Jaggi Vasudev: ಕ್ಯಾಮೆರಾ ಆಫ್ ಮಾಡ್ರಿ; ಟಿವಿ ಸಂದರ್ಶನದಲ್ಲಿ ತಾಳ್ಮೆ ಕಳೆದುಕೊಂಡ ಸದ್ಗುರು ಜಗ್ಗಿ ವಾಸುದೇವ್
ಬಿಬಿಸಿ ತಮಿಳು ಚಾನೆಲ್ನ ಕೆ. ಸುಬಗುಣಂ ಇಶಾ ಫೌಂಡೇಷನ್ನ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಸಂದರ್ಶನ ಮಾಡುವಾಗ ಅವರು ಸಿಟ್ಟಿಗೆದ್ದಿದ್ದಾರೆ. ಈ ಸಂದರ್ಶನದ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಚೆನ್ನೈ: ಸ್ವಯಂಘೋಷಿತ ದೇವಮಾನವ ಎಂದು ಕರೆಯಲ್ಪಡುವ ಸದ್ಗುರು ಜಗ್ಗಿ ವಾಸುದೇವ್ (Sadguru Jaggi Vasudev) ತಮಿಳಿನ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವಾಗ ತಾಳ್ಮೆ ಕಳೆದುಕೊಂಡು, ರಿಪೋರ್ಟರ್ ಮೇಲೆ ಕಿರುಚಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಜಗ್ಗಿ ವಾಸುದೇವ್ ಅವರು ತಾಳ್ಮೆಯ ಬಗ್ಗೆ ಅನೇಕ ಸಂದರ್ಭಗಳಲ್ಲಿ ಬೋಧಿಸಿದ್ದಾರೆ. ಆದರೆ, ಬಿಬಿಸಿ ತಮಿಳಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ತಾಳ್ಮೆಯನ್ನು ಕಳೆದುಕೊಂಡು, ಮಾತನಾಡಿದ್ದಾರೆ. ಈ ಸಂದರ್ಶನದ ಮಧ್ಯದಲ್ಲಿ ಕೋಪಗೊಂಡ ಸದ್ಗುರು ಜಗ್ಗಿ ರಿಪೋರ್ಟರ್ಗೆ ಕ್ಯಾಮೆರಾಗಳನ್ನು ಸ್ವಿಚ್ ಆಫ್ ಮಾಡಲು ಮನವಿ ಮಾಡಿದ್ದಾರೆ.
ಬಿಬಿಸಿ ತಮಿಳಿನ ಕೆ. ಸುಬಗುಣಂ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಸಂದರ್ಶನ ಮಾಡಿದಾಗ ಈ ಘಟನೆ ಸಂಭವಿಸಿದೆ. ಈ ಸಂದರ್ಶನದ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪತ್ರಕರ್ತರ ಪ್ರಶ್ನೆಗಳಿಂದ ಜಗ್ಗಿ ಹೆಚ್ಚು ವಿಚಲಿತರಾಗಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭವಾದ ಜಗ್ಗಿ ವಾಸುದೇವ್ ಅವರ ‘ಮಣ್ಣು ಉಳಿಸಿ ಆಂದೋಲನ’ದ ಬಗ್ಗೆ ರಿಪೋರ್ಟರ್ ಮಾತನಾಡುವುದರೊಂದಿಗೆ ಸಂದರ್ಶನ ಪ್ರಾರಂಭವಾಗುತ್ತದೆ. ಸದ್ಗುರು ಜಗ್ಗಿ ವಾಸುದೇವ್ ಅದಕ್ಕಾಗಿಯೇ ತಮ್ಮ ಬೈಕ್ನಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದಾರೆ. ಆದರೂ, ತಮ್ಮ ಇಶಾ ಫೌಂಡೇಶನ್‌ಗೆ ಪರಿಸರ ಅನುಮತಿಯ ವಿವಾದದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಸದ್ಗುರು ಸಿಟ್ಟಿಗೆದ್ದಿದ್ದಾರೆ. ಕ್ಯಾಮೆರಾವನ್ನು ಆಫ್ ಮಾಡಿ, ಸಂದರ್ಶನ ನಿಲ್ಲಿಸುವಂತೆ ರಿಪೋರ್ಟರ್ಗೆ ಹೇಳಿದ್ದಾರೆ.
ಇದನ್ನೂ ಓದಿ: Deepavali 2021: ದೀಪಾವಳಿಗೆ ಮಕ್ಕಳು ಪಟಾಕಿ ಸಿಡಿಸಲಿ; ವಾಯುಮಾಲಿನ್ಯ ನಿಯಂತ್ರಿಸಲು ಹೊಸ ಉಪಾಯ ಹೇಳಿದ ಸದ್ಗುರು!
ಕೊಯಮತ್ತೂರು ಜಿಲ್ಲೆಯ ಬೂಲುವಾಪಟ್ಟಿ ಗ್ರಾಮದಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಪೂರ್ವಾನುಮತಿ ಪಡೆದಿಲ್ಲ. ಕಟ್ಟಡದ ನಿರ್ಮಾಣ ಮುಗಿದ ಸುಮಾರು 3 ವರ್ಷಗಳ ನಂತರ ಅಗತ್ಯವಿರುವ ಅನುಮತಿಗಳನ್ನು ಕೇಳಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರು 2018ರಲ್ಲಿ ಸದ್ಗುರುಗಳ ಇಶಾ ಫೌಂಡೇಶನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.
ಈ ಗ್ರಾಮದಲ್ಲಿ 32,856 ಚದರ ಅಡಿ ವಿಸ್ತೀರ್ಣದ ವಿವಿಧ ಕಟ್ಟಡಗಳನ್ನು 1994ರಿಂದ 2008ರ ನಡುವೆ ಸೂಕ್ತ ಅನುಮತಿಯೊಂದಿಗೆ ನಿರ್ಮಿಸಲಾಗಿದೆ ಎಂದು ಸಿಎಜಿ ಹೇಳಿತ್ತು. ಆದರೆ, 2005 ಮತ್ತು 2008ರ ನಡುವೆ ಗುಡ್ಡಗಾಡು ಪ್ರದೇಶ ಸಂರಕ್ಷಣಾ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯದೆ ನಿರ್ಮಿಸಲಾಗಿದೆ. ಇಶಾ ಫೌಂಡೇಷನ್ಗಾಗಿ 2011ರಲ್ಲಿ ನಿರ್ಮಾಣಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಮತ್ತು ಅನುಮೋದನೆ ನೀಡಲು ಅರಣ್ಯ ಇಲಾಖೆಯನ್ನು ಕೇಳಿದ್ದರು.
ಇಶಾ ಫೌಂಡೇಶನ್ ಈಗ ಪರಿಸರಕ್ಕಾಗಿ ಕೆಲಸ ಮಾಡುತ್ತಿದೆ. ಆದರೆ, ಕಟ್ಟಡ ನಿರ್ಮಾಣಕ್ಕೆ ಪರಿಸರ ಇಲಾಖೆಯ ಅನುಮತಿಯನ್ನು ಪಡೆದಿಲ್ಲ ಎಂಬ ಆರೋಪದ ಬಗ್ಗೆ ಸದ್ಗುರುಗಳ ಅಭಿಪ್ರಾಯವೇನು ಎಂದು ರಿಪೋರ್ಟರ್ ಕೇಳಿದರು. ಆಗ ಇದ್ದಕ್ಕಿದ್ದಂತೆ ಸಿಟ್ಟಿಗೆದ್ದ ಜಗ್ಗಿ, ‘ಇದನ್ನು ಎಷ್ಟು ಬಾರಿ ಕೇಳುತ್ತೀರಿ?’ ಎಂದು ಕೇಳುತ್ತಿರುವಾಗ ಅವರು ಪತ್ರಕರ್ತನನ್ನು ಮಧ್ಯದಲ್ಲಿ ನಿಲ್ಲಿಸಿ, “ನೀವು ಸುದ್ದಿಗಳನ್ನು ನೋಡುತ್ತಿದ್ದೀರಾ?, ಸರ್ಕಾರಿ ಇಲಾಖೆ ಏನು ಹೇಳುತ್ತಿದೆ ಎಂಬುದನ್ನು ನೋಡುತ್ತಿದ್ದೀರಾ?, ನ್ಯಾಯಾಲಯ ಏನು ಹೇಳುತ್ತಿದೆ ಎಂಬುದನ್ನು ಕೇಳಿದ್ದೀರಾ? ಅಥವಾ ಯಾರೋ ಅರ್ಧಂಬರ್ಧ ತಿಳಿದವರು ಹೇಳಿದ ಮಾತನ್ನು ನಂಬುತ್ತೀರಾ? ಎಂದು ಕೋಪದಲ್ಲಿ ಕೇಳಿದ್ದಾರೆ. ರಿಪೋರ್ಟರ್ಗೆ ಉತ್ತರಿಸಲೂ ಬಿಡದೆ ಕ್ಯಾಮೆರಾ ಆಫ್ ಮಾಡಲು ಹೇಳಿದ್ದಾರೆ.
ನಾವು ಯಾವುದೇ ಅತಿಕ್ರಮಣ ಮಾಡಿಲ್ಲ ಎಂದು ಇಲಾಖೆಯೇ ಹೇಳುತ್ತಿದೆ. ಎಲ್ಲವೂ ಪರಿಪೂರ್ಣವಾಗಿದೆ ಎಂದು ಜಗ್ಗಿ ಹೇಳಿದ್ದಾರೆ. ಪತ್ರಕರ್ತ ತನ್ನ ಪ್ರಶ್ನೆಯನ್ನು ವಿವರಿಸಲು ಪ್ರಯತ್ನಿಸಿದಾಗ, ಜಗ್ಗಿ ಮಧ್ಯಪ್ರವೇಶಿಸಿ, ಈ ದೇಶದಲ್ಲಿ ಕಾನೂನು ಇದೆಯೇ? ಸರ್ಕಾರ ಇದೆಯೇ? ಅವರ ಕೆಲಸ ಅವರು ಮಾಡಲಿ. ಅವರ ಕೆಲಸ ಮಾಡಲು ಬಿಟ್ಟುಬಿಡಿ. ಅವರ ಕೆಲಸವನ್ನು ನೀವು ಯಾಕೆ ಮಾಡುತ್ತಿದ್ದೀರಿ? ಎಂದು ಜಗ್ಗಿ ಪತ್ರಕರ್ತರನ್ನು ಕೇಳಿದ್ದಾರೆ. ಬಳಿಕ ಜಗ್ಗಿ ವಾಸುದೇವ್ ಅವರ ಜೊತೆಗಿದ್ದವರು ಮಾಧ್ಯಮಗಳ ಮೂರು ಕ್ಯಾಮೆರಾಗಳನ್ನು ಆಫ್ ಮಾಡಲು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Sat, 11 June 22