ಜಿಲ್ಲಾಡಳಿತ-ಇನ್ಪೋಸಿಸ್​ ಮಧ್ಯೆ ಇಲ್ಲ ಹೊಂದಾಣಿಕೆ: ಕೊಡಗು ಜಿಲ್ಲೆಗೆ ಮಳೆ ಬರುವ ಮುನ್ನ ಹಿಂದಿನ ನಿರಾಶ್ರಿತರಿಗೆ 250 ಮನೆ ವಿತರಿಸುತ್ತದಾ?

ಮೇಲ್ನೋಟಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ಇನ್ಪೋಸಿಸ್​ ಮಧ್ಯೆ ಹೊಂದಾಣಿಕೆ ಇದ್ದಂತಿಲ್ಲ ಅಂತ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಆರಂಭ ವಾಗುವುದರ ಒಳಗಾಗಿಯಾದ್ರೂ ಮನೆ ಕೊಡಿ ಅಂತ ಕೇಳುತ್ತಿದ್ದಾರೆ.

ಜಿಲ್ಲಾಡಳಿತ-ಇನ್ಪೋಸಿಸ್​ ಮಧ್ಯೆ ಇಲ್ಲ ಹೊಂದಾಣಿಕೆ: ಕೊಡಗು ಜಿಲ್ಲೆಗೆ ಮಳೆ ಬರುವ ಮುನ್ನ ಹಿಂದಿನ ನಿರಾಶ್ರಿತರಿಗೆ 250 ಮನೆ ವಿತರಿಸುತ್ತದಾ?
ಕೊಡಗು ಜಿಲ್ಲೆಗೆ ಮಳೆ ಬರುವ ಮುನ್ನ ಹಿಂದಿನ ನಿರಾಶ್ರಿತರಿಗೆ 250 ಮನೆ ವಿತರಿಸುತ್ತದಾ?
ಸಾಧು ಶ್ರೀನಾಥ್​

Updated on: May 22, 2023 | 12:20 PM

ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಭೂ ಕುಸಿತ ಮತ್ತು ಪ್ರವಾಹ ಸಂಭವಿಸಿ ಸಾವಿರಾರು ಮಂದಿ ನಿರಾಶ್ರಿತರಾಗಿರುವುದು ಗೊತ್ತೇ ಇದೆ. ಈ ನಿರಾಶ್ರಿತರಿಗಾಗಿ ನೂರಾರು ಕೋಟಿ ರೂ ಅನುದಾನ ಹರಿದು ಬಂದಿದೆ. ಅದ್ರಲ್ಲೂ ಇನ್ಫೋಸಿಸ್ ಫೌಂಡೇಷನ್ 250 ಮನೆಗಳನ್ನ ನಿರ್ಮಾಣ ಮಾಡಿಕೊಟ್ಟಿದೆ. ಆದ್ರೆ ನಿರ್ಮಾಣ ಕಾರ್ಯ ಆರಂಭವಾಗಿ ಮೂರು ವರ್ಷಗಳೇ ಕಳೆದಿದ್ದರೂ ಅದು ಇನ್ನೂ ಸಂತ್ರಸ್ತರಿಗೆ ವಿತರಣೆಯಾಗಿಲ್ಲ.

2018 ಮತ್ತು 19ರಲ್ಲಿ ಕೊಡಗು ಜಿಲ್ಲೆಯಲ್ಲಿ ಭೀಕರ ಪ್ರವಾಹ ಮತ್ತು ಭೂ ಕುಸಿತ ಸಂಭವಿಸಿತ್ತು. ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದರು. ಇವರಲ್ಲಿ
ಸುಮಾರು 750 ಮಂದಿಗೆ ಸರ್ಕಾರ ಈಗಾಗಲೇ ಕೊಡಗಿನ ವಿವಿಧೆಡೆ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ಇದೇ ವೇಳೆ ಭೂ ಕುಸಿತ ಮತ್ತು ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರ ಅಲ್ಲದೆ ಇನ್ಫೋಸಿಸ್ ಪ್ರತಿಷ್ಠಾನ ವತಿಯಿಂದ ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ 250 ಮನೆಗಳನ್ನು ನಿರ್ಮಿಸಲಾಗಿದೆ. ಮನೆ ಕಾಮಗಾರಿ ಬಹುತೇಕ ಸಂಪೂರ್ಣವಾಗಿದೆ. ಒಂದು ಮನೆಗೆ ತಲಾ 11 ಲಕ್ಷ ರೂ ವೆಚ್ಚ ಮಾಡಲಾಗಿದೆ. ಎಲ್ಲವೂ ಯೋಜನೆ ಪ್ರಕಾರ ನಡೆದಿದ್ದಲ್ಲಿ ಈಗಾಗಲೇ ಸಂತ್ರಸ್ತರು ನೆಮ್ಮದಿಯಿಂದ ಹೊಸ ಮನೆ ಪ್ರವೇಶ ಮಾಡಬೇಕಾಗಿತ್ತು. ಆದ್ರೆ ಮನೆಗಳನ್ನು ಐದು ವರ್ಷವಾದ್ರೂ ಇನ್ನೂ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿಲ್ಲ.

ಇತ್ತ ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಜಿಲ್ಲೆಯ ಬಹಳಷ್ಟು ಪ್ರದೇಶವನ್ನ ಅಪಾಯಕಾರಿ ಅಂತ ಗುರುತಿಸಲಾಗಿದ್ದು, ಮಳೆಗಾಲದಲ್ಲಿ ಆ ಪ್ರದೇಶಗಳನ್ನ ತೊರೆಯಬೇಕಾಗಿದೆ. ಅದೂ ಅಲ್ಲದೆ ಇನ್ನೂ 400 ಕ್ಕೂ ಅಧಿಕ ಸಂತ್ರಸ್ತರಿಗೆ ಮನೆಗಳನ್ನು ವಿತರಿಸಬೇಕಾಗಿದೆ. ಕನಿಷ್ಟ ಇನ್ಫೋಸಿಸ್​ ನಿರ್ಮಾಣದ ಮನೆಗಳನ್ನ ಮಳೆಗಾಲ ಆರಂಬಕ್ಕೆ ಮೊದಲೇ ವಿತರಿಸಿದ್ರೆ ಎಲ್ಲರೂ ಸುರಕ್ಷಿತವಾಗಿರುತ್ತೇವೆ ಎನ್ನುವುದು ಸಂತ್ರಸ್ತರ ಬೇಡಿಕೆ. ಅತ್ತ ಮಡಿಕೇರಿ ತಾಲ್ಲೂಕಿನ ಕೆ ನಿಡುಗಣೆ ಗ್ರಾಮದಲ್ಲೂ ಸೂಮಾರು 70 ಮನೆಗಳನ್ನ ಇನ್ನೂ ಹಸ್ತಾಂತರ ಮಾಡಿಲ್ಲ.

ಮೇಲ್ನೋಟಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ಇನ್ಪೋಸಿಸ್​ ಮಧ್ಯೆ ಹೊಂದಾಣಿಕೆ ಇದ್ದಂತಿಲ್ಲ ಅಂತ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಆರಂಭ ವಾಗುವುದರ ಒಳಗಾಗಿಯಾದ್ರೂ ಮನೆ ಕೊಡಿ ಅಂತ ಕೇಳುತ್ತಿದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಇನ್ಪೋಸಿಸ್​ನಿಂದ ಮನೆ ಪಡೆದು ಸಂತ್ರಸ್ತರಿಗೆ ಹಸ್ತಾಂತರಿಸುತ್ತದಾ ಕಾದು ನೋಡಬೇಕಿದೆ.

ವರದಿ: ಗೋಪಾಲ್ ಸೋಮಯ್ಯ, ಟಿವಿ9, ಕೊಡಗು

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us