ಕೊಡಗು, ಅ.04: ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ಕಳೆದ ರಾತ್ರಿ ಎರಡು ಹೆಣಗಳು ಉರುಳಿವೆ (Murder). ಅದು ಕೂಡ ಕೊಡಲಿಯಿಂದ (Axe) ಕೊಚ್ಚಿ ಕೊಲೆ ಮಾಡಲಾಗಿದೆ. ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವನ ತಲೆಯ ಮೇಲೆ ಕೊಡಲಿ ತೂರಿತ್ತು. ಕೊಡಲಿ ಸಮೇತ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ತಲೆಯಿಂದ ಕೊಡಲಿ ತೆಗೆಯುತ್ತಿದ್ದಂತೆ ಮೃತಪಟ್ಟಿದ್ದಾನೆ. ಈ ಭೀಕರ ಕೊಲೆಗೆ ಇಡೀ ಕೊಡಗು ಬೆಚ್ಚಿಬಿದ್ದಿದೆ.
ಬಸವೇಶ್ವರ ಬಡವಾಣೆಯ ಜೋಸೆಫ್, ಅವನ ಪಕ್ಕದ ಮನೆಯ ಗಿರೀಶ್ ಮತ್ತು ಸುಂದರ ನಗರದ ವಸಂತ್ ಎಲ್ಲರೂ ಸ್ನೇಹಿತರು. ಕಳೆದ 15-20 ವರ್ಷಗಳಿಂದ ಎಲ್ಲರೂ ಒಟ್ಟಿಗೇ ಕೆಲಸ ಮಾಡ್ತಾ ಇದ್ದವರು. ಮನೆ ಮನೆಗೆ ತೆರಳಿ ವೆಲ್ಡಿಂಗ್ ಮಾಡಿಕೊಡುವುದು ಬಂದ ಹಣವನ್ನು ಹಂಚಿಕೊಳ್ಳುವುದು ಮಾಡುತ್ತಿದ್ದರು. ಕೆಲಸಕ್ಕೆ ಓಡಾಡಲೆಂದೇ ಜೋಸೆಫ್ ಆಟೋ ತೆಗೆದುಕೊಂಡಿದ್ದ. ಅದೇ ಆಟೋದಲ್ಲಿ ಎಲ್ಲರೂ ಒಟ್ಟಿಗೆ ಕೆಲಸಕ್ಕೆ ಹೋಗ್ತಾ ಇದ್ರು. ಆದ್ರೆ ಇತ್ತೀಚೆಗೆ ಕೆಲ ತಿಂಗಳಿನಿಂದ ಜೋಸೆಫ್ ಮತ್ತು ಗಿರೀಶನ ಮಧ್ಯೆ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯ ತಲೆದೋರಿತ್ತು.
ಗಿರೀಶ್, ಜೋಸೆಫ್ಗೆ 3 ಸಾವಿರ ರೂ ಕೊಡಬೇಕಿತ್ತು. ಹಲವು ಬಾರಿ ಹಣ ಕೇಳಿದ್ರೂ ಕೊಟ್ಟಿರಲಿಲ್ಲ. ಇದೇ ವಿಚಾರದಲ್ಲಿ ಜಗಳವಾಗಿ 15 ದಿನಗಳಿಂದ ಗಿರೀಶ, ಜೋಸೆಫ್ ನ ಜೊತೆ ಕೆಲಸಕ್ಕೆ ಹೋಗುವುದನ್ನ ನಿಲ್ಲಸಿದ್ದ. ನಿನ್ನೆ ಮಧ್ಯಾಹ್ನ ಕೂಡ ಜೋಸೆಫ್, ಗಿರೀಶನ ಬಳಿ ಹಣ ಕೊಡವಂತೆ ಕೇಳಿದ್ನಂತೆ. ಕೊಡ್ತೀನಿ ಅಂತ ಸಮಾಧಾನದಿಂದಲೇ ಹೇಳಿದ್ದನಂತೆ. ಆದ್ರೆ ನಿನ್ನೆ ಸಂಜೆ 7.30ರ ಸುಮಾರಿಗೆ ಜೋಸೆಫ್, ವಸಂತ್ ಮತ್ತು ಸಂಜು ಕೆಲಸ ಮುಗಿಸಿ ಆಟೋದಲ್ಲಿ ಮನೆಯ ಬಳಿ ಬಂದಿದ್ದಾರೆ. ಈ ಸಂದರ್ಭ ಅಲ್ಲೇ ಅಂಗಡಿ ಸಮೀಪ ನಿಂತಿದ್ದ ಮೋಹನ್ ಎಂಬಾತನ ಜೊತೆ ಮಾತನಾಡ್ಲಿಕ್ಕೆ ಅಂತ ಜೋಸೆಫ್ ಆಟೋ ನಿಲ್ಲಿಸಿದ್ದಾನೆ.
ಇದನ್ನೂ ಓದಿ: ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿದ ಬೀದಿ ವ್ಯಾಪಾರಿ
ಇದೇ ವೇಳೆ ಅಲ್ಲೇ ಇದ್ದ ಗಿರೀಶ್, ಪ್ಯಾಂಟ್ ಬಿಚ್ಚಿ ಜೋಸೆಫ್ನತ್ತ ಅಸಹ್ಯವಾಗಿ ಸನ್ನೆ ಮಾಡಿದ್ನಂತೆ. ಇದರಿಂದ ಕೋಪಗೊಂಡ ಜೋಸೆಫ್ ಹೋಗಿ ಗಿರೀಶನಿಗೆ ಒದ್ದಿದ್ದಾನೆ. ಒದೆ ತಿಂದ ಗಿರೀಶ್ ಸೈಲೆಂಟಾಗಿ ಸೈಡ್ಗೆ ಹೋಗಿದ್ದಾನೆ. ಅದಾದ ಬಳಿಕ ಜೋಸೆಫ್, ವಸಂತ, ಸಂಜು ಆಟೋದಲ್ಲಿ ಅಲ್ಲಿಂದ 50 ಮೀಟರ್ ದೂರದಲ್ಲಿದ್ದ ತನ್ನ ಮನೆಯ ಬಳಿ ಬಂದು ಗಾಡಿ ನಿಲ್ಲಿಸಿದ್ದಾನೆ. ಇದೇ ಸಂದರ್ಭ ಕೊಡಲಿ ಹಿಡಿದು ಗಿರೀಶ್ ಆಟೋ ರಿಕ್ಷಾ ಹಿಂದೆ ಬಂದಿದ್ದು ಇವರಿಗೆ ಗೊತ್ತೇ ಆಗಲಿಲ್ಲ. ಜೋಸೆಫ್ ಆಟೋದಿಂದ ಇಳಿದು ಶರ್ಟ್ ಬಿಚ್ಚಿ ಆಟೋ ಒಳಗೆ ಹಾಕುತ್ತಿದ್ದಂತೆ ಹಿಂಬದಿಯಿಂದ ಗಿರೀಶ್ ಕೊಡಲಿ ಬೀಸಿಯೇ ಬಿಟ್ಟಿದ್ದಾನೆ.
ಕುತ್ತಿಗೆ ಹಿಂಬದಿಗೆ ಬಲವಾದ ಪೆಟ್ಟುಬಿದ್ದು ಜೋಸೆಫ್ ಕುಸಿದಿದ್ದಾನೆ. ಅಲ್ಲೂ ಬಿಡದೆ ಬಿದ್ದಲ್ಲೆಗೆ ಮತ್ತೆ ಮುರು ಬಾರಿ ಕೊಚ್ಚಿದ್ದಾನೆ. ಇದೇ ಸಂದರ್ಭ ಆಟೋದಲ್ಲಿದ್ದ ವಸಂತ ಅಲಿಯಾಸ್ ಪುಟ್ಟ ಗಿರೀಶನನ್ನ ತಡೆಯಲು ಹೋಗಿದ್ದಾನೆ. ಆದ್ರೆ ಹುಚ್ಚನಂತಾಗಿದ್ದ ಗಿರೀಶ್, ವಸಂತನ ತಲೆಗೆ ಒಂದೇ ಏಟಿಗೆ ಕೊಡಲಿ ಬೀಸಿದ್ದಾನೆ. ಅದೆಷ್ಟು ರಣ ಭೀಕರವಾಗಿದೆ ಅಂದ್ರೆ ಆ ಕೊಡಲಿ ನೇರವಾಗಿ ವಸಂತನ ತಲೆಯೊಳಗೆ ಹೂತು ಹೋಗಿದೆ. ಅಷ್ಟರಲ್ಲಿ ಎಲ್ಲರೂ ಬಂದು ಗಿರೀಶನನ್ನ ಎಳೆದು ಹಾಕಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ರಕ್ತದ ಹೊಳೆಯೇ ಹರಿದಿದೆ. ಒಂದೆಡೆ ಜೋಸೆಫ್ ಹೆಣವಾದ್ರೆ, ಪಕ್ಕದ್ದಲ್ಲೇ ಅಮಾಯಕ ವಸಂತ್ ತಲೆಯಲ್ಲಿ ಕೊಡಲಿ ಹೊತ್ತು ಬಿದ್ದಿದ್ದ. ಎಲ್ಲರೂ ಸೇರಿ ವಸಂತನನ್ನ ಮಡಿಕೇರಿ ಆಸ್ಪತ್ರೆಗೆ ದಾಖಲಿಸ್ತಾರೆ. ಆಸ್ಪತ್ರೆಯಲ್ಲಿ ಕೊಡಲಿ ತೆಗೆಯುತ್ತಿದ್ದಂತೆ ವಸಂತ ಕೂಡ ಉಸಿರು ಚೆಲ್ಲಿದ್ದಾನೆ. ಘಟನೆ ಬಳಿಕ ಗಿರೀಶನನ್ನ ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಹಂತಕ ಗಿರೀಶನ ಬಗ್ಗೆ ಇಡೀ ಊರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಗಾಂಜಾ ವ್ಯಸನಿಯಾಗಿರೋ ಗಿರೀಶ್ ಈ ಹಿಂದೆಯೂ ಹಲವರನ್ನ ಚಾಕುವಿನಿಂದ ಚುಚ್ಚಲು ಪ್ರಯತ್ನಿಸಿದ್ದ. ಈ ವಿಚಾರದಲ್ಲಿ ಈಗಾಗಲೇ ಕೇಸ್ ಕೂಡ ದಾಖಲಾಗಿದೆ. ಆದ್ರೂ ಕೂಡ ಆತನಿಗೆ ಸ್ವಲ್ಪವೂ ಭಯ ಇರಲಿಲ್ಲ ಅನ್ನೋದು ಸ್ಥಳೀಯರ ಮಾತು.
ಸಧ್ಯ ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಎರಡು ರಣಭೀಕರ ಕೊಲೆಯಿಂದ ಇಡೀ ಕುಶಾಲನಗರ ಪಟ್ಟಣ ಬೆಚ್ಚಿ ಬಿದ್ದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ