8 ತಿಂಗಳಲ್ಲಿ 9 ದೇವಸ್ಥಾನಗಳ 800 ಕೆಜಿ ಗಂಟೆಗಳನ್ನ ಕದ್ದಿದ್ದರು: ಕಳ್ಳರ ಕೊರಳಿಗೆ ಕೊಡಗು ಪೊಲೀಸರು ಗಂಟೆ ಕಟ್ಟಿದ್ದು ಹೇಗೆ ಗೊತ್ತಾ!?

| Updated By: ಸಾಧು ಶ್ರೀನಾಥ್​

Updated on: Jan 11, 2023 | 12:14 PM

temple bell theft: ಹೀಗೆ ಗಂಟೆಗಳನ್ನ ಗುಡ್ಡೆ ಹಾಕಲು ಕೊಡಗು ಪೊಲೀಸರು ಪಟ್ಟಿರೋ ಕಷ್ಟ ಅಷ್ಟಿಷ್ಟಲ್ಲ. ಅದು ಭರ್ತಿ 8 ತಿಂಗಳ ಕಾರ್ಯಾಚರಣೆ. 30 ಪೊಲೀಸರು.. ಐದು ತಂಡ.. ಮೈಸೂರಿನ ಹಲವೆಡೆ ತಿಂಗಳುಗಟ್ಟಲೆ ಕ್ಯಾಂಪ್... ಕೊನೆಗೂ ಯಶಸ್ಸು

8 ತಿಂಗಳಲ್ಲಿ 9 ದೇವಸ್ಥಾನಗಳ 800 ಕೆಜಿ ಗಂಟೆಗಳನ್ನ ಕದ್ದಿದ್ದರು: ಕಳ್ಳರ ಕೊರಳಿಗೆ ಕೊಡಗು ಪೊಲೀಸರು ಗಂಟೆ ಕಟ್ಟಿದ್ದು ಹೇಗೆ ಗೊತ್ತಾ!?
ಕಳ್ಳರ ಕೊರಳಿಗೆ ಕೊಡಗು ಪೊಲೀಸರು ಗಂಟೆ ಕಟ್ಟಿದ್ದು ಹೇಗೆ ಗೊತ್ತಾ!?
Follow us on

ಅದು ಕೊಡಗು ಜಿಲ್ಲಾ ಪೊಲೀಸರ ನಿದ್ದೆಗೆಡಿಸಿದ್ದ ಪ್ರಕರಣ. 8 ತಿಂಗಳ ಅವಧಿಯಲ್ಲಿ ಭರ್ತಿ 9 ದೇವಸ್ಥಾನಗಳ 800 ಕೆಜಿ ಗಂಟೆಗಳನ್ನ ಕಳ್ಳರು (temple bell theft) ಹೊತ್ತೊಯ್ದಿದ್ದರು. ಆದ್ರೆ ಖದೀಮರು ಮಾತ್ರ ಒಂದೇ ಒಂದು ಕ್ಲೂ ಬಿಡದೆ ತಪ್ಪಿಸಿಕೊಂಡಿದ್ದರು. ಪೊಲೀಸರ ಪಾಲಿಗೆ ಸವಾಲಾಗಿದ್ದ ಈ ಪ್ರಕರಣ ಸಾರ್ವಜನಿಕ ವಲಯದಲ್ಲೂ ಟೀಕೆಗೆ ಕಾರಣವಾಗಿತ್ತು. ಆದ್ರೆ ಹಠ ಬಿಡದ ಕೊಡಗು ಪೊಲೀಸರು (SP MA Aiyappa) ಮಾತ್ರ ಕೊನೆಗೂ ಗಂಟೆಕಳ್ಳರ ಹೆಡೆಮುರಿ ಕಟ್ಟಿದ್ದಾರೆ.

ಇಬ್ಬರು ವ್ಯಕ್ತಿಗಳು ಎತ್ತಿದರೂ ಅಲ್ಲಾಡಿಸಲಾಗದಂತಹ ಬೃಹತ್ ಗಂಟೆಗಳು ಅವು… ಒಂದಾ ಎರಡಾ… ಭರ್ತಿ 800 ಕೆಜಿ ತಾಮ್ರದ ಲಕ್ಷ ಲಕ್ಷ ರೂ ಬೆಲೆ ಬಾಳುವ ಗಂಟೆಗಳು.. ಇವುಗಳನ್ನ ಪೊಲೀಸರು ಯಾಕೆ ಹೀಗೆ ಗುಡ್ಡೆ ಹಾಕಿಕೊಂಡಿದ್ದಾರೆ ಅಂತ ನಿಮಗನಿಸಬಹುದು… ಆದ್ರೆ ಇದೇ ಗಂಟೆಗಳನ್ನ ಹೀಗೆ ಗುಡ್ಡೆ ಹಾಕಲು ಕೊಡಗು ಪೊಲೀಸರು ಪಟ್ಟಿರೋ ಕಷ್ಟ ಅಷ್ಟಿಷ್ಟಲ್ಲ.. ಅದು ಭರ್ತಿ 8 ತಿಂಗಳ ಕಾರ್ಯಾಚರಣೆ.. 30 ಪೊಲೀಸರು.. ಐದು ತಂಡ.. ಮೈಸೂರಿನ ಹಲವೆಡೆ ತಿಂಗಳುಗಟ್ಟಲೆ ಕ್ಯಾಂಪ್… ಕೊನೆಗೂ ಯಶಸ್ಸು,.. ಹೌದು ಕೊಡಗು ಡಿಆರ್ ಪೊಲೀಸ್ ಮೈದಾನದಲ್ಲಿಯೇ ಹೀಗೆ ರಾಶಿ ಹಾಕಿರೋ ಗಂಟೆಗಳು ಕೊಡಗು ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿದ್ದ ಗಂಟೆಗಳು..

2022ರ ಫೆಬ್ರವರಿಯಿಂದಲೇ ಜಿಲ್ಲೆಯ ಹಲವೆಡೆ ವಿಚಿತ್ರ ಕಳ್ಳತನ ಪ್ರಕರಣವೊಂದು ವರದಿಯಾಗಲು ಶುರುವಾಗಿತ್ತು. ಖದೀಮರು ದೇವಸ್ಥಾನದ ಹೊರ ಆವರಣದಲ್ಲಿ ಹಾಕಿರುತ್ತಿದ್ದ ತಾಮ್ರದ ಗಂಟೆಗಳನ್ನ ರಾತ್ರೋ ರಾತ್ರಿ ಎಗರಿಸಿಬಿಡುತ್ತಿದ್ದರು. ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಇವರು ಸಿಸಿಟಿವಿಯನ್ನ ಚಾಣಾಕ್ಷ್ಯತನದಿಂದ ನಿಷ್ಕ್ರಿಯಗೊಳಿಸಿ ಗಂಟೆಗಳನ್ನ ಹೊತ್ತೊಯ್ಯುತ್ತಿದ್ದರು. ಒಂದೆರಡು ದೇವಸ್ಥಾನಗಳಾದ್ರೆ ಪರವಾಗಿರಲಿಲ್ಲ. ಆದ್ರೆ ಕಳ್ಳರು ಎಗರಿಸಿದ್ದು ಭರ್ತಿ ಒಂಭತ್ತು ದೇವಸ್ಥಾನಗಳ 800 ಕೆಜಿ ಗಂಟೆಗಳನ್ನ..

ಪೊನ್ನಂಪೇಟೆ, ವಿರಾಜಪೇಟೆ ಮತ್ತು ಮಡಿಕೇರಿ ತಾಲ್ಲೂಕಿನ ಹಲವು ಗ್ರಾಮಗಳ ದೇವಸ್ಥಾನಗಳ ಗಂಟೆಗಳು ರಾತ್ರೋ ರಾತ್ರಿ ಮಂಗಮಾಯ ಆಗಿಬಿಡುತ್ತಿದ್ದವು. ಇದರ ಮೌಲ್ಯ ಅಂದಾಜು 10 ಲಕ್ಷ ರೂಪಾಯಿ.. ಆದ್ರೆ ಒಂದೇ ಒಂದು ಕ್ಲೂ ಇಲ್ಲ… ಪೊಲೀಸ್ ವೈಫಲ್ಯವೇ ಗಂಟೆಗಳ ಕಳ್ಳತನಕ್ಕೆ ಕಾರಣ ಎಂದಾಗ ಪೊಲೀಸರಿಗೆ ಅದೆಷ್ಟು ತಲೆ ಬಿಸಿಯಾಗಿರಬೇಡ ಹೇಳಿ.

ಈ ಪ್ರಕರಣವನ್ನ ಸವಾಲಾಗಿ ತೆಗೆದುಕೊಂಡ ಕೊಡಗು ಪೊಲಿಸರು 30 ಪೊಲೀಸರನ್ನ ಸೇರಿಸಿ ಐದು ತಂಡಗಳನ್ನ ರಚಿಸುತ್ತಾರೆ. ಒಂದೊಂದು ತಂಡವೂ ಪ್ರಕರಣದ ಇಂಚಿಂಚೂ ತಲಾಶೆ ಮಾಡುತ್ತಾರೆ. ಸಿಸಿಟಿವಿಗಳು, ಮೊಬೈಲ್​ ಟವರ್, ಲೊಕೇಷನ್ ಟ್ರೇಸಿಂಗ್ ಹೀಗೆ ಎಲ್ಲಾ ಕಡೆಯಿಂದಲೂ ಮಾಹಿತಿ ಕಲೆ ಹಾಕುತ್ತಾರೆ. ಆದ್ರೂ ಎಲ್ಲಿಯೂ ಕೂಡ ನಿಖರ ಸುಳಿವೇ ಇಲ್ಲ. ಹಾಗಾಗಿ ಪೊಲೀಸರು ಕೊಡಗು ಮಾತ್ರವಲ್ಲ ಮೈಸೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಪ್ರತಿ ಸಿಸಿಟಿವಿಯನ್ನೂ ಪರಿಶೀಲನೆ ಮಾಡುತ್ತಾ ಸಾಗಿದಂತೆ ಒಂದು ಕ್ಲೂ ಸಿಗುತ್ತದೆ. ಅದರ ಜಾಡನ್ನೇ ತಾಳ್ಮೆಯಿಂದ ಹಿಡಿದು ಹೋದ ಪೊಲೀಸರಿಗೆ ಸಿಕ್ಕಿದ್ದೇ ಈ ಖದೀಮರು…

ಮೈಸೂರು ಜಿಲ್ಲೆಯ ಕೆಸರೆಯ (Kesare area) ನಾಲ್ವರು ಆರೋಪಿಗಳು ಸಿಕ್ಕಿ ಬೀಳುತ್ತಾರೆ. ಅಮ್ಜದ್, ಸಮೀವುಲ್ಲಾ, ಝುಲ್ಫಿಕರ್, ಮತ್ತು ಹೈದರ್​ ಎಂಬ ಈ ನಾಲ್ವರೇ ಬಹಳ ಪ್ಲಾನ್ ಹಾಕಿ ದೇವಸ್ಥಾನಗಳ ಗಂಟೆ ಎಗರಿಸುತ್ತಿದ್ದರು. ಮೊದಲು ಇಬ್ಬರು ಹಳ್ಳಿಗಾಡು ಪ್ರದೇಶಗಳಲ್ಲಿ ಇರುತ್ತಿದ್ದ ದೇವಸ್ಥಾನದ ಬಳಿ ಬೈಕ್​ಗಳಲ್ಲಿ ಬರುತ್ತಿದ್ದರು. ಕಳ್ಳತನಕ್ಕೆ ಆ ದೇವಸ್ಥಾನ ಸೂಕ್ತವಾಗಿದೆಯಾ ಅಂತ ಅಧ್ಯಯನ ಮಾಡುತ್ತಿದ್ದರು.

ಒಂದು ದೇವಸ್ಥಾನ ಸೆಟ್ ಆದ್ರೆ ನಂತರ ನಾಲ್ವರೂ ಸೇರಿ ಕಾರಿನಲ್ಲಿ ರಾತ್ರಿ ಅಲ್ಲಿಗೆ ಬರುತ್ತಿದ್ದರು. ದೇವಸ್ಥಾನದ ಸಿಸಿಟಿವಿಯನ್ನ ತಿರುಗಿಸಿ ಗಂಟೆ ಎಗರಿಸಿ ಪರಾರಿಯಾಗುತ್ತಿದ್ದರು . ಹೀಗೆ ಒಂಬತ್ತು ದೇವಸ್ಥಾನಗಳಿಂದ ಭರ್ತಿ 800 ಕೆಜಿ ಗಂಟೆ ಕದ್ದಿದ್ದಾರೆ ಈ ಖದೀಮರು. ಈ ಗಂಟೆಗಳನ್ನ ಕರಗಿಸಿ ಲೋಹದ ವ್ಯಾಪಾರಿಗಳಿಗೆ ಮಾರುತ್ತಿದ್ದರಂತೆ ಇವರು ಎಂದು ಕೊಡಗು ಎಸ್ಪಿ ಕ್ಯಾ ಎಂಎ ಅಯ್ಯಪ್ಪ ತಿಳಿಸುತ್ತಾರೆ.

ಖದೀಮರಿಂದ ಎಲ್ಲಾ 800 ಕೆಜಿ ಗಂಟೆಗಳನ್ನ ಇದೀಗ ವಶಪಡಿಸಿಕೊಳ್ಳಲಾಗಿದೆ. ಸುಖಜೀವನದ ಆಸೆಗೆ ಬಿದ್ದು ದೇವಸ್ಥಾನದ ಗಂಟೆಗಳಿಗೇ ಕೈ ಹಾಕಿದ ತಪ್ಪಿಗೆ ಇದೀಗ ಪೊಲೀಸರ ಕೈಯಲ್ಲಿ ತಗಲಾಕಿಕೊಂಡು ಇನ್ನಿಲ್ಲದ ಕಷ್ಟಪಡುವಂತಾಗಿದೆ.

ವರದಿ: ಗೋಪಾಲ್ ಸೋಮಯ್ಯ, ಟಿವಿ9, ಕೊಡಗು