ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಮುನ್ನವೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ NDRF ತಂಡ

ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಮುನ್ನವೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ NDRF ತಂಡ
ಎನ್​​ಡಿಆರ್​ಎಫ್​​
Image Credit source: Deccan Herald

ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶ ಮಾಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಡಿಕೇರಿಗೆ 24 ಎನ್​ಡಿಆರ್​ಎಫ್​ನ ಸಿಬ್ಬಂದಿ ಆಗಮಿಸಿದ್ದು, ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ NDRF ಸಿಬ್ಬಂದಿ ವಾಸ್ತವ್ಯ ಹೂಡಿದ್ದಾರೆ.

TV9kannada Web Team

| Edited By: Vivek Biradar

Jun 11, 2022 | 3:28 PM

ಕೊಡಗು: ಕೊಡಗು ಜಿಲ್ಲೆಗೆ ಮುಂಗಾರು (Rain) ಪ್ರವೇಶ ಮಾಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಡಿಕೇರಿಗೆ 24 ಎನ್​ಡಿಆರ್​ಎಫ್​ನ ಸಿಬ್ಬಂದಿ ಆಗಮಿಸಿದ್ದು, ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ NDRF ಸಿಬ್ಬಂದಿ ವಾಸ್ತವ್ಯ ಹೂಡಿದ್ದಾರೆ. ಪ್ರವಾಹ (Floor)  ಸಂದರ್ಭದಲ್ಲಿ ಸಮರ್ಥವಾಗಿ ಅಪಾಯಕಾರಿ ಪ್ರದೇಶಗಳಿಗೆ ಭೇಟಿ ನೀಡಲು ಸನ್ನದ್ದವಾಗಿ ಬಂದಿರುವ NDRF ಸಿಬ್ಬಂದಿ 4 ಬೋಟ್, ಇತರೆ ರಕ್ಷಣಾ ಪರಿಕರದೊಂದಿಗೆ ಬಂದಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಪ್ರವಾಹ ಮತ್ತು ಭೂ ಕುಸಿತದ (Landslide) ಸೂಕ್ಷ್ಮ ಪ್ರದೇಶಗಳನ್ನು ಗುರುತು ಮಾಡಿರುವ ಸ್ಥಳಗಳಿಗೆ ಇಂದಿನಿಂದ (ಜೂನ್​ 11) ರಿಂದ ಈ ತಂಡ ಭೇಟಿ ಮಾಡಿ ಪರಿಶೀಲನೆ ನಡೆಸಲಿದೆ. ಆಂಧ್ರ ಪ್ರದೇಶದ ವಿಜಯವಾಡದಿಂದ 22 ಮಂದಿ ಪರಿಣಿತರಿರುವ ಎನ್.ಡಿ.ಆರ್.ಎಫ್ ತಂಡ ಕೊಡಗು ಜಿಲ್ಲೆಗೆ ಆಗಮಿಸಿದೆ. ಸಾಕಷ್ಟು ಕಡೆಗಳಲ್ಲಿನ ಪ್ರವಾಹ ಸಂದರ್ಭದಲ್ಲಿ ಭಾಗಿಯಾಗಿದ್ದ ನುರಿತರು ಈ ತಂಡದಲ್ಲಿದ್ದಾರೆ.

ಇನ್ನೂ ಜಿಲ್ಲಾಡಳಿತ ಈಗಾಗಲೇ ಪ್ರವಾಹ ಪ್ರವಾಹ ಪೀಡಿತ ಪ್ರದೇಶಗಳನ್ನ ಗುರುತು ಮಾಡಿದೆ. 44 ಪ್ರದೇಶಗಳಲ್ಲಿ ಪ್ರವಾಹ ಹಾಗೂ 43 ಪ್ರದೇಶಗಳಲ್ಲಿ ಭೂಕುಸಿತ ಪ್ರದೇಶಗಳೆಂದು ಗುರುತಿಸಲಾಗಿದ್ದು ಅಂತಹ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ. ಮಳೆಗಾಲ ಮುಗಿಯುವ ವರೆಗೂ ತಂಡ ಜಿಲ್ಲೆಯಲ್ಲಿ ತಂಗಲಿರುವುದಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಪರಿಷತ್​ ಚುನಾವಣೆಯಲ್ಲಿ ಜೆಡಿಎಸ್​ನ ಪ್ರತಿಯೊಬ್ಬ ಶಾಸಕರಿಗೆ 50 ಲಕ್ಷ ನೀಡಲಾಗಿದೆ: ಶಾಸಕ ಕೆ.ಶ್ರೀನಿವಾಸಗೌಡ

ಕಳೆದ ವರ್ಷ ಸಾಕಷ್ಟು ಮಳೆ ಸುರಿದಿದ್ದರೂ ಕೊಡಗು ಜಿಲ್ಲೆಯಲ್ಲಿ ಎಲ್ಲೂ ದೊಡ್ಡ ಮಟ್ಟದ ಅಪಾಯಗಳು ಎದುರಾಗಿರಲಿಲ್ಲ. ಹೀಗಾಗಿ ಕಳೆದ ವರ್ಷದ ಮಳೆಗಾಲ ಮುಗಿಯುತ್ತಿದ್ದಂತೆ ಜಿಲ್ಲೆಯ ಜನರು ಕಂಟಕ ಮುಗಿಯಿತು ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈ ಬಾರಿ ಮುಂಗಾರಿಗೂ ಮುನ್ನವೇ ಸಾಕಷ್ಟು ಮಳೆ ಸುರಿದಿರುವುದು ಜಿಲ್ಲೆಯಲ್ಲಿ ಈ ಬಾರಿ ಮತ್ತೆ ಪ್ರವಾಹ ಮತ್ತು ಭೂಕುಸಿತ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಹೀಗಾಗಿಯೇ ಕೊಡಗು ಜಿಲ್ಲಾಡಳಿತ ಕೂಡ ಕಳೆದ ಮೂರು ವರ್ಷಗಳ ಆಧಾರದಲ್ಲಿ 44 ಗ್ರಾಮಗಳಿಗೆ ಪ್ರವಾಹ ಎದುರಾಗಬಹುದು ಎಂದು ಅಂದಾಜಿಸಿದೆ.

ಕೊಡಗುಜಿಲ್ಲೆಯಲ್ಲಿ ಮಳೆ, ಪ್ರವಾಹ, ಭೂಕುಸಿತ 

2018 ರಿಂದ 2020 ರವರೆಗೆ ಸಂಭವಿಸಿದ್ದ ಪ್ರವಾಹ , ಭೂಕುಸಿತದಿಂದ ಜನರು ಬೇಸತ್ತು ಹೋಗಿದ್ದಾರೆ. 2018 ರ ಆಗಸ್ಟ್ 15 ರಿಂದ ಜಿಲ್ಲೆಯಲ್ಲಿ ಎದುರಾದ ಭೂ ಕುಸಿತ ಜನರನ್ನು ಸಾಕಷ್ಟು ಹೈರಾಣು ಮಾಡಿತ್ತು. ಜನರು ಸೂರು ಮತ್ತು ತೋಟಗಳನ್ನು ಕಳೆದುಕೊಂಡು ದಿಕ್ಕೆ ತೋಚದಂತಾಗಿದ್ದರು.  2019ರಲ್ಲಿ ಮಳೆಯಿಂದಾಗಿ ಜಿಲ್ಲೆಯ 9,423 ಹೆ. ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿತ್ತು. 2020ರಲ್ಲಿ ಈ ಪ್ರಮಾಣ 40,722 ಹೆಕ್ಟೇರ್‌ಗೆ ವ್ಯಾಪಿಸಿತ್ತು. 2021ರಲ್ಲಿ ಕೇವಲ 5 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎನ್ನುತ್ತಿದೆ ಸರಕಾರದ ಮಾಹಿತಿ.

ಇದನ್ನು ಓದಿ: ಕ್ಯಾಮೆರಾ ಆಫ್ ಮಾಡ್ರಿ; ಟಿವಿ ಸಂದರ್ಶನದಲ್ಲಿ ತಾಳ್ಮೆ ಕಳೆದುಕೊಂಡ ಸದ್ಗುರು ಜಗ್ಗಿ ವಾಸುದೇವ್

ಈ ವರ್ಷ ಮೇ 20ರಂದು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 72.25 ಮಿ.ಮೀ. ಮಳೆಯಾಗಿದೆ. ಈ ಹಿಂದಿನ ದಿನ 49.12 ಮಿ.ಮೀ. ಮಳೆಯಾಗಿತ್ತು. ಕಳೆದ ವರ್ಷ ಇದೇ ದಿನ 3.06 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 390.91 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 416.95 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಅಂದಿನ ಸರಾಸರಿ ಮಳೆ 79.33 ಮಿ.ಮೀ. ಕಳೆದ ವರ್ಷ ಇದೇ ದಿನ 7.35 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 496.85 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 587.70 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲೂಕು ವಿರಾಜಪೇಟೆ ತಾಲ್ಲೂಕಿನಲ್ಲಿ ಮೇ 20ರ ಸರಾಸರಿ ಮಳೆ 36.30 ಮಿ.ಮೀ. ಕಳೆದ ವರ್ಷ ಇದೇ ದಿನ 1.14 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 334.71 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 356.43 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಮೇ 20ರ ಸರಾಸರಿ ಮಳೆ 101.13 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.70 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 341.16 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 306.64 ಮಿ.ಮೀ. ಮಳೆಯಾಗಿತ್ತು.

2019ರಲ್ಲಿ 25 ಜಿಲ್ಲೆಗಳ 119 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿತ್ತು. ಇದರಲ್ಲಿ ಜಿಲ್ಲೆಯ ಅವಿಭಜಿತ ಸೋಮವಾರಪೇಟೆ, ವಿರಾಜಪೇಟೆ ಹಾಗೂ ಮಡಿಕೇರಿ ತಾಲೂಕುಗಳು ಸೇರಿಕೊಂಡಿದ್ದವು. 2020ರಲ್ಲಿ 25 ಜಿಲ್ಲೆಗಳ 180 ಪ್ರವಾಹಪೀಡಿತ ತಾಲೂಕುಗಳ ಪಟ್ಟಿಯಲ್ಲೂ ಜಿಲ್ಲೆಯ ಅವಿಭಜಿತ 2 ಸೇರಿದಂತೆ ಮೂರು ತಾಲೂಕುಗಳು ಇದ್ದವು

ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಗಿನಿಂದಲೇ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ. ಜನರು ಹೆಚ್ಚಿನ ಮಾಹಿತಿಯನ್ನು 08272-221077, 08272-221088 ಹಾಗೂ 08272-221099 ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Related Stories

Most Read Stories

Click on your DTH Provider to Add TV9 Kannada