ಕೊಡಗು: ವೀಕೆಂಡ್ನಲ್ಲಿ ಪ್ರವಾಸ ಹೋಗುವವರಿಗೆ ಖುಷಿಯ ವಿಚಾರವೊಂದು ಸಿಕ್ಕಂತಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿಯ ರಾಜಾಸೀಟ್ ಅಪ್ಗ್ರೇಡ್ ಆಗಿದೆ. ಮಡಿಕೇರಿ ರಾಜಾಸೀಟ್ (Raja seat) ಸದ್ಯ ಮಂಜಿನ ನಗರಿಗೆ ಬರುವ ಪ್ರವಾಸಿಗಳ ನೆಚ್ಚಿನ ತಾಣವಾಗಿದೆ. ಸಂಜೆಯ ವೇಳೆ ಇಲ್ಲಿ ಬಂದು ಆಕರ್ಷಕ ಉದ್ಯಾನವನದಲ್ಲಿ ಕಾಲ ಕಳೆಯುವುದು ಬೇರೆಯೇ ಅನುಭವ ನೀಡುತ್ತದೆ. ಇದೀಗ ಇಲ್ಲಿನ ಬೆಟ್ಟದ ಮೇಲಿನ ವೀವ್ ಪಾಯಿಂಟ್ (view point) ಬಳಿ ಸಂಗೀತದ ಅಲೆಗಳಿಗೆ ತಕ್ಕಂತೆ ಬಳುಕುತ್ತಾ ಲಾಸ್ಯವಾಡುವ ನೀರಿನ ಕಾರಂಜಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ.
ಬೆಟ್ಟದ ತುತ್ತ ತುದಿಯ ವೀವ್ ಪಾಯಿಂಟ್ನಲ್ಲಿ ನಿಂತು ಸನ್ ಸೆಟ್ ನೋಡುವುದಕ್ಕೆ ಅಂತಾನೇ ಅದೆಷ್ಟೋ ಪ್ರವಾಸಿಗರು ಸಂಜೆ ವೇಳೆಗೆ ಇಲ್ಲಿಗೆ ಆಗಮಿಸ್ತಾರೆ. ಆ ಮೂಲಕ ಸುಂದರ ನೆನಪುಗಳೊಂದಿಗೆ ಮರಳುತ್ತಾರೆ. ಇದೀಗ ಇವರ ಸವಿ ನೆನಪುಗಳನ್ನು ಮತ್ತಷ್ಟು ಸಿಹಿಯಾಗಿಸಲು ತೊಟಗಾರಿಕಾ ಇಲಾಖೆ ಹೊಸ ಯೋಜನೆ ಜಾರಿಗೊಳಿಸಿದೆ.
ರಾಜಸೀಟ್ ಉದ್ಯಾನವನದಲ್ಲಿ ನೂತನ ಸಂಗೀತ ಕಾರಂಜಿ ಅಳವಡಿಸಲಾಗಿದೆ. ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನಿಕ ಸಾಫ್ಟ್ವೇರ್ಗಳನ್ನು ಅಳವಡಿಸಿ ಈ ಕಾರಂಜಿ ಸಿದ್ಧಗೊಳಿಸಲಾಗಿದೆ. ಬಣ್ಣ ಬಣ್ಣದ ಬೆಳಕಿನಡಿಯಲ್ಲಿ ಸಂಗೀತಕ್ಕೆ ತಕ್ಕಂತೆ ಮುಗಿಲೆತ್ತರಕ್ಕೆ ಚಿಮ್ಮುವ ಕಾರಂಜಿ ಇದೀಗ ರಾಜಾಸೀಟ್ನ ವಿಶೇಷ ಆಕರ್ಷಣೆ ಎನಿಸಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಪ್ರಮೋದ್ ಹೇಳಿದ್ದಾರೆ.
ಸದ್ಯ ಪ್ರಯೋಗಾತ್ಮಕವಾಗಿ ಈ ಕಾರಂಜಿಯನ್ನು ಹಾರಿಸಲಾಗುತ್ತಿದೆ. ಪ್ರತಿದಿನ ಸಂಜೆ 7 ಗಂಟೆಗೆ ಆರಂಭವಾಗುವ ಇದು 20 ನಿಮಿಷಗಳ ಕಾಲ ಪ್ರವಾಸಿಗರ ಮನ ತಣಿಸಲಿದೆ. ವೀವ್ ಪಾಯಿಂಟ್ನಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆಯೇ ಇತ್ತ ಮೇಲ್ಭಾಗದ ಉದ್ಯಾನವನದಲ್ಲಿ ನೀರಿನ ವೈಯಾರ ಆರಂಭವಾಗುತ್ತದೆ. ವಿಶೇಷ ಅಂದರೆ ಈ ಕಾರಂಜಿಗೆ ಕೊಡಗಿನ ವಿಶೇಷ ವಾಲಗದ ಸಂಗೀತವನ್ನು ಅಳವಡಿಸಲಾಗಿದ್ದು, ಪ್ರವಾಸಿಗರಿಗೆ ವಿಶೇಷ ಮುದ ನೀಡುತ್ತಿದೆ.
ಈ ಕಾರಂಜಿಗೆ ಅತ್ಯಾಧುನಿಕ ಸಾಫ್ಟ್ವೇರ್ ಅಳವಡಿಸಲಾಗಿದೆ. ಕೇವಲ ಮೊಬೈಲ್ನಲ್ಲೇ ಇದನ್ನು ನಿರ್ವಹಣೆ ಮಾಡಬಹುದಾಗಿದೆ. ಇನ್ನು ಕೆಲವು ದಿನಗಳ ಪ್ರಯೋಗದ ಬಳಿಕ ಶಾಶ್ವತವಾಗಿ ಇದನ್ನು ಜಾರಿಗೆ ತರಲಾಗುತ್ತದೆ. ಹಾಗಾಗಿ ಕೊಡಗು ಜಿಲ್ಲೆಗೆ ಅದರಲ್ಲೂ ಮಡಿಕೇರಿಗೆ ಪ್ರವಾಸ ಅಂತ ಬರುವವರಿಗೆ ಇನ್ನು ರಾಜಾಸೀಟ್ನ ಸೂರ್ಯಾಸ್ತದ ಜೊತೆ ಸಂಗೀತ ಕಾರಂಜಿ ಮತ್ತಷ್ಟು ಖುಷಿ ನೀಡಲಿದೆ.
ವರದಿ: ಗೋಪಾಲ್ ಸೋಮಯ್ಯ
ಇದನ್ನೂ ಓದಿ:
ಮಂಗಳೂರು: ಪಿಲಿಕುಳ ಉದ್ಯಾನವನದಲ್ಲಿ 9 ವರ್ಷದ ಒಲಿವರ್ ಹೆಸರಿನ ಹುಲಿ ಏಕಾಏಕಿ ಸಾವು
Published On - 1:03 pm, Wed, 12 January 22