ಟಿಬೆಟ್ ಮೂಲದ ಯುವಕನ ನಾಯಿ ಪ್ರೀತಿ ನೀವು ನೋಡಲೇಬೇಕು, ಈತನ ನಾಯಿಪ್ರೇಮಕ್ಕೆ ಬೇಸತ್ತು ಹೆಂಡತಿ ದೂರವಾಗಿದ್ದಾಳೆ!

ಆರೋಗ್ಯವಾಗಿರುವ ನಾಯಿಗಳನ್ನೇ ಸಾಕುವುದೇ ಕಷ್ಟ. ಸಾಕಿದ್ರೂ ಅಬ್ಬಬ್ಬಾ ಅಂದ್ರೆ ಎರಡೋ ಮೂರೋ ನಾಯಿಗಳನ್ನ ಸಾಕಬಹುದು. ಆದ್ರೆ ಇಂತಹ ಅನಾರೋಗ್ಯ ಪೀಡಿತ ಬೀದಿನಾಯಿಗಳನ್ನ ಸಾಕುವುದು ಅಂದ್ರೆ ಆತ ದೇವತಾ ಮನುಷ್ಯನೇ ಆಗಿರಬೇಕು ಅಲ್ಲವೆ?

ಟಿಬೆಟ್ ಮೂಲದ ಯುವಕನ ನಾಯಿ ಪ್ರೀತಿ ನೀವು ನೋಡಲೇಬೇಕು, ಈತನ ನಾಯಿಪ್ರೇಮಕ್ಕೆ ಬೇಸತ್ತು ಹೆಂಡತಿ ದೂರವಾಗಿದ್ದಾಳೆ!
ಟಿಬೆಟ್ ಮೂಲದ ಯುವಕನ ನಾಯಿ ಪ್ರೀತಿ ನೀವು ನೋಡಲೇಬೇಕು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 10, 2022 | 11:48 AM

ಪ್ರಪಂಚದಲ್ಲಿ ಮಾನವೀಯತೆಗೆ ಬಹಳ ದೊಡ್ಡ ಹೆಸರಿದೆ. ಆದ್ರೆ ಮಾನವೀಯತೆಯನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ತೋರ್ಪಡಿಕೆಗಾಗಿ ಮಾನವೀಯತೆ ತೋರಿಸುವವರಿಗೇನೂ ಕಡಿಮೆ ಇಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ಇದ್ದಾನೆ. ಆತನ ಕೆಲಸ ನೋಡಿದ್ರೆ ಬಹುಶಃ ಮಾನವೀಯತೆಗೆ ಮತ್ತೊಂದು ಹೆಸರೇ ಈತ ಎನ್ನಬಹುದೇನೋ. ಅಷ್ಟಕ್ಕೂ ಯಾರೀತಾ, ಆತನ ಮಾನವೀಯ ಕೆಲಸವಾದ್ರೂ ಏನು ಅಂತೀರಾ? ಈ ಸ್ಟೋರಿ ನೋಡಿ.

ಒಂದೆಡೆ ಕಾಲುಗಳಲ್ಲಿ ಶಕ್ತಿಯೇ ಇಲ್ಲದೆ ಲಕ್ವ ಹೊಡೆದು, ಚಲಿಸಲೂ ಆಗದೆ ತೆವಳುತ್ತಿರೋ ನಾಯಿಮರಿಗಳು. ಅದರ ಪಕ್ಕದಲ್ಲೇ ಖಾಯಿಲೆಗೆ ತುತ್ತಾಗಿ ದೇಹದಲ್ಲಿ ರೋಮವೇ ಇಲ್ಲದೆ ಅಸಹ್ಯ ಎನಿಸುವ ನಾಯಿಗಳು, ಮತ್ತೊಂದೆಡೆ ಕೈಯೇ ಇಲ್ಲದೆ ಅಂಗವಿಕಲವಾಗಿರುವ ನಾಯಿ… ಒಂದಾ ಎರಡಾ.. ಒಂದೊಂದು ನಾಯಿಯದ್ದೂ (Dog) ಒಂದೊಂದು ದುರಂತ ಕಥೆ.. ಅಕ್ಷರಶಃ ನಾಯಿ ಪಾಡು ಇವುಗಳದ್ದು.

ಆದ್ರೆ ಈ ನಾಯಿಗಳದ್ದು ಅದ್ಯಾವ ಜನುಮದ ಅದೃಷ್ಟವೋ ಏನೋ.. ಈ ಜನ್ಮದಲ್ಲಿ ಇವುಗಳ ಅಸಾಹಾಯಕ ಸ್ಥಿತಿಯಲ್ಲೂ ದೇವರಂತೆ ವ್ಯಕ್ತಿಯೊಬ್ಬ ಸಿಕ್ಕಿದ್ದಾರೆ. ಅವರೇ ಕಾಲ್​ಸಂಗ್ ಡೋರ್ಜಿ (Dog Lover Kalsang Dorjee)… ಹೌದು ಡೋರ್ಜಿ ಅದೆಂತಹ ನಾಯಿ ಪ್ರೇಮಿ ಅಂದ್ರೆ ಆ ನಾಯಿ ಅದೆಂತಹದ್ದೇ ಅಸಹ್ಯ ಪರಿಸ್ಥಿತಿಯಲ್ಲಿರಲಿ. ಆದ್ರೆ ಈತನಿಗೆ ಮಾತ್ರ ಅದು ತನ್ನ ಮಗುವಿನಂತೆ. ಮೈಸೂರು (Mysore) ಕೊಡಗು (Kodagu) ಗಡಿಯಲ್ಲಿರೋ ಟಿಬೆಟಿಯನ್​ ನಿರಾಶ್ರಿತರ ಶಿಬಿರದಲ್ಲಿ (Dolma Dog Rescue House) ಕಾಲ್​ಸಂಗ್ ಡೋರ್ಜಿ ಅನಾಥ ಬೀದಿ ನಾಯಿಮರಿಗಳ ಆಶ್ರಯ ಕೇಂದ್ರ ಸ್ಥಾಪಿಸಿದ್ದಾರೆ.

ಇಲ್ಲಿ 40ಕ್ಕೂ ಅಧಿಕ ನಾಯಿಗಳಿವೆ. ಎಲ್ಲವೂ ಬೀದಿನಾಯಿಗಳೆ. ಬಹಳಷ್ಟು ನಾಯಿಗಳು ಅನಾಥವಾಗಿ ವಿವಿಧ ತೊಂದರೆಗೆ ಸಿಲುಕಿಕೊಂಡವುಗಳು. ಕೊಪ್ಪ, ಪಿರಿಯಾಪಟ್ಟಣ, ಕುಶಾಲನಗರ, ಮಡಿಕೇರಿ ಹೀಗೆ ವಿವಿಧ ಸ್ಥಳಗಳಿಂದ ಈ ನಾಯಿಗಳನ್ನು ರಕ್ಷಿಸಿ ತಂದು ತಮ್ಮ ಆಶ್ರಯತಾಣದಲ್ಲಿ ಸಾಕುತ್ತಿದ್ದಾರೆ. ಕೇವಲ ಆಹಾರ ಆಶ್ರಯ ಮಾತ್ರವಲ್ಲ, ಅನಾರೋಗ್ಯಪೀಡಿತ ನಾಯಿಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನ ಕೂಡ ಇವರೇ ನೀಡ್ತಾರೆ.

Dog Lover Kalsang Dorjee at mysore kodagu border tibetan refugee camp

ಇವರ ಬಳಿಕ 40ಕ್ಕೂ ಅಧಿಕ ನಾಯಿಗಳಿವೆ. ಒಂದು ನಾಯಿಯನ್ನ ರಕ್ಷಿಸಿ ತಂದ ಬಳಿಕ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸಂತಾನಹರಣ ಮಾಡುತ್ತಾರೆ. ಬಳಿಕ ಯಾರಿಗಾದ್ರೂ ದಾನ ನೀಡ್ತಾರೆ. ಇವರ ಬಳಿ ಬಹುತೇಕ ನಾಯಿಗಳು ಅನಾರೋಗ್ಯಪೀಡಿತವಾಗಿಯೇ ಬರುತ್ತವೆ. ಆದ್ರೆ ಒಮ್ಮೆ ಇವರ ಬಳಿ ಬಂದ ಬಳಿಕ ಅದಕ್ಕೆ ಚಿಕಿತ್ಸೆ ನೀಡಿ ಸುಧಾರಿಸುತ್ತಾರೆ. ಪ್ರತಿಯೊಂದು ನಾಯಿಗೂ ಹೆಸರಿಡುತ್ತಾರೆ. ಯಜಮಾನ ಬಂದ ತಕ್ಷಣ ಪ್ರತಿಯೊಂದು ನಾಯಿಯೂ ಖುಷಿಯಿಂದ ಇವರ ಬಳಿ ಓಡೋಡಿ ಬಂದು ಮುದ್ದಾಡುತ್ತಾವೆ.

ದಿನಕ್ಕೆ ಮೂರು ಹೊತ್ತು ಅತ್ಯುತ್ತಮ ದರ್ಜೆಯ ಆಹಾರವನ್ನೇ ನೀಡುತ್ತಾರೆ. ಬೇಜಾರದ ಸಂಗತಿ ಅಂದ್ರೆ ಇವರ ನಾಯಿ ಪ್ರೀತಿ ನೋಡಲಾಗದೆ ಇವರ ಪತ್ನಿ ಇವರನ್ನು ಬಿಟ್ಟು ಹೋಗಿದ್ದಾರಂತೆ! ಇವರ ನಾಯಿ ಪ್ರೀತಿ ನೋಡಿದ ಸ್ಥಳೀಯರು ತಾವೂ ಕೈಲಾದ ಸಹಾಯ ಮಾಡುತ್ತಾರೆ. ತಿಂಗಳಿಗೆ ಇವರಿಗೆ ಈ ನಾಯಿಗಳ ಪಾಲನೆ ಪೋಷಣೆ, ಕಟ್ಟಡ ಬಾಡಿಗೆ ಸೇರಿ 70 ಸಾವಿರ ರೂ ಖರ್ಚಾಗುತ್ತದೆ. ಇವರ ಅಕ್ಕ ಡೋಲ್ಮಾ ಈ ನಾಯಿಗಳು ಆರೈಕೆಗೆ ಪ್ರತಿ ತಿಂಗಳು ಸಾಕಷ್ಟು ಹಣ ಕಳುಹಿಸುತ್ತಾರೆ. ಹಾಗಾಗಿ ನಾಯಿ ಆರೈಕೆ ಕೇಂದ್ರಕ್ಕೆ ಡೋಲ್ಮಾ ಅಂತಾನೇ ಹೆಸರಿಟ್ಟಿದ್ದಾರೆ.

Also Read: ರೇಬೀಸ್ ಇನ್ನು ಅಧಿಸೂಚಿತ ಕಾಯಿಲೆ, ನಾಯಿ ಕಡಿತದ ರೇಬೀಸ್ ಕಾಯಿಲೆ 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ: ಆರೋಗ್ಯ ಸಚಿವ ಸುಧಾಕರ್

ಆರೋಗ್ಯವಾಗಿರುವ ನಾಯಿಗಳನ್ನೇ ಸಾಕುವುದೇ ಕಷ್ಟ. ಸಾಕಿದ್ರೂ ಅಬ್ಬಬ್ಬಾ ಅಂದ್ರೆ ಎರಡೋ ಮೂರೋ ನಾಯಿಗಳನ್ನ ಸಾಕಬಹುದು. ಆದ್ರೆ ಇಂತಹ ಅನಾರೋಗ್ಯ ಪೀಡಿತ ಬೀದಿನಾಯಿಗಳನ್ನ ಇಷ್ಟೊಂದು ಅಗಾಧ ಸಂಖ್ಯೆಯಲ್ಲಿ ಸಾಕುವುದು ಅಂದ್ರೆ ಆತ ದೇವತಾ ಮನುಷ್ಯನೇ ಆಗಿರಬೇಕು ಅಲ್ಲವೆ? ತಮ್ಮ ಈ ನಿಸ್ವಾರ್ಥ ಸೇವೆಗೆ ಸಹಾಯ ಮಾಡುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ. (ವರದಿ: ಗೋಪಾಲ್ ಸೋಮಯ್ಯ, ಟಿವಿ9)

ರಾಜ್ಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ