ಕೊಡಗು: ಹರಿಹರ ಗ್ರಾಮದ ಕೆರೆಯ ಬಳಿಯೇ ವಾಸ್ತವ್ಯ ಹೂಡಿದ ಹುಲಿ; ಆತಂಕದಲ್ಲಿ ಜನ
ಕಾಡು ಬಿಟ್ಟು ನಾಡಿಗೆ ಆಗಮಿಸಿರುವ ವ್ಯಾಘ್ರವೊಂದು ಆ ಗ್ರಾಮಸ್ಥರ ನಿದ್ದೆಗೆಡಿಸಿದೆ. ಕೆರೆ ನೀರು ಕುಡಿದು ಅಲ್ಲೇ ವಿಶ್ರಾಂತಿ ಪಡೀತಾ ಇರವ ಆ ಹುಲಿ, ತಮ್ಮನ್ನ ಯಾವಾಗ ಭಕ್ಷಿಸುತ್ತದೋ ಎಂದು ಜನ ಆತಂಕಕ್ಕೊಳಗಾಗಿದ್ದಾರೆ. ಹಾಗಾಗಿ ಅದನ್ನ ಹಿಡಿಯಲು ಮುಂದಾದ ಅರಣ್ಯ ಇಲಾಖೆಗೆ ಆ ಹುಲಿಯೇ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದೆ.
ಕೊಡಗು, ಏ.11: ಜಿಲ್ಲೆಯ ಪೊನ್ನಂಪೇಟೆ(Ponnampet) ತಾಲ್ಲೂಕಿನ ಹರಿಹರ ಗ್ರಾಮದ ಜನತೆ ಹುಲಿಯಿಂದಾಗಿ ನೆಮ್ಮದಿ ಕಳೆದುಕೊಂಡಿದೆ. ಕಳೆದ ಎರಡು ದಿನಗಳಿಂದ ಹುಲಿಯೊಂದು ಇದೇ ಗ್ರಾಮದ ಕೆರೆಯ ಬಳಿಯಲ್ಲೇ ಇದ್ದು, ನೀರು ಕುಡಿದು ಕಾಡಿನತ್ತ ಸಾಗುವುದನ್ನ ಜನರು ಕಂಡಿದ್ದಾರೆ. ಇದು ನಾಗರಹೊಳೆ ಹುಲಿ(Tiger) ಸಂರಕ್ಷಿತ ಅರಣ್ಯದ 11 ವರ್ಷದ ಈ ಹೆಣ್ಣು ಹುಲಿಯಾಗಿದ್ದು, ಯಾವುದೋ ಕಾರಣದಿಂದ ಕಾಡು ಬಿಟ್ಟು ನಾಡಿಗೆ ಆಗಮಿಸಿ, ಆ ಗ್ರಾಮದ ದೇವರಕಾಡಿನಲ್ಲಿ ವಾಸ್ತವ್ಯ ಹೂಡಿದೆ. ಮೇಲ್ನೋಟಕ್ಕೆ ಗಾಯಗೊಂಡಿರುವಂತೆ ಕಂಡು ಬಂದಿದ್ದು, ಬೇಟೆಯಾಡುವ ಸಾಮರ್ಥ್ಯ ಕಳೆದುಕೊಂಡಂತಿದೆ. ಹಾಗಾಗಿ ಇದು ಯಾವಾಗ ಬೇಕಾದರೂ ಆಹಾರಕ್ಕಾಗಿ ಸುಲಭವಾಗಿ ಸಿಗುವ ಮನುಷ್ಯರನ್ನ ಬಲಿಪಡೆಯಬಹುದು ಎಂಬ ಆತಂಕ ಜನರನ್ನ ಕಾಡುತ್ತಿದೆ.
ಹುಲಿ ಸೆರೆಗಾಗಿ ಕಾರ್ಯಾಚರಣೆ
ನಾಡಿಗೆ ಬಂದ ಹುಲಿ ಹಿಡಿಯಲು ಇಂದು ಬೆಳಗ್ಗಿನಿಂದ ಕಾರ್ಯಾಚರಣೆ ಆರಂಭಿಸಲಾಯಿತು. ನಿನ್ನೆ(ಏ.10) ರಾತ್ರಿಯೂ ಕೆರೆ ಬಳಿಯೇ ಇದ್ದ ಹುಲಿ, ನೀರು ಕುಡಿದು ವಿಶ್ರಾಂತಿಯಲ್ಲಿತ್ತು. ಆದ್ರೆ, ರಾತ್ರಿ ವೇಳೆ ಹುಲಿ ಕಾರ್ಯಾಚರಣೆ ನಡೆಸಲು ಅನುಮತಿ ಇಲ್ಲವಾದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯನ್ನ ಕಾಯುತ್ತಾ ಬೆಳಗಾಗುವುದನ್ನ ಕಾದಿದ್ದಾರೆ. ಆದ್ರೆ, ಹುಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿ ಹೋಗಿದೆ. ಆದ್ರೂ ಗ್ರಾಮದೊಳಗಿನ ದೇವಸರ ಕಾಡಿನಲ್ಲಿ ದಸರಾ ಆನೆಗಳಾದ ಮಹೇಂದ್ರ, ಭೀಮನನ್ನ ಬಳಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿಮೇಲೆ ಹೆಜ್ಜೇನು ದಾಳು ನಡೆಸಿದೆ. ರೇಂಜರ್ ರಂಜನ್ ಈ ಸಂದರ್ಭ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ಇದನ್ನೂ ಓದಿ:ಮೈಸೂರು ಜಿಲ್ಲೆಯಲ್ಲಿ ವ್ಯಾಘ್ರನ ಕಾಟ: ಹೊಲ, ತೋಟ, ರಸ್ತೆಯಲ್ಲೆಲ್ಲ ಹುಲಿ ಹೆಜ್ಜೆ ಗುರುತು ಪತ್ತೆ
ಭೀಮ ಆನೆ ಮತ್ತು ಮಾವುತ ಕುಳ್ಳನಿಗೂ ಹೆಜ್ಜೇನು ಕಚ್ಚಿದೆ. ಇಂದು ಸಂಜೆವರೆಗೆ ಹುಡುಕಿದರೂ ಎಲ್ಲಿಯೂ ಹುಲಿಯು ಪತ್ತೆಯಾಗಿಲ್ಲ. ಕ್ಯಾಮೆರಾಗಳನ್ನ ಅಳವಡಿಸಿ ಹುಲಿಯ ಚಲನ ವಲನ ಕಂಡು ಹಿಡಿಯಲು ಯತ್ನಿಸಲಾಗುತ್ತಿದೆ. ಹುಲಿ ಸೆರೆಯಾಗದೇ ಇರುವುದರಿಂದ ಹರಿಹರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ತೀವ್ರ ಆತಂಕವಿದೆ. ಆದಷ್ಟು ಬೇಗ ಹುಲಿ ಸೆರೆ ಹಿಡಿದು ನೆಮ್ಮದಿ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ