Lemon Seed: ಆಕಸ್ಮಿಕವಾಗಿ ನಿಂಬೆ ಬೀಜ ನುಂಗಿಬಿಟ್ಟರೆ ಏನಾಗುತ್ತದೆ? ಹೊಟ್ಟೆಯಲ್ಲಿ ಏನೆಲ್ಲ ಆಗುತ್ತೆ?
ನಿಂಬೆ ನೀರು ಕುಡಿಯುವಾಗ ಆಕಸ್ಮಿಕವಾಗಿ ಒಂದು ಅಥವಾ ಎರಡು ನಿಂಬೆ ಬೀಜಗಳನ್ನು ನುಂಗುವುದು ಸಾಮಾನ್ಯ. ಆದರೆ ಇದರಿಂದ ಹೊಟ್ಟೆಯಲ್ಲಿ ಬೀಜ ಮೊಳಕೆಯೊಡೆಯುತ್ತದೆಯೇ ಅಥವಾ ಅಪೆಂಡಿಸೈಟಿಸ್ ಉಂಟಾಗುತ್ತದೆಯೇ ಎಂಬ ಆತಂಕ ಹಲವರಿಗಿದೆ. ನಿಂಬೆ ಬೀಜ ಹೊಟ್ಟೆಯೊಳಗೆ ಹೋದ ಬಳಿಕ ದೇಹದಲ್ಲಿ ನಿಜಕ್ಕೂ ಏನಾಗುತ್ತದೆ ಎಂಬುದನ್ನು ತಿಳಿಯೋಣ.

ಮುಖ್ಯಾಂಶಗಳು
- ನಿಂಬೆ ನೀರು ಕುಡಿಯುವಾಗ ಆಕಸ್ಮಿಕವಾಗಿ ಬೀಜ ನುಂಗಿಬಿಟ್ಟಿದ್ದೀರಾ?
- ನಿಂಬೆ ಬೀಜ ಹೊಟ್ಟೆಯಲ್ಲಿ ಸಿಲುಕಿಕೊಂಡು ಅಪೆಂಡಿಸೈಟಿಸ್ ಉಂಟುಮಾಡುತ್ತದೆಯೇ?
- ಒಂದು ಅಥವಾ ಎರಡು ನಿಂಬೆ ಬೀಜ ನುಂಗಿದರೆ ಆತಂಕಪಡುವ ಅಗತ್ಯವಿದೆಯೇ?
ನಿಂಬೆಹಣ್ಣು (Lemon) ಜ್ಯೂಸ್ ಕುಡಿಯುವಾಗ ಅಥವಾ ಅಡುಗೆಯಲ್ಲಿ ನಿಂಬೆ ಹಿಂಡಿದಾಗ ಒಂದೆರಡು ಬೀಜಗಳು ಆಕಸ್ಮಿಕವಾಗಿ ಬಾಯಿಯೊಳಗೆ ಹೋಗಿ ನುಂಗಿಹೋಗುವುದು ಸಾಮಾನ್ಯ. ಆದರೆ ಬೀಜ ಹೊಟ್ಟೆಯೊಳಗೆ ಹೋದ ತಕ್ಷಣ ಕೆಲವರಿಗೆ ಆತಂಕ ಶುರುವಾಗುತ್ತದೆ. ‘ಹೊಟ್ಟೆಯಲ್ಲಿ ಬೀಜ ಮೊಳಕೆಯೊಡೆಯುತ್ತದೆಯೇ?’, ‘ಅದು ಅಲ್ಲೇ ಸಿಲುಕಿಕೊಂಡು ಅಪೆಂಡಿಸೈಟಿಸ್ ಉಂಟುಮಾಡುತ್ತದೆಯೇ?’ ಎಂಬ ಅನುಮಾನಗಳು ಮೂಡುತ್ತವೆ. ಆದರೆ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ವರದಿ ತಿಳಿಸಿದೆ.
ನಿಂಬೆ ಬೀಜ ವಿಷಕಾರಿಯೇ?
ಕೆಲವು ಹಣ್ಣುಗಳ ಬೀಜಗಳ ಬಗ್ಗೆ ವಿಷಕಾರಿ ಅಂಶಗಳಿರುವುದರಿಂದ ಎಚ್ಚರಿಕೆ ವಹಿಸುವಂತೆ ಹೇಳಲಾಗುತ್ತದೆ. ಆದರೆ ನಿಂಬೆ ಬೀಜವನ್ನು ಆಕಸ್ಮಿಕವಾಗಿ ಒಂದೆರಡು ನುಂಗುವುದರಿಂದ ವಿಷಪ್ರಯೋಗವಾಗುತ್ತದೆ ಎಂಬುದಕ್ಕೆ ಆಧಾರವಿಲ್ಲ. ಹೀಗಾಗಿ ನಿಂಬೆ ಬೀಜ ಹೊಟ್ಟೆಯೊಳಗೆ ಹೋದ ತಕ್ಷಣ ದೇಹಕ್ಕೆ ವಿಷವಾಗುತ್ತದೆ ಎಂದು ಭಯ ಪಡುವ ಅಗತ್ಯವಿಲ್ಲ.
ಹೊಟ್ಟೆಯೊಳಗೆ ಹೋದ ಮೇಲೆ ಏನಾಗುತ್ತದೆ?
ನಿಂಬೆ ಬೀಜದ ಹೊರಭಾಗ ಗಟ್ಟಿಯಾದ ಪದರದಿಂದ ಕೂಡಿರುತ್ತದೆ. ಹೊಟ್ಟೆಯಲ್ಲಿರುವ ಜೀರ್ಣಕಾರಿ ಆಮ್ಲಗಳು ಆಹಾರವನ್ನು ಜೀರ್ಣಿಸಲು ಸಹಾಯ ಮಾಡಿದರೂ, ಬೀಜದ ಹೊರಪದರ ಸಂಪೂರ್ಣವಾಗಿ ಜೀರ್ಣವಾಗದೇ ಉಳಿಯಬಹುದು. ಆದರೆ ಅದರಿಂದ ಯಾವುದೇ ದೊಡ್ಡ ಸಮಸ್ಯೆ ಉಂಟಾಗುತ್ತದೆ ಎಂದರ್ಥವಲ್ಲ.
ಜೀರ್ಣವಾಗದ ಬೀಜವು ಇತರ ಆಹಾರದೊಂದಿಗೆ ಜೀರ್ಣಾಂಗದ ಮೂಲಕ ಮುಂದೆ ಸಾಗುತ್ತದೆ. ಸಾಮಾನ್ಯವಾಗಿ ಅದು ಕರುಳಿನ ಗೋಡೆಗೆ ಅಂಟಿಕೊಳ್ಳುವುದಿಲ್ಲ. ಕೊನೆಗೆ ಮಲದೊಂದಿಗೆ ದೇಹದಿಂದ ಹೊರಹೋಗುತ್ತದೆ. ಆದ್ದರಿಂದ ಆಕಸ್ಮಿಕವಾಗಿ ಒಂದು ಅಥವಾ ಎರಡು ನಿಂಬೆ ಬೀಜಗಳನ್ನು ನುಂಗಿದರೆ ಅವು ಹೊಟ್ಟೆಯಲ್ಲಿ ಸಿಲುಕಿಕೊಳ್ಳುತ್ತವೆ ಅಥವಾ ಅಪೆಂಡಿಸೈಟಿಸ್ ಉಂಟುಮಾಡುತ್ತವೆ.
ನೀರಿನ ಬಾಟಲಿಗಳನ್ನು ಹೀಗೆ ಫ್ರಿಜ್ನಲ್ಲಿಟ್ಟರೆ ವಿದ್ಯುತ್ ಬಿಲ್ ಖಂಡಿತ ಕಡಿಮೆಯಾಗುತ್ತದೆ
ಹೆಚ್ಚು ಬೀಜಗಳನ್ನು ನುಂಗಿದರೆ?
ಒಂದೆರಡು ಬೀಜಗಳು ಆಕಸ್ಮಿಕವಾಗಿ ನುಂಗಿದರೆ ಸಾಮಾನ್ಯವಾಗಿ ಸಮಸ್ಯೆಯಾಗುವುದಿಲ್ಲ. ಆದರೆ ಒಂದೇ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬೀಜಗಳನ್ನು ನುಂಗಿದರೆ ಅವು ಜೀರ್ಣವಾಗದೆ ಇರುವ ಕಾರಣ ಕೆಲವರಿಗೆ ಹೊಟ್ಟೆ ಉಬ್ಬರ, ಅಜೀರ್ಣ ಅಥವಾ ಸಣ್ಣ ಪ್ರಮಾಣದ ಹೊಟ್ಟೆನೋವು ಉಂಟಾಗುವ ಸಾಧ್ಯತೆ ಇದೆ.
ಮಕ್ಕಳ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ
ಮಕ್ಕಳಿಗೆ ನಿಂಬೆ ನೀರು ಅಥವಾ ಇತರ ನಿಂಬೆ ಪಾನೀಯಗಳನ್ನು ನೀಡುವಾಗ ಸ್ವಲ್ಪ ಹೆಚ್ಚು ಜಾಗರೂಕರಾಗಿರಬೇಕು. ದೊಡ್ಡವರಿಗಿಂತ ಚಿಕ್ಕ ಮಕ್ಕಳಲ್ಲಿ ಬೀಜವು ತಪ್ಪಾಗಿ ಶ್ವಾಸನಾಳಕ್ಕೆ ಹೋಗುವ ಅಪಾಯವಿದೆ. ಇದು ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಮಕ್ಕಳಿಗೆ ನಿಂಬೆ ರಸ ಅಥವಾ ನಿಂಬೆ ನೀರು ನೀಡುವಾಗ ಬೀಜಗಳನ್ನು ತೆಗೆದು, ಅಗತ್ಯವಿದ್ದರೆ ಸೋಸಿ ನೀಡುವುದು ಉತ್ತಮ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




