“ಅಮ್ಮ ಏಳಮ್ಮ…” ತಾಯಿಯ ಶವದ ಬಳಿ ಮರಿ ಆನೆಯ ಮೂಕರೋಧನೆ: ಕಣ್ಣೀರಿಟ್ಟ ಜನತೆ

ಮಡಿಕೇರಿಯ ಆನಂದಪುರದಲ್ಲಿ ಹೃದಯ ಕಲಕುವ ಘಟನೆಯೊಂದು ನಡೆದಿದೆ. ಖಾಸಗಿ ಕಾಫಿ ಎಸ್ಟೇಟ್‌ನಲ್ಲಿ ತಾಯಿ ಆನೆಯೊಂದು ಮೃತಪಟ್ಟಿದ್ದು, ಆಕೆಯ ಮರಿಯು ತಾಯಿಯನ್ನು ಬಿಟ್ಟು ಹೋಗಲು ನಿರಾಕರಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆ ಮರಿಯನ್ನು ಬಲವಂತವಾಗಿ ಸರಿಸಿದ ನಂತರ, ಮೃತ ಆನೆಗೆ ಬೆನ್ನುಮೂಳೆಗೆ ಗಂಭೀರ ಗಾಯವಾಗಿ ಆಂತರಿಕ ರಕ್ತಸ್ರಾವದಿಂದ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ.

ಅಮ್ಮ ಏಳಮ್ಮ... ತಾಯಿಯ ಶವದ ಬಳಿ ಮರಿ ಆನೆಯ ಮೂಕರೋಧನೆ: ಕಣ್ಣೀರಿಟ್ಟ ಜನತೆ
ಆನೆ ಮರಿ ದುಃಖ

Updated on: Jul 27, 2026 | 9:48 AM

ಮಡಿಕೇರಿ, ಜು.27: ಕೊಡಗು ಜಿಲ್ಲೆಯ ಅಮ್ಮತಿ ಸಮೀಪದ ಆನಂದಪುರದಲ್ಲಿ ಕರುಳು ಹಿಂಡುವಂತಹ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಖಾಸಗಿ ಕಾಫಿ ಎಸ್ಟೇಟ್‌ನಲ್ಲಿ ಮೃತಪಟ್ಟು ಬಿದ್ದಿದ್ದ ತಾಯಿ ಆನೆಯ ದೇಹವನ್ನು ಬಿಟ್ಟು ದೂರ ಹೋಗಲು ನಿರಾಕರಿಸಿದ ಆನೆ ಮರಿಯ ಗೋಳಾಟವು ಸ್ಥಳೀಯರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

ಶನಿವಾರ ತಡರಾತ್ರಿ ಆನೆ ಮರಿಯ ನಿರಂತರ ಕೂಗು ಕೇಳಿ ಸ್ಥಳೀಯ ಗ್ರಾಮಸ್ಥರು ಕಾಫಿ ತೋಟದತ್ತ ತೆರಳಿದಾಗ ಸುಮಾರು ೩೦ ವರ್ಷ ವಯಸ್ಸಿನ ಹೆಣ್ಣು ಕಾಡುಆನೆಯ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಭಾನುವಾರ ಬೆಳಿಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹಾಗೂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತ ಆನೆಯ ಬಳಿಗೆ ಹೋಗಲು ಪ್ರಯತ್ನಿಸಿದಾಗ, ಆನೆ ಮರಿಯು ತಾಯಿಯನ್ನು ರಕ್ಷಿಸಲು ಮುನ್ನುಗ್ಗಿ ಅಧಿಕಾರಿಗಳನ್ನು ತಡೆಯಿತು. ತಾಯಿಯ ದೇಹದಿಂದ ದೂರ ಮಾಡಲು ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಆನೆ ಮರಿ ನಿರಾಕರಿಸಿತು.

ಇಲ್ಲಿದೆ ನೋಡಿ ಸ್ಟೋರಿ:

ಕೊನೆಗೆ ಬೇರೆ ದಾರಿಯಿಲ್ಲದೇ ಅರಣ್ಯ ಇಲಾಖೆಯ ಸಿಬ್ಬಂದಿ ಬಲೆ ಬಳಸಿ ಆನೆ ಮರಿಯನ್ನು ಸೆರೆಹಿಡಿದು, ಪಕ್ಕಕ್ಕೆ ಕಟ್ಟಿಹಾಕಬೇಕಾಯಿತು. ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯರಾದ ಡಾ. ಮುಜೀಬ್ ಹಾಗೂ ಡಾ. ನವೀನ್ ಕುಮಾರ್ ನಡೆಸಿದರು.

ಇದನ್ನೂ ಓದಿ: ಶಿವಗಂಗೆ ಬೆಟ್ಟದಲ್ಲಿ ಮಂಗನ ಚೇಷ್ಟೆ: ಪ್ರವಾಸಿಗರ ಮೊಬೈಲ್ ಕಸಿದು ಪುಂಡಾಟ!

ವಿರಾಜಪೇಟೆ ಅರಣ್ಯ ಉಪ ಸಂರಕ್ಷಣಾಧಿಕಾರಿ (DCF) ಕಿರುಬನಂತನ್ ಟಿ ಅವರು ಮಾಹಿತಿ ನೀಡಿ, “ಮೃತಪಟ್ಟ ಕಾಡು ಆನೆಗೆ ಸುಮಾರು ೩೦ ವರ್ಷ ವಯಸ್ಸಾಗಿತ್ತು. ಪಶುವೈದ್ಯರ ಪ್ರಾಥಮಿಕ ವರದಿಯಂತೆ ಆನೆಯ ಬೆನ್ನುಮೂಳೆಗೆ ತೀವ್ರ ಗಾಯವಾಗಿ ಆಂತರಿಕ ರಕ್ತಸ್ರಾವ ಸಂಭವಿಸಿ ಸಾವು ಸಂಭವಿಸಿದೆ” ಎಂದು ದೃಢಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಕ್ರಿಯೆಯ ನಂತರ ಬಿಡುಗಡೆ ಮಾಡಲಾದ ಆನೆ ಮರಿಯು ತಾಯಿ ಮೃತಪಟ್ಟ ಸ್ಥಳದಲ್ಲೇ ಕಣ್ಣೀರು ಹಾಕುತ್ತಾ ಅಲೆದಾಡುತ್ತಿರುವುದು ಕಂಡವರ ಮನ ಕರಗಿಸುವಂತಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us