Madikeri Dasara: ಈ ಬಾರಿ ಮಡಿಕೇರಿ ದಸರಾ, ಗಣೇಶ ಹಬ್ಬಕ್ಕೆ ಡಿಜೆ ನಿಷೇಧ; ಎಸ್ಪಿ ರಾಮರಾಜನ್ ಆದೇಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 22, 2024 | 10:34 PM

ಮೈಸೂರು ದಸರಾ ಬಿಟ್ಟರೆ ಅತಿ ಹೆಚ್ಚು ಜನಮನ್ನಣೆ ಇರುವುದು ಮಡಿಕೇರಿ ದಸರಾಕ್ಕೆ. ಆದ್ರೆ, ಕಳೆದ ಐದು ವರ್ಷಗಳಿಂದ ಪ್ರಾಕೃತಿಕ ವಿಕೋಪ ಮತ್ತು ಕೊರೊನಾ ಕಾರಣದಿಂದ ಈ ಹಬ್ಬ ಕಳೆಗುಂದಿತ್ತು. ಈ ಬಾರಿ ಗಣೇಶ ಹಬ್ಬ ಹಾಗೂ ದಸರಾ ದಶಮಂಟಪಗಳ ಶೋಭಾ ಯಾತ್ರೆಗೆ ಡಿಜೆ ಹಾಕಲು ನಿರ್ಬಂಧ ವಿಧಿಸಿರೋದು ಅಸಮಾಧಾನ ತಂದಿದೆ.

Madikeri Dasara: ಈ ಬಾರಿ ಮಡಿಕೇರಿ ದಸರಾ, ಗಣೇಶ ಹಬ್ಬಕ್ಕೆ ಡಿಜೆ ನಿಷೇಧ; ಎಸ್ಪಿ ರಾಮರಾಜನ್ ಆದೇಶ
ಮಡಿಕೇರಿ ದಸರಾ,ಕೊಡಗು ಎಸ್ಪಿ ರಾಮರಾಜನ್
Follow us on

ಕೊಡಗು, ಆ.22: ಮಡಿಕೇರಿ ದಸರಾದ ಅಂದ ಚೆಂದ ವರ್ಣಿಸುವುದಕ್ಕೆ ಪದಗಳೇ ಸಾಲದು. ಅದರ ಅದ್ದೂರಿತನವನ್ನ ನೋಡಲಿಕ್ಕೆ ಕಣ್ಣುಗಳು ಸಾಕಾಗುವುದಿಲ್ಲ. ಅಷ್ಟೊಂದು ವೈಭವ ಈ ಹಬ್ಬದ್ದು. ವಿಜಯ ದಶಮಿಯ ಅಂತಿಮ ದಿನ ರಾತ್ರಿ ಮಡಿಕೇರಿ ನಗರದಲ್ಲಿ ಕತ್ತಲೇ ಇರುವುದಿಲ್ಲ. ವಿದ್ಯುತ್​ ದೀಪಗಳು ಮತ್ತು ದಶಮಂಟಪಗಳ ಅದ್ದೂರಿ ವೈಭವದ ಶೋಭಾಯಾತ್ರೆಯಿಂದ ಇಡೀ ನಗರ ಝಗಮಗಿಸುತ್ತದೆ. ಇದನ್ನ ಕಣ್ತುಂಬಿಸಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಜನರು ಆಗಮಿಸುತ್ತಾರೆ. ಆದ್ರೆ, ಪ್ರಾಕೃತಿಕ ವಿಕೋಪ ಮತ್ತು ಕೊರೊನಾ ಮಹಾಮಾರಿಯಿಂದ ಕಳೆದ ಐದು ವರ್ಷಗಳಿಂದ ಇಂತಹ ವೈಭವಯುತ ದಸರಾ ನಡೆದಿರಲಿಲ್ಲ. ಈ ಬಾರಿ ಅದ್ದೂರಿ ದಸರಾಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ.

ಡಿಜೆ ಬಳಕೆಗೆ ನಿರ್ಬಂಧಿಸಿದ ಪೊಲೀಸ್ ಇಲಾಖೆ

ಆದರೆ, ಮಡಿಕೇರಿ ನಗರಸಭೆಯಲ್ಲಿ ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆಯಾಗಿಲ್ಲ. ಹಾಗಾಗಿ ಜಿಲ್ಲಾಧಿಕಾರಿಯೇ ದಸರಾದ ಮೇಲೆ ಸಂಪೂರ್ಣ ನಿಯಂತ್ರ ಹೊಂದಿದ್ದಾರೆ. ಇದರ ಜೊತೆಗೆ ಈ ಬಾರಿ ಗಣೇಶ ಹಬ್ಬ ಹಾಗೂ ದಸರಾದ ಶೋಭಾ ಯಾತ್ರೆ ಸಂದರ್ಭ ಡಿಜೆ ಬಳಕೆಗೆ ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿದೆ. ಅದೂ ಅಲ್ಲದೆ ದಶ ಮಂಟಪಗಳ ಮಧ್ಯೆ ತೀವ್ರ ಪೈಪೋಟಿ ಇರುವುದರಿಂದ ಜನ ಸಾಗರ ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಜನರು ಕುಟುಂಬ ಸಮೇತರಾಗಿ ಬಂದು ದಸರಾ ನೋಡುವುದು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ:ಕೊಡಗಿನಲ್ಲಿ ಮುಂಗಾರು ಮಳೆ: ಮಂಜಿನ ಮಧ್ಯೆ ಪ್ರವಾಸಿಗರಿಗೆ ಹೊಸ ಲೋಕ ತೆರೆದಿಟ್ಟ ಮಡಿಕೇರಿ

ದಸರಾದಲ್ಲಿ ಹತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳು

ಈ ಬಾರಿ ಮಡಿಕೇರಿ ದಸರಾದಲ್ಲಿ ಹತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳು ಜನಮನರಂಜಿಸಲಿದೆ. ಒಟ್ಟು ಏಳು ಬಗೆಯ ದಸರಾ ನಡೆಯಲಿದೆ. ಸಾಂಸ್ಕೃತಿಕ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಕ್ರೀಡಾ ದಸರಾ, ಜನಪದ ದಸರಾ, ಯುವ ದಸರಾ, ಸಾಹಿತ್ಯ ದಸರಾ ನಡೆಯಲಿದ್ದು, ಎಲ್ಲಾ ವರ್ಗದ ಜನರ ಮನ ಸೂರೆಗೊಳ್ಳಲಿದೆ. ಇದರ ಜೊತೆಗೆ ಈ ಬಾರಿ ಮೈಸೂರು ದಸರಾ ಮಾದರಿಯಲ್ಲಿ ಜಂಬೂ ಸವಾರಿ ಕೂಡ ನಡೆಸಲು ದಸರಾ ಸಮಿತಿ ಚಿಂತಿಸಿದೆ.

ಹೀಗಾಗಿ ದಸರಾ ಆಚರಣೆಯಿಂದ ಜಿಲ್ಲೆಯಲ್ಲಿ ಪ್ರವಾಸೋಧ್ಯಮವೂ ಉತ್ತಮಗೊಳ್ಳಲಿದೆ. ವ್ಯಾಪಾರ ವಹಿವಾಟುಗಳೂ ಭರ್ಜರಿಯಾಗಿರಲಿವೆ. ಹಾಗಾಗಿ ಜನಸಾಮಾನ್ಯರು ಕೂಡ ಸಂತಸದಿಂದ್ದಾರೆ. ಆದರೆ, ಸಾಂಸ್ಕೃತಿಕ ಸಮಿತಿ ನೇತೃತ್ವ ವಹಿಸಲು ಹಲವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹಾಗಾಗಿ ಈ ಬಾರಿಯ ಸಾಂಸ್ಕೃತಿಕ ಕಾರ್ಯಕ್ರಮ ಸಾರಗವಾಗಿ ನಡೆಯುವುದು ಅನುಮಾನವಾಗಿದೆ. ಅಕ್ಟೋಬರ್ ತಿಂಗಳ 12 ರಂದು ಮಡಿಕೇರಿ ದಸರಾ ನಡೆಯಲಿದೆ. ಇದಕ್ಕೆ 10 ದಿನಗಳ ಮೊದಲು ದಸರಾಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಪ್ರತಿದಿನ ಒಂದೊಂದು ಉತ್ಸವ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ