ಲೋಕಭವನದಲ್ಲಿ ಸಚಿವರ ಪ್ರಮಾಣವಚನ: ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳೇನು? ಇಲ್ಲಿದೆ ವಿವರ
Bengaluru Traffic Restrictions Today: ಲೋಕಭವನದಲ್ಲಿ ಇಂದು ನೂತನ ಸಚಿವರ ಪ್ರಮಾಣವಚನ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಭಾರಿ ವಾಹನಗಳ ಸಂಚಾರಕ್ಕೂ ರಾತ್ರಿ 10ರವರೆಗೆ ನಿರ್ಬಂಧ ವಿಧಿಸಲಾಗಿದೆ. ಪರ್ಯಾಯ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ ವಿವರ ಇಲ್ಲಿದೆ.

ಮುಖ್ಯಾಂಶಗಳು
- ಲೋಕಭವನದ ಸುತ್ತ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
- ಪರ್ಯಾಯ ಮಾರ್ಗ ಬಳಸಲು ವಾಹನ ಸವಾರರಿಗೆ ಸೂಚನೆ
- ಭಾರಿ ವಾಹನಗಳಿಗೂ ರಾತ್ರಿ ಹತ್ತು ಗಂಟೆವರೆಗೆ ನಿರ್ಬಂಧ
ಬೆಂಗಳೂರು, ಆಗಸ್ಟ್ 3: ಲೋಕಭವನದಲ್ಲಿ ಇಂದು ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ (Karnataka Ministers’ Oath Ceremony) ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (Bengaluru) ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೂ ನಿಷೇಧ ಹೇರಲಾಗಿದೆ. ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
- ಕಾರ್ಯಕ್ರಮಕ್ಕೆ ಅನುಮತಿ ಹೊಂದಿರುವ ವಾಹನಗಳನ್ನು ಹೊರತುಪಡಿಸಿ, ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಒ ಜಂಕ್ಷನ್ ಹಾಗೂ ಅಲ್ಲಿಂದ ಲೋಕಭವನದವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
- ಅದೇ ರೀತಿ ಬಾಳೇಕುಂದ್ರಿ ಜಂಕ್ಷನ್‌ನಿಂದ ಅಂಬೇಡ್ಕರ್ ರಸ್ತೆ ಕಡೆಗೆ ಬರುವ ವಾಹನಗಳು, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಕೆ.ಆರ್. ಸರ್ಕಲ್‌ನಿಂದ ಕಾಫಿ ಬೋರ್ಡ್ ಜಂಕ್ಷನ್‌ವರೆಗೆ ಸಂಚರಿಸುವ ವಾಹನಗಳಿಗೂ ನಿರ್ಬಂಧ ಅನ್ವಯಿಸಲಿದೆ.
- ಕ್ವೀನ್ಸ್ ಜಂಕ್ಷನ್‌ನಿಂದ ಸಿ.ಟಿ.ಒ ಕಡೆಗೆ ಹಾಗೂ ಸೇಂಟ್ ಮಾರ್ಕ್ಸ್ ರಸ್ತೆಯಿಂದ ಸಿ.ಟಿ.ಒ ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ.
ಬೆಂಗಳೂರು ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ
“ಸಂಚಾರ ಸಲಹೆ” pic.twitter.com/fpu1ScMRJ9
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 3, 2026
ಸಂಚಾರಕ್ಕೆ ಪರ್ಯಾಯ ಮಾರ್ಗಗಳು ಯಾವುವು?
- ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಒ ಮತ್ತು ಲೋಕಭವನದ ಕಡೆಗೆ ತೆರಳುವವರು ಶಿವಾಜಿನಗರದ ಕಡೆ ತಿರುಗಿ ಅನಿಲ್ ಕುಂಬ್ಳೆ ಜಂಕ್ಷನ್ ಮೂಲಕ ಸಂಚರಿಸಬಹುದಾಗಿದೆ.
- ಕ್ವೀನ್ಸ್ ರಸ್ತೆ ಮತ್ತು ಶಿವಾಜಿನಗರ ಕಡೆಯಿಂದ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್‌ನಲ್ಲಿ ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ತೆರಳಬಹುದು.
- ಕೆ.ಆರ್. ಸರ್ಕಲ್‌ನಿಂದ ಕಾಫಿ ಬೋರ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ನೃಪತುಂಗ ರಸ್ತೆ ಬಳಸುವಂತೆ ಸೂಚಿಸಲಾಗಿದೆ. ಕ್ವೀನ್ಸ್ ಜಂಕ್ಷನ್‌ನಿಂದ ಲೋಕಭವನದ ಕಡೆಗೆ ತೆರಳುವ ವಾಹನಗಳು ಅನಿಲ್ ಕುಂಬ್ಳೆ ಹಾಗೂ ಬಿ.ಆರ್.ವಿ ಜಂಕ್ಷನ್ ಮಾರ್ಗವಾಗಿ ಸಂಚರಿಸಬಹುದು.
ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ
ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಲೋಕಭವನ ರಸ್ತೆ, ಎಲ್.ಎಚ್. ರಸ್ತೆ, ಕ್ವೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ಕಬ್ಬನ್ ಉದ್ಯಾನವನದ ಒಳಭಾಗದ ರಸ್ತೆಗಳು, ಮಿಲ್ಲರ್ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ಕೆ.ಜಿ. ರಸ್ತೆ, ನೃಪತುಂಗ ರಸ್ತೆ, ಕಸ್ತೂರಿಬಾ ರಸ್ತೆ ಹಾಗೂ ಕಬ್ಬನ್ ರಸ್ತೆ ಸೇರಿದಂತೆ ಸೂಚಿಸಲಾದ ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ.
ಪಾಸ್ ಇರುವ ವಾಹನಗಳಿಗೆ ಪಾರ್ಕಿಂಗ್ ಎಲ್ಲಿ?
- ಪಾಸ್ ಹೊಂದಿರುವ ವಾಹನಗಳಿಗೆ ವಿಧಾನಸೌಧ ಸಿಮೆಂಟ್ ಪಾರ್ಕಿಂಗ್, ವಿಕಾಸಸೌಧ ಸುತ್ತಮುತ್ತ, ರಾಜಭವನ ಹಿಂಭಾಗದ ಎಲ್.ಎಚ್. ಪಾರ್ಕಿಂಗ್ ಹಾಗೂ ನೆಹರು ತಾರಾಲಯ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
- ಪಾಸ್ ಇಲ್ಲದ ವಾಹನಗಳಿಗೆ ಕೊಂಡಜ್ಜಿ ಭವನ, ಶಿವಾಜಿನಗರ ಬಸ್ ನಿಲ್ದಾಣದ ಮಲ್ಟಿ ಲೆವೆಲ್ ಪಾರ್ಕಿಂಗ್, ಕಂಠೀರವ ಕ್ರೀಡಾಂಗಣ, ಯು.ಬಿ. ಸಿಟಿ ಪಾರ್ಕಿಂಗ್, ಸರ್ಕಾರಿ ಕಲಾ ಕಾಲೇಜು ಆವರಣ, ಕಾರ್ಪೊರೇಷನ್ ಕಚೇರಿ ಸ್ಥಳ ಹಾಗೂ ಪ್ಯಾಲೇಸ್ ಮೈದಾನದ ಗೇಟ್ ಸಂಖ್ಯೆ 2, 3 ಮತ್ತು 4ರಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ: ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ
ಇದರ ಜೊತೆಗೆ, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




