ರಾಷ್ಟ್ರ ರಾಜಧಾನಿ ದೆಹಲಿಗೂ ಲಗ್ಗೆಯಿಟ್ಟ ಕರ್ನಾಟಕದ ನಂದಿನಿ ಬ್ರಾಂಡ್!

| Updated By: ರಮೇಶ್ ಬಿ. ಜವಳಗೇರಾ

Updated on: Sep 02, 2024 | 10:43 PM

ಇತ್ತ ನಾಡಿನಾದ್ಯಂತ ಮನೆ ಮನೆಗಳಲ್ಲಿ ಚಿರಪರಿಚಿತವಾಗಿರುವ ನಂದಿನಿ ಹಾಲು ಮೊಸರು, ಹಾಗೂ ಇನ್ನಿತರೆ ಉತ್ಪನ್ನಗಳು ಇದೀಗ ಉತ್ತರ ಭಾರತದಲ್ಲೂ ತನ್ನ ಮಾರಾಟದ ಜಾಲವನ್ನ ವಿಸ್ತರಿಸಲು ಮುಂದಾಗಿದೆ. ಹೌದು.. ಈಗಾಗಲೇ ಎಲ್ಲೆಡೆ ತನ್ನ ಸೇವೆ ನೀಡುತ್ತಿರುವ ಕರುನಾಡಿನ ಹೆಮ್ಮೆಯ ಬ್ರ್ಯಾಂಡ್ ನಂದಿನಿ, ಇದೀಗ ರಾಷ್ಟ್ರಮಟ್ಟದಲ್ಲೂ ಮಿಂಚಲು ಸಜ್ಜಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಗೂ ಲಗ್ಗೆಯಿಟ್ಟ ಕರ್ನಾಟಕದ ನಂದಿನಿ ಬ್ರಾಂಡ್!
ನಂದಿನಿ ಹಾಲು
Follow us on

ಬೆಂಗಳೂರು, (ಸೆಪ್ಟೆಂಬರ್ 02): ಈಗಾಗಲೇ ಕರ್ನಾಟಕದ ನಂದಿನಿ ಹಾಲು ದೇಶದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಉತ್ತಮ ಸ್ಥಾನವನ್ನು ಹೊಂದಿದ್ದು, ನಮ್ಮ ರಾಜ್ಯ ಮಾತ್ರವಲ್ಲದೇ ನೆರೆ ಹೊರೆ ರಾಜ್ಯಗಳು, ದೇಶ ವಿದೇಶಗಳಲ್ಲಿಯೂ ಮಾರಾಟ ಆಗುತ್ತಿವೆ, ನಂದಿನಿ ಬ್ರ್ಯಾಂಡ್‌ನ ಟೆಟ್ರಾ ಪ್ಯಾಕ್ ಹಾಲನ್ನು ನಮ್ಮ ದೇಶದ ಸೈನಿಕರಿಗೂ ಸರಬರಾಜು ಮಾಡಲಾಗುತ್ತಿದೆ. ಇದರ ಮಧ್ಯ ಇದೀಗ ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳ (ಕೆಎಂಎಫ್) ಉತ್ಪಾದಿಸುವ ನಂದಿನಿ ಹಾಲನ್ನು ದೆಹಲಿಗೂ ಸರಬರಾಜು ಮಾಡುವಂತೆ ಬೇಡಿಕೆ ಬಂದಿದೆ. ಹೌದು.. ನಂದಿನಿ ಹಾಲನ್ನು ರಾಷ್ಟ್ರ ರಾಜಧಾನಿ ದೆಹಲಿಗೂ ಕಳುಹಿಸುವಂತೆ ದೆಹಲಿ ಸರ್ಕಾರ ಮನವಿ ಮಾಡಿದೆ. ಪ್ರತಿನಿತ್ಯ ದೆಹಲಿಗೆ 1 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡುವಂತೆ ದೆಹಲಿ ಸರ್ಕಾರದಿಂದ ಮನವಿ ಮಾಡಲಾಗಿದೆ.

ದೇಶದ ಮೆಟ್ರೋ ಪಾಲಿಟಿನ್ ಸಿಟಿಯಾಗಿರುವ ದೆಹಲಿ ಕೇಂದ್ರಾಡಳಿತ ಪ್ರದೇಶ ಆಗಿದ್ದರೂ ಪ್ರತ್ಯೇಕ ಸರ್ಕಾರದ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಇನ್ನು ದೆಹಲಿಗೆ ಹತ್ತಿರದಲ್ಲಿರುವ ಗುಜರಾತ್ ರಾಜ್ಯದ ಅಮುಲ್ ಹಾಲು, ಮದರ್ ಡೈರಿಯ ಹಾಲನ್ನು ದೆಹಲಿಗೆ ಸರಬರಾಜು ಮಾಡಲಾಗುತ್ತಿದೆ. ಈಗ ದೆಹಲಿ ಸರ್ಕಾರದಿಂದಲೂ ಕೆಎಂಎಪ್‌ನ ನಂದಿನಿ ಹಾಲಿಗೆ ಡಿಮ್ಯಾಂಡ್ ಬಂದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮುಲ್ ಹಾಗೂ ಮದರ್ ಡೈರಿ ಹಾಲನ್ನು ಹಿಂದಿಕ್ಕಿ ತನ್ನದೇ ದಾಖಲೆ ಬರೆಯಲು ಕರ್ನಾಟಕದ ನಂದಿನಿ ಹಾಲು ಸಿದ್ಧಗೊಂಡಿದೆ. ಮುಂದಿನ ತಿಂಗಳು ಅಕ್ಟೋಬರ್‌ನಿಂದ ದೆಹಲಿಯಲ್ಲಿ ಹಾಲು ಹಾಗೂ ಮೊಸರು ಮಾರಾಟಕ್ಕೆ ಸಜ್ಜಾಗಿರುವ ಕೆಎಂಎಫ್, ಈ ಮೂಲಕ ನಂದಿನಿ ಬ್ರ್ಯಾಂಡ್ ಅನ್ನ ರಾಷ್ಟ್ರಮಟ್ಟದಲ್ಲೂ ಮಿಂಚಲಿದೆ.

ತಿರುಪತಿ ಲಡ್ಡಿನಲ್ಲಿ ಮತ್ತೆ ನಂದಿನಿ ತುಪ್ಪದ ಘಮ

ತಿರುಮಲ ತಿಮ್ಮಪ್ಪನ ಭಕ್ತರು ಅತ್ಯಂತ ಪ್ರೀತಿಯಿಂದ ಸ್ವೀಕರಿಸುವ ಲಡ್ಡೂ ಪ್ರಸಾದಕ್ಕೆ ಹಿಂದಿನ ವೈಭವ ಮರಳಿ ತರಲು ಟಿಟಿಡಿ ಮತ್ತೆ ಸಜ್ಡಾಗಿದೆ. ಕೆಎಂಎಫ್ ಜೊತೆ ಸಭೆ ನಡೆಸಿದ ಟಿಟಿಡಿ, 2024-25ರ ಸಾಲಿನಲ್ಲಿ ಪ್ರತಿ ಕೆಜಿಗೆ .470ರೂ.ನಂತೆ ಟಿಟಿಡಿಗೆ 350 ಟನ್ ತುಪ್ಪ ಪೂರೈಕೆಗೆ ಟೆಂಡರ್ ಅಂತಿಮಗೊಳಿಸಲಾಗಿದೆ. ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕಾಗಿ ನಿತ್ಯ 10 ಸಾವಿರ ಕೆ.ಜಿ.ತುಪ್ಪ ಬಳಸ್ತಿರೋ ಟಿಟಿಡಿ, ಇದೀಗ ಮತ್ತೆ ಕರುನಾಡಿನ ಹೆಮ್ಮೆಯ ಬ್ರ್ಯಾಂಡ್ ನಂದಿನಿ ತುಪ್ಪದ ಪರಿಮಳಕ್ಕೆ ಮನಸೋತು ತುಪ್ಪ ಖರೀದಿಗೆ ಸಜ್ಜಾಗಿದೆ.

ಸದ್ಯ 2013-14ನೇ ಸಾಲಿನಿಂದ 2021-22ರ ವರೆಗೂ 5000 ಮೆಟ್ರಿಕ್ ಟನ್ ತುಪ್ಪವನ್ನ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಲಾಗಿದ್ದು, ಇದೀಗ 2024-25 ನೇ ಸಾಲಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರಾರಂಭದಲ್ಲಿ 350 ಮೆಟ್ರಿಕ್ಟನ್ ನಂದಿನಿ ತುಪ್ಪ ಸರಬರಾಜು ಮಾಡಲು ಟೆಂಡರ್ ಮೂಲಕ ಬೇಡಿಕೆ ಬಂದಿದೆ. ಸದ್ಯ ಅದಕ್ಕನುಗುಣವಾಗಿ ಹಸುವಿನ ತುಪ್ಪವನ್ನ ತಿರುಮಲ ತಿರುಪತಿ ದೇವಸ್ಥಾನಕ್ಕೆ ಟ್ಯಾಂಕ‌ರ್ ಮೂಲಕ ಕಳಿಸಲಾಗಿದ್ದು, ತುಪ್ಪ ಹೊತ್ತು ಹೊರಟ ಟ್ಯಾಂಕರ್ ಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ

ಒಟ್ಟಿನಲ್ಲಿ ರೈತರಿಂದ ಗ್ರಾಹಕರಿಗೆ ಅನ್ನೋ ಟ್ಯಾಗ್ ಲೈನ್ ಮೂಲಕ ಕರುನಾಡಿನ ಮನೆ-ಮನಗಳಿಗೆ ಶಕ್ತಿ ತುಂಬುತ್ತಿರೋ ನಂದಿನಿ, ಇದೀಗ ಹೊರರಾಜ್ಯ, ರಾಷ್ಟ್ರ ರಾಜಧಾನಿಯಲ್ಲೂ ಬ್ರ್ಯಾಂಡ್ ಸೃಷ್ಟಿಸಲು ಸಜ್ಜಾಗಿದೆ..