ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆಗೆ ಸಾಥ್ ನೀಡಿದ ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯದವರು!
ಶಿವಮೊಗ್ಗದಲ್ಲಿ ಹಿಂದೂ ಸಂಘಟನೆ ವತಿಯಿಂದ ನಡೆದ ಗಣಪತಿ ವಿಸರ್ಜನಾ ಮೆರವಣಿಗೆಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದವರು ಸಾಥ್ ನೀಡಿದರು. ಭಕ್ತರಿಗೆ ಹಣ್ಣು, ತಂಪು ಪಾನೀಯ ವಿತರಿಸಿ ಶುಭ ಹಾರೈಸುವ ಮೂಲಕ ಕೋಮು ಸೌಹಾರ್ದತೆ ಮೆರೆದರು. ರಾಜ್ಯದ ವಿವಿಧ ಕಡೆಗಳಲ್ಲಿ ಕೋಮು ಸೌಹಾರ್ದತೆ ಕದಡುತ್ತಿರುವ ಸಂದರ್ಭದಲ್ಲೇ ಸಾಮರಸ್ಯ ಮೆರೆದ ಈ ದೃಶ್ಯ ಮಾದರಿಯಾಗಿ ಗೋಚರಿಸಿತು.
ಶಿವಮೊಗ್ಗ, ಸೆಪ್ಟೆಂಬರ್ 21: ಶಿವಮೊಗ್ಗದ ಗೋಪಾಳದಲ್ಲಿ ಹಿಂದೂ ಸಂಘಟನೆ ವತಿಯಿಂದ ನಡೆದ ಗಣಪತಿ ವಿಸರ್ಜನಾ ಮೆರವಣಿಗೆಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದವರು ಸಾಥ್ ನೀಡಿ ಭಾವೈಕ್ಯತೆಯ ಅಪರೂಪದ ಸಂದೇಶ ಸಾರಿದರು. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಳದ ಪುರದಾಳ್ ರಸ್ತೆಯ ಸಿದ್ದೇಶ್ವರ ಸರ್ಕಲ್‌ನಲ್ಲಿ ಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಹಿಂದೂ ಸಂಘಟನೆ ಮುಖಂಡ ಪ್ರದೀಪ್ ಕಾವಡ ನೇತೃತ್ವದಲ್ಲಿ ಮೆರವಣಿಗೆ ಸಾಗಿತು.
ಈ ವೇಳೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿ ಕೋಮು ಸೌಹಾರ್ದತೆ ಮೆರೆದರು. ಮೆರವಣಿಗೆಯಲ್ಲಿದ್ದ ಭಕ್ತರಿಗೆ ಹಣ್ಣು ಹಾಗೂ ತಂಪು ಪಾನೀಯ ವಿತರಿಸಿ ಶುಭ ಹಾರೈಸಿದರು. ಮುಸ್ಲಿಂ ಮುಖಂಡ ರಿಜ್ವಾನ್ ಹಾಗೂ ಕ್ರಿಶ್ಚಿಯನ್ ಮುಖಂಡ ಚಿರಂಜೀವಿ ಬಾಬಣ್ಣ ಅವರ ತಂಡ ಗಣಪತಿ ವಿಸರ್ಜನಾ ಮೆರವಣಿಗೆಗೆ ಸಾಥ್ ನೀಡಿತು. ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಗಳ ನಡುವೆ ಶಿವಮೊಗ್ಗದಲ್ಲಿ ಭಾವೈಕ್ಯತೆಯ ಸಂದೇಶ ಸಾರಿದ ಈ ದೃಶ್ಯ ಗಮನ ಸೆಳೆಯಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
