AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಐಎಡಿಬಿ ಭೂಮಿ ಹಂಚಿಕೆ ಪ್ರಕರಣ: ಖರ್ಗೆ ಕುಟುಂಬಕ್ಕೂ ಬಿಸಿಮುಟ್ಟಿಸಲು ಮುಂದಾದ ರಾಜ್ಯಪಾಲರು

ಒಂದೆಡೆ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟು ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ರಾಜ್ಯಪಾಲ ಥಾವರ್​​ ಚಂದ್ ಗೆಹ್ಲೋಟ್ ಇದೀಗ ಇನ್ನಿಬ್ಬರು ಸಚಿವ ವಿರುದ್ಧವೂ ತನಿಖೆಗೆ ಅನುಮತಿ ಕೊಟ್ಟು ಸರ್ಕಾರವನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಲಿದ್ದಾರೆಯೇ ಎಂಬ ಅನುಮಾನ ಈಗ ಮೂಡಿದೆ. ಇದಕ್ಕೆ ಕಾರಣ, ನಡೆದಿರುವ ಬೆಳವಣಿಗೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೆಐಎಡಿಬಿ ಭೂಮಿ ಹಂಚಿಕೆ ಪ್ರಕರಣ: ಖರ್ಗೆ ಕುಟುಂಬಕ್ಕೂ ಬಿಸಿಮುಟ್ಟಿಸಲು ಮುಂದಾದ ರಾಜ್ಯಪಾಲರು
ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಥಾವರ್ ಚಂದ್ ಗೆಹ್ಲೋಟ್
ಪ್ರಸನ್ನ ಗಾಂವ್ಕರ್​
| Edited By: |

Updated on: Sep 24, 2024 | 10:38 AM

Share

ಬೆಂಗಳೂರು, ಸೆಪ್ಟೆಂಬರ್ 24: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಕಾನೂನು ತಜ್ಞರಿಂದ ಮಾಹಿತಿ ಪಡೆದಿದ್ದಾರೆ. ಇದರೊಂದಿಗೆ, ಮುಡಾದಲ್ಲಿ ಸಿಎಂ ಸಿದ್ದರಾಮಯ್ಯಗೆ ಕಂಟಕ ಎದುರಾದಂತೆ ಎಐಸಿಸಿ ಅಧ್ಯಕ್ಷರಿಗೂ ಸಮಸ್ಯೆ ಎದುರಾಗಲಿದೆಯಾ ಎಂಬ ಅನುಮಾನ ಮೂಡಿದೆ.

ಖರ್ಗೆ ವಿರುದ್ಧದ ದೂರಿನ ಬಗ್ಗೆ ಈಗಾಗಲೇ ಕಾನೂನು ತಜ್ಞರ ಮಾಹಿತಿ ಪಡೆದಿದ್ದ ರಾಜ್ಯಪಾಲರು, ದೂರಿನಲ್ಲಿ ದಾಖಲಾದ ಅಂಶಗಳ ಕೂಲಂಕುಶ ಮಾಹಿತಿಯೊಂದಿಗೆ ಅಭಿಪ್ರಾಯ ನೀಡುವಂತೆ ಸೂಚನೆ ನೀಡಿದ್ದರು. ಇದೀಗ ಕಾನೂನು ತಜ್ಞರು ರಾಜ್ಯಪಾಲರಿಗೆ ಅಭಿಪ್ರಾಯ ಸಲ್ಲಿಕೆ ಮಾಡಿದ್ದಾರೆ.

ಕೆಐಎಡಿಬಿ ಭೂಮಿ ಹಂಚಿಕೆ ಸಂಬಂಧ ತಜ್ಞರ ಅಭಿಪ್ರಾಯವೇನು?

ರಾಜ್ಯಪಾಲರಿಗೆ ಸಲ್ಲಿಕೆ ಮಾಡಿರುವ ಅಭಿಪ್ರಾಯದಲ್ಲಿ ತಜ್ಞರು, ತರಾತುರಿಯಲ್ಲಿ ಭೂಮಿ ಹಂಚಿಕೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅರ್ಜಿ ಸಲ್ಲಿಕೆಯಾದ ಎರಡೇ ದಿನಗಳಲ್ಲಿ ಭೂ ಹಂಚಿಕೆ ಪ್ರಕ್ರಿಯೆ ಮಾಡಿರುವುದರಿಂದ ಪ್ರಶ್ನೆ ಮೂಡಿದೆ ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್​ಗೆ ಎದುರಾಗಲಿದೆಯೇ ಕಂಟಕ?

ಇದೀಗ ರಾಜ್ಯಪಾಲರು ತಜ್ಞರ ಅಭಿಪ್ರಾಯ ಪರಿಶೀಲಿಸಿ ಪ್ರಕರಣದ ಸಂಬಂಧ ಹೆಚ್ಚಿನ ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಎಂಬಿ ಪಾಟೀಲ್ ವಿರುದ್ಧ ತನಿಖೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ನಿಯಮ ಲೋಪ ಆಧರಿಸಿ ರಾಜ್ಯಪಾಲರಿಂದ ತನಿಖೆಗೆ ಆದೇಶ ಸಾಧ್ಯತೆ ಇದೆ.

ಇದನ್ನೂ ಓದಿ: ತಮ್ಮ ಕುಟುಂಬದ ವಿರುದ್ಧ ಸಿಎ ಸೈಟ್ ಹಂಚಿಕೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಪ್ರಿಯಾಂಕ್ ಖರ್ಗೆ

ಒಂದು ವೇಳೆ ಪ್ರಿಯಾಂಕ್ ಖರ್ಗೆ ಹಾಗೂ ಎಂಬಿ ಪಾಟೀಲ್ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶಿಸಿದಲ್ಲಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಣ ಸಂಘರ್ಷ ತಾರಕ್ಕೇರಲಿದೆ. ಈಗಾಗಲೇ ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಸರ್ಕಾರ ಸಿಡಿದೆದ್ದಿದೆ. ವಿವಿಗಳಿಗೆ ಕುಲಪತಿ ನೇಮಕ ವಿಚಾರದಲ್ಲಿ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ನಿಟ್ಟಿನಲ್ಲಿ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದೀಗ ಮತ್ತೊಂದು ಸುತ್ತಿನ ಕದನಕ್ಕೆ ಅಖಾಡ ಸಿದ್ಧವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಪ್ರಸನ್ನ ಗಾಂವ್ಕರ್​
ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More