Deepavali 2021: ದೀಪಾವಳಿಗೆ ಮಕ್ಕಳು ಪಟಾಕಿ ಸಿಡಿಸಲಿ; ವಾಯುಮಾಲಿನ್ಯ ನಿಯಂತ್ರಿಸಲು ಹೊಸ ಉಪಾಯ ಹೇಳಿದ ಸದ್ಗುರು!
Fire Crackers: ಸದ್ಗುರು ಜಗ್ಗಿ ವಾಸುದೇವ್ 'ಮಕ್ಕಳು ದೀಪಾವಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಲಿ. ಆ ಆನಂದಕ್ಕೆ ವಾಯುಮಾಲಿನ್ಯದ ನೆಪ ಅಡ್ಡಿಯಾಗದಿರಲಿ' ಎಂದು ಹೇಳುವ ಮೂಲಕ ಪಟಾಕಿ ಸಿಡಿಸುವುದನ್ನು ಬೆಂಬಲಿಸಿದ್ದಾರೆ.
ದೀಪಾವಳಿ ಹಬ್ಬ (Deepavali Festival) ಬಂದಕೂಡಲೆ ಪಟಾಕಿ ಹೊಡೆಯದೆ ಪರಿಸರ ಸ್ನೇಹಿ ದೀಪಾವಳಿ (Eco Friendly Diwali) ಆಚರಿಸಿ ಎಂದು ಎಲ್ಲೆಡೆ ಅಭಿಯಾನ ಶುರುವಾಗುತ್ತದೆ. ಇದೇ ವಿಷಯಕ್ಕೆ ಭಾರತದಲ್ಲಿ ಎರಡು ಬಣಗಳು ನಿರ್ಮಾಣವಾಗಿವೆ. ಒಂದು ಬಣ ಹಿಂದೂಗಳ ಪ್ರಮುಖ ಹಬ್ಬವಾದ ದೀಪಾವಳಿಯಂದು ಒಂದು ದಿನ ಪಟಾಕಿ ಹೊಡೆದರೆ ಏನು ತಪ್ಪು? ಬೇರೆ ಸಮಾರಂಭಗಳಲ್ಲಿ ಪಟಾಕಿ ಹೊಡೆದು ಸಂಭ್ರಮಿಸಲು ಅನುಮತಿ ನೀಡುತ್ತೀರಲ್ಲ ಎಂದು ವಾದಿಸಿದರೆ ಇನ್ನೊಂದು ಬಣ ದೀಪಾವಳಿಯ ದಿನ ಎಲ್ಲರೂ ಪಟಾಕಿ (Fire Crackers) ಹೊಡೆದು ಹೊಗೆಯೆಬ್ಬಿಸಿದರೆ ವಾಯು ಮಾಲಿನ್ಯ (Air Pollution) ಹೆಚ್ಚಾಗುತ್ತದೆ ಎಂದು ವಾದಿಸುತ್ತಿದೆ.
ಆದರೆ, ಸದ್ಗುರು ಜಗ್ಗಿ ವಾಸುದೇವ್ ‘ಮಕ್ಕಳು ದೀಪಾವಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಲಿ. ಆ ಆನಂದಕ್ಕೆ ವಾಯುಮಾಲಿನ್ಯದ ನೆಪ ಅಡ್ಡಿಯಾಗದಿರಲಿ’ ಎಂದು ಹೇಳುವ ಮೂಲಕ ಪಟಾಕಿ ಸಿಡಿಸುವುದನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ, ವಾಯುಮಾಲಿನ್ಯ ನಿಯಂತ್ರಣಕ್ಕೆ ಹೊಸ ಮಾರ್ಗವನ್ನು ಕೂಡ ಅವರು ಕಂಡುಹಿಡಿದಿದ್ದಾರೆ. ಪಟಾಕಿ ಸಿಡಿಸುವ ವಿಚಾರದಲ್ಲಿ ದೇಶ ಇಬ್ಭಾಗವಾಗಿರುವ ಈ ಸಂದರ್ಭದಲ್ಲಿ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ “ಮಕ್ಕಳು ಪಟಾಕಿಯ ಆನಂದವನ್ನು ಅನುಭವಿಸುವುದನ್ನು ತಡೆಯಲು ವಾಯು ಮಾಲಿನ್ಯದ ಕಾಳಜಿ ಒಂದು ಕಾರಣವೇ ಅಲ್ಲ” ಎಂದು ಹೇಳಿದ್ದಾರೆ.
ದೇಶದಲ್ಲಿ ಪಟಾಕಿ ನಿಷೇಧವನ್ನು ಬೆಂಬಲಿಸುವ ಜನರ ಬಗ್ಗೆ ಮಾತನಾಡುತ್ತಾ ಸದ್ಗುರು ಜಗ್ಗಿ ವಾಸುದೇವ್, ‘ಮಕ್ಕಳು ದೀಪಾವಳಿಗೆ ಪಟಾಕಿ ಸಿಡಿಸಿ ಆನಂದಿಸುವ ಸಲುವಾಗಿ ನೀವು 3 ದಿನ ನಿಮ್ಮ ಆಫೀಸುಗಳಿಗೆ ನಡೆದುಕೊಂಡು ಹೋಗಿ. ನಿಮ್ಮ ಮಕ್ಕಳಿಗಾಗಿ ನೀವು 3 ದಿನ ಕಾರು, ಬೈಕುಗಳಲ್ಲಿ ಓಡಾಡುವುದನ್ನು ನಿಲ್ಲಿಸಿದರೆ ಮಕ್ಕಳು ಪಟಾಕಿ ಸಿಡಿಸಿ ಹಬ್ಬವನ್ನು ಆನಂದಿಸಲು ಸಾಧ್ಯವಿದೆ. ನಿಮ್ಮ ಮಕ್ಕಳಿಗಾಗಿ ನೀವು ಇಷ್ಟೂ ತ್ಯಾಗ ಮಾಡಲು ಸಾಧ್ಯವಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
Concern about air pollution is not a reason to prevent kids from experiencing the joy of firecrackers. As your sacrifice for them, walk to your office for 3 days. Let them have the fun of bursting crackers. -Sg #Diwali #DontBanCrackers pic.twitter.com/isrSZCQAec
— Sadhguru (@SadhguruJV) November 3, 2021
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಸದ್ಗುರು ಜಗ್ಗಿ ವಾಸುದೇವ್,’ನಾನು ಕೆಲವು ವರ್ಷಗಳಿಂದ ಪಟಾಕಿಯನ್ನು ಹೊತ್ತಿಸಿಲ್ಲ. ಆದರೆ ನಾನು ಚಿಕ್ಕವನಾಗಿದ್ದಾಗ ಪಟಾಕಿ ಹೊಡೆಯುವುದೇ ಒಂದು ಸಂಭ್ರಮವಾಗಿತ್ತು. ಸೆಪ್ಟೆಂಬರ್ ತಿಂಗಳ ಆರಂಭದಿಂದಲೇ ನಾವು ಪಟಾಕಿಗಳ ಕನಸು ಕಾಣುತ್ತಿದ್ದೆವು. ದೀಪಾವಳಿ ಮುಗಿದ ನಂತರವೂ ಮುಂದಿನ ಒಂದು-ಎರಡು ತಿಂಗಳು ನಾವು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದೆವು. ಆದರೆ, ಇಂದಿನ ಕಾಲದ ಮಕ್ಕಳಿಗೆ ಪಟಾಕಿ ಸಿಡಿಸುವ ಖುಷಿ, ಸಂಭ್ರಮ ಇಲ್ಲದಂತಾಗಿದೆ’ ಎಂದಿದ್ದಾರೆ.
ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದ ಕೊಲ್ಕತ್ತಾ ಹೈಕೋರ್ಟ್ ವಿಧಿಸಿದ್ದ ಪಟಾಕಿ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಗಾಳಿಯ ಗುಣಮಟ್ಟ “ಉತ್ತಮ” ಅಥವಾ “ಮಧ್ಯಮ” ಇರುವ ಪ್ರದೇಶಗಳಲ್ಲಿ ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಮಾರಾಟ ಮಾಡಬಹುದು ಮತ್ತು ಸಿಡಿಯಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತೀರ್ಪು ನೀಡಿತ್ತು. ಹಸಿರು ಪಟಾಕಿ ಸೇರಿದಂತೆ ಪಟಾಕಿಗಳ ಮೇಲಿನ ಕೊಲ್ಕತ್ತಾ ಹೈಕೋರ್ಟ್‌ನ ನಿಷೇಧವನ್ನು ಪ್ರಶ್ನಿಸಿ ಎರಡು ಅರ್ಜಿಗಳ ಪೀಠ ವಿಚಾರಣೆ ನಡೆಸುತ್ತಿದೆ. ಪಟಾಕಿ ವ್ಯಾಪಾರಿಗಳು ಈ ಕುರಿತು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: Diwali 2021: ನಿಮ್ಮ ದೀಪಾವಳಿ ಸಂತಸವನ್ನು ಮತ್ತಷ್ಟು ಹೆಚ್ಚಿಸಬೇಕೇ? ಈ ಸಲಹೆಗಳನ್ನು ಅನುಸರಿಸಿ
ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್