ಲಸಿಕೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಹೊಸ ಸಮಸ್ಯೆ: ನರೇಂದ್ರ ಮೋದಿ
ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಕೊರೊನಾ ಲಸಿಕೆ ವಿತರಿಸಿರುವ 40 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವರ್ಚುವಲ್ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಸ್ಥಳೀಯ ಧಾರ್ಮಿಕ ಮುಖಂಡರ ನೆರವಿನಿಂದ ಜಾಗೃತಿ ಮೂಡಿಸಲು ಯತ್ನಿಸಬೇಕು ಎಂದರು.
ದೆಹಲಿ: ದೇಶದಲ್ಲಿ ಪ್ರಸ್ತುತ ನೂರು ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈಗ ನಿರ್ಲಕ್ಷ್ಯ ತೋರಿದರೆ ಹೊಸ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ದೇಶದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆಯ ಸಂದೇಶ ನೀಡಿದರು. ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಕೊರೊನಾ ಲಸಿಕೆ ವಿತರಿಸಿರುವ 40 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವರ್ಚುವಲ್ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಸ್ಥಳೀಯ ಧಾರ್ಮಿಕ ಮುಖಂಡರ ನೆರವಿನಿಂದ ಜಾಗೃತಿ ಮೂಡಿಸಲು ಯತ್ನಿಸಬೇಕು ಎಂದರು.
ಲಸಿಕೆಯ ಬಗ್ಗೆ ವದಂತಿಗಳನ್ನು ಹರಡಬಾರದು. ಪ್ರತಿ ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡಬೇಕು. ಈವರೆಗೆ ಲಸಿಕೆಯನ್ನೇ ಪಡೆಯದವರಿಗೆ ಮೊದಲ ಡೋಸ್ ಕೊಡಲು ಆದ್ಯತೆ ಸಿಗಬೇಕು. ಮೊದಲ ಡೋಸ್ ಲಸಿಕೆ ಪಡೆದುಕೊಂಡ ಹಲವರು 2ನೇ ಡೋಸ್ ಲಸಿಕೆ ಪಡೆದುಕೊಂಡಿಲ್ಲ. ಇಂಥವರಿಗೆ ಲಸಿಕೆ ನೀಡಲು ಆದ್ಯತೆ ಕೊಡಬೇಕು. ಕಡಿಮೆ ಲಸಿಕೆ ನೀಡಿರುವ ಜಿಲ್ಲೆಗಳಲ್ಲಿ ಲಸಿಕಾ ಅಭಿಯಾನಕ್ಕೆ ಹೊಸ ವೇಗ ಸಿಗಬೇಕು ಎಂದು ಸಲಹೆ ಮಾಡಿದರು.
ಲಸಿಕೆ ಅಭಿಯಾನವನ್ನು ಹೊಸ ಮಾದರಿಯಲ್ಲಿ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮೋದಿ ಸೂಚಿಸಿದರು. ನೂರು ಕೋಟಿ ಡೋಸ್ ಲಸಿಕೆ ನೀಡಿದ ಬಳಿಕ ನಾವು ನಿರ್ಲಕ್ಷ್ಯ ತೋರಿದರೆ, ಹೊಸ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆಯ ಸಂದೇಶ ರವಾನಿಸಿದರು. ನಾನು ಇತ್ತೀಚೆಗೆ ವ್ಯಾಟಿಕನ್ನಲ್ಲಿ ಪೋಪ್ ಪ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದೆ. ಲಸಿಕೆ ಬಗ್ಗೆ ಧಾರ್ಮಿಕ ನಾಯಕರ ಸಂದೇಶವನ್ನು ಜನರಿಗೆ ತಲುಪಿಸಬೇಕು ಎಂದು ಅವರು ಸಲಹೆ ಮಾಡಿದರು.
ಇಲ್ಲಿಯವರೆಗೆ 107 ಕೋಟಿ ಕೊವಿಡ್ ಲಸಿಕೆ ಡೋಸ್ ನೀಡಲಾಗಿದೆ ದೇಶದಲ್ಲಿ ನೀಡಲಾಗುತ್ತಿರುವ ಕೊವಿಡ್-19 ಲಸಿಕೆ ಪ್ರಮಾಣ ಮಂಗಳವಾರ 107 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಂಜೆ 7 ಗಂಟೆಯವರೆಗೆ 37,38,574 ಡೋಸ್‌ಗಳನ್ನು ನೀಡಲಾಯಿತು. ತಡರಾತ್ರಿಯ ವೇಳೆಗೆ ದಿನದ ಅಂತಿಮ ವರದಿಗಳ ಸಂಕಲನದೊಂದಿಗೆ ದೈನಂದಿನ ವ್ಯಾಕ್ಸಿನೇಷನ್ ಪ್ರಮಾಣವು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸಚಿವಾಲಯ ತಿಳಿಸಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಮಾತನಾಡಿ, ಭಾರತದ ಅರ್ಹ ಜನಸಂಖ್ಯೆಯ ಶೇ 78ರಷ್ಟು ಜನರು ಕೊವಿಡ್ ಲಸಿಕೆಯ ಮೊದಲ ಡೋಸ್ ಅನ್ನು ನಿರ್ವಹಿಸಿದ್ದಾರೆ ಮತ್ತು 38 ಪ್ರತಿಶತದಷ್ಟು ಜನರು ಎರಡೂ ಲಸಿಕೆ ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Har Ghar Dastak ಮನೆ ಮನೆಗೆ ಕೊವಿಡ್ ಲಸಿಕೆ ಅಭಿಯಾನ ‘ಹರ್ ಘರ್ ದಸ್ತಕ್’ ಆರಂಭ ಇದನ್ನೂ ಓದಿ: Covaxin Vaccine: ಕೊವ್ಯಾಕ್ಸಿನ್ ಲಸಿಕೆಯನ್ನು ಅಂಗೀಕರಿಸಿದ ಆಸ್ಟ್ರೇಲಿಯಾ