ಕೊಡಗು, (ಜೂನ್ 26): ಕರ್ನಾಟಕದಲ್ಲಿ ಮುಂಗಾರು ಮಳೆ ಜೋರಾಗಿದೆ. ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಕೊಡಗಿನಲ್ಲೂ ಸಹ ಇಂದು (ಜೂನ್ 26) ಎಡಬಿಡದೆ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಇನ್ನು ಈ ವರ್ಷಧಾರೆ ನಾಳೆಯೂ(ಗುರುವಾರ) ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ(ಜೂನ್ 27) ಕೊಡಗು ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕೊಡಗಿನಲ್ಲಿ ನಾಳೆ ಯೆಲ್ಲೋ ಅಲರ್ಟ್ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸುವಂತೆ ಜಿಲ್ಲಾ ಶಿಕ್ಷಣ ಇಲಾಖೆ ಸೂಚಿಸಿದೆ. ಇದರ ಮೇರೆಗೆ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಣೆ ಮಾಡಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡದಲ್ಲೂ ಸಹ ನಾಳೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಜಿಲ್ಲೆಯಾದ್ಯಂತ ಜೂ.27ರಂದು ಶಾಲೆಗಳಿಗೆ ರಜೆ ಘೋಷಣೆ
ಕೊಡಗು ಜಿಲ್ಲೆಯಲ್ಲಿ ಭರ್ತಿ ಒಂದು ತಿಂಗಳ ಬಳಿಕ ಮುಂಗಾರು ಆರ್ಭಟಿಸಲಾರಂಭಿಸಿದೆ. ವರುಣಾರ್ಭಟದ ಮೊದಲ ದಿನವೇ ನದಿ ತೊರೆಗಳು ಉಕ್ಕಲಾರಂಭಿಸಿವೆ. ಅಲ್ಲಲ್ಲಿ ಮಳೆ ಸಂಬಂಧಿತ ಅನಾಹುತಗಳು ಸಂಭವಿಸುತ್ತಿವೆ. ಭಅಗಮಂಡಲ ತ್ರಿವೇಣಿ ಸಂಗಮ ಜಲಾವೃತವಾಗುತ್ತ ಸಾಗಿದೆ. ಮಡಿಕೇರಿಯಲ್ಲಿ ತಡೆಗೋಡೆ ಇಲ್ಲದೆ ಮುಖ್ಯ ರಸ್ತೆ ರಾಜಕಾಲುವೆಗೆ ಕುಸಿಯುವ ಭಿತಿ ಎದುರಾಗಿದೆ.
ಮಡಿಕೇರಿ ನಗರದ ಹೃದಯ ಭಾಗದಲ್ಲಿಯೇ ಮುಖ್ಯ ರಸ್ತೆಯೊಂದು ಕುಸಿಯುತ್ತಿದೆ. ಮಡಿಕೇರಿಯಿಂದ ಗಾಳಿಬೀಡು, ಕಾಲೂರು ಮೊಣ್ಣಂಗೇರಿ ಗ್ರಾಮಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಎರಡು ವರ್ಷಗಳ ಹಿಮದೆ ಮಳೆಗಾಲದಲ್ಲಿ ಈ ಸರ್ತೆ ಕುಸಿತವಾಗಿತ್ತು. ರಸ್ತೆಯ ಕೆಳಭಾಗದಲ್ಲೇ ರಾಜಕಾಲುವೆ ಹರಿಯುತ್ತದೆ. ರಸ್ತೆಗೆ ಎರಡು ವರ್ಷಗಳ ಕಾಲ ತಡೆಗೋಡೆ ನಿರ್ಮಿಸಿದ ಜಿಲ್ಲಾಡಳಿತ ಇದೀಗ ಮಳೆಗಾಲ ಶುರುವಾಗುತ್ತಲೇ ಒಂದು ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ. ತಡೆಗೋಡೆಗೆಂದು ರಸ್ತೆಯ ಕೆಳಭಾಗದ ಹಿಟಾಚಿಯಿಂದ ಮಣ್ಣು ಕೊರೆದಿದೆ. ಇದೀಗ ರಸ್ತೆ ಕುಸಿಯಲಾರಂಭಿಸಿದೆ. ಯಾವುದೇ ಕ್ಷಣ ಇಡೀ ರಸ್ತೆಯೇ ಕುಸಿಯುವ ಭೀತಿ ಎದುರಾಗಿದೆ. ಹಾಗಾಗಿ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ.
ಇನ್ನು ಮಳೆಯಿಂದಾಗಿ ಜಿಲ್ಲೆಯ ನದಿ ತೊರೆಗಳು ತುಂಬಲಾರಂಭಿಸಿವೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಳೆ ಹೀಗೆ ಮುಂದುವರೆದರೆ ನಾಳೆಯ ವೇಳೆಗೆ ಸಂಗಮ ಜಲಾವೃತವಾಗುವ ಸಾಧ್ಯತೆ ಇದೆ. ಹಾಗೆಯೇ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದ ಬಲಮುರಿಯಲ್ಲಿ ಹಳೆಯ ಸೇತುವೆ ಮುಳಗಡೆಯಾಗಿದೆ. ಸಂಚಾರಕ್ಕೆ ಹೊಸ ಸೇತುವೆ ಇರುವುದರಿಂದ ಸದ್ಯ ಜನರಿಗೆ ಯಾವುದೇ ಅಪಾಯವಿಲ್ಲ. ಉಳಿದಂತೆ ಮಡಿಕೇರಿ ತಾಲ್ಲೂಕಿನ ಬೇಂಗೂರು, ಹೊದವಾಡ, ಕೊಟ್ಟಮುಡಿ, ಧೋನಿ ಕಡವು, ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ಸಿದ್ದಾಪುರದಲ್ಲಿ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಪ್ರವಾಹದ ಆತಂಕ ಶುರುವಾಗಿದೆ. ಹಾಗಾಗಿ ಜಿಲ್ಲಾಡಳಿತ ನದಿ ತೀರದ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವದಂತೆ ಮುನ್ನೆಚ್ಚರಿಕೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ