ನಿರ್ಬಂಧದ ನಡುವೆಯೂ ಕೊಡಗಿನಲ್ಲಿ ಗುಡ್ಡ ಅಗೆಯುವ ಕಾರ್ಯ; ಸ್ಥಳೀಯರಿಂದ ಉದ್ಯಮಿಗಳ ವಿರುದ್ಧ ಆಕ್ರೋಶ
ಗುಡ್ಡ ಅಗೆದು, ಬಂಡೆ ಒಡೆದು, ಮರಗಳನ್ನ ಕಡಿದು ಇಲ್ಲಿ ಅವಾಂತರ ಮಾಡುತ್ತಾರೆ. ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಅಂತಹದ್ದೇ ಒಂದು ಅವಾಂತರ ಕಂಡು ಬಂದಿದೆ.

ಕೊಡಗು: ಜಿಲ್ಲೆಯಲ್ಲಿ ಭೂ ಕುಸಿತಕ್ಕೆ ಪ್ರಕೃತಿಯ ಮೇಲಿನ ದಬ್ಬಾಳಿಕೆಯೇ ಕಾರಣ ಎಂದು ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಮಾತ್ರವಲ್ಲ ಪ್ರಕೃತಿಗೆ ಧಕ್ಕೆಯಾಗುವಂತಹ ಕಾಮಗಾರಿಗಳನ್ನು ಮಾಡಬೇಡಿ ಎಂದು ಎಚ್ಚರಿಕೆ ನೀಡಿದೆ. ಆದರೆ ಈ ಬಗ್ಗೆ ತಲೆ ಕೆಡಸಿಕೊಳ್ಳದ ಕೆಲ ಉದ್ಯಮಿಗಳು ಈಗಲೂ ಕೂಡ ಪಕೃತಿಯನ್ನು ಹಾಳು ಮಾಡುವ ದುಷ್ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊಡಗು ಎಂದರೆ ಹೂಡಿಕೆ ಮಾಡುವವರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಹಾಗಾಗಿಯೇ ಹೊರ ರಾಜ್ಯದ ಉದ್ಯಮಿಗಳು ಈ ಊರಿನಲ್ಲಿ ಕೋಟಿ ಕೊಟ್ಟು ಭೂಮಿ ಖರೀದಿ ಮಾಡಿ ಉದ್ಯಮ ಆರಂಭಿಸುತ್ತಾರೆ. ಆದರೆ ವಿಪರ್ಯಾಸ ಅಂದರೆ ಉದ್ಯಮ ಆರಂಭಿಸುವವರು ಇಲ್ಲಿನ ಪ್ರಕೃತಿಗೆ ಬೆಲೆಯೇ ಕೊಡುವುದೇ ಇಲ್ಲ. ಗುಡ್ಡ ಅಗೆದು, ಬಂಡೆ ಒಡೆದು, ಮರಗಳನ್ನ ಕಡಿದು ಇಲ್ಲಿ ಅವಾಂತರ ಮಾಡುತ್ತಾರೆ. ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಅಂತಹದ್ದೇ ಒಂದು ಅವಾಂತರ ಕಂಡು ಬಂದಿದೆ.
ಸ್ಥಳೀಯ ಮೂಲದ ಉದ್ಯಮಿಯೊಬ್ಬರು ಹೊರ ಊರಿನ ಬಿಲ್ಡರ್ ಒಬ್ಬರ ಜೊತೆ ಸೇರಿ ಇಲ್ಲಿ ಏಳು ಎಕರೆ ಬೆಟ್ಟ ಪ್ರದೇಶವನ್ನ ಅಗೆದು ಗಾಲ್ಫ್ ವಿಲ್ಲಾ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಜೆಸಿಬಿ, ಬಂಡೆ ಕೊರೆಯುವ ಯಂತ್ರಗಳನ್ನ ಬಳಸಿದ್ದಾರೆ. ಬೆಟ್ಟವನ್ನ ಹಂತ ಹಂತವಾಗಿ ಕೊರೆದು ಮನೆ ಕಟ್ಟಲು ನೆಲ ಸಮಗೊಳಿಸಿದ್ದಾರೆ. ಬೃಹತ್ ಬಂಡೆಗಳನ್ನ ಕೊರೆದು ಪುಡಿ ಮಾಡಿದ್ದಾರೆ ಇದರಿಂದಾಗಿ ಪ್ರಕೃತಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ರಘು ಮಾಚಯ್ಯ ಹೇಳಿದ್ದಾರೆ.

ಗುಡ್ಡ ಅಗೆದಿರುವ ದೃಶ್ಯ
ಈ ಉದ್ಯಮಿ ಇಷ್ಟೇಲ್ಲಾ ಕೆಲಸಗಳನ್ನ ಕೈಗೊಂಡಿದ್ದರೂ, ಸ್ಥಳೀಯ ಪಂಚಾಯಿತಿ ಅಥವಾ ಜಿಲ್ಲಾಡಳಿತದಿಂದ ಕಡ್ಡಾಯವಾಗಿ ಪಡೆಯಬೇಕಾಗಿದ್ದ ಅನುಮತಿ ಪತ್ರಗಳನ್ನ ಪಡೆದೇ ಇಲ್ಲ. ಇದೀಗ ಎಚ್ಚೆತ್ತುಕೊಂಡಿರುವ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಾ ಈ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಈ ಬಗ್ಗೆ ವಿಚಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇಡೀ ಬೆಟ್ಟವನ್ನ ಅಗೆದಿರುವುದರಿಂದ ಈ ಮಳೆಗಾಲದಲ್ಲಿ ಬಿಟ್ಟಂಗಾಲ ಗ್ರಾಮಸ್ಥರಿಗೆ ಭೂಕುಸಿತದ ಭೀತಿ ಆವರಿಸಿದೆ. ಅಪಾರ ಪ್ರಮಾಣದ ಬಂಡೆಗಳು ಎಲ್ಲಿ ನಮ್ಮ ಮನೆಗಳ ಮೇಲೆ ಉರುಳುತ್ತವೋ ಎಂಬ ಆತಂಕ ಕಾಡಿದೆ. ಹಾಗಾಗಿ ಜಿಲ್ಲಾಡಳಿತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
ಪ್ರವಾಹ ಸ್ಥಿತಿಯಿಂದ ಚಿಂತಾಕ್ರಾಂತರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ
ಕೊಡಗು ಸಂಸ್ಕೃತಿಯ ಅನಾವರಣ; ವಿಶಿಷ್ಟ ಸ್ಪರ್ಧೆಯ ಮೂಲಕ ಯುವ ಪಿಳಿಗೆಗೆ ಸಂಪ್ರದಾಯವನ್ನು ತಿಳಿಸುವ ಪ್ರಯತ್ನ



