ಮಡಿಕೇರಿ ರಾಜಾಸೀಟ್‌ನಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡಲು ಟೆಂಡರ್ ಕರೆದ ಸರ್ಕಾರ
ಮಡಿಕೇರಿಯ ರಾಜಾಸೀಟ್‌ನಲ್ಲಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ಗಾಜಿನ ಸೇತುವೆ ನಿರ್ಮಾಣ ಯೋಜನೆಗೆ ತೋಟಗಾರಿಕೆ ಇಲಾಖೆ ಟೆಂಡರ್ ಆಹ್ವಾನಿಸಿದೆ. ಆದರೆ, ಈ ಪ್ರದೇಶ ಭೂಕುಸಿತದ ಅಪಾಯದಲ್ಲಿದ್ದು, ಪರಿಸರ ತಜ್ಞರು ಮತ್ತು ಭೂವಿಜ್ಞಾನಿಗಳ ಅಭಿಪ್ರಾಯ ಪಡೆಯದೆ ಯೋಜನೆ ಆರಂಭಿಸುವುದು ಅಪಾಯಕಾರಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಪಾಯಕಾರಿ ಸ್ಥಿತಿಯಲ್ಲಿರುವ ಪ್ರದೇಶದಲ್ಲಿ ಈ ಯೋಜನೆ ಜನರ ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂಬ ಆತಂಕವಿದೆ.

ಕೊಡಗು, ಆಗಸ್ಟ್ 06: ಮಡಿಕೇರಿ ನಗರದ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟು (Madikeri Raja Seat) ಪ್ರವಾಸಿಗರ ಪಾಲಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಈಗಾಗಲೆ ಪ್ರವಾಸಿಗರ ಅನುಕೂಲಕ್ಕೆ ಅಂತ ಮಾಡಿರುವ ಹತ್ತಾರು ಕಾಮಗಾರಿಗಳಿಂದ ರಾಜಾಸೀಟು ಸೌಂದರ್ಯ ಕಳೆದುಕೊಂಡು ಘಾಸಿಗೊಂಡಿದೆ. ಇದೀಗ ಇದೇ ರಾಜಾಸಿಟಿನ ಸುಂದರ ಬೆಟ್ಟವನ್ನು ಕೊರೆದು ಗಾಜಿನ ಸೇತುವೆ (Glass Bridge) ನಿರ್ಮಾಣ ಮಾಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಈ ಸಂಬಂಧ ತೋಟಗಾರಿಕೆ ಇಲಾಖೆ ಇ ಟೆಂಡರ್ ಆಹ್ವಾನಿಸಿದೆ. 15 ಕೋಟಿ ರೂ. ವೆಚ್ಚದಲ್ಲಿ ಗಾಜಿನ ಸೇತುವೆ ಮತ್ತು ಫುಡ್ ಕೋರ್ಟ್ ನಿರ್ಮಾಣ ಮಾಡಲು ಟೆಂಡರ್ ಕರೆದಿದೆ. ರಾಜಾಸೀಟು ಕಡಿದಾದ ಬೆಟ್ಟದ ಮೇಲಿದ್ದು ಅದರ ಕೆಳಗೆ ಸಾವಿರಾರು ಅಡಿ ಆಳವಾದ ಪ್ರಪಾತವಿದೆ. ಜೊತೆಗೆ ರಾಜಾಸೀಟು ಕೆಳಭಾಗದಲ್ಲೇ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಇದೆ. ಈ ಹೆದ್ದಾರಿ ಈಗಾಗಲೇ ಬಾಯ್ಬಿಟ್ಟು ಭೂ ಕುಸಿತಕ್ಕೆ ಸಿದ್ಧವಾಗಿ ನಿಂತಿದೆ. ವಿಚಿತ್ರ ಅಂದ್ರೆ ರಾಜಾಸೀಟು ಗುಡ್ಡದ ಕೇವಲ 50 ಮೀಟರ್ ದೂರದಲ್ಲೇ ಇರುವ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಜ್ಯೋತಿನಗರದ ನೂರಾರು ಮನೆಗಳನ್ನು ತೆರವು ಮಾಡಲಾಗಿದೆ.
ಈ ಪ್ರದೇಶಗಳು ವಾಸಮಾಡಲು ಯೋಗ್ಯವಲ್ಲ, ಭೂ ಕುಸಿತವಾಗುವ ಸಾಧ್ಯತೆ ಇರುವುದರಿಂದ ಇಲ್ಲಿನ ನಿವಾಸಿಗಳನ್ನು ಶಾಸ್ವತವಾಗಿ ತೆರವು ಮಾಡಲಾಗಿದೆ. ಆದರೆ, ಇದೇ ಸ್ಥಳದ ಪಕ್ಕದ್ದಲ್ಲಿ ಸಾವಿರಾರು ಟನ್ ತೂಕದ ಗಾಜಿನ ಸೇತುವೆ ನಿರ್ಮಾಣ ಮಾಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಅಲ್ಲದೆ, ಗಾಜಿನ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯುವ ಮೊದಲು ಇಲ್ಲಿಗೆ ಭೂ ವಿಜ್ಞಾನಿಗಳನ್ನು, ಪರಿಸರ ಇಲಾಖೆ ತಜ್ಞರನ್ನು ಕರೆಸಿ ವಿವಿಧ ಪರೀಕ್ಷೆಗಳನ್ನು ಮಾಡಿಸಬೇಕು. ಗಾಜಿನ ಸೇತುವೆ ನಿರ್ಮಾಣ ಮಾಡಲು ಈ ಜಾಗ ಸುರಕ್ಷಿತವಾಗಿದೆಯೇ ಎಂದು ಪರೀಕ್ಷಿಸಬೇಕು. ಆದರೆ, ಇದ್ಯಾವುದನ್ನೂ ಮಾಡದ ತೋಟಗಾರಿಕೆ ಇಲಾಖೆ ಟೆಂಡರ್ ಆಹ್ವಾನಿಸಿದೆ.
ಜೊತೆಗೆ ಈಗಾಗಲೇ ರಾಜಾಸೀಟಿನಲ್ಲಿ ವಾರಾಂತ್ಯದಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡಿದರೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರಿಂದಾಗಿ ಪ್ರಕೃತಿಯ ಮೇಲೆ ಇನ್ನಷ್ಟು ಒತ್ತಡ ಬೀಳಲಿದೆ. ಅಲ್ಲದೆ, ಗುಡ್ಡ ಕೊರೆದು ಗಾಜಿನ ಸೇತುವೆ ನಿರ್ಮಾಣ ಮಾಡಿದ್ರೆ ಭೂ ಕುಸಿತವಾಗಿ ಪ್ರವಾಸಿಗರ ಜೀವಕ್ಕೂ ಸಂಚಕಾರ ಬರಬಹುದು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರ ವಾಹನ ಪಾರ್ಕಿಂಗ್ಗೂ ಕೂಡ ಜಾಗವಿಲ್ಲ.
ಇದನ್ನೂ ಓದಿ: ರಜೆ ನೀಡಿದಾಗ ಬಾರದ ಮಳೆ, ಮಕ್ಕಳ ಪಾಠಕ್ಕೆ ಹಿನ್ನೆಡೆ, ರೂಲ್ಸ್ ಬದಲಾವಣೆಗೆ ಮನವಿ
ಜಿಲ್ಲೆಯಲ್ಲಿ ಈಗಾಗಲೇ ಇರುವ ನಾಲ್ಕು ಗಾಜಿನ ಸೇತುವೆಗಳನ್ನು ಸುರಕ್ಷತೆ ಕಾರಣದಿಂದ ಜಿಲ್ಲಾಡಳಿತ ಬಂದ್ ಮಾಡಿದೆ. ಆದರೆ, ಮತ್ತೊಂದೆಡೆ ತೋಟಗಾರಿಕೆ ಇಲಾಖೆ ಮತ್ತೊಂದು ಗಾಜಿನ ಸೇತುವೆ ನಿರ್ಮಾಣ ಮಾಡಲು ಮುಂದಾಗಿದೆ. ಈ ಮೂಲಕ ತನಗೊಂದು ಕಾನೂನು, ಜನರಿಗೊಂದು ಕಾನೂನು ಎಂಬ ತಾರತಮ್ಯ ಮಾಡುತ್ತಿದೆ. ಇಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Wed, 6 August 25



