ಕೊಡಗಿನಲ್ಲಿ ಭೂ ಕಂಟಕ: 60ಕ್ಕೂ ಹೆಚ್ಚು ಕುಟುಂಬಗಳು ಕಂಗಾಲು
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹದ ಭೀತಿ ಎದುರಾಗಿದೆ. ಮಡಿಕೇರಿ ಸಮೀಪದ ಶಕ್ತಿನಗರದಲ್ಲಿ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆಯನ್ನು ತೊರೆದಿವೆ. ಧಾರಾಕಾರ ಮಳೆ ಮುಂದುವರೆದಿದ್ದರಿಂದ ಸಾಲು ಸಾಲು ಅವಾಂತರಗಳು ಸಂಭವಿಸುತ್ತಿವೆ. ಸದ್ಯ ಕೊಡಗು ಜಿಲ್ಲಾಡಳಿತ ಕಟ್ಟೆಚ್ಚರವಹಿಸಿದೆ.

ಕೊಡಗು, ಜುಲೈ 27: ಜಿಲ್ಲೆಯಲ್ಲಿ ಮಳೆ (rain) ಆರ್ಭಟ ಮುಂದುವರಿದ ಹಿನ್ನಲೆ ಅಪಾಯದ ಮಟ್ಟ ಮೀರಿ ನದಿ, ಹಳ್ಳ ಕೊಳ್ಳಗಳು ಹರಿಯುತ್ತಿವೆ. ಭಾರೀ ಮಳೆಯಿಂದ ಅಲ್ಲಲ್ಲಿ ಭೂಮಿ ಕುಸಿಯುತ್ತಿದೆ. ಜಿಲ್ಲೆಯ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದ ಶಕ್ತಿನಗರದಲ್ಲಿ ಭೂ ಕುಸಿತದ (Landslides) ಪ್ರಾಣಭೀತಿ ಹಿನ್ನಲೆ ಕಡಿದಾದ ಬೆಟ್ಟದ ಮೇಲಿರುವ 60ಕ್ಕೂ ಹೆಚ್ಚು ಕುಟುಂಬಗಳು ಮನೆ ತೊರೆದಿವೆ. ಭೂಮಿ ಕುಸಿದ ಸ್ಥಳಕ್ಕೆ ಟಾರ್ಪಲ್ ಹೊದಿಸಿ ರಕ್ಷಿಸಲು ಪ್ರಯತ್ನಿಸಲಾಗಿದೆ. ಸದ್ಯ ನಿವಾಸಿಗಳಲ್ಲಿ ತೀವ್ರ ಆತಂಕ ಉಂಟಾಗಿದೆ.
ಜಿಲ್ಲಾಡಳಿತ ಕಟ್ಟೆಚ್ಚರ
ಕೊಡಗಿನಾದ್ಯಂತ ವಾಯು ವಾರುಣಾರ್ಭಟ ಜೋರಾಗಿದೆ. ಅಪಾಯದ ಮಟ್ಟ ಮೀರಿ ನದಿ ತೊರೆಗಳು ಹರಯುತ್ತಿದ್ದು, 2018ರ ಘಟನೆ ಮರುಕಳಿಸುವ ಆತಂಕ ಎದುರಾಗಿದೆ. ಭಾರಿ ಗಾಳಿಗೆ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಸದ್ಯ ಎನ್ಡಿಆರ್ಎಫ್ ಮತ್ತು ಕೊಡಗು ಜಿಲ್ಲಾಡಳಿತ ಕಟ್ಟೆಚ್ಚರವಹಿಸಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಭಾರೀ ಮಳೆಗೆ ಧರೆಗುರುಳಿದ ಮರಗಳು: ರಸ್ತೆ ಸಂಪೂರ್ಣ ಬಂದ್
ಅಷ್ಟೇ ಅಲ್ಲದೆ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದಿರುವಂತಹ ಘಟನೆ ಸೋಮವಾರಪೇಟೆ ತಾಲ್ಲೂಕಿನ ಬಜೆಗುಂಡಿ ಗ್ರಾಮದಲ್ಲಿ ನಡೆದಿದೆ. ಕಾರು ಚಾಲಕ ಚರಣ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾರಂಗಿ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದ್ದು, ಅಪಾಯದ ಮಟ್ಟ ಮೀರಿ ಹಾರಂಗಿ ಮತ್ತು ಕಾವೇರಿ ನದಿ ಹರಿಯುತ್ತಿವೆ. ಸದ್ಯ ಜಿಲ್ಲೆಯ ಕುಶಾಲನಗರ ತಾಲೂಕಿನ ಹುದುಗೂರು ವ್ಯಾಪ್ತಿಯಲ್ಲಿ ತೋಟ ಮತ್ತು ಗದ್ದೆಗಳಿಗೆ ನೀರು ನುಗ್ಗಿದೆ. ಹೊರ ಹರಿವು ಹೆಚ್ಚಾದರೆ ಮನೆಗಳಿಗೆ ನೀರು ನುಗ್ಗುವ ಆತಂಕ ಕೂಡ ಶುರುವಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಗುಡ್ಡ ಕುಸಿತ: ಶೃಂಗೇರಿ-ಮಂಗಳೂರು ಹೆದ್ದಾರಿ ಬಂದ್
ಜಿಲ್ಲೆಯಲ್ಲಿ ಮುಂದುವರಿದ ಮಳೆಯಿಂದಾಗಿ ಕೆಲ ಅವಾಂತರಗಳು ಸಂಭವಿಸಿವೆ. ಪೊನ್ನಂಪೇಟೆ ತಾಲ್ಲೂಕಿನ ಹಲವೆಡೆ ತಗ್ಗು ಪ್ರದೇಶ ಜಲಾವೃತವಾಗಿದೆ. ಬಲ್ಯಮಂಡೂರು-ಹರಿಹರ ರಸ್ತೆ ಜಲಾವೃತವಾಗಿದೆ. ಮಡಿಕೇರಿ-ಸೋಮವಾರಪೇಟೆ ರಸ್ತೆ ಮೇಲೆ ಬೃಹತ್ ಮರ ಉರುಳಿದ್ದು, ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತವಾಗಿತ್ತು. ತೀವ್ರ ಮಳೆ ಬಿರುಗಾಳಿಗೆ ಜನಜೀವನ ತತ್ತರಗೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:50 pm, Sun, 27 July 25







