ಕೊಡಗಿಗೆ ಪ್ರವಾಸಕ್ಕೆ ತೆರಳುವವರಿಗೆ ಸಿಹಿ ಸುದ್ದಿ, ಕಾವೇರಿ ನದಿಯಲ್ಲಿ ರಾಫ್ಟಿಂಗ್ ಆರಂಭ

ಕನ್ನಡ ನಾಡಿನ ಜೀವ ನದಿ ಕಾವೇರಿ. ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಜೀವ ನದಿಯ ಜುಳು ಜುಳು ನಿನಾದ ಪುಳಕಿತಗೊಳಿಸುತ್ತದೆ. ರಭಸದಿಂದ ಮೈದುಂಬಿ ಹರಿಯುತ್ತಿರುವ ಕಾವೇರಿ ಮಡಿಲಲ್ಲಿ ಪ್ರವಾಸಿಗರ ಮೋಜು ಮಸ್ತಿ ಮಾಡುತ್ತಿದ್ದಾರೆ. ಇದೀಗ, ಕೊಡುಗು ಜಿಲ್ಲಾಡಳಿತ ಪ್ರವಾಸಿಗರಿಗೆ ಸಿಹಿ ಸುದ್ದಿಯೊಂದು ನೀಡಿದೆ. ಅದೇನು? ಇಲ್ಲಿದೆ ಓದಿ.

Follow us
| Updated By: ವಿವೇಕ ಬಿರಾದಾರ

Updated on:Jun 12, 2024 | 8:56 AM

ಕೊಡಗು, ಜೂನ್​ 12: ಕೊಡಗಿನ (Kodagu) ಪ್ರವಾಸೋದ್ಯಮಕ್ಕೆ ಮಳೆಗಾಲವೇ (Rainy Season) ಜೀವಾಳ. ಯಾಕಂದರೆ ಮಳೆಗಾಲ ಶುರುವಾದರೆ ಸಾಕು ಕೊಡಗಿನ ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತದೆ. ನದಿ, ತೊರೆಗಳು ಮೈದುಂಬಿ ಹರಿಯುತ್ತವೆ. ಇದರ ಜೊತೆಗೆ ನದಿಗಳಲ್ಲಿ ಜಲ ಸಾಹಸ ಕ್ರೀಡೆಗಳು ಶುರುವಾಗುತ್ತದೆ. ದುಬಾರೆಯ ಕಾವೇರಿ ನದಿಯಲ್ಲಿ (Cauvery River) ರಾಫ್ಟಿಂಗ್ (Rafting) ಪುನಃ ಆರಂಭವಾಗಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನೀರಿನ ರಭಸದಲ್ಲಿ ನಿಯಂತ್ರಣ ತಪ್ಪುವ ದೋಣಿಯನ್ನು ಹುಟ್ಟು ಹಾಕುತ್ತಾ ಮತ್ತೆ ನಿಯಂತ್ರಣಕ್ಕೆ ತೆಗೆದುಕೊಂಡು ಎಳುತ್ತಾ ಬೀಳುತ್ತಾ ಮುಳುಗುತ್ತಾ ಸಾಗುವುದೆ ಈ ರಾಫ್ಟಿಂಗ್.

ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಈ ಸಮಯ ರಾಫ್ಟಿಂಗ್ ಪ್ರೀಯರಿಗೆ ಹೇಳಿ ಮಾಡಿಸಿದಂತಿದೆ. ಕಾವೇರಿ ನದಿ ಮಳೆಗಾಲ ಶುರುವಾಗುತ್ತಲೇ ಮೈದುಂಬಿಕೊಂಡು ಮರಗಿಡಗಳ ಮಧ್ಯೆ ಕಲ್ಲು ಬಂಡೆಗಳ ನಡುವೆ ಏರುತ್ತಾ ಇಳಿಯುತ್ತಾ ಹರಿಯಲು ಆರಂಭಿಸಿದ್ದಾಳೆ.

ದುಬಾರೆಯಲ್ಲಿ ಸುಮಾರು 60ಕ್ಕೂ ಅಧಿಕ ರಾಫ್ಟಿಂಗ್ ಬೋಟ್​ಗಳಿವೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ತಲಾ 700 ರೂ. ನೀಡಿ ರಾಫ್ಟಿಂಗ್ ಮಾಡಬಹುದು. ಸುಮಾರು ಏಳು ಕಿಲೋ ಮೀಟರವರೆಗೆ ಜಲಸಾಹಸವಾಡುವ ಅವಕಾಶವಿದೆ.

ರಾಫ್ಟಿಂಗ್​​

ರಾಫ್ಟಿಂಗ್ ಆರಂಭದಲ್ಲಿ ನೀರು ರಭಸದಿಂದ ಹರಿಯುತ್ತಿದ್ದರೂ ಯಾವುದೇ ಏರು ತಗ್ಗುಗಳಿರುವುದಿಲ್ಲ. ಹೀಗಾಗಿ ಆರಂಭದಲ್ಲಿ ಎಲ್ಲವೂ ಕೂಲ್ ಕೂಲ್ ಆಗಿ ಇರುತ್ತದೆ. ಆದರೆ ಒಂದು ಕಿಲೋಮೀಟರ್ ದೂರ ಸಾಗಿದ ಮೇಲೆ ಎದುರಾಗುತ್ತದೆ ನೋಡಿ ನಿಜವಾದ ಸವಾಲುಗಳು. ದುಮ್ಮಿಕ್ಕುವ ನೀರಿನಲ್ಲಿ ಬೋಟನ್ನು ನಿಯಂತ್ರಣ ತಪ್ಪದಂತೆ ಚಲಾಯಿಸುವುದೇ ಒಂದು ಸಾಹಸ.

ಇದನ್ನೂ ಓದಿ: ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ತೆರಳುವವರಿಗೆ ಕಹಿ ಸುದ್ದಿ! ಮಲ್ಪೆ ಬೀಚ್ ಪ್ರವೇಶ ನಿಷೇಧ

ರಾಫ್ಟಿಂಗ್​ನ ಇನ್ನೊಂದು ಮಜಾ ಇರುವುದು ನೀರಿಗೆ ಧುಮುಕುವುದರಲ್ಲಿ. ಸುಮಾರು 50 ರಿಂದ 70 ಅಡಿಯಲ್ಲಿ ಮೇಲಿಂದ ಧುಮುಕುವುದೆ ಸಾಹಸ. ಬೇರೆ ಯಾವುದೇ ಸಂದರ್ಭದಲ್ಲಿ ಹೀಗೆ ಧುಮುಕಿದರೆ ಜೀವಂತವಾಗಿ ಮೇಲೇಳುವ ಸಾಧ್ಯತೆ ಕಡಿಮೆ. ಆದರೆ ರಾಫ್ಟಿಂಗ್​ನಲ್ಲಿ ಲೈಫ್ ಜಾಕೆಟ್ ನೀಡಲಾಗುತ್ತದೆ. ಯಾವುದೇ ಅಪಾಯವಿಲ್ಲ. ಈ ಲೈಫ್​ ಜಾಕೆಟ್​ 130 ಕೆಜಿ ಭಾರವಾದ ವಸ್ತುವನ್ನೂ ಕೂಡ ನೀರಿನಲ್ಲಿ ತೇಲಿಸುತ್ತದೆ.

ಹೀಗಾಗಿ ಈಜು ಗೊತ್ತಿಲ್ಲದವರೂ ಕೂಡ ನೀರಿಗೆ ಧುಮುಕಿ ರೋಚಕ ಅನುಭವ ಪಡೆಯಬಹುದು ಇಷ್ಟಲ್ಲಾ ಸುರಕ್ಷಾ ಕ್ರಮಗಳನ್ನ ಅನುಸರಿಸಿದ ಮೇಲೆ ಬೇರೆ ಯಾವ ಟೆನ್ಶನ್ ಇರಲ್ಲ. ಇನ್ನೇನಿದ್ದರೂ ಉಕ್ಕಿ ಹರಿವ ನದಿಯಲ್ಲಿ ಪೆಡ್ಲ್ ತುಳಿಯುತ್ತಾ ಬೋಟನ್ನು ಮುನ್ನಡೆಸುವುದು. ಸಾವಿರಾರು ರೂಪಾಯಿ ಖರ್ಚು ಮಾಡಿ ರಾಫ್ಟಿಂಗ್ ಮಾಡಿದ್ದಕ್ಕೂ ಪ್ರವಾಸಿಗರಿಗೆ ಆನಂದ ಸಿಗುತ್ತದೆ.

ರಾಫ್ಟಿಂಗ್ ಮಜಾ ಅನುಭವಿಸಲು ಕರ್ನಾಟಕ ಮಾತ್ರವಲ್ಲ ಉತ್ತರ ಭಾರತದ ಪ್ರವಾಸಿಗರೂ ಕೂಡ ಆಗಮಿಸ್ತಾರೆ. ಕಾವೇರಿ ಮಡಿಲಲ್ಲಿ ಜಲ ಸಾಹಸವನ್ನು ಮನಸಾರೆ ಆನಂದಿಸುತ್ತಾರೆ. ಬೋಟ್ ಏರುವಾಗ ಇದ್ದ ಭಯ ರಾಫ್ಟಿಂಗ್ ಮುಗಿಸಿ ಬೋಟ್ ಇಳಿಯುವಾಗ ಕಿಂಚಿತ್ತೂ ಇರುವುದಿಲ್ಲ. ಬದಲಿಗೆ ಏನೋ ಒಂದು ಸಾಹಸ ಮಾಡಿದ ಸಂತೃಪ್ತ ಭಾವನೆ ಇರುತ್ತದೆ. ಪುಟ್ಟ ಮಗುವಿಗೆ ಹೊಸ ಪ್ರಪಂಚವೊಂದಕ್ಕೆ ಹೋಗಿ ಬಂದ ಅನುಭವ ಆಗುತ್ತದೆ. ಏಳು ಕಿಲೋಮೀಟರ್ ರಾಫ್ಟಿಂಗ್ ಮುಗಿದ ಬಳಿಕ ಪ್ರವಾಸಿಗರನ್ನು ಜೀಪ್​ನಲ್ಲಿ ಮರಳಿ ದುಬಾರೆಗೆ ಕರೆದುಕೊಂಡು ಹೋಗಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:55 am, Wed, 12 June 24