ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮತ್ತು ಆನೆ ಸಾವು ಪ್ರಕರಣ: ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆ!

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾದಾಟಕ್ಕೆ ಪ್ರವಾಸಿ ಮಹಿಳೆ ಹಾಗೂ 'ಮಾರ್ತಾಂಡ' ಆನೆ ಬಲಿಯಾಗಿದೆ. ಶಿಬಿರದಲ್ಲಿ ಆನೆಗಳ ಸಂಖ್ಯೆ ಮಿತಿಗೊಳಿಸಲು ಮತ್ತು ಪ್ರವಾಸಿಗರಿಂದ ದೂರವಿಡಲು 2019ರಲ್ಲೇ ಹೈಕೋರ್ಟ್ ತಜ್ಞರ ಸಮಿತಿ ನೀಡಿದ್ದ ನೆಗೆಟಿವ್ ವರದಿ ಹಾಗೂ ಪ್ರಮುಖ ಶಿಫಾರಸುಗಳನ್ನು ಅರಣ್ಯ ಇಲಾಖೆ ಸಂಪೂರ್ಣ ನಿರ್ಲಕ್ಷಿಸಿದ್ದೇ ಈ ದಾರುಣ ದುರಂತಕ್ಕೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮತ್ತು ಆನೆ ಸಾವು ಪ್ರಕರಣ: ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆ!
ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮತ್ತು ಆನೆ ಸಾವು ಪ್ರಕರಣ: ತಜ್ಞರ ಸಮಿತಿ ವರದಿಯನ್ನ ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆ!
Edited By:

Updated on: May 20, 2026 | 12:59 PM

ಕೊಡಗು, ಮೇ 20: ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಎರಡು ದಿನಗಳ ಹಿಂದೆ (ಮೇ 18) ಆನೆಗಳ ನಡುವಿನ ಕಾದಾಟಕ್ಕೆ ಚೆನ್ನೈ ಮೂಲದ ಪ್ರವಾಸಿ ಮಹಿಳೆ ತುಳಸಿ (33) ಬಲಿಯಾಗಿದ್ದರು. ಇದರ ಬೆನ್ನಲ್ಲೇ, ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಎಂಬ ಸಾಕಾನೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಈ ದಾರುಣ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಮತ್ತು ತಜ್ಞರ ವರದಿಯ ಕಡೆಗಣನೆಯೇ ಮುಖ್ಯ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮುಖ್ಯಾಂಶಗಳು

  • ದುಬಾರೆ ಶಿಬಿರದಲ್ಲಿ ಆನೆಗಳ ಕಾದಾಟಕ್ಕೆ ಪ್ರವಾಸಿ ಮಹಿಳೆ ಮತ್ತು ಆನೆ ಸಾವು.
  • ನಿಯಮ ಮೀರಿ 30 ಆನೆಗಳನ್ನು ಇರಿಸಿ ತಜ್ಞರ ವರದಿ ಕಡೆಗಣಿಸಿದ ಇಲಾಖೆ.
  • ಮಿತಿಮೀರಿದ ಪ್ರವಾಸಿಗರ ಭೇಟಿಯಿಂದ ಆನೆಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿವೆ.

2019ರಲ್ಲೇ ಎಚ್ಚರಿಸಿದ್ದ ತಜ್ಞರ ಸಮಿತಿ

ಹೈಕೋರ್ಟ್ ಆದೇಶದಂತೆ ವನ್ಯಜೀವಿ ತಜ್ಞ ಕೆ.ಎಂ. ಚಿಣ್ಣಪ್ಪ, ಪಶುವೈದ್ಯ ಸರ್ಜನ್ ಡಾ. ಕಲೈವಣ್ಣನ್ ಮತ್ತು ಮುಖ್ಯ ಪಶುವೈದ್ಯ ಡಾ. ಅಶ್ರಫ್ ಅವರನ್ನೊಳಗೊಂಡ ತಜ್ಞರ ಸಮಿತಿಯು ಕರ್ನಾಟಕದ ಎಲ್ಲಾ ಆನೆ ಶಿಬಿರಗಳಿಗೆ ಭೇಟಿ ನೀಡಿ 2019ರಲ್ಲೇ ಅರಣ್ಯ ಇಲಾಖೆಗೆ ಸಮಗ್ರ ವರದಿ ಸಲ್ಲಿಸಿತ್ತು. ಆದರೆ ಇಲಾಖೆ ಇದನ್ನು ಸಂಪೂರ್ಣವಾಗಿ ಕಡೆಗಣಿಸಿದೆ.

ವರದಿಯಲ್ಲಿದ್ದ ಪ್ರಮುಖ ನೆಗೆಟಿವ್ ಅಂಶಗಳು ಮತ್ತು ಶಿಫಾರಸುಗಳು

ದುಬಾರೆ ಶಿಬಿರಕ್ಕೆ ಮಿತಿಮೀರಿ ಭೇಟಿ ನೀಡುವ ಪ್ರವಾಸಿಗರಿಂದಾಗಿ ಆನೆಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿವೆ. ಪ್ರವಾಸಿಗರ ಅತಿಯಾದ ಒಡನಾಟದಿಂದ ಆನೆಗಳ ನಡವಳಿಕೆಯಲ್ಲಿ ಅಪಾಯಕಾರಿ ಬದಲಾವಣೆಗಳಾಗುತ್ತಿವೆ ಎಂದು ಚಿತ್ರಸಹಿತ ವರದಿ ನೀಡಲಾಗಿತ್ತು. ಪ್ರವಾಸಿಗರನ್ನು ಆನೆಗಳ ತೀರಾ ಹತ್ತಿರಕ್ಕೆ ಬಿಡಬಾರದು ಮತ್ತು ಅವುಗಳಿಂದ ದೂರವಿಡಬೇಕು ಎಂದು ಸಮಿತಿ ಸ್ಪಷ್ಟವಾಗಿ ತಿಳಿಸಿತ್ತು. ಒಂದು ಶಿಬಿರದಲ್ಲಿ ಗರಿಷ್ಠ 15 ಆನೆಗಳಿಗಿಂತ ಹೆಚ್ಚು ಇರಬಾರದು ಎಂದು ಶಿಫಾರಸು ಮಾಡಲಾಗಿತ್ತು. ಆದರೆ, ಪ್ರಸ್ತುತ ದುಬಾರೆ ಶಿಬಿರದಲ್ಲಿ ನಿಯಮ ಮೀರಿ ಬರೋಬ್ಬರಿ 30 ಆನೆಗಳನ್ನು ಇರಿಸಲಾಗಿದೆ.

ಇದನ್ನೂ ಓದಿ ಕಾದಾಟದ ವೇಳೆ ಗಂಭೀರ ಗಾಯಗೊಂಡಿದ್ದ ಆನೆ ಮಾರ್ತಾಂಡ ಚಿಕಿತ್ಸೆ ಫಲಿಸದೆ ಸಾವು

ದುರಂತ ನಡೆದಿದ್ದು ಹೇಗೆ?

ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ವೇಳೆ ‘ಕಂಜನ್’ ಮತ್ತು ‘ಮಾರ್ತಾಂಡ’ ಆನೆಗಳ ನಡುವೆ ದಿಢೀರ್ ಕಾದಾಟ ಆರಂಭವಾಗಿತ್ತು. ಕಂಜನ್ ದಾಳಿಗೆ ಸಿಲುಕಿ ಮಾರ್ತಾಂಡ ಆನೆ ನಿಯಂತ್ರಣ ತಪ್ಪಿ ನದ ದಂಡೆಯಲ್ಲಿದ್ದ ಪ್ರವಾಸಿಗರ ಮೇಲೆ ಬಿದ್ದಿತ್ತು. ಇದರ ಅಡಿಯಲ್ಲಿ ಸಿಲುಕಿದ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಪತಿ ಮತ್ತು ಮಗು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಕಾದಾಟದಲ್ಲಿ ತೀವ್ರ ಆಂತರಿಕ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೆ ಮಾರ್ತಾಂಡ ಆನೆಯೂ ಮೃತಪಟ್ಟಿದೆ. ತಜ್ಞರ ಸಮಿತಿಯ ವರದಿಯನ್ನು ಅರಣ್ಯ ಇಲಾಖೆ ಸಕಾಲದಲ್ಲಿ ಜಾರಿಗೊಳಿಸಿದ್ದರೆ ಈ ಅಮೂಲ್ಯ ಜೀವಗಳನ್ನು ಉಳಿಸಬಹುದಿತ್ತು ಎಂದು ಸಾರ್ವಜನಿಕರು ಹಾಗೂ ವನ್ಯಜೀವಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us