ ಪ್ರಶ್ನೆ ಮೂಡಿದೆ ಎಂದಿದ್ದರು.

ಇದನ್ನೂ ಓದಿ: ತಮ್ಮ ಕುಟುಂಬದ ವಿರುದ್ಧ ಸಿಎ ಸೈಟ್ ಹಂಚಿಕೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಪ್ರಿಯಾಂಕ್ ಖರ್ಗೆ

ನಿವೇಶನ ವಾಪಸ್​ ನೀಡಿದ್ದ ಟ್ರಸ್ಟ್​

ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್​ ಕೆಐಎಡಿಬಿಯಿಂದ ಅಕ್ರಮವಾಗಿ ನಿವೇಶನ ಪಡೆದಿದೆ ಎಂದು ವಿಪಕ್ಷಗಳು ಆರೋಪ ಮಾಡಿದ್ದವು. ಈ ಬೆನ್ನಲ್ಲೇ ರಾಹುಲ್​ ಖರ್ಗೆ ಅವರು ಕೆಐಎಡಿಬಿಗೆ ಪತ್ರ ಬರೆದು ಕೌಶಲ ಅಭಿವೃದ್ಧಿ ತರಬೇತಿಗಾಗಿ ನಿವೇಶನ ಪಡೆಯಲಾಗಿತ್ತು. ಆದರೆ, ಅನಗತ್ಯ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಣೆಯಿಂದ ನಿವೇಶನವನ್ನು ವಾಪಸ್​ ನೀಡಲಾಗುತ್ತಿದೆ ಎಂದಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Fri, 1 August 25