AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ರಜೆ ನೀಡಿದಾಗ ಬಾರದ ಮಳೆ, ಮಕ್ಕಳ ಪಾಠಕ್ಕೆ ಹಿನ್ನೆಡೆ, ರೂಲ್ಸ್ ಬದಲಾವಣೆಗೆ ಮನವಿ

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆಯಿಂದಾಗಿ ಜಿಲ್ಲಾಧಿಕಾರಿಗಳು ಜೂನ್ ಮತ್ತು ಜುಲೈನಲ್ಲಿ ಹಲವು ದಿನಗಳ ಶಾಲಾ-ಕಾಲೇಜು ರಜೆ ಘೋಷಿಸಿದ್ದಾರೆ. ಆದರೆ, ರಜೆ ಘೋಷಿಸಿದ ಅನೇಕ ದಿನಗಳಲ್ಲಿ ಮಳೆ ಬಂದಿಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಹಿನ್ನಡೆಯಾಗುತ್ತದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷದಿಂದ ಶೈಕ್ಷಣಿಕ ವರ್ಷವನ್ನು ಏಪ್ರಿಲ್​ ನಿಂದಲೇ ಆರಂಭಿಸುವಂತೆ ಪೋಷಕರು ಸಲಹೆ ನೀಡಿದ್ದಾರೆ.

ಕೊಡಗು: ರಜೆ ನೀಡಿದಾಗ ಬಾರದ ಮಳೆ, ಮಕ್ಕಳ ಪಾಠಕ್ಕೆ ಹಿನ್ನೆಡೆ, ರೂಲ್ಸ್ ಬದಲಾವಣೆಗೆ ಮನವಿ
ಕೊಡಗು: ರಜೆ ನೀಡಿದಾಗ ಬಾರದ ಮಳೆ, ಮಕ್ಕಳ ಪಾಠಕ್ಕೆ ಹಿನ್ನೆಡೆ, ರೂಲ್ಸ್ ಬದಲಾವಣೆಗೆ ಮನವಿ
Gopal AS
| Updated By: ವಿವೇಕ ಬಿರಾದಾರ|

Updated on:Jul 30, 2025 | 9:28 PM

Share

ಕೊಡಗು, ಜುಲೈ 30: ಕೊಡಗು (Kodagu) ಜಿಲ್ಲೆಯಲ್ಲಿ ನಾಳೆ ಭಾರಿ ಮಳೆಯಾಗಲಿದೆ (Rain) ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಆಧರಿಸಿ ಜಿಲ್ಲಾಧಿಕಾರಿಗಳು ಜೂನ್ ಮತ್ತು ಜುಲೈಗಳಲ್ಲಿ 15 ದಿವಸ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದಾರೆ. ಆದರೆ, ಶಾಲೆ-ಕಾಲೇಜುಗಳಿಗೆ ರಜೆ ನೀಡಿದ ದಿವಸ ಸಾಧಾರಣ ಮಳೆಯಾಗುತ್ತದೆ, ಅಥವಾ ಮಳೆಯೇ ಬರುವುದಿಲ್ಲ. ಹೀಗೆ, ನಿರಂತರ ರಜೆ ನೀಡಿರುವುದರಿಂದ ಮಕ್ಕಳ ವಿದ್ಯಾಭ್ಯಾಸ ಹಿಂದೆ ಉಳಿಯುತ್ತಿದೆ. ಹೀಗಾಗಿ, ಮುಂದಿನ ವರ್ಷದಿಂದ ಏಪ್ರಿಲ್​ನಿಂದಲೇ ಶಾಲಾ-ಕಾಲೇಜು ಆರಂಭಿಸಿ. ಜೂನ್, ಜುಲೈ ತಿಂಗಳಲ್ಲಿ ರಜೆ ನೀಡುವಂತೆ ಪೋಷಕರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಗಾಳಿ ಸಹಿತ ಜೋರು ಮಳೆಯಾದಾಗ ರಸ್ತೆಗಳ ಮೇಲೆ ಮರಗಳು ಉರುಳಿ ಬೀಳುತ್ತವೆ. ನದಿಗಳು ಉಕ್ಕಿ ಹರಿಯುತ್ತವೆ. ಪ್ರವಾಹ ಬರುತ್ತದೆ. ಇಂತಹ ಸಂದರ್ಭಗಳಲ್ಲಿ ರಸ್ತೆಗಳ ಮೇಲೆ ಸಂಚರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸುತ್ತಾರೆ. ಮಳೆಗಾಲದ ಸಂದರ್ಭಗಳಲ್ಲಿ ರಜೆ, ವಿವೇಚನಾ ರಜೆ ನೀಡುವ ಅಧಿಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಇರುತ್ತದೆ.

ಆದರೆ, ಕೆಲವೊಂದು ಸಲ ರಜೆ ನೀಡಿದಾಗ ಮಳೆ ಬರುವುದಿಲ್ಲ. ಇಂತಹ ಒಂದು ಸಂದಿಗ್ಧ ಪರಿಸ್ಥಿತಿ ಈ ವರ್ಷ ಕೊಡಗು ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ 15ಕ್ಕೂ ಅಧಿಕ ದಿನ ಮಳೆಗಾಲ ರಜೆ ಅಂತ ನೀಡಲಾಗಿದೆ. ಆದರೆ, ಹೆಚ್ಚಿನ ಸಂದರ್ಭದಲ್ಲಿ ರಜೆ ನೀಡಿದ ದಿನ ಮಳೆ ಬಂದಿಲ್ಲ. ಈ ವಿಚಾರವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ
Image
ಚಿಕ್ಕಮಗಳೂರಿನಲ್ಲಿ ಭಾರೀ ಮಳೆಗೆ ಧರೆಗುರುಳಿದ ಮರಗಳು: ರಸ್ತೆ ಸಂಪೂರ್ಣ ಬಂದ್​
Image
ಚಿಕ್ಕಮಗಳೂರು ಗುಡ್ಡ ಕುಸಿತ: ಶೃಂಗೇರಿ-ಮಂಗಳೂರು ಹೆದ್ದಾರಿ ಬಂದ್
Image
ಚಾರ್ಮಾಡಿ ನಿಷೇಧಿತ ಪ್ರದೇಶದಲ್ಲಿ ಟ್ರೆಕ್ಕಿಂಗ್‌: 103 ಮಂದಿ ಪೊಲೀಸ್ ವಶಕ್ಕೆ
Image
ನಾಳೆಯ ಹವಾಮಾನ: ವರುಣಾರ್ಭಟ, ಈ ಜಿಲ್ಲೆಗಳಲ್ಲಿ ಶಾಲೆ-ಕಾಲೇಜ್‌ಗಳಿಗೆ ರಜೆ

ಕೆಲ ನೆಟ್ಟಿಗರು ಜಿಲ್ಲಾಧಿಕಾರಿಗಳ ವಿರುದ್ಧ ಟೀಕೆ ಮಾಡುತ್ತಿದ್ದರೇ. ಕೆಲ ನೆಟ್ಟಿಗರು ಜಿಲ್ಲಾಧಿಕಾರಿಗಳ ಪರ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. “ರಜೆ ನೀಡಿದಾಗಲೆಲ್ಲ ಕೈಕೊಡುವ ಮಳೆಗೆ ಜಿಲ್ಲಾಧಿಕಾರಿಗಳು ಬೈದು ಪ್ರಯೋಜನವಿಲ್ಲ. ಏಕೆಂದರೆ, ಜಿಲ್ಲಾಧಿಕಾರಿಗಳು ರಜೆ ನೀಡುವುದು ಹವಾಮಾನ ಇಲಾಖೆಯ ವರದಿ ಆಧರಿಸಿ. ನಾಳೆ ರೆಡ್ ಅಲರ್ಟ್ ಇದೆ ಅಂತ ವರದಿ ಬಂದರೇ ಜಿಲ್ಲಾಧಿಕಾರಿಗಳು ಯಾವುದೇ ರಿಸ್ಕ್​ ತೆಗೆದುಕೊಳ್ಳದೆ ರಜೆ ಘೋಷಿಸುತ್ತಾರೆ. ರೆಡ್ ಅಲರ್ಟ್​ ಇದ್ದೂ ಮಳೆ ಬಂದಿಲ್ಲ ಅಂದರೇ ಹವಾಮಾನ ಇಲಾಖೆಯದ್ದೇ ವೈಫಲ್ಯ” ಎಂದು ಪೋಷಕರು ಹೇಳಿದ್ದಾರೆ.

“ಹವಾಮಾನ ಇಲಾಖೆ ಮುನ್ಸೂಚನೆ ನಂತರವೂ ರಜೆ ನಿಡದೆ ಇದ್ದಾಗ, ಮಕ್ಕಳ ಜೀವಕ್ಕೆ ಏನಾದರು ಅಪಾಯವಾದರೆ ಕೊನೆಗೆ ಜನರು ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ. ಹೀಗಾಗಿ, ಜಿಲ್ಲಾಧಿಕಾರಿಗಳು ರಿಸ್ಕ್​ ತೆಗೆದುಕೊಳ್ಳದೆ ರಜೆ ಘೋಷಿಸುತ್ತಾರೆ” ಎಂದು ಹೇಳಿದರು.

ಇದನ್ನೂ ಓದಿ: ಕೊಡಗಿನಲ್ಲಿ ಭೂ ಕಂಟಕ: 60ಕ್ಕೂ ಹೆಚ್ಚು ಕುಟುಂಬಗಳು ಕಂಗಾಲು

ಜಿಲ್ಲಾಧಿಕಾರಿಗಳು ಎರಡು ತಿಂಗಳಲ್ಲಿ ಸಾಕಷ್ಟು ಸಾರಿ ರಜೆ ನಿಡಿರುವುದರಿಂದ ಮಕ್ಕಳ ಪಾಠ ಪ್ರವಚನಗಳಿಗೆ ಹಿನ್ನೆಡೆಯಾಗಿದೆ. ಇದನ್ನು ಸರಿದೂಗಿಸುವುದು ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ ಕಷ್ಟವಾಗುತ್ತದೆ. ಹೀಗಾಗಿ, ಮುಂದಿನ ವರ್ಷದಿಂದ ಏಪ್ರಿಲ್, ಮೇ ತಿಂಗಳಲ್ಲಿ ತರಗತಿ ಆರಂಭಿಸಿ. ಜೂನ್, ಜುಲೈ ಮತ್ತು ಆಗಸ್ಟ್​ ತಿಂಗಳಲ್ಲಿ ರಜೆ ನೀಡಲಿ ಎಂದು ಪೋಷಕರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 pm, Wed, 30 July 25